Friday, 13th December 2024

ಆತ್ಮಾವಲೋಕನ ಆಗಬೇಕಿದೆ

ಕನ್ನಡ ಚಿತ್ರರಂಗದ ಇತ್ತೀಚಿನ ಸ್ಥಿತಿಗತಿ ಅದ್ಯಾಕೋ ಆಶಾದಾಯಕವಾಗಿಲ್ಲ. ಸ್ಯಾಂಡಲ್‌ವುಡ್‌ನಲ್ಲಿ ಪ್ರತಿಭೆಗಳಿಗೆ ಬರವಿಲ್ಲ, ಹಣ ಹೂಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ತಾಂತ್ರಿಕ ನೆಲೆಯಲ್ಲಿ ನೋಡಿದಾಗ ಚಿತ್ರವೊಂದರ ಕಟ್ಟೋಣವೂ ಈಗ ಸುಸೂತ್ರ ವಾಗಿದೆ.

ಇಷ್ಟಾಗಿಯೂ ಜನರು ಚಿತ್ರಮಂದಿರಗಳತ್ತ ಬರುತ್ತಿಲ್ಲ. ಘಟಾನುಘಟಿಗಳ ಚಿತ್ರವೂ ೨೫ ದಿನಗಳವರೆಗೆ ಓಡುವಷ್ಟರ ಹೊತ್ತಿಗೆ ಏದುಸಿರು ಬಿಡುತ್ತಿರುತ್ತದೆ. ಚಿತ್ರವೊಂದರ ಒಟ್ಟಾರೆ ನಿರ್ಮಿತಿಯಲ್ಲಿ ಶಿಸ್ತು-ಶ್ರದ್ಧೆ, ರಂಜಕತೆ ಇಲ್ಲದಿದ್ದಾಗ ಜನರು ಅದನ್ನು ತಿರಸ್ಕರಿಸಿದರೆ ಅದಕ್ಕೊಂದು ಅರ್ಥವಿದೆ. ಆದರೆ ಒಳ್ಳೆಯ ಅಂಶಗಳಿದ್ದೂ ಚಿತ್ರಗಳು ಮಕಾಡೆ ಮಲಗಿದರೆ ಅದಕ್ಕೆ ಯಾರನ್ನು ಹೊಣೆ ಮಾಡಬೇಕು? ಇದಕ್ಕೊಂದು ಉದಾಹರಣೆ ಕೊಡುವುದಾದರೆ, ಇತ್ತೀಚಿನ ‘ಬ್ಲಿಂಕ್’ ಚಿತ್ರವು ಚೆನ್ನಾಗಿ ಮೂಡಿಬಂದಿತ್ತು; ಆದರೆ ಅದು ಚಿತ್ರಮಂದಿರಗಳಲ್ಲಿ ಹೆಚ್ಚು ದಿನ ನಿಲ್ಲಲೇ ಇಲ್ಲ.

ಹೀಗಾದಲ್ಲಿ ಸದಭಿರುಚಿಯ ಚಿತ್ರಗಳ ನಿರ್ಮಾತೃಗಳಿಗೆ ಒತ್ತಾಸೆ ಹೇಗಾದರೂ ದಕ್ಕೀತು? ‘ಶಾಖಾಹಾರಿ’ ಚಿತ್ರದ್ದೂ ಇದೇ ಕಥೆ. ರಂಗಾಯಣ ರಘು ಅವರ ವಿಭಿನ್ನ ಅಭಿನಯ ಮತ್ತು ಉತ್ತಮ ನಿರೂಪಣೆಯ ಹೊರತಾಗಿಯೂ ಆ ಚಿತ್ರದಿಂದ ನಿರ್ಮಾಪಕರಿಗೆ ಹೆಚ್ಚೇನೂ ಗಿಟ್ಟಲಿಲ್ಲ ಎನ್ನಲಾಗುತ್ತದೆ. ‘ಇದೇ ಚಿತ್ರವು ತಮಿಳಲ್ಲೋ, ಮಲಯಾಳಂ ನಲ್ಲೋ ಮೂಡಿಬಂದಿದ್ದರೆ ನಮ್ಮ ಜನರೇ ದಂಡುಗಟ್ಟಿಕೊಂಡು ಹೋಗಿ ವೀಕ್ಷಿಸಿ ಶಭಾಷ್ ಎನ್ನುತ್ತಿದ್ದರು’ ಎಂಬ ‘ಶಾಖಾಹಾರಿ’ ಚಿತ್ರತಂಡದವರೊಬ್ಬರ ನೋವಿನ ಮಾತು ಇಲ್ಲಿ ಉಲ್ಲೇಖನೀಯ.

ತಾರಕಕ್ಕೇರಿರುವ ಚಿತ್ರಮಂದಿರಗಳ ಪ್ರವೇಶಧನದಿಂದಾಗಿ ಕುಟುಂಬ ಸಮೇತರಾಗಿ ಚಲನಚಿತ್ರ ವೀಕ್ಷಿಸುವುದು ಈಗ ದುಸ್ತರ ವಾಗಿದೆ ಎಂಬ ಮಾತೂ ಕೇಳಿಬರುತ್ತಿದೆ. ಜತೆಗೆ, ಬಹುತೇಕ ಚಿತ್ರಗಳು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಒಟಿಟಿ ವೇದಿಕೆಗೂ ಲಗ್ಗೆ ಹಾಕುವುದರಿಂದ, ಮನೆಯಲ್ಲೇ ಹೋಂ ಥಿಯೇಟರ್ ಮಾದರಿಯ ಟಿವಿ ಪರದೆಗಳನ್ನು ಹೊಂದಿರುವವರು ಕೆಲವೇ ರುಪಾಯಿಗಳಲ್ಲಿ ಕುಟುಂಬದವರೊಂದಿಗೆ ಚಿತ್ರವನ್ನು ನೋಡುವ ಆಯ್ಕೆಯೆಡೆಗೆ ವಾಲುತ್ತಿದ್ದಾರೆಯೇ? ಅಥವಾ ದಿನಗಳೆದಂತೆ ಹೆಚ್ಚುತ್ತಿರುವ ವೆಬ್ -ಸರಣಿಗಳು, ಟಿವಿ ಧಾರಾವಾಹಿಗಳಲ್ಲೇ ತಮಗೆ ಬೇಕಾದ ಮನರಂಜನೆ ಸಿಗುತ್ತಿರುವುದರಿಂದ ಜನರು ಚಿತ್ರಮಂದಿರಗಳಿಂದ ವಿಮುಖರಾಗಿದ್ದಾರೆಯೇ? ಎಂಬ ಪ್ರಶ್ನೆಗಳೂ ಇಲ್ಲಿ ಮೂಡುತ್ತವೆ.

ಒಟ್ಟಿನಲ್ಲಿ, ಚಿತ್ರೋದ್ಯಮಿಗಳು ಆತ್ಮಾವಲೋಕನ ಮಾಡಿಕೊಳ್ಳುವುಕ್ಕೆ ಇದು ಸಕಾಲ.