Wednesday, 11th December 2024

ಬದುಕೆಂಬ ವಸ್ತುವಿಗೆ, ಖುಶಿಯೆಂಬ ದರಪಟ್ಟಿ !

ಶ್ವೇತಪತ್ರ

shwethabc@gmail.com

ಸಾವಧಾನತೆಯನ್ನೇ ನಾವೆಲ್ಲ ಇಂದು ಸಾಧ್ಯವಾಗಿಸಿಕೊಳ್ಳಬೇಕು. ಕೊರಗುವಿಕೆ ಬದುಕನ್ನು ಕಸಿಯುತ್ತದೆ ಚಿಗುರೊಡೆ ಯಲು ಬಿಡುವುದಿಲ್ಲ. ಕಾರು, ಮನೆ, ಬಂಗ್ಲೆ, ದುಡ್ಡು ಎನ್ನುವ ಎಲ್ಲಾ ಕಾಸ್ಟ್ಲಿ ವಸ್ತುಗಳ ಆಚೆ ಇಣುಕಿ ನೋಡಿದರೆ ಅಸಲಿಗೆ ಹೆಚ್ಚು ದುಬಾರಿಯಾಗಿರುವುದು ಮತ್ತೆ ಮತ್ತೆ ಸಿಗಲಾರದ ನಮ್ಮೆಲ್ಲರ ಬದುಕು. ಅದರ ಪ್ರೈಸ್ ಟ್ಯಾಗೇ ಹ್ಯಾಪಿ ನೆಸ್.

ನಗುವಿಲ್ಲದೇ ಒಂದು ದಿನ ಕಳೆದರೂ ಆ ದಿನವು ಬದುಕಲ್ಲಿ ವ್ಯರ್ಥವಾಯಿತು ಎಂದೇ ಅರ್ಥ ಅಲ್ಲವೇ? ದಸ್ತೋವೆಸ್ಕಿ ಹೇಳಿದ ಒಂದು ಮಾತು ‘ಮನುಷ್ಯನ ಇರುವಿಕೆಯ ಸೀಕ್ರೆಟ್ ಕೇವಲ ಬದುಕುವುದಷ್ಟೇ ಅಲ್ಲ, ಆದರೆ ಬದುಕುವುದರೊಟ್ಟಿಗೆ ಕೆಲವು ಸಂಗತಿಗಳನ್ನು ಜೊತೆಗೂಡಿಸುತ್ತಾ ಹೋಗುವುದು’.

ನಿಜವೇ ಅಲ್ವಾ! ಬದುಕು ಅಂದರೆ ಏನು? ಹೇಗೆ? ಯಾವುದರ ಬಗ್ಗೆ? ನಮ್ಮ ಬದುಕನ್ನು ಅರ್ಥಪೂರ್ಣವಾಗಿಸಿಕೊಳ್ಳುವುದು ಹೇಗೆ? ನಮ್ಮಲ್ಲಿ ಎಷ್ಟು ಜನ ಮೇಲಿನ ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಳ್ಳುತ್ತೇವೆ? ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾ ನಮಗೆ ನಾವೇ ರಿಫ್ಲೆಕ್ಟ್ ಮಾಡಿಕೊಳ್ಳಬೇಕು. ಹೀಗೆ ರಿಫ್ಲೆಕ್ಟ್ ಮಾಡಿಕೊಳ್ಳಲು ಮನಸ್ಸಿನಾಳಕ್ಕೆ ಇಳಿದು ನಮಗೇನು ಮುಖ್ಯ ಎಂದು ಕೇಳಿ ಕೊಳ್ಳಬೇಕು? ನಮ್ಮ ಬದುಕು ಹೇಗಿರಬೇಕು ಈ ಪ್ರಶ್ನೆಯನ್ನು ಕೇಳಿಕೊಳ್ಳಬೇಕು.

ನಾವು ಯಾವ ತರಹದ ವ್ಯಕ್ತಿಯಾಗ ಬಯಸುತ್ತೇವೆ ಇದನ್ನು ನಮಗೆ ನಾವೇ ಪ್ರಶ್ನಿಸಿಕೊಳ್ಳಬೇಕು? ಎಂತಹ ಸಂಬಂಧಗಳನ್ನು ನಾವು ಬೆಳೆಸಿಕೊಳ್ಳಲು ಇಚ್ಛಿಸುತ್ತೇವೆ ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳಬೇಕು. ನಮ್ಮ ಸಮಯ ಮತ್ತು ಶಕ್ತಿಯನ್ನು ಹೇಗೆ ವ್ಯಯಿಸಲು ಇಷ್ಟಪಡುತ್ತೀವಿ? ಹೀಗೆ ಪ್ರಶ್ನೆಗಳನ್ನು ಮಾಡಿ ಕೊಳ್ಳುತ್ತಾ ಹೋಗಬೇಕು ಉತ್ತರಗಳು ನಮ್ಮ ಬಾಯಿಯ ತುದಿಯಲ್ಲಿ ಇವೆಯೋ ಇಲ್ಲವೋ ಎನ್ನುವುದು ಬೇರೆ ಮಾತು. ಆದರೆ ಪ್ರಶ್ನೆಗಳನ್ನು ಕೇಳಿಕೊಳ್ಳುವುದನ್ನು ನಿಲ್ಲಿಸಬಾರದು.

ಏಕೆಂದರೆ ಮೇಲಿನ ಎಲ್ಲಾ ಪ್ರಶ್ನೆಗಳು ನಮ್ಮನ್ನು ಗೈಡ್ ಮಾಡುತ್ತಾ, ಪ್ರೇರೇಪಿಸುತ್ತಾ ನಮ್ಮ ಬದುಕಿಗೆ ಮೌಲ್ಯ ತುಂಬುತ್ತ ನಮ್ಮ ಸುತ್ತಲಿನ ಪ್ರಪಂಚಕ್ಕೆ ಹೊಂದುಕೊಂಡು ಬದುಕುವುದನ್ನು ಸಾಧ್ಯವಾಗಿಸುತ್ತವೆ. ಇಲ್ಲಿ ನನ್ನ ಗೆಳೆಯ ನೊಬ್ಬನ ಸ್ಪೂರ್ತಿದಾಯಕ ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕು. ಈ ಹುಡುಗನಿಗೆ ಬ್ಯುಸಿನೆಸ್ ಎಂದರೆ ಹುಚ್ಚು, ಈ ಹುಚ್ಚಿಗೆ ಬಿದ್ದು ಸ್ವಂತ ಮನೆಯನ್ನೂ ಸೇರಿದಂತೆ ಎಲ್ಲವನ್ನು ಕಳೆದುಕೊಳ್ಳಬೇಕಾಯಿತು. ಹೇಗಾದರೂ ಮತ್ತೆ ಬದುಕನ್ನು ಕಟ್ಟಲೇಬೇಕು. ಗೆಳೆಯ ಮತ್ತು ಆತನ ಹೆಂಡತಿ ಇಬ್ಬರೂ ಮತ್ತೊಂದು ಊರಿಗೆ ರಿಲೋಕೇಟ್ ಆದರೂ, ಅಲ್ಲಿ ಆತನಿಗೆ ಬೋರ್ಡಿಂಗ್ ಶಾಲೆಯಲ್ಲಿ ಕೆಲಸ ಸಿಕ್ಕಿತು.

ಅದುವರೆಗೂ ಆತ ಮಾಡುತ್ತಿದ್ದ ಬಿಸಿನೆಸ್ಸಿಗೂ ಇವತ್ತಿನ ಕೆಲಸಕ್ಕೂ ಅಸಲಿಗೆ ಸಂಬಂಧವೇ ಇಲ್ಲ. ಬೋರ್ಡಿಂಗ್ ಸ್ಕೂಲ್‌ನಲ್ಲಿ ಮಕ್ಕಳು ಹೋಂವರ್ಕ್ ಮಾಡಿದ್ದಾರೆ ಇಲ್ಲವಾ? ಅವರ ಬೇಕು ಬೇಡಗಳೇನು? ಅವರು ಸರಿಯಾದ ಸಮಯಕ್ಕೆ ಮಲಗುತ್ತಾರಾ? ಏಳುತ್ತಾರಾ ಹೀಗೆ ಎಲ್ಲವನ್ನೂ ನಿಭಾಯಿಸುವ ಹಾಸ್ಟೆಲ್ ವಾರ್ಡನ್ ಜವಾಬ್ದಾರಿ ಈತನದ್ದು. ಬೆಂಗಳೂರಿಗೆ ಬಂದಾಗ ಒಮ್ಮೆ
ಸಿಕ್ಕಿದ್ದ ಆಗ ಆತ ಹಂಚಿಕೊಂಡದ್ದು, ‘ಶ್ವೇತಾ ನನ್ನೆದುರಿಗೆ ಉಳಿದಿದ್ದು ಎರಡೇ ಆಯ್ಕೆ ಒಂದು ಮನೆ ಮಠ ಆಸ್ತಿ-ಪಾಸ್ತಿ ಎಲ್ಲವ ನ್ನೂ ಕಳೆದುಕೊಂಡೆನೆಂಬ ದುಃಖದ ಮೂಟೆಯನ್ನು ಬೆನ್ನಿಗೇರಿಸಿಕೊಂಡು ಡಿಪ್ರೆಶನ್‌ನಿಗೆ ಒಳಗಾಗಿ ಬದುಕನ್ನು ಯಾತನಮಯ ವಾಗಿಸಿಕೊಳ್ಳುವುದು. ಇಲ್ಲವೇ ಬದುಕಲ್ಲಿ ಬಂದಿದ್ದನ್ನು ಒಪ್ಪಿಕೊಂಡು ನಾನು ಕಳೆದುಕೊಂಡದ್ದು ಆಸ್ತಿಮನೆ ತಾನೆ ಮತ್ತೆ ಸಂಪಾದಿಸಬಹುದೆಂಬ ಧೈರ್ಯ ತುಂಬಿಕೊಂಡು ಬದುಕಿಗೆ ಭರವಸೆ ಮೂಡಿಸಿಕೊಳ್ಳುತ್ತ ಮತ್ತೆ ಹೊಸ ಬದುಕನ್ನು ಕಟ್ಟಬೇ ಕೆಂದುಕೊಂಡಿದ್ದು’.

ನನ್ನದು ಎರಡನೇಯ ಆಯ್ಕೆಯಾಗಿತ್ತು. ಈಗ ಬೋರ್ಡಿಂಗ್ ಸ್ಕೂಲ್‌ನಲ್ಲಿ ಗುರುತರ ಜವಾಬ್ದಾರಿ ನನ್ನದಾಗಿದೆ ಮಕ್ಕಳೊಟ್ಟಿಗೆ ಬೆರೆಯುತ್ತಾ ಅವರಿಗೆ ಕೌನ್ಸಲಿಂಗ್ ಮಾಡುತ್ತಾ ಬದುಕಿನ ಪಾಠಗಳನ್ನು ಹೇಳಿಕೊಡುತ್ತಾ ನನ್ನ ಎಲ್ಲಾ ಸಮಸ್ಯೆಗಳ ಮಧ್ಯೆಯೂ ಕಷ್ಟಗಳ ಮಧ್ಯೆಯೂ ಖುಷಿಯನ್ನು ನೆಮ್ಮದಿಯನ್ನು ಕಂಡುಕೊಂಡಿದ್ದೇನೆ ಕಳೆದುಹೋಗಿದ್ದ ಅರ್ಥ ಮತ್ತು ಪೂರ್ಣತೆಗಳು ಮತ್ತೆ ಬದುಕನ್ನು ತುಂಬುತ್ತಿವೆ ನಾನು ನನ್ನ ಹೆಂಡತಿ ಖುಷಿಯಾಗಿದ್ದೇವೆ. ಈ ಸಾವಧಾನತೆಯನ್ನೇ ನಾವೆಲ್ಲ ಇಂದು ಸಾಧ್ಯವಾಗಿಸಿ ಕೊಳ್ಳಬೇಕು. ಕೊರಗುವಿಕೆ ಬದುಕನ್ನು ಕಸಿಯುತ್ತದೆ ಚಿಗುರೊಡೆಯಲು ಬಿಡುವುದಿಲ್ಲ.

ಕಾರು, ಮನೆ, ಬಂಗ್ಲೆ, ದುಡ್ಡು ಎನ್ನುವ ಎಲ್ಲಾ ಕಾಸ್ಟ್ಲಿ ವಸ್ತುಗಳ ಆಚೆ ಇಣುಕಿ ನೋಡಿದರೆ ಅಸಲಿಗೆ ಹೆಚ್ಚು ದುಬಾರಿ ಯಾಗಿರು ವುದು ಮತ್ತೆ ಮತ್ತೆ ಸಿಗಲಾರದ ನಮ್ಮೆಲ್ಲರ ಬದುಕು. ಅದರ ಪ್ರೈಸ್ ಟ್ಯಾಗೇ ಹ್ಯಾಪಿನೆಸ್. ಬದುಕಲ್ಲಿ ಕೆಲವೊಮ್ಮೆ ಬೆಳೆಯುವುದಕ್ಕೆ ಸೋಲು ಮತ್ತು ಅದರ ಅನುಭವಗಳು ಬೇಕಾಗಿರುತ್ತವೆ. ಈ ಬೆಳವಣಿಗೆಯೇ ನಮ್ಮಲ್ಲಿ ಖುಷಿಯನ್ನು ತುಂಬುವ ವ್ಯಾಖ್ಯಾನ ಗಳಾಗಿದೆ. ಸೋಲು ನಮ್ಮನ್ನು ತರಚಿ ಗಾಯ ಆಯಿತೆಂದು ನೊಂದುಕೊಂಡು ಕೂರುವುದಲ್ಲ ಗಾಯ ಮಾಗಿಸಿ ಮತ್ತೆ ಪುಟಿದೇಳು ವುದು.

ಮುಗಿಸುವ ಮುನ್ನ ; ಒಂದು ಹ್ಯಾಪಿನೆಸ್‌ನ ಸೀಕ್ರೆಟ್ ಕಥೆ ಒಮ್ಮೆ ವ್ಯಾಪಾರಿಯೊಬ್ಬ ತನ್ನ ಮಗ ಸಂತೋಷದ ಸೀಕ್ರೆಟ್ ಅನ್ನು ಅರಿಯಲಿ ಎಂಬ ಉದ್ದೇಶದಿಂದ ಮಗನನ್ನು ಸಂತೋಷದ ಗುಟ್ಟನ್ನು ಕಲಿತು ಬಾ ಎಂದು ಕಳುಹಿಸಿಕೊಡುತ್ತಾನೆ. ಹುಡುಗ
ಸಂತೋಷದ ಸೀಕ್ರೆಟ್ ಅರಸುತ್ತ ಎಲ್ಲಾ ಕಡೆ ಸುತ್ತಾಡುತ್ತಾನೆ. ಕೊನೆಗೆ ಆತನಿಗೆ ಬೆಟ್ಟದ ತುದಿಯಲ್ಲಿ ಕೋಟೆಯೊಂದು ಕಾಣು ತ್ತದೆ. ಅಲ್ಲಿಗೆ ಹೋದರೆ ಅಲ್ಲಿರುವ ಬುದ್ಧಿವಂತ ವ್ಯಕ್ತಿಯಿಂದ ಹ್ಯಾಪಿನೆಸ್‌ನ ಸೀಕ್ರೆಟ್ ತಿಳಿಯಬಹುದೆಂದು, ಯಾರೋ ಹೇಳಿದ ಮಾತು ನೆನಪಾಗಿ ಆತ ಬೆಟ್ಟದ ತುದಿ ತಲುಪುತ್ತಾನೆ.

ಏನಾಶ್ಚರ್ಯ ಕೋಟೆಯಷ್ಟೇ ಎಂದುಕೊಂಡಿದ್ದ ಹುಡುಗನಿಗೆ ಅಂದು ಪುಟ್ಟ ಪ್ರಪಂಚವೇ ಕಣ್ಣೆದುರಿಗೆ ತೆರೆದುಕೊಳ್ಳುತ್ತದೆ. ವ್ಯಾಪಾರಿಗಳ ಓಡಾಟ, ಪ್ರಪಂಚದ ಅತ್ಯುತ್ತಮ ಖಾದ್ಯಗಳ ಸವಿಯೂಟ, ಹಿಮ್ಮೇಳದಲ್ಲಿ ಹಾಡೊಂದು ಧ್ವನಿಸುತ್ತಿರುತ್ತದೆ, ಅಲ್ಲಲ್ಲಿ ಜನರ ಚಿಕ್ಕ-ಚಿಕ್ಕ ಗುಂಪುಗಳು ನೋಡಲು ಕಾಣಸಿಗುತ್ತದೆ. ಬಹಳ ಹೊತ್ತು ಕಾದ ಬಳಿಕ ಹುಡುಗನಿಗೆ ಬುದ್ಧಿವಂತ ವ್ಯಕ್ತಿಯ ಭೇಟಿ ಮಾಡುವ ಅವಕಾಶ ದೊರೆಯುತ್ತದೆ. ಹುಡುಗ ವಿನಮ್ರವಾಗಿ ತಾನು ಬಂದಿರುವ ಉದ್ದೇಶವನ್ನು ಬುದ್ಧಿವಂತ ವ್ಯಕ್ತಿಗೆ ತಿಳಿಸುತ್ತಾನೆ. ಎಲ್ಲವನ್ನೂ ಕೇಳಿಸಿಕೊಂಡ ಬುದ್ಧಿವಂತ ವ್ಯಕ್ತಿ ಸಂತೋಷವನ್ನು ತಿಳಿಸಿಕೊಡುವಷ್ಟು ಸಮಯ ತನ್ನಲ್ಲಿಲ್ಲ.

ಆದರೆ ಒಂದು ಕೆಲಸ ಮಾಡಬಹುದು ನೀನು ಎರಡು ಗಂಟೆಗಳಲ್ಲಿ ನನ್ನ ಇಡೀ ಕೋಟೆಯನ್ನು ತಿರುಗಾಡಿ, ಅದರ ಸವಿಯನ್ನು ಅನನ್ಯತೆಯನ್ನು ನೋಡಿ ಬಾ. ಹಾಗೆ ಕೋಟೆ ತಿರುಗುವಾಗ ಈ ಚಮಚವನ್ನು ಹಿಡಿದುಕೊಂಡು ಹೋಗು ಇದರಲ್ಲಿ ಎರಡು ಹನಿ ಎಣ್ಣೆಯಿದೆ. ಹಿಂತಿರುಗಿ ಬರುವಾಗ ಚಮಚದಲ್ಲಿನ ಎಣ್ಣೆ ಬೀಳದಂತೆ ನೋಡಿಕೊಳ್ಳಬೇಕು ಎಂಬ ಷರತ್ತಿನೊಂದಿಗೆ ಕೋಟೆ ನೋಡಲು ಕಳುಹಿಸಿಕೊಡುತ್ತಾನೆ. ಎರಡು ಗಂಟೆಯ ನಂತರ ಹುಡುಗ ಬುದ್ಧಿವಂತ ವ್ಯಕ್ತಿಯ ಬಳಿ ಹುಷಾರಾಗಿ ಚಮಚವನ್ನು ಕೈಯಲ್ಲಿಡಿದು ಬರುತ್ತಾನೆ.

ಬುದ್ಧಿವಂತ ವ್ಯಕ್ತಿ ಹುಡುಗನಿಗೆ ನನ್ನ ಕೋಟೆಯಲ್ಲಿನ ಸುಂದರವಾದ ತೋಟ ನೋಡಿದೆಯಾ, ಲೈಬ್ರರಿಯಲ್ಲಿದ್ದ ಅದ್ಭುತವಾದ ಪುಸ್ತಕಗಳ ಸಂಗ್ರಹ ನೋಡಿದೆಯಾ? ಪರ್ಷಿಯಾ ದೇಶದ ಎಂಬ್ರಾಯಿಡರಿ ಯುಳ್ಳ ತೂಗುದೀಪ ನೋಡಿದೆಯಾ ಎಂದು ಕೇಳು ತ್ತಾನೆ? ಹುಡುಗ ಮುಜುಗರಪಡುತ್ತಾ ತಾನು ಏನನ್ನು ನೋಡಲು ಸಾಧ್ಯವಾಗಲಿಲ್ಲ. ಏಕೆಂದರೆ ಎಣ್ಣೆ ಚೆಲ್ಲದಂತೆ ನೋಡಿಕೊಳ್ಳ ಬೇಕೆಂಬ ಷರತ್ತು ಪದೇಪದೇ ನೆನಪಾಗಿ ಗಮನವೆಲ್ಲ ಕೇವಲ ಚಮಚ ಮತ್ತು ಎಣ್ಣೆಯ ಮೇಲಷ್ಟೆ ಇತ್ತು ಎಂದು ಹೇಳುತ್ತಾನೆ. ಆಗ ಬುದ್ಧಿವಂತ ವ್ಯಕ್ತಿ ಮತ್ತೆ ಎರಡು ಹನಿಗಳ ಎಣ್ಣೆಯ ಚಮಚ ಹಿಡಿದು ನನ್ನ ಅದ್ಭುತ ಕೋಟೆ ಹಾಗೂ ಅದರ ಸೌಂದರ್ಯವನ್ನು ಮತ್ತೊಮ್ಮೆ ಸವಿದು ಬಾ ಎಂದು ತಿಳಿಸುತ್ತಾನೆ. ಹುಡುಗ ಈ ಬಾರಿ ಕೋಟೆಯ ಸುಂದರ ಹೂವಿನ ತೋಟ, ಬೆಟ್ಟ-ಗುಡ್ಡಗಳು,
ಪ್ರಪಂಚದ ವಿವಿಧ ಖಾದ್ಯಗಳ ಸವಿ ಹೀಗೆ ಎಲ್ಲವನ್ನೂ ಸವಿದು ಬುದ್ಧಿವಂತ ವ್ಯಕ್ತಿಯ ಬಳಿ ಹಿಂದಿರುಗುತ್ತಾನೆ.

ನೋಡಿದರೆ ಚಮಚದಲ್ಲಿದ್ದ ಎಣ್ಣೆಯ ಹನಿಗಳು ಸೋರಿ ಹೋಗಿವೆ ಆಗ ಬುದ್ಧಿವಂತ ವ್ಯಕ್ತಿ ಹುಡುಗನನ್ನು ಉದ್ದೇಶಿಸಿ ಹೇಳುತ್ತಾನೆ ಇದೇ ಸಂತೋಷದ ಸೀಕ್ರೆಟ್. ಎಣ್ಣೆ ಚೆಲ್ಲದಂತೆ ಬದುಕಿನ ಎಲ್ಲ ಅದ್ಭುತಗಳನ್ನು ನಮ್ಮದಾಗಿಸಿಕೊಳ್ಳಬೇಕು. ಬದುಕಿನ ರೇಸ್‌ನಲ್ಲಿ ಜವಾಬ್ದಾರಿಗಳನ್ನು ಹೆಗಲಿಗೇರಿಸಿಕೊಂಡು ಖುಷಿ ಸಂತೃಪ್ತಿಗಳನ್ನು ನಮ್ಮದಾಗಿಸಿಕೊಳ್ಳಲು ಬ್ಯಾಲೆ ಅತ್ಯಗತ್ಯ ಯಾವುದು ಹೆಚ್ಚಾ ದರೂ ಕಡಿಮೆಯಾದರೂ ಬ್ಯಾಲೆ ತಪ್ಪುತ್ತದೆ ಎಚ್ಚರವಿರಲಿ! ತಿಳಿಯಿತೇ ಹ್ಯಾಪಿನೆಸ್‌ನ ಸಿಕ್ರೇಟ್!