Saturday, 23rd November 2024

ಓವೈಸಿ ಸಾಮ್ರಾಜ್ಯದಲ್ಲಿ ಮಾಧವಿ ಗರ್ಜನೆ

ಧರ್ಮಯುದ್ದ 

ವಿನಾಯಕ ವೆಂ.ಭಟ್ಟ, ಅಂಬ್ಲಿಹೊಂಡಾ

ಈ ಘಟನೆ, ಮುಸ್ಲಿಂ ಜನಾಂಗದ ಉದ್ಧಾರಕ ಎಂದು ಹೇಳಿಕೊಳ್ಳುವ ಎಐಎಂಐಎಂ ಪಕ್ಷದ ಅಸಾದುದ್ದೀನ್ ಓವೈಸಿ ಅವರು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರದ ಸ್ಥಿತಿಗತಿಯ ಒಂದು ಸಣ್ಣ ‘ಝಲಕ್’ ಅಷ್ಟೇ. ಹೈದರಾಬಾದಿನ ಹತ್ತಿರದಲ್ಲಿರುವ ಚೆಂಗಿಚೆ ರ್ಲಾ ಎಂಬ ಹಳ್ಳಿಯಲ್ಲಿ ಹಿಂದುಳಿದ ವರ್ಗದ ಹಿಂದೂ ಕುಟುಂಬವಿತ್ತು. ಕಳೆದ ಹೋಳಿ ಹಬ್ಬದ ಸಂದರ್ಭದಲ್ಲಿ
ವಾಡಿಕೆ ಯಂತೆ ಆ ಮನೆಯ ಹೆಣ್ಣು ಮಕ್ಕಳು ದೇವರ ಭಜನೆ ಮಾಡುತ್ತಾ, ಹೋಳಿ ಆಡುತ್ತಾ ಕುಣಿದು ಸಂಭ್ರಮಿಸುತ್ತಿದ್ದರು.

ಅವರಲ್ಲಿ ಒಬ್ಬ ಗರ್ಭಿಣಿಯೂ ಇದ್ದಳು. ಹತ್ತಿರದ ಮಸೀದಿಯೊಂದರಲ್ಲಿ ಆಗ ತಾನೇ ಪ್ರಾರ್ಥನೆ ಮುಗಿಸಿ ಹೊರಬಂದ ಓವೈಸಿ ಕಡೆಯವರು ಎಂದು ಹೇಳಲಾಗುವ ಯುವಕರ ಗುಂಪಿಗೆ ಇದನ್ನು ಸಹಿಸಲಾಗಲಿಲ್ಲ. ಒಂದೇ ಸಮನೆ ಮೇಲೇರಿಬಂದ ಯುವಕರ ಗುಂಪು ಇವರ ಮೇಲೆ ಮಾರಕಾಯುಧಗಳಿಂದ ಮಾರಣಾಂತಿಕ ಹಲ್ಲೆ ನಡೆಸಿತು.

ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಈ ಯುವತಿಯರನ್ನು ಅಂತೂ ಇಂತೂ ಅವರ ಮನೆಗೆ ಸೇರಿಸಲಾಯಿತು. ಇದನ್ನು ತಿಳಿದ ಹಿಂದೂ ಕಾರ್ಯಕರ್ತರು ಮತ್ತು ಬಿಜೆಪಿಯ ಜನಪ್ರತಿನಿಧಿಗಳು ಅತ್ತ ಧಾವಿಸಲು ಮುಂದಾ ದರು. ಆದರೆ ಪೊಲೀಸರು ಆ ಹಳ್ಳಿಗೆ ಇವರುಗಳಿಗೆ ಪ್ರವೇಶವನ್ನು ನಿರ್ಬಂಧಿಸಿದರು. ಆಗ ಅಲ್ಲಿಗೆ ‘ಫೈರ್‌ಬ್ರ್ಯಾಂಡ್’ ಮಾಧವಿಯ ಪ್ರವೇಶವಾಯಿತು.

‘ನನ್ನ ಸಮಾಜದವರು, ಅದರಲ್ಲೂ ಮಹಿಳೆಯರು ತೊಂದರೆಯಲ್ಲಿದ್ದಾರೆ, ಹಾಗಾಗಿ ನಾನು ಅಲ್ಲಿಗೆ ಹೋಗಲೇಬೇಕು’ ಎಂದ ಈ ಮಹಿಳೆಯನ್ನು ಮತ್ತು ಅವರ ಬೆಂಬಲಿಗರನ್ನು ಪೊಲೀಸರೂ ತಡೆಯದಾದರು. ಅಲ್ಲಿಗೆ ಹೋಗಿ ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ಸೇರಿಸಿ ಮಾಧವಿ ಚಿಕಿತ್ಸೆ ಕೊಡಿಸಿದರು. ‘ಬೆಂಕಿ ಚೆಂಡು’ ಮಾಧವಿ ಲತಾ ಅವರನ್ನು ಕಂಡರೆ ಸಮಾಜಘಾತುಕರನ್ನು ಬಿಡಿ, ಅಲ್ಲಿನ ಪೊಲೀಸರಿಗೂ ಭಯವಂತೆ. ಸೀರೆಯಲ್ಲಿ ಇರುವ ‘ಡಾನ್’, ‘ಲೇಡಿ ಸಿಂಘಂ’ ಎಂಬುದು ಅಲ್ಲಿ ಇವರಿಗಿರುವ
ಬಿರುದು ಗಳು.

ಮುಸ್ಲಿಂ ಬಾಹುಳ್ಯವಿರುವ ಈ ಕ್ಷೇತ್ರದಲ್ಲಿ ಮುಂಬರುವ ಲೋಕಸಮರದಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಅನಿರೀಕ್ಷಿತವಾಗಿ
ಮಾಧವಿ ಆಯ್ಕೆಯಾಗಿದ್ದಾರೆ. ಈಗ ದೇಶಾದ್ಯಂತ ಸುದ್ದಿಯಲ್ಲಿರುವ ಮಾಧವಿ ಲತಾ, ಮನೆಯವರೆಲ್ಲರ ಜತೆ ಕುಳಿತು ಟಿವಿಯಲ್ಲಿ ವಾರ್ತೆಗಳನ್ನು ನೋಡುತ್ತಿರುವಾಗ ಹೈದರಾಬಾದ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ತಮ್ಮ ಹೆಸರು ಮೂಡಿಬರುತ್ತಿರುವುದನ್ನು ನೋಡಿ ಆಶ್ಚರ್ಯಪಟ್ಟಿದ್ದರಂತೆ. ‘ಮೋದಿ ಭಾಯಿ (ನರೇಂದ್ರ ಮೋದಿಯವರನ್ನು ಮಾಧವಿಯವರು ಕರೆಯುವುದು ಹೀಗೇ) ಅವರು ಇಲ್ಲಿಯವರೆಗೆ ನನ್ನನ್ನು ನೋಡಿದ್ದಿಲ್ಲ, ಮಾತನಾಡಿದ್ದಿಲ್ಲ; ಆದರೂ ನನ್ನ ಕೆಲಸವನ್ನು ಮಾತ್ರ ಗುರುತಿಸಿ ಲೋಕಸಭಾ ಅಭ್ಯರ್ಥಿಯಾಗಿ ಘೋಷಿಸಿರುವುದು ರಾಜಕೀಯವಾಗಿ ಮಹತ್ವಾಕಾಂಕ್ಷಿ ಅಲ್ಲದಿದ್ದ ನನಗೆ ನಂಬಲಾಗದ ಸ್ಥಿತಿ’ ಎನ್ನುತ್ತಾರೆ ಮಾಧವಿ ಲತಾ.

ಮಾಧವಿ ಲತಾ ಒಬ್ಬ ಸುಶಿಕ್ಷಿತ ಮತ್ತು ಪ್ರೌಢಚಿಂತನೆಯ ಮಹಿಳೆ. ಮೂಲತಃ ಒಬ್ಬ ವೃತ್ತಿಪರ ಭರತನಾಟ್ಯ ಕಲಾವಿದೆ, ಸಮಾಜ ಸೇವಕಿ, ಲೋಕೋಪಕಾರಿ ಮತ್ತು ಉದ್ಯಮಿಯೂ ಹೌದು. ‘ತ್ರಿವಳಿ ತಲಾಖ್’ ಕುರಿತ ಹೋರಾಟದಲ್ಲಿ ಮುಸ್ಲಿಂ ಮಹಿಳಾ ಗುಂಪು ಗಳೊಂದಿಗೆ ಕೆಲಸ ಮಾಡಿದ್ದವರು. ಮಾಧವಿ ನಿರ್ಗತಿಕ ಮುಸ್ಲಿಂ ಮಹಿಳೆಯರಿಗಾಗಿ ನಿಧಿಯನ್ನು ಸಹ ರಚಿಸಿದ್ದಾರೆ. ಒಬ್ಬ ಹಿಂದೂ ಮಹಿಳೆಯಾಗಿ ಕಳೆದ ೨೦ ವರ್ಷಗಳಿಂದ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಇವರು, ‘ತ್ರಿವಳಿ ತಲಾಖ್’ ಮುಂತಾದ ಸಾಮಾಜಿಕ ಪಿಡುಗುಗಳ ವಿರುದ್ಧ ಮುಸ್ಲಿಂ ಮಹಿಳೆಯರನ್ನು ಸಂಘಟಿಸುತ್ತಾ, ಅವರ ಹಕ್ಕುಗಳಿಗಾಗಿ ಹೋರಾಡಿ ಅವರ ಮನಗೆದ್ದವರು.

ತಮ್ಮ ಆಸ್ಪತ್ರೆಯಲ್ಲಿ ೮ ಸಾವಿರಕ್ಕೂ ಹೆಚ್ಚು ಮುಸಲ್ಮಾನ ಮಹಿಳೆಯರಿಗೆ ಉಚಿತವಾಗಿ ಹೆರಿಗೆ ಮಾಡಿಸಿ ಹೆಸರು ಗಳಿಸಿದವರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ. ಅವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೇ ಮನೆಶಿಕ್ಷಣ ನೀಡಿ, ಮಗನನ್ನು ಐಐಟಿಯಲ್ಲಿ ಓದಿಸುತ್ತಿರುವುದರಿಂದ ಸುದ್ದಿಯಾಗಿದ್ದರು. ಮಾಧವಿ ಅವರು ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ರಾಜ್ಯಶಾಸದಲ್ಲಿ ಸ್ನಾತಕರಾದರೆ, ಅವರ ಪತಿ ವಿಶ್ವನಾಥ್ ಅವರು ಐಐಟಿ ಪದವೀಧರರು ಮತ್ತು ಹೈದರಾಬಾದಿನ ವಿರಿಂಚಿ ಆಸ್ಪತ್ರೆಯ ಸಂಸ್ಥಾಪಕರು.

ಮಾಧವಿ ಲತಾ ಅವರು ಧಾರ್ಮಿಕ ಭಾಷಣಕಾರರಾಗಿಯೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ ಮತ್ತು ಕೀರ್ತನೆಗಳನ್ನು ಚೆನ್ನಾಗಿ ಹಾಡಬಲ್ಲ ಗಾಯಕಿಯೂ ಹೌದು. ಜತೆಗೆ ಉತ್ತಮ ಮಾತುಗಾರ್ತಿ. ತೆಲುಗು, ಇಂಗ್ಲಿಷ್ ಜತೆಗೆ ಹಿಂದಿ ಭಾಷೆಯಲ್ಲೂ ಬಹಳ ಚೆನ್ನಾಗಿ ಮಾತಾಡಬಲ್ಲರು. ಅವರ ಮಾತುಗಳನ್ನು ಕೇಳುವಾಗ ನಮಗೆ ದಿವಂಗತ ಸುಷ್ಮಾ ಸ್ವರಾಜ್ ಅವರ ನೆನಪಾಗದೇ ಇರದು. “ಭಾರತೀಯ ಸಂಸ್ಕೃತಿಯಲ್ಲಿ ವಧುವನ್ನು ‘ಲಕ್ಷ್ಮಿ’ ಎಂದು ಗೌರವಿಸುತ್ತಾರೆ. ಲಕ್ಷ್ಮಿದೇವಿ ಎಂದಾದರೂ ತಾನೇ ದುಡ್ಡು ಕೊಟ್ಟು
ಬೇರೆಯವರ ಮನೆಗೆ ಹೋಗುವುದುಂಟೇ? ಇಲ್ಲ ತಾನೆ? ಹಾಗಾಗಿ ವರದಕ್ಷಿಣೆಯೊಡನೆ ವರನ ಮನೆಗೆ ಸಿರಿಯಾಗಿ ಹೋಗಲು ನಾನು ಇಚ್ಛಿಸುವುದಿಲ್ಲ. ವರದಕ್ಷಿಣೆಯನ್ನು ಕೇಳದೇ, ಗಂಡಿನವರೇ ಮದುವೆಯ ಎಲ್ಲಾ ಖರ್ಚು-ವೆಚ್ಚಗಳನ್ನೂ ನಿಭಾಯಿಸಲು ಒಪ್ಪಿದರೆ ಮಾತ್ರ ನಾನು ಅವರ ಮನೆಯ ಗೃಹಲಕ್ಷ್ಮಿ ಆಗುವವಳು’ ಎಂದು ತಮ್ಮ ವಿವಾಹದ ಸಂದರ್ಭದಲ್ಲಿ ಹಠ ಹಿಡಿದಿದ್ದರಂತೆ.

ಕೊನೆಗೆ, ಐಐಟಿ ಪದವೀಧರರಾಗಿದ್ದ ವಿಶ್ವನಾಥ್ ಅವರು ಮಾಧವಿಯವರ ಆದರ್ಶಗಳನ್ನು ಮೆಚ್ಚಿ, ತಾವೇ ಎಲ್ಲ ಖರ್ಚು-ವೆಚ್ಚಗಳನ್ನು ಭರಿಸಿ ಮಾಧವಿಯವರನ್ನು ವಿವಾಹವಾದರಂತೆ. ಅಂಥ ಹಠವಾದಿ ಹೆಣ್ಣು ಈಕೆ. ಪ್ರಸ್ತುತ ಹೈದರಾಬಾದ್ ಲೋಕ ಸಭಾ ಕ್ಷೇತ್ರದ ಕುರಿತು ಹೇಳುವುದಾದರೆ, ಈ ಸಾಮ್ರಾಜ್ಯಕ್ಕೆ ಕಳೆದ ೪ ದಶಕಗಳಿಂದ ಓವೈಸಿ ವಂಶಜರೇ ಅಘೋಷಿತ ನಿಜಾಮರು ಗಳು. ಎರಡು ಅವಧಿಗೆ ಅವಿಭಜಿತ ಆಂಧ್ರಪ್ರದೇಶ ವಿಧಾನಸಭೆಯ ಸದಸ್ಯರಾಗಿದ್ದ ಅಸಾದುದ್ದೀನ್ ಓವೈಸಿ ಅವರು ೨೦೦೪ರಿಂದ ನಾಲ್ಕು ಬಾರಿ ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ.

ತಮ್ಮ ದ್ವೇಷಭಾಷಣಕ್ಕೆ ಮತ್ತು ಮೂಲಭೂತವಾದಿ ಚಿಂತನೆಗೆ ಕುಖ್ಯಾತರಾದ ಅವರ ಕಿರಿಯ ಸಹೋದರ ಅಕ್ಬರುದ್ದೀನ್ ಓವೈಸಿ ಈ ಲೋಕಸಭಾ ಕ್ಷೇತ್ರದಲ್ಲಿ ಬರುವ ಒಂದು ವಿಧಾನಸಭಾ ಕ್ಷೇತ್ರದ ಸದಸ್ಯ. ಅಸಾದುದ್ದೀನ್ ಓವೈಸಿಗೆ ಮೊದಲು, ಅವರ ತಂದೆ ಸುಲ್ತಾನ್ ಸಲಾವುದ್ದೀನ್ ಓವೈಸಿ ೧೯೮೪ ಮತ್ತು ೨೦೦೪ರ ನಡುವೆ ಸತತ ೬ ಅವಧಿಗೆ ಲೋಕಸಭೆಯಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿ ದ್ದರು.

ಹೈದರಾಬಾದ್ ಲೋಕಸಭಾ ಕ್ಷೇತ್ರವು ಏಳು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ ಮತ್ತು ಇವುಗಳ ಪೈಕಿ ಆರು ಓವೈಸಿಯ ಪಕ್ಷವಾದ ಎಐಎಂಐಎಂನ ಹಿಡಿತದಲ್ಲಿದ್ದರೆ, ಒಂದು ಕ್ಷೇತ್ರ ಮಾತ್ರ ಬಿಜೆಪಿಯ ವಶದಲ್ಲಿದೆ. ೨೦೧೯ರ ಚುನಾವಣೆಯಲ್ಲಿ ಓವೈಸಿ ಮತ್ತು ಬಿಜೆಪಿಯ ಭಗವಂತ್ ರಾವ್ ನಡುವಿನ ಗೆಲುವಿನ ಅಂತರ ಸುಮಾರು ೩ ಲಕ್ಷದಷ್ಟು ಎಂದರೆ ಕ್ಷೇತ್ರದಲ್ಲಿ ಓವೈಸಿಯ ಪ್ರಾಬಲ್ಯ ಏನು, ಎಷ್ಟು ಎನ್ನುವುದು ಯಾರಿಗಾದರೂ ಅರ್ಥವಾಗುತ್ತದೆ. ‘ಈ ಲೋಕಸಭಾ ಕ್ಷೇತ್ರದಲ್ಲಿ ಇಷ್ಟೊಂದು ಅಂತರದಿಂದ ಪದೇ ಪದೆ ಗೆಲುವು ಸಾಧಿಸುತ್ತಿರುವ ಅಸಾದುದ್ದೀನ್ ಓವೈಸಿ ವಿರುದ್ಧ ನಿಮ್ಮ ಗೆಲುವು ತಿರುಕನ ಕನಸಲ್ಲವೇ?’ ಎಂದು ಕೇಳಿದರೆ ಮಾಧವಿ ಲತಾ ‘ಕಳೆದ ಕೆಲವು ವರ್ಷಗಳಿಂದ ಪ್ರತಿದಿನ, ನಾನು ಈ ಕ್ಷೇತ್ರದ ಎಲ್ಲಾ ಪ್ರದೇಶಗಳಿಗೆ ಭೇಟಿ ನೀಡಿ ೧೧-೧೨ ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೇನೆ.

ಅಲ್ಲಿ ಈಗಲೂ ಸ್ವಚ್ಛತೆ ಇಲ್ಲ, ಶಿಕ್ಷಣವಿಲ್ಲ, ಮದರಸಾಗಳಲ್ಲಿ ಮಕ್ಕಳಿಗೆ ಆಹಾರವಿಲ್ಲ. ಮುಸ್ಲಿಂ ಮಕ್ಕಳು  ಬಾಲಕಾರ್ಮಿಕ ರಾಗುತ್ತಾರೆ. ಸದಾ ಭಯ, ಆತಂಕದಲ್ಲಿ ಬದುಕುತ್ತಿರುವ ಅವರಿಗೆ ಭವಿಷ್ಯವೇ ಇಲ್ಲದಾಗಿದೆ ಮತ್ತು ಅಲ್ಲಿ ಹಿಂದೂ ದೇವಾಲಯ ಗಳು ಹಾಗೂ ಮನೆಗಳನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲಾಗುತ್ತಿದೆ’ ಎಂದು ಪುಂಖಾನು ಪುಂಖವಾಗಿ ಕ್ಷೇತ್ರದ ಬಗ್ಗೆ ಹೇಳುತ್ತಾರೆ.
ಹೈದರಾಬಾದಿನ ಒಂದು ಭಾಗವು ಐಟಿ-ಬಿಟಿ ಉದ್ದಿಮೆಗಳಿಂದಾಗಿ ವಿದೇಶದಂತೆ ಕಂಗೊಳಿಸುತ್ತಿದ್ದರೆ, ೪೦ ವರ್ಷಗಳಿಂದ ಓವೈಸಿ
ಬಳಗದ ಸುಪರ್ದಿಯಲ್ಲಿರುವ ಇನ್ನೊಂದು ಭಾಗವಾದ ಓಲ್ಡ್ ಸಿಟಿ ಅತ್ಯಂತ ದಯನೀಯ ಸ್ಥಿತಿಯಲ್ಲಿದೆ.

ಇದೆಲ್ಲೋ ಬುಡಕಟ್ಟು ಪ್ರದೇಶದಲ್ಲಿಲ್ಲ, ಹೈದರಾಬಾದ್‌ನ ಹೃದಯಭಾಗದಲ್ಲಿದೆ. ಈ ಹೃದಯಭಾಗದಲ್ಲಿರುವುದು ಕೇವಲ ಬಡತನ, ಶೋಷಣೆ ಹಾಗೂ ಹಸಿವು ಮಾತ್ರ ಮತ್ತು ಇದಕ್ಕೆ ಕಾರಣ ಇಲ್ಲಿನ ಜನಪ್ರತಿನಿಽಯೇ ಎಂದು ಮಾಧವಿ ನಿರ್ಭಯವಾಗಿ ಹೇಳುತ್ತಾರೆ. ಏಳು ಎಕರೆ ಪ್ರದೇಶವನ್ನು ಆವರಿಸಿರುವ ಅರಮನೆಯಂಥ ಬಂಗಲೆಯಲ್ಲಿ ವಾಸಿಸುವ ಓವೈಸಿ ಕುಟುಂಬಿಕರು, ಕೋಟ್ಯಂತರ ರುಪಾಯಿ ಖರ್ಚುಮಾಡಿ ಮಗಳ ನಿಶ್ಚಿತಾರ್ಥ ಮಾಡುತ್ತಾರೆ. ಅತಿಥಿಗಳಿಗೆ ಊಟ ಬಡಿಸಲು ಒಂದೂವರೆ ಕೋಟಿ
ಖರ್ಚುಮಾಡಿ ಅರಬ್ ರಾಷ್ಟ್ರಗಳಿಂದ ಬಂಗಾರ ಲೇಪಿತ ತಟ್ಟೆಗಳನ್ನು ತರಿಸಿದ್ದಾರೆ. ಆದರೆ ಕ್ಷೇತ್ರದ ಬಡ ಮತದಾರರಿಗೆ, ಒಂದು ಬಿಸ್ಕಿಟ್-ಚಹಾದ ಜತೆಗೆ ವಿವಾಹವನ್ನು ಪೂರೈಸಬೇಕು, ದುಂದುವೆಚ್ಚ ಮಾಡಬಾರದು ಎಂದು ಉಪದೇಶ ಮಾಡುತ್ತಾರೆ ಎನ್ನುವ ಮೂಲಕ ಅವರ ದ್ವಂದ್ವ ನಿಲುವನ್ನು ಮಾಧವಿ ತೆರೆದಿಡುತ್ತಾರೆ.

ಯಾವುದೇ ಕ್ಷೇತ್ರ ೪೦ ವರ್ಷಗಳಿಂದ ಕೇವಲ ಒಂದೇ ಕುಟುಂಬದ ಮರ್ಜಿಯಲ್ಲಿದ್ದರೆ ಹೀಗೇ ಆಗುವುದು; ಅಲ್ಲದಿದ್ದರೆ, ಕ್ಷೇತ್ರ ಎಷ್ಟೊಂದು ಅಭಿವೃದ್ಧಿಯಾಗಬೇಕಿತ್ತು. ಆದರೆ, ಇಲ್ಲಿ ಓವೈಸಿ ಕುಟುಂಬದವರು ಮಾತ್ರ ಅಭಿವೃದ್ಧಿಯಾಗುತ್ತಿದ್ದಾರೆ ನೋಡಿ ಎಂದು ಮಾಧವಿ ಲತಾ ಅವರು ಮತದಾರರನ್ನು ಎಚ್ಚರಿಸುತ್ತಾರೆ. ಓವೈಸಿ ಇಲ್ಲಿಯವರೆಗೆ ನಕಲಿ ಮತದಾರರಿಂದ ಮೂರು ಲಕ್ಷ
ಮತಗಳ ಅಂತರದಿಂದ ಗೆಲ್ಲುತ್ತಿದ್ದರು. ಆದರೆ ಈಗ ನೋಡಿ! ನಾನು ಕನಿಷ್ಠ ಒಂದೂವರೆ ಲಕ್ಷ ಮತಗಳ ಅಂತರದಿಂದ ಗೆದ್ದು ತೋರಿಸುತ್ತೇನೆ ಎನ್ನುತ್ತಾರೆ ಮಾಧವಿ. ಸ್ವಾತಂತ್ರ್ಯಾ ನಂತರವೂ ಮುಸ್ಲಿಂ ಆಡಳಿತವನ್ನು ಹೈದರಾಬಾದಿನಲ್ಲಿ ಮುಂದು ವರಿಸಿಕೊಂಡು ಹೋಗುವ ಮತ್ತು ಸ್ವತಂತ್ರ ಭಾರತದ ಏಕೀಕರಣ ಪ್ರಕ್ರಿಯೆಯನ್ನು ಬುಡಮೇಲು ಮಾಡುವ ಉದ್ದೇಶದಿಂದ ‘ರಜಾಕಾರರು’ ಎನ್ನುವ ಮುಸ್ಲಿಂ ಮೂಲಭೂತವಾದಿ ಸಂಘಟನೆ ಹುಟ್ಟಿಕೊಂಡಿತ್ತು.

ಈ ರಜಾಕಾರರ ಪಡೆಯು ಹಿಂದೂಗಳ ವಿರುದ್ಧ ಹಿಂಸಾಚಾರ ಮತ್ತು ದಂಗೆಗಳನ್ನು ನಡೆಸುತ್ತಾ ಸಮಾಜದಲ್ಲಿ ಭಯ ಹುಟ್ಟಿಸುತ್ತಿತ್ತು. ನಂತರ ಸರ್ದಾರ್ ಪಟೇಲರ ಏಕೀಕರಣ ಪ್ರಕ್ರಿಯೆಯ ಭಾಗವಾದ ಹೋರಾಟದಲ್ಲಿ ಭಾರತೀಯ ಸೇನೆಯು ಇವರುಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಯಿತು ಮತ್ತು ಸದರಿ ಪಡೆಯ ಮುಖ್ಯಸ್ಥ ಖಾಸಿಂ ರಿಜ್ವಿ ಇಲ್ಲಿಂದ ಪಾಕಿಸ್ತಾನಕ್ಕೆ ಓಡಿಹೋಗಿ ತಲೆಮರೆಸಿಕೊಳ್ಳುವಂತಾಯಿತು ಎನ್ನುವ ಇತಿಹಾಸವನ್ನು ಮಾಧವಿ ನಮಗೆ ನೆನಪಿಸುತ್ತಾರೆ. ಈ ಓವೈಸಿ ಬಳಗವೂ
ಇದೇ ರಜಾಕಾರರ ಚಿಂತನೆಯ ಮುಂದುವರಿದ ಭಾಗವಾಗಿದೆ ಮತ್ತು ಈಗಲೂ ಹಿಂದೂ ವಿರೋಧಿ ಕೃತ್ಯಗಳನ್ನು ಈ ಬಳಗದವರು ಈ ಕ್ಷೇತ್ರದಲ್ಲಿ ಎಗ್ಗಿಲ್ಲದೆ ಮುಂದುವರಿಸುತ್ತಿದ್ದಾರೆ.

ಹಾಗಾಗಿ ಹಿಂದೆ ರಜಾಕಾರರ ಪಡೆಯನ್ನು ಇಲ್ಲಿಂದ ಓಡಿಸಿದಂತೆ ಈ ಬಾರಿ ಇವರನ್ನೂ ನಾನು ಇಲ್ಲಿಂದ ಓಡಿಸುವುದು ಪಕ್ಕಾ ಎನ್ನುವುದು ಮಾಧವಿ ಲತಾ ಅವರ ಆವೇಶದ ಮಾತು. ಈ ಬಾರಿಯ ಚುನಾವಣೆಯಲ್ಲಿ ಅಲ್ಪಸಂಖ್ಯಾತರನ್ನೂ ತಲುಪುವ ಗುರಿಯನ್ನು ಹೊಂದಿರುವ ಭಾರತೀಯ ಜನತಾ ಪಕ್ಷ, ತನ್ನ ನೀತಿ-ನಿಯಮಗಳ ಮೂಲಕ ಮುಸ್ಲಿಮರಲ್ಲೇ ಹಿಂದುಳಿದ ವರ್ಗಕ್ಕೆ ಸೇರಿದ ಪಶ್ಮಂದಾ ಮುಸ್ಲಿಮರು ಮತ್ತು ಮುಸ್ಲಿಂ ಮಹಿಳೆಯರ ಮೇಲೆ ಒಂದು ಮಟ್ಟದ ಪ್ರಭಾವ ಬೀರಲು ಯಶಸ್ವಿ ಆಗಿರುವು ದಂತೂ ವಿದಿತವಾಗಿದೆ. ಬಿಜೆಪಿಯು ದೇಶದಾದ್ಯಂತ ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ೬೫ ಲೋಕಸಭಾ ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದು, ಸಮುದಾಯದೊಳಗಿನ ಬಡವರ್ಗಗಳನ್ನು, ವಿಶೇಷವಾಗಿ ಕೇಂದ್ರ ಸರಕಾರದ ಸಾಮಾಜಿಕ ಕಳಕಳಿಯ ಯೋಜನೆಗಳಿಂದ ಪ್ರಯೋಜನ ಪಡೆದವರನ್ನು ತಲುಪುವಲ್ಲಿ ಪ್ರಯತ್ನಿಸುತ್ತಿದೆ.

ಇತ್ತೀಚೆಗೆ  ಪಂಚರಾಜ್ಯಗಳ ಚುನಾವಣೆಗಳಲ್ಲಿ ಈ ಸಮುದಾಯದ ಅದರಲ್ಲೂ ಮಹಿಳೆಯರ ಮತ ಸೆಳೆಯುವಲ್ಲಿ ಬಿಜೆಪಿ ಸ-ಲವಾಗಿದೆ ಎನ್ನುವುದು ವಿಶ್ಲೇಷಕರ ಅಭಿಪ್ರಾಯವಾಗಿದೆ (ಪಶ್ಮಂದಾ ಮುಸ್ಲಿಮರು ಅತ್ಯಂತ ಹಿಂದುಳಿದವರು ಮತ್ತು ತಮ್ಮ
ಸಮಾಜದಲ್ಲೇ ಸಾಮಾಜಿಕವಾಗಿ ತುಳಿತಕ್ಕೊಳಗಾದವರು ಎಂದು ಹೇಳಲಾಗುತ್ತದೆ. ಜಾಗತಿಕ ಪಶ್ಮಂದಾ ಮುಸ್ಲಿಂ ಜನಸಂಖ್ಯೆಯ ಸುಮಾರು ೮೫ ಪ್ರತಿಶತದಷ್ಟನ್ನು ಭಾರತವೇ ಹೊಂದಿದೆ ಎಂದು ಹೇಳಲಾಗುತ್ತದೆ).

ಪ್ರಸ್ತುತ ಹೈದರಾಬಾದ್ ಲೋಕಸಭಾ ಕ್ಷೇತ್ರದಲ್ಲೂ ಈ ಸಮುದಾಯ ನಿರ್ಣಾಯಕ ಪಾತ್ರ ವಹಿಸುವಷ್ಟು ಇರುವುದರಿಂದಲೇ
ಬಿಜೆಪಿಯು ಮಾಧವಿಯವರ ದಿಗ್ವಿಜಯದ ಕನಸು ಕಾಣುತ್ತಿರುವುದು ಎನ್ನಲಾಗುತ್ತಿದೆ. ‘ಜಬ್ ಸೆ ಆಯಿ ಮಾಧವಿ ಲತಾ… ಓವೈಸಿ ಭಾಯಿ ಲಾಪತಾ’ ಎನ್ನುವ ಘೋಷಣೆ ಈಗ ಕ್ಷೇತ್ರದಲ್ಲಿ ಎಲ್ಲೆಲ್ಲೂ ಕೇಳಿಬರುತ್ತಿದೆ. ಮಾಧವಿಯವರ ಸಾಹಸಕ್ಕೆ ಪಕ್ಷದ ಪ್ರಮುಖರು ಮತ್ತು ಆಂಧ್ರ ಮತದಾರರ ಮೇಲೆ ನಿರ್ಣಾಯಕವಾಗಿ ಪ್ರಭಾವ ಬೀರಬಹುದಾದ ಪವನ್ ಕಲ್ಯಾಣ್ ಮುಂತಾದ ಸಿನಿಮಾ ತಾರೆಯರೂ ಕೈಜೋಡಿಸಿ ಪ್ರಚಾರ ಮಾಡಿದರೆ, ಈ ಕೇಸರಿ ಸಿಂಹಿಣಿ ಗೆದ್ದು ಬಂದು ಚರಿತ್ರೆ ನಿರ್ಮಿಸಿದರೂ ಅಚ್ಚರಿ ಪಡಬೇಕಾಗಿಲ್ಲ ಎನ್ನುವುದು ಅಲ್ಲಿನ ಹಲವು ಜನರ ಅಂಬೋಣ.

ಫಲಿತಾಂಶ ಏನೇ ಬರಲಿ, ನಾಲ್ಕು ದಶಕಗಳ ನಂತರ ಈಕೆ ಓವೈಸಿ ಕೋಟೆಯನ್ನು ನಡುಗಿಸಿರುವುದಂತೂ ಸತ್ಯ ಎನ್ನುತ್ತಾರೆ ಇನ್ನು ಕೆಲವು ಸ್ಥಳೀಕರು. ೨೦೧೯ರಲ್ಲಿ ಕರ್ನಾಟಕದ ‘ಮಂಡ್ಯ’ ಆದಂತೆ, ಈ ಬಾರಿ ಹೈದರಾಬಾದ್ ಲೋಕಸಭಾ ಕ್ಷೇತ್ರವು ರಾಷ್ಟ್ರದ ಗಮನ ಸೆಳೆದಿರುವುದಂತೂ ನಿಜ. ಕಾಕತಾಳೀಯ ಎನ್ನುವಂತೆ ಇಲ್ಲೂ ಒಬ್ಬ ಮಹಿಳೆಯ ಧೈರ್ಯ ಸಾಹಸಗಳೇ ಈ ಕ್ಷೇತ್ರ
ಸುದ್ದಿಯಾಗಲು ಪ್ರಮುಖ ಕಾರಣವಾಗಿದೆ. ಫಲಿತಾಂಶಕ್ಕಾಗಿ ಮಾತ್ರ ಜೂನ್ ೪ರವರೆಗೆ ಕಾದೇ ನೋಡಬೇಕಿದೆ.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)