Saturday, 14th December 2024

ನೀರಿನ ಸಮಸ್ಯೆಗೆ ನೀವೇ ಪರಿಹಾರ ಕಂಡುಕೊಳ್ಳಿ

ಬೇಸಿಗೆ ಕಾಲ ಕಳೆದು ಮಳೆಗಾಲ ಆರಂಭವಾಗಲು ಇನ್ನೂ ಎರಡು ತಿಂಗಳು ಬಾಕಿ ಇದೆ. ಈಗಲೇ ಎಲ್ಲೆಡೆ ನೀರಿಗಾಗಿ ಹಾಹಾಕಾರ
ಉಂಟಾಗಿದೆ. ಎಲ್ಲ ರಸ್ತೆಗಳಲ್ಲೂ ಖಾಲಿ ಕೊಡಗಳ ಮೆರವಣಿಗೆ ನಡೆಯುತ್ತಿವೆ. ಬೆಂಗಳೂರು ಮಹಾನಗರದಲ್ಲಿ ಖಾಯಂ ನಿವಾಸಿಗಳು ಹಾಗೂ ಬಂದು ಹೋಗುವವರನ್ನು ಸೇರಿಸಿ ಸುಮಾರು ಒಂದು ಕೋಟಿ ನಲವತ್ತು ಲಕ್ಷ ಜನ ಸಂಖ್ಯೆಗೆ ಪ್ರತಿ ನಿತ್ಯ ನೀರು ಪೂರೈಕೆ ಮಾಡಬೇಕಿದೆ.

ಈಗಿನ ಅಂತರ್ಜಲದ ಪ್ರಮಾಣಕ್ಕೆ ಇಷ್ಟು ಜನರಿಗೆ ನೀರು ಪೂರೈಸುವುದು ಜಲಮಂಡಳಿಗೂ ಸಾಧ್ಯವಾಗದ ಪರಿಸ್ಥಿತಿ ಇದೆ. ಈ ಸಂದರ್ಭವನ್ನೇ ದುರುಪಯೋಗ ಪಡಿಸಿಕೊಂಡು ಖಾಸಗಿ ಟ್ಯಾಂಕರ್‌ಗಳ ನೀರನ್ನು ಸಾವಿರಾರು ರುಪಾಯಿಗೆ ಮಾರಾಟ ಮಾಡ ಲಾಗುತ್ತಿದೆ. ಟ್ಯಾಂಕರ್‌ಗಳ ನೋಂದಣಿಯನ್ನು ಜಲಮಂಡಳಿ ಕಡ್ಡಾಯ ಮಾಡಿದ್ದರೂ ಅರ್ಧದಷ್ಟೂ ನೋಂದಣಿಯಾಗಿಲ್ಲ. ನೀರಿನ ಪೋಲು ತಡೆಗಟ್ಟಲು ಜಲಮಂಡಳಿ ಸಾಕಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿದ್ದರೂ ಪ್ರಯೋಜನಕ್ಕೆ ಬಾರದಂತಾಗಿದೆ. ಸಾರ್ವಜನಿಕರು ಸ್ವಯಂಪ್ರೇರಿತರಾಗಿ ನೀರನ್ನು ಉಳಿಸಲು, ಹಿತಮಿತವಾಗಿ ಬಳಸಲು ಮುಂದಾಗದಿದ್ದರೆ ಮುಂದಿನ ದಿನಗಳಲ್ಲಿ ನೀರಿನ ಬವಣೆ ಹೆಚ್ಚಾಗುವ ಸಾಧ್ಯತೆ ಇದೆ.

ಆದ್ದರಿಂದ ವಾಹನ ತೊಳೆಯಲು ಕುಡಿಯುವ ನೀರನ್ನು ಬಳಸದಿರುವುದು, ಪಾತ್ರೆ ತೊಳೆದ ನೀರನ್ನು ಗಾರ್ಡನ್‌ಗೆ ಬಳಸುವುದು, ಮನೆ ಮತ್ತು ಕಚೇರಿಯಲ್ಲಿ ನೀರನ್ನು ದಕ್ಷವಾಗಿ ಬಳಸುವ ಸಲಕರಣೆಗಳ ಬಳಕೆ ಮಾಡುವುದು, ತ್ಯಾಜ್ಯ ನೀರಿನ ಮರುಬಳಕೆ, ಪಾತ್ರೆಗಳನ್ನು ತೊಳೆಯುವಾಗ ನಲ್ಲಿ ನೀರು ಆಫ್ ಮಾಡುವುದು, ಕಡಿಮೆ ಅವಧಿಯಲ್ಲಿ ಸ್ನಾನ ಮುಗಿಸುವುದು, ಬಳಕೆ ಮಾಡ ದಿದ್ದಾಗ ನಲ್ಲಿ ಆಫ್ ಮಾಡುವುದು, ಕಡಿಮೆ ಫ್ಲಶ್ ಮಾಡುವ ಟಾಯ್ಲೆಟ್‌ಗಳನ್ನು ಬಳಸುವುದು, ಫುಲ್ ಲೋಡ್ ಗಳಿಗೆ ಮಾತ್ರ ಅಟೊಮ್ಯಾಟಿಕ್ ವಾಶಿಂಗ್ ಮಶಿನ್ ಬಳಸುವುದು, ಕೈತೋಟದಲ್ಲಿ ಕಡಿಮೆ ನೀರನ್ನು ಬಳಸುವ ಸಸ್ಯಗಳನ್ನು ಬೆಳೆಸುವುದು,
ಮಳೆಕೊಯ್ಲು ವಿಧಾನಗಳನ್ನು ಮನೆಯಲ್ಲಿ ಅಳವಡಿಸಿಕೊಳ್ಳುವುದು ಸೇರಿದಂತೆ ಇನ್ನೂ ಮುಂತಾದ ಕ್ರಮಗಳನ್ನು ಜನರೇ ಸ್ವಯಂಪ್ರೇರಿತವಾಗಿ ಅಳವಡಿಸಿಕೊಳ್ಳಬೇಕಿದೆ.

ಇಲ್ಲವಾದಲ್ಲಿ ಭವಿಷ್ಯದ ದಿನಗಳು ಇನ್ನಷ್ಟು ಭೀಕರವಾಗಲಿವೆ. ಎಲ್ಲದಕ್ಕೂ ಸರಕಾರ, ಆಡಳಿತವನ್ನೇ ದೂರುವ ಬದಲು ಸಾರ್ವಜನಿಕರ ಕರ್ತವ್ಯವನ್ನೂ ಅರಿತುಕೊಂಡು ನಿರ್ವಹಿಸಬೇಕಿದೆ.