Saturday, 14th December 2024

ಭವಿಷ್ಯದ ವಾಣಿಜ್ಯ ಬೆಳೆ: ಸಕ್ಕರೆ ಗಡ್ಡೆ

ಕೃಷಿರಂಗ

ಬಸವರಾಜ ಶಿವಪ್ಪ ಗಿರಗಾಂವಿ

ಸಕ್ಕರೆ ಮತ್ತು ಎಥನಾಲ್ ಎಂದಾಕ್ಷಣ ಬಹುತೇಕರಿಗೆ ಥಟ್ಟನೆ ನೆನಪಿಗೆ ಬರುವುದು ಕಬ್ಬು. ಆದರೆ, ಸಕ್ಕರೆ ಮತ್ತು ಎಥನಾಲ್ ಅನ್ನು ಕಬ್ಬು ಮಾತ್ರವಲ್ಲದೆ ಸಕ್ಕರೆ ಗಡ್ಡೆ (Sugar Beet) ಮತ್ತು ಸಿಹಿಜೋಳ (Sweet Sorghum) ಇವುಗಳಿಂದಲೂ ಉತ್ಪಾದಿಸಲಾಗುತ್ತದೆ ಎಂಬುದು ಅನೇಕರಿಗೆ ಗೊತ್ತಿಲ್ಲ. ಪ್ರಸ್ತುತ ಭಾರತದ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕಬ್ಬಿನಿಂದ ಸಕ್ಕರೆ, ಎಥನಾಲ್ ಸೇರಿದಂತೆ ಹಲವಾರು ಮೌಲ್ಯವಽತ ಉತ್ಪನ್ನಗಳನ್ನು ತಯಾರಿಸಿ, ಕೃಷಿಕ ವಲಯ, ಕಾರ್ಖಾನೆಗಳು ಮತ್ತು ಸರಕಾರಗಳು ಲಾಭವನ್ನು ಪಡೆಯುತ್ತಿವೆ.

ಆದರೆ ಕಬ್ಬು ದೀರ್ಘಾವಽಯ ಬೆಳೆಯಾಗಿರುವುದರಿಂದ, ನೀರು ಮತ್ತು ರಾಸಾಯನಿಕಗಳ ಅವೈಜ್ಞಾನಿಕ ಬಳಕೆಯು ಹೆಚ್ಚುತ್ತಿದೆ. ಇದರಿಂದಾಗಿ ಮಣ್ಣಿನ ಫಲವತ್ತ ತೆಯು ಹಾಳಾಗಿ, ಕಬ್ಬಿನ ನಿರೀಕ್ಷಿತ ಗುಣಮಟ್ಟ ಮತ್ತು ಇಳುವರಿಗಳು ಪ್ರತಿವರ್ಷ ಕುಂಠಿತವಾಗುತ್ತಿವೆ. ಈ ರಾಷ್ಟ್ರೀಯ ಹಾನಿಯನ್ನು ತಡೆಗಟ್ಟಲು ಯುರೋಪ್ ಮತ್ತು ಅಮೆರಿಕದಂಥ ಮುಂದುವರಿದ ರಾಷ್ಟ್ರಗಳು ಮಹತ್ವದ ಉಪಕ್ರಮಕ್ಕೆ ಮುಂದಾಗಿವೆ. ಅದೆಂದರೆ, ಅವು ಕಳೆದ ದಶಕದಿಂದ ಕಬ್ಬಿನ ಬೆಳೆಗೆ ಪರ್ಯಾಯ ವಾಗಿ, ಸಕ್ಕರೆ ಗಡ್ಡೆಯಂಥ ಅಲ್ಪಾವಧಿ ಬೆಳೆಯ ಬೇಸಾಯವನ್ನು ಹೆಚ್ಚಿಸುತ್ತಿವೆ.

ಅಮೆರಿಕ ಮತ್ತು ಯುರೋಪ್‌ಗಳಲ್ಲಿ ಇಂದು ಬಳಕೆಯಾಗುತ್ತಿರುವ ಶೇ.೮೦ರಷ್ಟು ಸಕ್ಕರೆಯು, ಈ ಸಕ್ಕರೆ ಗಡ್ಡೆಯಿಂದಲೇ ಉತ್ಪಾದನೆಯಾಗುತ್ತಿದೆ. ಮಾತ್ರವಲ್ಲ, ವಿಶ್ವಾದ್ಯಂತ ಬಳಕೆಯಾಗುತ್ತಿರುವ ಸಕ್ಕರೆಯಲ್ಲಿ ಅರ್ಧದಷ್ಟು ಭಾಗವನ್ನು ಸಕ್ಕರೆ ಗಡ್ಡೆಯಿಂದಲೇ ಉತ್ಪಾದಿಸಲಾಗುತ್ತಿದೆ. ರೈತರಿಗೆ ಇದೊಂದು ವರದಾನ ವಾಗಿದ್ದು, ಕಬ್ಬಿಗಿಂತ ಕಡಿಮೆ ಬೆಲೆ ಲಭಿಸಿದರೂ ಲಾಭದಾಯಕವಾಗಿರುವುದಲ್ಲದೆ, ಮಣ್ಣಿನ ಫಲವತ್ತತೆಯನ್ನು ಕಾಪಾಡಬಹುದಾಗಿದೆ. ಅವಶ್ಯಕ ಸಂಪನ್ಮೂಲಗಳು ನೈಸರ್ಗಿಕವಾಗಿ ಲಭ್ಯವಿದ್ದ ಪರಿಣಾಮ, ಭಾರತದಲ್ಲಿ ಸಕ್ಕರೆ ಗಡ್ಡೆಯು ಕೆಲವೇ ದಿನಗಳಲ್ಲಿ ಕಬ್ಬು ಬೆಳೆಗೆ ಪರ್ಯಾಯವಾಗಿ, ಪ್ರಮುಖ ವಾಣಿಜ್ಯ ಬೆಳೆಯಾಗಿ
ಹೊರಹೊಮ್ಮುವುದರಲ್ಲಿ ಯಾವುದೇ ಸಂಶಯವಿಲ್ಲ.

ಸಕ್ಕರೆ ಗಡ್ಡೆಯ ವಿಶೇಷತೆಗಳು: ಕಬ್ಬು ಬೆಳೆಯಿಂದ ಸರಾಸರಿ ೧೨ ತಿಂಗಳ ಅವಧಿಯಲ್ಲಿ ಪ್ರತಿ ಎಕರೆಗೆ ೩೫ ಟನ್ ಉತ್ಪನ್ನ ಲಭಿಸಿದರೆ, ಸಕ್ಕರೆ ಗಡ್ಡೆಯಿಂದ ಕೇವಲ ೫ ತಿಂಗಳಲ್ಲಿಯೇ ೩೫ ಟನ್ ಉತ್ಪನ್ನವನ್ನು ಪಡೆಯಬಹುದಾಗಿದೆ. ಅಲ್ಪಾವಧಿಯಲ್ಲಿಯೇ ಬೆಳೆಯ ಕಟಾವು ಆಗುವುದರಿಂದ, ಮಣ್ಣಿಗೆ ವಿಶ್ರಾಂತಿ ಲಭಿಸಿ ಅದರ ಫಲವತ್ತತೆಯು ಹೆಚ್ಚುತ್ತದೆ. ದೀರ್ಘಾವಽಯ ಬೆಳೆಯಿಂದ ಉಂಟಾಗುವ ಸಮಸ್ಯಾತ್ಮಕ ಮಣ್ಣಿನ ಹುಟ್ಟುವಳಿಯ ಪ್ರಮೇಯವು ಉದ್ಭವಿಸುವುದಿಲ್ಲ
ಹಾಗೂ ಪ್ರಸ್ತುತ ಸಮಸ್ಯಾತ್ಮಕ ಮಣ್ಣಿನಲ್ಲಿ ಈ ಬೆಳೆಯನ್ನು ನಾಟಿ ಮಾಡುವುದರಿಂದ ವರ್ಷದಿಂದ ವರ್ಷಕ್ಕೆ ಸಮಸ್ಯಾತ್ಮಕ ಮಣ್ಣಿನ ಪ್ರಮಾಣವನ್ನು ಕಡಿಮೆ ಗೊಳಿಸಿ ನಿರ್ಮೂಲನೆ ಮಾಡಬಹುದಾಗಿದೆ.

ಪ್ರತಿ ಟನ್ ಕಬ್ಬಿನಿಂದ ೭೦ ಲೀಟರ್ ಎಥನಾಲ್ ಉತ್ಪಾದನೆಯಾದರೆ, ಸಕ್ಕರೆ ಗಡ್ಡೆಯಿಂದ ೯೦ ಲೀಟರ್‌ನಷ್ಟು ಎಥನಾಲ್ ಅನ್ನು ಉತ್ಪಾದಿಸಬಹುದಾಗಿದೆ. ಗುಣಮಟ್ಟದ ಕಬ್ಬಿನಲ್ಲಿ ಸರಾಸರಿ ಶೇ.೧೨ರಷ್ಟು ಇಳುವರಿಯಿದ್ದರೆ, ಸಕ್ಕರೆ ಗಡ್ಡೆಯಲ್ಲಿ ಶೇ.೧೭ರವರೆಗೆ ಸಕ್ಕರೆ ಇಳುವರಿಯನ್ನು ಪಡೆಯಬಹುದಾಗಿದೆ. ಅಂದರೆ ಒಂದು ಟನ್ ಕಬ್ಬಿನಿಂದ ೧೨೦ ಕಿಲೋ ಸಕ್ಕರೆ ಉತ್ಪಾದನೆ ಮಾಡಿದರೆ, ಸಕ್ಕರೆ ಗಡ್ಡೆಯಿಂದ ೧೭೦ ಕಿಲೋದಷ್ಟು ಸಕ್ಕರೆಯನ್ನು ಉತ್ಪಾದಿಸಬಹುದು. ಸಕ್ಕರೆ ಗಡ್ಡೆಯ ಬೆಳೆಗೆ ಕಬ್ಬಿಗಿಂತ ಶೇ.೭೦ರಷ್ಟು ಕಡಿಮೆ ನೀರು ಮತ್ತು ರಸಗೊಬ್ಬರ ಸಾಕು. ಇದರಿಂದಾಗಿ ರೈತರಿಗೆ ಆರ್ಥಿಕವಾಗಿ ಉಳಿತಾಯ ವಾಗುತ್ತದೆ. ಕಬ್ಬನ್ನು ನಾಟಿಮಾಡುವ ಸಮಯದಲ್ಲಿ, ಪ್ರತಿ ಎಕರೆಗೆ ೨ ಟನ್‌ನಷ್ಟು ಕಬ್ಬಿನ ಬೀಜ ಅವಶ್ಯವಾದರೆ, ಸಕ್ಕರೆ ಗಡ್ಡೆಯ ಕೃಷಿಗೆ ಕೇವಲ ಒಂದು ಕಿಲೋದಷ್ಟು ಬೀಜ
ಸಾಕಾಗುತ್ತದೆ. ಹೀಗಾಗಿ ಹಣಕಾಸಿನ ವೆಚ್ಚದಲ್ಲಿ ಗಣನೀಯ ಇಳಿಕೆಯಾಗುತ್ತದೆ.

ಸಕ್ಕರೆ ಗಡ್ಡೆಯಲ್ಲಿ ಕಬ್ಬಿನಂತೆ ಬಗ್ಯಾಸ್ (ಕಬ್ಬಿನ ಸಸ್ಯದ ಸಿಪ್ಪೆ ಅಥವಾ ಅಳ್ಳಟ್ಟೆ) ಉತ್ಪಾದನೆಯಾಗುವುದಿಲ್ಲ; ಈ ಕೊರತೆಯನ್ನು ಹೊರತುಪಡಿಸಿದರೆ ಉಳಿದೆಲ್ಲ
ಬಾಬತ್ತುಗಳಲ್ಲಿ ಸಕ್ಕರೆ ಗಡ್ಡೆಯು ಕಬ್ಬು ಬೆಳೆಗಿಂತ ಹೆಚ್ಚು ಲಾಭದಾಯಕವಾಗಿದೆ. ಯುರೋಪ್ ಮೂಲದ ಸಕ್ಕರೆ ಗಡ್ಡೆಯು ‘ಚೆನೋಪೋಡಿ ಯೇಸಿ’ ಕುಟುಂಬಕ್ಕೆ ಸೇರಿದೆ. ಇದು ಮೂಲಂಗಿ ರೀತಿಯ ಬೆಳೆಯಾಗಿದ್ದು, ಪಾಲಕ್ ತರಹದ ಎಲೆಗಳನ್ನು ಹೊಂದಿದೆ. ಪ್ರಾರಂಭದಲ್ಲಿ ಇದನ್ನು ಕೇವಲ ಶೀತವಲಯದಲ್ಲಿ ಜನ-
ಜಾನುವಾರುಗಳ ಆಹಾರಕ್ಕಾಗಿ ಬೆಳೆಯಲಾಗುತ್ತಿತ್ತು. ಬದಲಾದ ಹವಾಮಾನದಿಂದಾಗಿ ಗಡ್ಡೆಯಲ್ಲಿ ಸಕ್ಕರೆ ಅಂಶವು ಗಮನಾರ್ಹವಾಗಿ ಹೆಚ್ಚಳಗೊಂಡಿತು. ಇದರಿಂದ ಪ್ರಭಾವಿತ ಗೊಂಡ ಅಮೆರಿಕ ಮತ್ತು ಯುರೋಪ್‌ನ ತಜ್ಞರು ಹಲವು ಸಂಶೋಧನೆಗಳನ್ನು ಕೈಗೊಂಡ ಪರಿಣಾಮ, ೧೯೯೫ರಿಂದಲೇ ಅಧಿಕೃತವಾಗಿ ಸಕ್ಕರೆ ಗಡ್ಡೆಯಿಂದ ಸಕ್ಕರೆಯನ್ನು ಉತ್ಪಾದಿಸಲಾಗುತ್ತಿದೆ.

ಕಳೆದ ೨೦೧೦ರ ದಶಕದಲ್ಲಿ ಭಾರತದಲ್ಲಿ ಈ ಸಕ್ಕರೆ ಗಡ್ಡೆ ಕೃಷಿಯ ಪ್ರಯೋಗಗಳು ಪ್ರಾರಂಭವಾದವು; ಆದರೆ ಹವಾಮಾನದ ಹೊಂದಾಣಿಕೆಯ ಕೊರತೆ ಯಿಂದಾಗಿ ಅವು ಯಶಸ್ವಿಯಾಗಲಿಲ್ಲ. ಶೀತವಲಯದ ದೇಶಗಳಲ್ಲಿ ಯಶಸ್ವಿಯಾದ ಸಕ್ಕರೆ ಗಡ್ಡೆಯ ಬೀಜವು, ಸಮಶೀತೋಷ್ಣ ವಲಯದ ಭಾರತಕ್ಕೆ ಸರಿಹೊಂದ ದಿದ್ದುದು ಇದಕ್ಕೆ ಕಾರಣ. ಪ್ರಸ್ತುತ, ಸಮಶೀತೋಷ್ಣ ವಲಯಕ್ಕೆ ಸರಿಹೊಂದುವ ಸಕ್ಕರೆ ಗಡ್ಡೆ ತಳಿ ಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗಿದ್ದು, ಆಂಧ್ರಪ್ರದೇಶ, ಪಂಜಾಬ್, ತಮಿಳುನಾಡು ಮತ್ತು ಮಹಾರಾಷ್ಟ್ರ ಗಳಲ್ಲಿ ಈ ತಳಿಗಳ ಪ್ರಾಯೋಗಿಕ ಬೆಳೆಯು ಯಶಸ್ವಿಯಾಗಿದೆ.

ಹವಾಮಾನದ ಹೊಂದಾಣಿಕೆಯಿಂದ ಮುಂದುವರಿದು, ಸವುಳು-ಜವುಳು ಸೇರಿದಂತೆ ಭಾರತದಲ್ಲಿ ಹೆಚ್ಚುತ್ತಿರುವ ಸಮಸ್ಯಾತ್ಮಕ ಮಣ್ಣಿನಲ್ಲಿಯೂ ಇದು ಉತ್ತಮ ಇಳುವರಿ ಯನ್ನು ಕೊಡುವುದಲ್ಲದೆ, ಮಣ್ಣಿನ ಫಲವತ್ತತೆಯನ್ನೂ ಸುಧಾರಿಸುತ್ತದೆ ಎಂಬುದನ್ನು ಹಲವು ಪ್ರಯೋಗಗಳಿಂದ ಖಚಿತಪಡಿಸಿಕೊಳ್ಳಲಾಗಿದೆ. ಕಬ್ಬು ಬೆಳೆಯೊಂದಿಗೆ ಇದನ್ನು ಮಿಶ್ರ ಬೆಳೆಯಾಗಿ ಬೆಳೆಯಬಹುದಲ್ಲದೆ, ಅರಿಶಿನ ಬೆಳೆಯಂತೆ ನಾಟಿ ಮತ್ತು ಕಟಾವು ಹಂತದಲ್ಲಿ ಯಂತ್ರೋಪಕರಣಗಳನ್ನು
ಬಳಸಬಹುದಾಗಿದೆ.

ಕಾರ್ಖಾನೆಗಳು ಸಕ್ಕರೆ ಗಡ್ಡೆಯ ಸಂಸ್ಕರಣೆಯನ್ನು ಪ್ರತ್ಯೇಕವಾಗಿ ಕೈಗೊಳ್ಳದೆ ಯಂತ್ರೋಪಕರಣಗಳಲ್ಲಿ ಸ್ವಲ್ಪ ಮಾರ್ಪಾಟು ಮಾಡಿ ಕಬ್ಬಿನೊಂದಿಗೆ ಕೈಗೊಂಡಲ್ಲಿ ಲಾಭ ದಾಯಕವಾಗುತ್ತದೆ. ಕಾರಣ, ಕಬ್ಬಿನಿಂದ ಬರುವಂತೆ ಸಕ್ಕರೆ ಗಡ್ಡೆಯಿಂದ ಗುಣಮಟ್ಟದ ಬಗ್ಯಾಸ್ (ಸಿಪ್ಪೆ) ದೊರೆಯದೆ ಕೇವಲ ತಿರುಳು ಹೊರಬರುತ್ತದೆ. ಈ ತಿರುಳು ಇಂಧನವಾಗಿ ಉಪಯೋಗವಾಗುವುದಿಲ್ಲವಾದ್ದರಿಂದ, ವಿದ್ಯುತ್ ಅಥವಾ ಕಲ್ಲಿದ್ದಲನ್ನು ಪ್ರತ್ಯೇಕವಾದ ಇಂಧನವನ್ನಾಗಿ ಬಳಸಬೇಕಾಗುತ್ತದೆ. ಆದರೆ ಈ ತಿರುಳನ್ನು ‘ಪ್ರೆಸ್‌ಮಡ್’ನಂತೆ ಪಶು ಆಹಾರ ಮತ್ತು ಕಾಂಪೋಸ್ಟ್ ಗೊಬ್ಬರ ತಯಾರಿಕೆಯಲ್ಲಿ ಬಳಸಬಹುದಾಗಿದೆ.

ಮಹಾರಾಷ್ಟ್ರದ ಇಸ್ಲಾಂಪುರ ಹಾಗೂ ಜಾಲ್ನಾದ ಕಾರ್ಖಾನೆಗಳಲ್ಲಿ ಯಂತ್ರೋಪಕರಣಗಳನ್ನು ಮಾರ್ಪಾಟು ಗೊಳಿಸಿ, ಕಬ್ಬಿನೊಂದಿಗೆ ಸಕ್ಕರೆ ಗಡ್ಡೆಯ ಸಂಸ್ಕರಣೆ ಯನ್ನು ಯಶಸ್ವಿಯಾಗಿ ಕೈಗೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ ‘ಗೋದಾವರಿ ಬಯೋರಿ-ನರೀಸ್ ಲಿಮಿಟೆಡ್, ಸಮೀರವಾಡಿ’ಯವರು ಸಕ್ಕರೆ ಗಡ್ಡೆಯ ಬೇಸಾಯ ವನ್ನು ಯಶಸ್ವಿಯಾಗಿ ಕೈಗೊಂಡಿದ್ದಾರಲ್ಲದೆ ಯಂತ್ರೋಪಕರಣಗಳಲ್ಲಿ ಮಾರ್ಪಾಟುಗೊಳಿಸಿ ಉತ್ಪಾದನೆಯನ್ನು ಪ್ರಾರಂಭಿಸುತ್ತಿದ್ದಾರೆ. ಭವಿಷ್ಯದಲ್ಲಿ ಬರಗಾಲ, ನೀರಿನ ಕೊರತೆ, ಮಾಗಿ ಉಳುಮೆ ಕೊರತೆ, ಅವೈಜ್ಞಾನಿಕವಾಗಿ ರಸಗೊಬ್ಬರ ಮತ್ತು ನೀರಿನ ಬಳಕೆ, ನೈಸರ್ಗಿಕ ವಿಕೋಪಗಳು, ಇಳುವರಿ ಕೊರತೆ,
ಅನವಶ್ಯಕ ಕಬ್ಬು ತಳಿಗಳ ನಾಟಿ, ಕಬ್ಬಿನೊಂದಿಗೆ ಸೂಕ್ತವಲ್ಲದ ಮಿಶ್ರ ಬೆಳೆಗಳ ನಾಟಿ, ಅನಾರೋಗ್ಯಕರ ಪೈಪೋಟಿ, ಕಬ್ಬಿನೊಂದಿಗೆ ನಿರುಪಯುಕ್ತ ವಸ್ತುಗಳ ಪೂರೈಕೆ (ಆಂದರೆ ರವದಿ, ಹಸಿರು ತುದಿ, ವಾಡಿ, ಬೇರು, ಒಣಗಿದ ಕಬ್ಬು, ಮರಿ ಕಬ್ಬು, ಮಣ್ಣು, ಅಪಕ್ವ ಕಬ್ಬು) ಹಾಗೂ ಕಾರ್ಖಾನೆಗಳ ಅವೈಜ್ಞಾನಿಕ
ಕಾರ್ಯಕ್ಷಮತೆಯ ಹೆಚ್ಚಳದಿಂದಾಗಿ ರೈತರಿಗೆ ಮತ್ತು ಕಾರ್ಖಾನೆಗಳಿಗೆ ಕಡಿಮೆ ಕೆಲಸದ ದಿನಗಳು ಒದಗಿ ಅದರಿಂದ ಹಾನಿಯಾಗುತ್ತಿದೆ.

ಸದ್ಯ ಭಾರತದಲ್ಲಿ ೬೦ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಲಭ್ಯವಿರುವ ಕಬ್ಬು ಕೃಷಿ ಬದಲಾಗಿ, ಸಕ್ಕರೆ ಗಡ್ಡೆಯ ಕೃಷಿ ಕೈಗೊಂಡಲ್ಲಿ ಲಕ್ಷಾಂತರ ಕೋಟಿ ರಾಷ್ಟ್ರೀಯ
ಲಾಭವನ್ನು ಪಡೆಯಬಹುದಾಗಿದೆ. ಆದ್ದರಿಂದ, ಕಡಿಮೆ ಅವಧಿಯಲ್ಲಿ ಕಬ್ಬಿಗಿಂತ ಹೆಚ್ಚು ಲಾಭ ಕೊಡುವಂಥ ಸಕ್ಕರೆ ಗಡ್ಡೆಯ ಬೇಸಾಯವನ್ನು ಸರಕಾರವು ಗಂಭೀರವಾಗಿ ಪರಿಗಣಿಸಬೇಕು.

(ಲೇಖಕರು ಕೃಷಿ ತಜ್ಞರು ಹಾಗೂ
ಸಹಾಯಕ ಮಹಾ ಪ್ರಬಂಧಕರು)