Saturday, 14th December 2024

ಕಾಲೇಜುಗಳಲ್ಲಿ ಸುರಕ್ಷತೆ ಇಲ್ಲವಾಯಿತೇ?

ಪ್ರೀತಿಸಲು ನಿರಾಕರಿಸಿದಳು ಎಂಬ ಕಾರಣಕ್ಕೆ ಹುಬ್ಬಳ್ಳಿಯ ಬಿವಿಬಿ ಕಾಲೇಜು ಕ್ಯಾಂಪಸ್‌ನಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ
ಪಾಲಿಕೆಯ ಸದಸ್ಯರಾದ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಅವರ ಹತ್ಯೆಯಾಗಿದ್ದು ಅತ್ಯಂತ ಖಂಡನೀಯ. ಈ ಘಟನೆ ಯಿಂದಾಗಿ ಇಡೀ ರಾಜ್ಯವೇ ಬೆಚ್ಚಿಬಿದ್ದಿದೆ. ಈ ಹೇಯ ಕೃತ್ಯದಿಂದ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.

ಇಂಥ ಘಟನೆಗಳು ಯಾವುದೇ ರಾಜ್ಯ, ದೇಶ ಮತ್ತು ಸಮುದಾಯಗಳನ್ನು ತಲೆತಗ್ಗಿಸುವಂತೆ ಮಾಡುತ್ತವೆ. ಇಂಥ ಘಟನೆಗಳನ್ನು ನೋಡಿದಾಗ ಹೆಣ್ಣು ಮಕ್ಕಳನ್ನು ಶಾಲಾ, ಕಾಲೇಜುಗಳಿಗೆ ಕಳುಹಿಸಲು ಪೋಷಕರು ಹಿಂಜರಿಯುತ್ತಾರೆ. ವಿದ್ಯಾರ್ಥಿಗಳ ಪಾಲಕ ರಿಂದ ಲಕ್ಷಾಂತರ ಶುಲ್ಕ ಪಡೆಯುವ ಶಾಲಾ ಆಡಳಿತ ಮಂಡಳಿಗಳು, ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆಯೂ ಗಮನ ಹರಿಸಬೇಕು. ನೇಹಾ ಕೊಲೆ ಪ್ರಕರಣದಲ್ಲಿ ಕಾಲೇಜಿನ ಭದ್ರತಾ ವೈಫಲ್ಯವೂ ಇದೆ.

ಕಾಲೇಜು ಆವರಣದಲ್ಲಿ ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿ ಮೇಲೆ, ಅಪರಿಚಿತರ ಬಗ್ಗೆ ಪೊಲೀಸರು ನಿಗಾ ಇಡುವಂತೆ
ಮಾಡಬೇಕು. ಭದ್ರತಾ ಸಿಬ್ಬಂದಿ ಹೆಚ್ಚಳ ಮಾಡಬೇಕು. ಇಂತಹ ಘಟನೆಗಳ ರಾಜ್ಯದಲ್ಲಿ ಮರುಕಳಿಸದಂತೆ ನೋಡಿಕೊಳ್ಳಬೇಕು. ನೇಹಾ ಕೊಲೆ ಪ್ರಕರಣದ ಕುರಿತು ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಪ್ರಕರಣ ಕುರಿತು ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ ಅವರು ಪೊಲೀಸರಿಗೆ ಸೂಕ್ತ ತನಿಖೆಗೆ ಸೂಚಿಸಿದ್ದು,
ಅಪರಾಽಗೆ ಅತ್ಯಂತ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಆದರೆ ಚುನಾವಣೆಯ ಈ ಸಂದರ್ಭದಲ್ಲಿ ಈ ಪ್ರಕರಣವನ್ನು ರಾಜಕೀಯಕ್ಕೆ ಎಳೆದು ತರುವ ಕೆಲಸವನ್ನು ಮಾಡುತ್ತಿರುವುದು  ಸರಿಯಲ್ಲ. ಇಂಥ ಪ್ರಕರಣಗಳ ಬಗ್ಗೆ ಯಾರೇ ಆಗಲಿ ಸಂವೇದನೆಹೀನರಾಗಿ ಮಾತಾಡಬಾರದು. ಇದು ರಾಜಕೀಯ ವಿಷಯವಲ್ಲ, ಹೆಣ್ಣುಮಗುವನ್ನು ಕಳೆದುಕೊಂಡಿರುವ ಕುಟುಂಬದ ಬಗ್ಗೆ ಎಲ್ಲರೂ ಯೋಚಿಸಬೇಕಿದೆ. ಘಟನೆ ಸಂಬಂಧ ಯಾರೊಬ್ಬರೂ ಉದ್ವೇಗಕ್ಕೆ ಒಳಗಾಗಿ ಕಾನೂನನ್ನು ಕೈಗೆತ್ತಿಕೊಳ್ಳುವುದಾಗಲೀ ಅಥವಾ ಸಮಾಜದ ಶಾಂತಿ ಕದಡುವ ಪ್ರಯತ್ನಕ್ಕೆ ಮುಂದಾಗ
ಬಾರದು. ಪ್ರಕರಣಕ್ಕೆ ಯಾವುದೇ ಜಾತಿ, ಧರ್ಮದ ಲೇಪನ ಹಚ್ಚದೇ ಕಾನೂನಿನ ಚೌಕಟ್ಟಿನಲ್ಲಿಯೇ ವಿರೋಧಿಸಬೇಕಿದೆ.