ಚರ್ಚಾ ವೇದಿಕೆ
ಡಾ.ದಯಾನಂದ ಲಿಂಗೇಗೌಡ
ಇಂದು ಚಾಲ್ತಿಯಲ್ಲಿರುವ ಕಾಗದ ರೂಪದಲ್ಲಿನ ಹಣದ ವ್ಯವಸ್ಥೆಯ ಉಗಮ ಮತ್ತು ಬೆಳೆದುಬಂದ ಹಾದಿ ಬಹಳ ಕುತೂಹಲಕಾರಿ ವಿಷಯ. ಈ ಕಾಗದದ ಹಣದ ವ್ಯವಸ್ಥೆ ಬರುವ ಮೊದಲು ವ್ಯಾಪಾರ ಮಾಡುವುದು, ಯಾವುದಾದರೂ ವಸ್ತುಗಳನ್ನು ಕೊಂಡುಕೊಳ್ಳುವುದು ಅಥವಾ ಮಾರುವುದು ಬಹಳ ತ್ರಾಸ ದಾಯಕವಾಗಿತ್ತು.
ಜನರು ತಮ್ಮ ಬಳಿ ಇರುವ ವಸ್ತು ಗಳನ್ನು ಕೊಟ್ಟು, ತಮಗೆ ಬೇಕಾದ ಬೇರೆ ವಸ್ತುಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಉದಾ ಹರಣೆಗೆ ನೀವು ಭತ್ತದ (ಅಕ್ಕಿ, ಗೋಧಿ, ರಾಗಿ ಯಾವುದೇ) ಬೆಳೆಗಾರರಾಗಿದ್ದು, ನಿಮಗೆ ತರಕಾರಿ ಬೇಕಾಗಿದ್ದರೆ, ನಿಮ್ಮಲ್ಲಿರುವ ಅಕ್ಕಿಯನ್ನು ಕೊಟ್ಟು ತರಕಾರಿಗಳನ್ನು ಕೊಂಡುಕೊಳ್ಳಬೇಕಾಗಿತ್ತು. ಈ ‘ಸಾಟಿ ವ್ಯಾಪಾರ ’ ಅಥವಾ ವಿನಿಮಯ ವ್ಯವಸ್ಥೆಯಲ್ಲಿ ಹಲವಾರು ಸಮಸ್ಯೆಗಳು ಇದ್ದವು. ಉದಾಹರಣೆಗೆ ಒಂದು ಕೆಜಿ ಅಕ್ಕಿಗೆ ಎಷ್ಟು ತರಕಾರಿ ಬರುತ್ತದೆ ಎಂಬುದನ್ನು ನಿರ್ಧರಿಸುವುದು ಕಷ್ಟವಾಗಿತ್ತು.
ಒಬ್ಬ ಚಮ್ಮಾರನಿಗೆ ತರಕಾರಿ ಕೊಳ್ಳಬೇಕಾಗಿದ್ದರೆ ಅವನು ತನ್ನ ಸೇವೆಯನ್ನು ನೀಡಿ ತರಕಾರಿ ಕೊಳ್ಳಬೇಕು; ಒಂದು ವೇಳೆ ತರಕಾರಿ ಕೊಡುವವರಿಗೆ, ಚಮ್ಮಾರನ ಸೇವೆqs ಅವಶ್ಯಕತೆ ಇಲ್ಲದಿದ್ದರೆ, ಏನು ಮಾಡುವುದು?! ನಂತರ ಬಂದಿದ್ದೇ ಚಿನ್ನದ ನಾಣ್ಯಗಳ ವ್ಯವಸ್ಥೆ. ಒಂದು ತೂಕ ಮೌಲ್ಯದ ಚಿನ್ನದ ನಾಣ್ಯಗಳನ್ನು ಕೊಟ್ಟು, ತಮಗೆ ಬೇಕಾದ ವಸ್ತುಗಳನ್ನು ಕೊಳ್ಳಬಹುದಿತ್ತು. ಒಂದು ತೂಕದ ಚಿನ್ನದ ನಾಣ್ಯಕ್ಕೆ ಆಂತರಿಕ ಮೌಲ್ಯವಿದ್ದುದ್ದರಿಂದ ಪ್ರಪಂಚದ ಯಾವುದೇ ಪ್ರದೇಶದಲ್ಲಿ ವ್ಯವಹಾರ ಮಾಡುವ ಅವಕಾಶವಿತ್ತು.
ಆದರೆ, ಇದರಲ್ಲೂ ಸಮಸ್ಯೆ ಇತ್ತು. ಇದು ದೊಡ್ಡ ವ್ಯಾಪಾರಕ್ಕೆ ಸರಿಹೊಂದಿಕೊಳ್ಳುತ್ತಿತ್ತೇ ಹೊರತು ಸಣ್ಣ ವ್ಯಾಪಾರಿಗಳಿಗೆ ಸರಿ ತೂಕದ ಚಿನ್ನದ ನಾಣ್ಯಗಳನ್ನು ಬಳಸುವುದು ಕಷ್ಟವಾಗಿತ್ತು. ನಂತರ ಸುಧಾರಿತ ಚಿನ್ನದ ನಾಣ್ಯಗಳ ವ್ಯವಸ್ಥೆ ಬಂದಿತು. ಅದೆಂದರೆ, ಚಿನ್ನದ ನಾಣ್ಯಗಳ ಬೆಲೆಯನ್ನು ಅದರ ತೂಕದ ಮೇಲೆ ನಿರ್ಧಾರ ಮಾಡದೆ, ಅದರ ಮೇಲೆ ಮುದ್ರಿಸಿದ ಬೆಲೆಯ ಮೇಲೆ ನಿರ್ಧಾರ ಮಾಡುವುದು.
ಅದೂ ಅಲ್ಲದೆ ಚಿನ್ನದ ನಾಣ್ಯಗಳ ಲಭ್ಯತೆ ಕಡಿಮೆ ಇರುವುದರಿಂದ, ಒಂದೇ ತೂಕದ ಚಿನ್ನದ ನಾಣ್ಯಗಳ ಮೇಲೆ ವಿವಿಧ ಬೆಲೆಯನ್ನು ಮುದ್ರಣ ಮಾಡಿ ವ್ಯವಹಾರಕ್ಕೆ ಅನುಕೂಲ ಮಾಡಿಕೊಡಲಾಯಿತು. ಈ ವ್ಯವಸ್ಥೆಯಿಂದ ಚಿನ್ನದ ನಾಣ್ಯಗಳ ಆಂತರಿಕ ಮೌಲ್ಯ ಕಡಿಮೆಯಾಯಿತು. ಇದರಲ್ಲಿ ಮತ್ತೊಂದು ಅನನುಕೂಲ ಇತ್ತು. ಚಿನ್ನದ ನಾಣ್ಯದ ಬೆಲೆ ಅದರ ಮೇಲೆ ಮುದ್ರಿತ ಅಂಕಿಯ ಆಧಾರದ ಮೇಲೆ ನಿರ್ಧಾರವಾಗುತ್ತಿದ್ದುದರಿಂದ, ಕಾಳಸಂತೆಯಲ್ಲಿ ಕಡಿಮೆ ತೂಕದ ಚಿನ್ನ ಬಳಸಿ ಹೆಚ್ಚು ಮೌಲ್ಯವನ್ನು ಮುದ್ರಿಸಿ ಲಾಭ ಮಾಡಿಕೊಳ್ಳುವ ಆತಂಕವಿತ್ತು.
ಅದಕ್ಕೋಸ್ಕರ ಅನಧಿಕೃತವಾಗಿ ಚಿನ್ನದ ನಾಣ್ಯಗಳನ್ನು ಮುದ್ರಿಸುವವರಿಗೆ ಕಠಿಣಾತಿ ಕಠಿಣ ಶಿಕ್ಷೆಯನ್ನು ಕೊಡಲಾಗುತ್ತಿತ್ತು. ವ್ಯಾಪಾರ ಬೆಳೆದಂತೆ ಚಿನ್ನದ ನಾಣ್ಯಗಳು ಸಾಲದೆ ಬೇರೆ ಬೇರೆ ಲೋಹದ ನಾಣ್ಯಗಳೂ ಚಲಾವಣೆಗಳಿಗೆ ಬಂದವು. ಉದಾರಣೆಗೆ ಬೆಳ್ಳಿ, ತಾಮ್ರ ಇತ್ಯಾದಿ. ಇವುಗಳ ಮೇಲೆಯೂ ಆಂತರಿಕ ಮೌಲ್ಯ ಕಡಿಮೆ ಇದ್ದರೂ ಅವುಗಳ ಬಾಹ್ಯ ಮೌಲ್ಯವನ್ನು ಅದರ ಮೇಲೆ
ಮುದ್ರಿತವಾದ ಅಂಕಿಯ ಆಧಾರದ ಮೇಲೆ ನಿರ್ಧರಿಸಲಾಗುತ್ತಿತ್ತು. ಈ ವ್ಯವಸ್ಥೆಯ ಸಮಸ್ಯೆ ಎಂದರೆ ಈ ನಾಣ್ಯ ಗಳನ್ನು ಬೇರೆ ಬೇರೆ ದೇಶಗಳಲ್ಲಿ ವ್ಯವಹಾರಕ್ಕೆ ಬಳಸಿದಾಗ ಆಂತರಿಕ ಮೌಲ್ಯ ಕಡಿಮೆ ಇದ್ದುದ್ದರಿಂದ ಸಮಸ್ಯೆ ಉಂಟಾಗುತ್ತಿತ್ತು.
ನಂತರ ಬಂದ ಸುಧಾರಿತ ವ್ಯವಸ್ಥೆಯೇ ಈ ಕಾಗದದ ನೋಟುಗಳು. ನೋಟುಗಳಿಗೆ ಚಿನ್ನದ ನಾಣ್ಯದ ಮೇಲೆ ಇದ್ದಂಥ ಆಂತರಿಕ ಮೌಲ್ಯ ಇರುವುದಿಲ್ಲ. ನೋಟುಗಳ ಮೌಲ್ಯವೇನಿದ್ದರೂ ಅದರ ಮೇಲಿನ ಮುದ್ರಿತ ಅಂಕಿ ಮತ್ತು ಅದನ್ನು ಮುದ್ರಿಸಿದ ಸರಕಾರ ಗಳು ಕೊಡುವ ಭರವಸೆಯನ್ನೇ ಆಧರಿಸಿರುತ್ತದೆ. ಹಣದ ಮೌಲ್ಯ ಉಳಿಯಬೇಕಾದರೆ ಸರಕಾರಗಳು ಬೇಕಾಬಿಟ್ಟಿ ನೋಟುಗಳನ್ನು ಮುದ್ರಣ ಮಾಡುವಂತಿಲ್ಲ. ತಮ್ಮ ದೇಶದ ಆಂತರಿಕ ಉತ್ಪಾದನೆ ಮತ್ತು ಆಂತರಿಕ ಸಂಪನ್ಮೂಲಗಳನ್ನು ಆಧರಿಸಿ ಎಷ್ಟು ನೋಟುಗಳನ್ನು ಚಲಾವಣೆಗೆ ತರಬೇಕು ಎಂಬುದನ್ನು ಆಯಾಯ ಸರಕಾರಗಳೇ ನಿರ್ಧಾರ ಮಾಡಬೇಕು.
ಹೀಗಿದ್ದೂ ಕಳ್ಳನೋಟುಗಳ ಹಾವಳಿ ದೇಶದ ಅರ್ಥವ್ಯವಸೆಯನ್ನು ಬುಡಮೇಲು ಮಾಡಬಹುದು ಎಂಬುದನ್ನು ಅಲ್ಲಗಳೆಯು ವಂತಿಲ್ಲ. ಈ ಕಾಗದದ ಹಣಕ್ಕೆ ಯಾವುದೇ ಆಂತರಿಕ ಮೌಲ್ಯ ಇಲ್ಲದಿರುವುದರಿಂದ ಸರಕಾರಗಳು ಭರವಸೆ ಹಿಂಪಡೆದರೆ ಅಥವಾ ನಂಬಿಕೆ ಕಳೆದುಕೊಂಡರೆ ಆ ದೇಶದ ಹಣ ಅಪಮೌಲ್ಯಗೊಳ್ಳುತ್ತದೆ. ಉದಾಹರಣೆಗೆ ನೋಟ್ ಬ್ಯಾನ್ ಸಮಯದಲ್ಲಿ ೫೦೦ ರು. ಮುಖಬೆಲೆಯ ನೋಟುಗಳು ಕೇವಲ ಕಾಗದದ ಚೂರುಗಳಾಗಿ ಉಳಿದವು; ಯಾವುದೇ ಬೆಲೆ ಇಲ್ಲದೆ ತಮ್ಮ ಮೌಲ್ಯವನ್ನು ಕಳೆದು ಕೊಂಡವು.
ಏಕೆಂದರೆ ಒಂದು ಸಮಯದ ನಂತರ ಸರಕಾರ ಈ ನೋಟುಗಳ ಮೇಲೆ ನೀಡಿದ್ದ ವಾಗ್ದಾನ ಹಿಂಪಡೆಯಲು ತೀರ್ಮಾನಿಸಿದ್ದು. ಈ ನಿರ್ಧಾರಕ್ಕೆ ಕಾರಣ ಪಾಕಿಸ್ತಾನದಲ್ಲಿ ಅಪಾರ ಪ್ರಮಾಣದಲ್ಲಿ ತಯಾರಾಗಿದ್ದ ಕಳ್ಳನೋಟುಗಳು ಎಂಬ ಅನಧಿಕೃತ ಊಹೆಗಳಿವೆ. ಅದೇ ಚಿನ್ನದ ನಾಣ್ಯಗಳ ವ್ಯವಸ್ಥೆ ಇದ್ದರೆ ಆಂತರಿಕ ಮೌಲ್ಯವಿರುವುದರಿಂದ ಸರಕಾರದ ನಿರ್ಧಾರಗಳು ಚಿನ್ನದ ನಾಣ್ಯಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ದೇಶದ ಆರ್ಥಿಕ ವ್ಯವಸ್ಥೆ ಕುಸಿದಾಗ ಕೂಡ ಹಣದ ಅಪಮೌಲ್ಯವಾಗುತ್ತದೆ.
ನೋಟಿನ ವ್ಯವಸ್ಥೆಯ ಮುಂದುವರಿದ ಭಾಗವೇ ಬಿಟ್ ಕಾಯಿನ್‌ಗಳು. ಕಾಗದದ ನೋಟಿಗೆ ಕನಿಷ್ಠ ಪಕ್ಷ ಸರಕಾರ ನೀಡುವ ವಾಗ್ದಾನ ಮತ್ತು ಮೌಲ್ಯಗಳು ಇರುತ್ತವೆ. ಆದರೆ, ಬಿಟ್ ಕಾಯಿನ್‌ಗಳಿಗೆ ಯಾವುದೇ ಆಂತರಿಕ ಮೌಲ್ಯವಾಗಲಿ, ವಾಗ್ದಾನಗಳಾಗಲಿ, ನಿರ್ಬಂಧಗಳಾಗಲಿ ಇಲ್ಲ. ಅದರ ಬೆಲೆ ಏನಿದ್ದರೂ ಬೇಡಿಕೆಯ ಆಧಾರದ ಮೇಲೆ ಅವಲಂಬಿತವಾಗಿದೆ. ಬೇಡಿಕೆ ಹೆಚ್ಚಾದರೆ ಹೆಚ್ಚು ಬೆಲೆ; ಇಲ್ಲವಾದರೆ ಕಡಿಮೆ ಬೆಲೆ. ಕಾಗದದ ಹಣಕ್ಕೆ ಮೌಲ್ಯ ಇದೆಯೋ ಇಲ್ಲವೋ ಎಂಬುದು ನಂಬುವವರ ಸಂಖ್ಯೆಯ ಮೇಲೆ ನಿರ್ಧಾರ ವಾಗುತ್ತದೆ. ಕಾಗದದ ಹಣಕ್ಕೆ ಇಷ್ಟು ಬೆಲೆ ಇದೆ ಎಂಬುದನ್ನು ಆ ದೇಶದ ಜನ ನಂಬಿದರೆ ಅದಕ್ಕೆ ಅಷ್ಟು ಬೆಲೆ ಇರು
ತ್ತದೆ.
ಬೆಲೆ ಇಲ್ಲ ಎಂದು ಹೆಚ್ಚು ಜನ ನಿರ್ಧರಿಸಿದರೆ ಅದು ಬೆಲೆ ಕಳೆದುಕೊಳ್ಳುತ್ತದೆ. ಅಂದರೆ ಒಂದು ನಂಬಿಕೆಯ ಆಧಾರದ ಮೇಲೆ ಈ ಕಾಗದದ ಹಣದ ವ್ಯವಸ್ಥೆ ಕೆಲಸ ಮಾಡುತ್ತದೆ. ಹಾಗಾಗಿ ಆ ನಂಬಿಕೆಯೇ ಒಂದು ದೇಶದ ಜನಜೀವನವನ್ನೂ ವ್ಯಾಪಾರ ವಹಿವಾಟುಗಳ ವ್ಯವಸ್ಥೆ ಯನ್ನೂ ನಿಯಂತ್ರಿಸುತ್ತದೆ. ಹೇಗೆ ಕಾಗದದ ಹಣವು ಒಂದು ದೇಶದ ಆಂತರಿಕ ಮೌಲ್ಯದ ಉಪಉತ್ಪನ್ನ ವಾಗಿ ಆರ್ಥಿಕ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆಯೋ, ಹಾಗೆಯೇ ಸನಾತನ ಸಂಸ್ಕೃತಿಯ ಒಂದು ಉಪಉತ್ಪನ್ನವೇ ರಾಮ ಎಂಬ ಆದರ್ಶ.
ರಾಮ ಪುರಾಣಪುರುಷನೋ ಇತಿಹಾಸದಲ್ಲಿದ್ದ ವ್ಯಕ್ತಿಯೋ ಕಾಲ್ಪನಿಕ ಪುರುಷೋತ್ತಮನೋ ಎಂಬ ವಿವಾದ ವನ್ನು ಬದಿಗಿರಿಸಿ ನೋಡಿದರೂ ರಾಮನ ಮೇಲಿನ ನಂಬಿಕೆ ಈ ದೇಶದ ಸಾಂಸ್ಕೃತಿಕ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ. ಸನಾತನಿಗಳ ಒಳಗಿರುವ ರಾಮನೆಂಬ ಆತ್ಮಸಾಕ್ಷಿಯು ಪ್ರತಿಯೊಬ್ಬರೂ ಸರಿದಾರಿಯಲ್ಲಿ ನಡೆಯುವುದಕ್ಕೆ ಪ್ರೇರೇಪಿಸುತ್ತದೆ. ರಾಮನ ಮೌಲ್ಯ, ತ್ಯಾಗ, ಅವನು ಸಂಬಂಧಗಳನ್ನು ನಿಭಾಯಿಸಿದ ರೀತಿ ಇಂದಿಗೂ ಅರಸ ರಿಂದ ಅಗಸರವರೆಗೂ, ಪಂಡಿತರಿಂದ ಪಾಮರರವರೆಗೂ
ದಾರಿದೀಪವಾಗಿದೆ.
ಈ ದೇಶ ಭೌಗೋಳಿಕವಾಗಿ ಬ್ರಿಟಿಷರಿಂದ ಒಂದಾಗಿದ್ದರೂ ಶತಶತಮಾನಗಳಿಂದ ಭಾವನಾತ್ಮಕವಾಗಿ ಸಾಂಸ್ಕೃತಿಕವಾಗಿ ಒಂದಾ ಗಿರುವುದು ಇಂಥ ನಂಬಿಕೆ ಗಳ ಮೇಲೆಯೇ. ಬ್ರಿಟಿಷರಿಗೂ ಮುಂಚೆ ಈ ದೇಶವನ್ನು ಹಲವಾರು ರಾಜರುಗಳು ಆಳುತ್ತಿದ್ದರು. ಹಿಂದೂ ತೀರ್ಥಯಾತ್ರಿಗಳು ಈ ದೇಶದ ಉದ್ದಗಲಕ್ಕೂ ಸಂಚರಿಸಿ ಭಾವನಾತ್ಮಕವಾಗಿ ಒಂದೇ ದೇಶ ಎಂಬ ನಂಬಿಕೆಯನ್ನು
ಹರಡಿಕೊಂಡು ಬಂದಿದ್ದರು. ತಲತಲಾಂತರದವರೆಗೂ ನಡೆದುಕೊಂಡು ಬಂದ ಈ ನಂಬಿಕೆ ಈಗಲೂ ಮುಂದು ವರಿದಿದೆ.
ಸನಾತನ ಧರ್ಮದ ಹಲವಾರು ಆಚರಣೆಗಳು, ಹಬ್ಬಹರಿದಿನಗಳು ಮೊದಲಾದ ಸಂಸ್ಕೃತಿ ಗಳು ಇಡೀ ದೇಶವನ್ನು ಒಂದೇ ಎಂಬ ಭಾವನೆಯಲ್ಲಿ ಹಿಡಿದು ಇಡುವುದಕ್ಕೆ ಸಹಾಯಮಾಡಿವೆ. ಯಾವುದೇ ದೇಶ ಒಂದಾಗಿ ಉಳಿದುಕೊಳ್ಳಲು ಇಂಥ ಹಲವಾರು ಸಮಾನ ಅಂಶಗಳ ಅವಶ್ಯಕತೆ ಇದೆ. ಇಲ್ಲವಾದರೆ ದೇಶ ಒಂದಾಗಿರಲು ಕಾರಣಗಳೇ ಉಳಿಯುವುದಿಲ್ಲ. ಈಗ ದೇಶದ ಜನರಿಗೆ ಸಂವಿಧಾನವೆಂಬ ಸಮಾನ ಅಂಶ ಇದ್ದರೂ, ಸನಾತನ ಧರ್ಮವೆಂಬ ಸಾಂಸ್ಕೃತಿಕ ಸಮಾನ ಅಂಶ, ನಮ್ಮ ಜೀವನ ಕ್ರಮದಲ್ಲಿ ಸೇರಿಕೊಂಡಿರುವ ಚಲಾವಣೆಯಲ್ಲಿರುವ ಚಿನ್ನದ ನಾಣ್ಯ.
ಹಣದ ಮೌಲ್ಯವನ್ನು ಅಪಮೌಲ್ಯ ಮಾಡುವುದರ ಮೂಲಕ, ಹೇಗೆ ಒಂದು ದೇಶದ ವ್ಯವಸ್ಥೆಯನ್ನು ಹಾಳು ಮಾಡಬಹುದೋ ಹಾಗೆಯೇ ರಾಮನೆಂಬ ಆದರ್ಶಕ್ಕೆ ಅಪನಂಬಿಕೆ ಬಂದರೆ ಈ ದೇಶದ ಸಂಸ್ಕೃತಿಯೇ ಸಡಿಲವಾಗುವ ಸಂಭವವಿದೆ. ರಾಮ ಎಂಬ ವ್ಯಕ್ತಿ ಕಾಲ್ಪನಿಕ ಎಂದು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸುವುದು, ರಾಮಮಂದಿರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸು
ವುದು, ‘ಜೈ ಶ್ರೀರಾಮ್’ ಎಂಬ ನಿರುಪದ್ರವಿ ಘೋಷಣೆ ಗಳನ್ನು ನಿರ್ಬಂಧಿಸುವುದು ಇವೆಲ್ಲವೂ ಒಂದು ಸಂಸ್ಕೃತಿಯ ಮೌಲ್ಯ ವನ್ನು ಛಿದ್ರಗೊಳಿಸುವ ಪ್ರಯತ್ನಗಳು ಅಷ್ಟೇ.
ರಾಮ ಒಬ್ಬ ಕಾಲ್ಪನಿಕ ವ್ಯಕ್ತಿ ಎನ್ನುವುದರ ಮೂಲಕ, ರಾಮನಿಗೆ ಯಾವುದೇ ಆಂತರಿಕ ಅಥವಾ ಬಾಹ್ಯ ಮೌಲ್ಯಗಳಿಲ್ಲ ಎಂದು ಪ್ರಚುರಪಡಿಸಿ ಇಡೀ ವ್ಯವಸ್ಥೆಯನ್ನು ಹಾಳುಮಾಡುವ ಪ್ರಯತ್ನವಿದು. ಸನಾತನವೆಂಬ ಜೀವನ ಕ್ರಮಕ್ಕೆ ಆಂತರಿಕ ಮೌಲ್ಯ ವಿರುವುದರಿಂದಲೇ, ಶತಮಾನಗಳು ಕಳೆದರೂ, ರಾಜಮಹಾರಾಜರುಗಳು ಬದಲಾದರೂ, ಹೊಸ ಸರಕಾರಗಳು ಬಂದರೂ, ದಾಳಿಗೆ ಒಳಗಾದರೂ ಚಿನ್ನದ ನಾಣ್ಯದ ಹಾಗೆ ಉಳಿದುಕೊಂಡಿದೆ. ಹಾಗೆ ನೋಡಿದರೆ, ರಾಮಮಂದಿರ ನಿರ್ಮಾಣವು ರಾಮನೆಂಬ
ಆದರ್ಶಕ್ಕೆ ಒಂದು ಬಾಹ್ಯ ಮೌಲ್ಯವನ್ನು ತಂದುಕೊಡುವ ಭಾಗವೇ ಆಗಿದೆ.
ಕೊನೇ ಮಾತು: ೫೦೦ ವರ್ಷಗಳ ವಿವಾದಿತ ಕೇಂದ್ರವಾಗಿದ್ದ ಅಯೋಧ್ಯೆಯಲ್ಲಿ ಯಾವುದಾದರೂ ಪಕ್ಷವು ಮಸೀದಿಯನ್ನು ನಿರ್ಮಿಸಲು ಯಶಸ್ವಿಯಾಗಿದ್ದಿದ್ದರೆ, ಆ ಪಕ್ಷಕ್ಕೆ ಮುಂದಿನ ೫೦೦ ವರ್ಷಗಳ ಕಾಲ ಆ ಧರ್ಮದ ಜನರ ಮತ ಖಾತ್ರಿಯಾಗುತ್ತಿತ್ತು. ಅದೇ ೫೦೦ ವರ್ಷಗಳ ವಿವಾದಿತ ಸ್ಥಳದಲ್ಲಿ ಮಂದಿರ ಕಟ್ಟಿದ ಐದು ತಿಂಗಳ ಒಳಗೆಯೇ, ‘ನಮಗೆ ಮತ ಕೊಡಿ’ ಎಂದು ಬೇಡುವ
ಪರಿಸ್ಥಿತಿ ಬಂದಿರುವುದು ನೋಡಿದರೆ ಸನಾತನ ಧರ್ಮದ ಆಂತರಿಕ ಮೌಲ್ಯದ ದುರ್ಬಲತೆ ಎದ್ದು ಕಾಣುತ್ತದೆ! ಈ ಆಂತರಿಕ ಮೌಲ್ಯದ ಕುಸಿತಕ್ಕೆ ಕಾರಣವೇನು? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ.
(ಲೇಖಕರು ರೇಡಿಯೊಲೊಜಿಸ್ಟ್)