ಸಾಧನಾಪಥ
ಅಶ್ವತ್ಥನಾರಾಯಣ
ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಮೂಲಸೌಕರ್ಯಗಳ ನಿರ್ಮಾಣ ಭಾರಿ ಪ್ರಮಾಣದಲ್ಲಿ ಹೆಚ್ಚಿದೆ. ಹೆದ್ದಾರಿ ಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಹೆದ್ದಾರಿಗಳ ಗುಣಮಟ್ಟ ಹೆಚ್ಚಿದ್ದಲ್ಲದೆ, ಹೆದ್ದಾರಿಗಳಲ್ಲಿ ವಾಹನಗಳು ವೇಗ ವಾಗಿ ಓಡಾಡುವಂತಾಗಿ ನಗರಗಳ ನಡುವಿನ ಅಂತರ ಕಡಿಮೆಯಾದಂತಾಗಿದೆ.
ಒಂದು ದೇಶದ ಅಭಿವೃದ್ಧಿಯನ್ನು ಅಳೆಯಬೇಕಾದರೆ ಅಲ್ಲಿನ ರಸ್ತೆಗಳನ್ನು ನೋಡಿದರೆ ಸಾಕು ಎಂಬ ಮಾತಿದೆ. ಭಾರತದಿಂದ
ವಿದೇಶಗಳಿಗೆ ಹೋದವರು ಮರಳಿ ಬಂದು ಇಲ್ಲಿ ಮೊದಲು ಹೇಳುತ್ತಿದ್ದ ವಿಷಯವೇ ‘ಅಲ್ಲಿನ ರಸ್ತೆಗಳು ಎಷ್ಟು ಚೆನ್ನಾಗಿವೆ ಗೊತ್ತಾ..’ ಅಂತ.
ಕಾರಣ ನಮ್ಮ ದೇಶದಲ್ಲಿ ಹೆದ್ದಾರಿ, ರಸ್ತೆಗಳ ಅಭಿವೃದ್ಧಿ ನಿರೀಕ್ಷಿತ ಪ್ರಮಾಣದಲ್ಲಿ ಇರಲಿಲ್ಲ ಅಥವಾ ಅವುಗಳ ಗುಣಮಟ್ಟ ನಾವು ಹೆಮ್ಮೆ ಪಡುವ ಮಟ್ಟದಲ್ಲಿ ಇರಲಿಲ್ಲ. ನಮ್ಮ ವಾಹನಗಳು ಆಧುನಿಕವಾಗಿದ್ದವು. ಶಕ್ತಿಯಶಾಲಿಯಾಗಿದ್ದವು. ಹೊಸ ತಂತ್ರಜ್ಞಾನ ಅಳವಡಿಸಿಕೊಂಡಿದ್ದವು. ಆದರೆ ರಸ್ತೆಗಳು ಮಾತ್ರ ಅವೈಜ್ಞಾನಿಕವಾಗಿದ್ದವು. ಅದೆಷ್ಟೋ ಹೆದ್ದಾರಿ- ರಾಜ್ಯ ಹೆದ್ದಾರಿಗಳಲ್ಲಿ ವೇಗದ ಮಿತಿ ಗಂಟೆಗೆ ೩೦-೪೦ ಕಿ.ಮೀ. ಇದ್ದಿದ್ದನ್ನು ನಾವು ನೋಡಿದ್ದೇವೆ.
ಯಾವ ಹೆದ್ದಾರಿಗಳಲ್ಲೂ ೭೦-೮೦ ಕಿ.ಮೀ.ಗಿಂತ ಹೆಚ್ಚು ವೇಗವಾಗಿ ಸಂಚರಿಸುವುದು ಸಾಧ್ಯವಿರಲಿಲ್ಲ. ಕೆಲವು ಹೆದ್ದಾರಿಗಳನ್ನು ಬಿಟ್ಟರೆ, ಉಳಿದೆಲ್ಲ ಹೆದ್ದಾರಿಗಳೂ ಒಂದು ಲೇನ್ ಹೆದ್ದಾರಿಗಳೇ ಆಗಿದ್ದವು. ಇಂದು ಭಾರತದಲ್ಲಿ ಗಂಟೆಗೆ ೧೦೦- ೧೨೦ ಕಿ.ಮೀ. ವೇಗದ ಮಿತಿ ಹೊಂದಿರುವ ರಸ್ತೆಗಳು ಸಾಕಷ್ಟಿವೆ. ಹೆದ್ದಾರಿ ಇಲಾಖೆಯೇ ‘ವೇಗದ ಮಿತಿ ೧೦೦-೧೨೦ ಕಿ. ಮೀ.’ ಎಂದು ಬೋರ್ಡ್ ಹಾಕಿರುವುದನ್ನು ನಾವು ಹೆಮ್ಮೆ ಯಿಂದ ನೋಡಬಹುದು.
ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಮೂಲಸೌಕರ್ಯಗಳ ನಿರ್ಮಾಣ ಭಾರಿ ಪ್ರಮಾಣದಲ್ಲಿ ಹೆಚ್ಚಿದೆ. ಹಾಗೆಯೇ ದೇಶಾ ದ್ಯಂತದ ಹೆದ್ದಾರಿಗಳಲ್ಲಿ ಭಾರಿ ಬದಲಾವಣೆಯಾಗಿದೆ. ಹೆದ್ದಾರಿಗಳ ಗುಣಮಟ್ಟ ಹೆಚ್ಚಿದ್ದಲ್ಲದೆ, ಹೆದ್ದಾರಿಗಳಲ್ಲಿ ವಾಹನಗಳು ವೇಗವಾಗಿ ಓಡಾಡುವಂತಾಗಿ ನಗರಗಳ ನಡುವಿನ ಅಂತರ ಕಡಿಮೆಯಾದಂತಾಗಿದೆ. ಕೇವಲ ವಾಹನಗಳ ವೇಗ ಮಾತ್ರ ಹೆಚ್ಚಿಲ್ಲ, ಹೆದ್ದಾರಿ ನಿರ್ಮಾಣದ ವೇಗ ಕೂಡ ಹೆಚ್ಚಿದೆ. ಇದು ಕೆಲವು ಭಾಗ ಅಥವಾ ಬೃಹತ್ ನಗರಗಳಿಗೆ ಮಾತ್ರ ಸೀಮಿತವಾಗದೆ, ದೇಶದ ಉದ್ದಗಲಕ್ಕೂ ವ್ಯಾಪಿಸಿರುವುದು ಗಮನಾರ್ಹ. ಗಡಿಭಾಗದಲ್ಲಿ ಕೂಡ ರಸ್ತೆಗಳು ಕೂಡ ಕ್ಷಿಪ್ರ ಅಭಿವೃದ್ಧಿ ಕಂಡಿವೆ.
೨೦೧೪ರಲ್ಲಿ ೯೧,೨೮೭ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಮ್ಮ ದೇಶದಲ್ಲಿತ್ತು. ೨೦೨೩ರಲ್ಲಿ ೧,೪೬,೧೪೫ ಕಿ.ಮೀ. ಹೆದ್ದಾರಿ ಇದೆ.
ಹತ್ತು ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿಯ ವ್ಯಾಪ್ತಿ ಶೇ.೬೦ರಷ್ಟು ಹೆಚ್ಚಳವಾಗಿದೆ. ಹೊಸ ಹೆದ್ದಾರಿಗಳನ್ನು ನಿರ್ಮಿಸಿದ್ದರ ಜತೆಗೆ, ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿ ಗಳಾಗಿ ಪರಿವರ್ತಿಸಲಾಗಿದೆ. ೨೦೧೫ರಲ್ಲಿ ೧೮,೩೮೭ ಕಿ.ಮೀ. ನಷ್ಟು ಚತುಷ್ಪಥ ಹೆದ್ದಾರಿಗಳಿದ್ದರೆ, ೨೦೨೩ರಲ್ಲಿ ೪೬,೧೭೯ ಕಿ. ಮೀ. ಚತುಷ್ಪಥ ಹೆದ್ದಾರಿಗಳಿವೆ. ಅಂದರೆ ಚತುಷ್ಪಥ ಹೆದ್ದಾರಿಯಲ್ಲಿ ಎರಡೂವರೆ ಪಟ್ಟು ಹೆಚ್ಚಳವಾಗಿದೆ.
೨೦೧೪ರಲ್ಲಿ ಪ್ರತಿ ದಿನಕ್ಕೆ ಸರಾಸರಿ ೯ ಕಿ.ಮೀ. ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದ್ದರೆ, ಇಂದು ಪ್ರತಿ ದಿನಕ್ಕೆ ಸರಾಸರಿ ೩೬ ಕಿ.ಮೀ. ಹೆದ್ದಾರಿ ನಿರ್ಮಾಣವಾಗುತ್ತಿದೆ. ಅಂದರೆ ನಿರ್ಮಾಣದಲ್ಲಿ ಶೇ.೩೦೦ರಷ್ಟು ಹೆಚ್ಚಳವಾಗಿದೆ. ಇದರಿಂದಾಗಿಯೇ ಇಂದು ಹೆದ್ದಾರಿ ನಿರ್ಮಾಣ ಕಾಮಗಾರಿ ಗಳು ನಿಗದಿಯಾದ ಸಮಯಕ್ಕೆ ಮುಕ್ತಾಯಗೊಳ್ಳುತ್ತಿವೆ. ಹಾಗಾಗಿ ಬೇಗ ಬೇಗ ಹೊಸ ರಸ್ತೆಗಳು ನಿರ್ಮಾಣವಾಗುತ್ತಿವೆ. ದೇಶದ ಉದ್ದಗಲಕ್ಕೂ ಸರಕು-ಸಾಗಣೆ ಹಾಗೂ ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ದೃಷ್ಟಿ ಯಿಂದ ‘ಭಾರತಮಾಲಾ ಯೋಜನೆ’ ಆರಂಭಿಸಲಾಗಿತ್ತು. ಈ ಯೋಜನೆಯಲ್ಲಿ ಬಂದರು ಸಂಪರ್ಕ ರಸ್ತೆಗಳು, ಗಡಿ ರಸ್ತೆಯ
ಅಭಿವೃದ್ಧಿ, ಎಕ್ಸ್‌ಪ್ರೆಸ್ ವೇಗಳು, ಇಕನಾಮಿಕ್ ಕಾರಿಡಾರ್ ಗಳನ್ನು ನಿರ್ಮಿಸುವುದು ಮುಖ್ಯ ಉದ್ದೇಶವಾಗಿತ್ತು.
ಹತ್ತು ವರ್ಷಗಳಲ್ಲಿ ಈ ಯೋಜನೆಯಲ್ಲಿ ೨೫ ಗ್ರೀನ್ ಫೀಲ್ಡ್ ಹೈಸ್ಪೀಡ್ ಕಾರಿಡಾರ್‌ಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಇದರಲ್ಲಿ ೨೦ ಹೆದ್ದಾರಿ ಕಾರಿಡಾರ್‌ಗಳು ಪೂರ್ಣಗೊಂಡಿವೆ ಅಥವಾ ಮುಕ್ತಾಯದ ಹಂತದಲ್ಲಿವೆ. ಭಾರತ ಮಾಲಾ ಯೋಜನೆಯ ಮೊದಲ ಹಂತದಲ್ಲಿ ೩೪,೮೦೦ ಕಿ. ಮೀ. ಹೆದ್ದಾರಿ ನಿರ್ಮಿಸಲು ಯೋಜಿಸಲಾಗಿತ್ತು. ೨೦೨೩ರ ಡಿಸೆಂಬರ್ ಅಂತ್ಯದಲ್ಲಿ ೨೬,೪೧೮ ಕಿ.ಮೀ. ಹೆದ್ದಾರಿ ನಿರ್ಮಾಣಕ್ಕೆ ಗುತ್ತಿಗೆ ನೀಡಲಾಗಿದ್ದು, ೧೫,೫೪೯ ಕಿ.ಮೀ. ಹೆದ್ದಾರಿ ನಿರ್ಮಾಣ ಪೂರ್ಣಗೊಂಡು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಇದರ ಜತೆಗೆ ಕೆಲವು ಹೆದ್ದಾರಿಗಳಲ್ಲಿ ಯಾವುದೇ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಯುದ್ಧ ವಿಮಾನಗಳು ಕೂಡ ಲ್ಯಾಂಡ್ ಆಗುವುದಕ್ಕೆ ಅನುವುಮಾಡಿಕೊಡುವ ದೂರದರ್ಶಿತ್ವ ವನ್ನು ಕೂಡ ಪ್ರದರ್ಶಿಸಲಾಗಿದೆ. ಈ ರೀತಿ ಲ್ಯಾಂಡಿಂಗ್ ಮಾಡುವ ಪರಿಸ್ಥಿತಿ ಬಾರದೆ ಇರಬಹುದು. ಆದರೆ ಅಕಸ್ಮಾತ್ ಅಂಥ ಪರಿಸ್ಥಿತಿ ಬಂದರೆ ಅದಕ್ಕೆ ಅವಕಾಶ ಇರಬೇಕು ಎಂಬ ಉದ್ದೇಶದಿಂದ ಇದನ್ನು ಮಾಡಲಾಗಿದೆ.
ಕೇವಲ ಹೆದ್ದಾರಿ, ದೊಡ್ಡ ದೊಡ್ಡ ನಗರಗಳನ್ನು ಸಂಪರ್ಕಿಸುವ ರಸ್ತೆಗಳನ್ನು ಮಾತ್ರ ಅಭಿವೃದ್ಧಿ ಮಾಡಲಾಗಿದೆ ಎಂದು
ಭಾವಿಸಬೇಡಿ. ೧೦ ವರ್ಷಗಳಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ೩.೭೪ ಲಕ್ಷ ಕಿ.ಮೀ. ಗ್ರಾಮೀಣ ರಸ್ತೆಗಳನ್ನು ನಿರ್ಮಿಸಲಾಗಿದೆ. ಇದರಿಂದಾಗಿ ದೇಶದ ಶೇ.೯೯ರಷ್ಟು ಗ್ರಾಮೀಣ ಜನರಿಗೆ ರಸ್ತೆ ಸೌಕರ್ಯ ಕಲ್ಪಿಸಿದಂತಾಗಿದೆ. ಹೆದ್ದಾರಿ ಮತ್ತು ರಸ್ತೆಗಳ ಅಭಿವೃದ್ಧಿಯಿಂದ ಸಂಚಾರ ವ್ಯವಸ್ಥೆ ಉತ್ತಮವಾಯಿತು. ಜನರು, ಸರಕು ವೇಗವಾಗಿ ಮತ್ತು ಸುರಳೀತವಾಗಿ ಗಮ್ಯ ತಲುಪಲು ಸಾಧ್ಯವಾಗುತ್ತದೆ.
ಅಷ್ಟಾದರೆ ಅಭಿವೃದ್ಧಿ ಆದ ಹಾಗಾಯಿತೆ? ಎಂದು ಕೆಲವರು ಪ್ರಶ್ನಿಸಬಹುದು. ಮೇಲ್ನೋಟಕ್ಕೆ ದೊಡ್ಡ ದೊಡ್ಡ ರಸ್ತೆಗಳು,
ವೇಗವಾಗಿ ಹೋಗುವ ವಾಹನಗಳು ಅಷ್ಟೇ ಕಾಣುತ್ತವೆ. ಆದರೆ ಹೆದ್ದಾರಿ ನಿರ್ಮಾಣ ಯೋಜನೆಯಿಂದಾಗುವ ಆರ್ಥಿಕ ಉಪಯೋಗಗಳು ಸಾಕಷ್ಟಿವೆ. ಮೊದಲನೆಯದಾಗಿ ರಸ್ತೆ ನಿರ್ಮಾಣದಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ಒಳ್ಳೆಯ ರಸ್ತೆಗಳಿಂದ ನಗರಗಳ ನಡುವಿನ ಸಂಪರ್ಕ ಹೆಚ್ಚಿ ಅಲ್ಲಿ ಕೂಡ ಉದ್ಯಮ, ವ್ಯಾಪಾರ ಬೆಳೆಯುತ್ತದೆ. ರಸ್ತೆ ನಿರ್ಮಾಣದಲ್ಲಿ ಉದ್ಯೋಗ ಸೃಷ್ಟಿಯಾಗುವುದರಿಂದ ಅದಕ್ಕೆ ಬೇಕಾದ ವಸ್ತುಗಳ ಖರೀದಿ, ಅದಕ್ಕಾಗಿ ಕೆಲಸ ಮಾಡಿದ ಜನರ ಕೈ ಸೇರಿದ ಹಣ ಮಾರುಕಟ್ಟೆ ಯಲ್ಲಿ ಬೇರೆ ಬೇರೆ ರೀತಿಯಲ್ಲಿ ಚಾಲ್ತಿಗೆ ಬರುತ್ತದೆ. ಆರ್ಥಿಕತೆಗೆ ಇದು ಉತ್ತೇಜನ ನೀಡುತ್ತದೆ. ಈ ರಸ್ತೆಗಳನ್ನು ಬಳಸಿ ಅಭಿವೃದ್ಧಿ ಯಾಗುವ ಉದ್ಯಮ, ವ್ಯಾಪಾರ ಎಲ್ಲವೂ ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸುತ್ತವೆ. ಒಂದು ಒಳ್ಳೆಯ ರಸ್ತೆಯಾದರೆ ಹತ್ತು ಊರು ಉತ್ತಮವಾದಂತೆ. ಹತ್ತು ಊರಿನ ಜನರಿಗೂ ಅದರಿಂದ ಉಪಯೋಗವಾಗುವುದು ಖಚಿತ.
ಅತ್ಯುತ್ತಮ ರಸ್ತೆಗಳು ನಮ್ಮ ದೇಶದ ಆರ್ಥಿಕ ಚಟುವಟಿಕೆ ಯನ್ನು ಹೆಚ್ಚಿಸುವ ಜತೆಗೆ ವಿದೇಶಿ ಬಂಡವಾಳವನ್ನು ಕೂಡ ಆಕರ್ಷಿಸುತ್ತವೆ. ಉತ್ತಮ ಮೂಲಸೌಕರ್ಯ ಇರುವ ಕಡೆ ಉದ್ಯಮ ಆರಂಭಿಸಲು ವಿದೇಶಿ ಕಂಪನಿಗಳು ಸಹಜವಾಗಿ ಆಸಕ್ತಿ ತೋರುತ್ತವೆ. ದೇಶದಲ್ಲಿರುವ ಉತ್ತಮ ರಸ್ತೆಗಳು ದೇಶದ ಇಮೇಜ್ ಕೂಡ ಹೆಚ್ಚಲು ಕಾರಣವಾಗುತ್ತವೆ. ಹಾಗಾಗಿ ಹೆದ್ದಾರಿಗಳು, ಉತ್ತಮ ರಸ್ತೆಗಳು ಕೇವಲ ರಸ್ತೆಗಳಲ್ಲ. ಅವು ದೇಶದ ಅಭಿವೃದ್ಧಿಯ ಹೆದ್ದಾರಿಗಳು.
(ಲೇಖಕರು ಕರ್ನಾಟಕ ಬಿಜೆಪಿಯ ಮುಖ್ಯ ವಕ್ತಾರರು)