Saturday, 14th December 2024

ವರ್ತಮಾನದ ಜಗತ್ತಿಗೆ ಮಹಾವೀರರ ಅಗತ್ಯವಿದೆ

ಮಹಾವತಾರಿ

ನಿರಂಜನ್ ಜೈನ್ ಕುದ್ಯಾಡಿ

ಪ್ರಸ್ತುತ ಭಗವಾನ್ ಮಹಾವೀರರ ವಿಚಾರಧಾರೆಗಳು ಅತ್ಯಗತ್ಯವಾಗಿವೆ. ಅತಿಯಾಸೆ, ಮೋಹಗಳಿಂದ ಬೆಂದು ಬಸವಳಿದ ಜೀವಗಳಿಗೆ ಮಹಾವೀರರ ಮಾತುಗಳು ಚೇತೋಹಾರಿಯಾಗಿವೆ. ಜಗತ್ತಿನಲ್ಲಿ ತಾಂಡವವಾಡುತ್ತಿರುವ ಹಿಂಸೆ, ಅಶಾಂತಿಗಳನ್ನು ನೀಗುವಲ್ಲಿ ಮಹಾ ವೀರರ ಉಪದೇಶಗಳು ಉತ್ತಮ ಆಯ್ಕೆಗಳಾಗಿವೆ.

ಜಗತ್ತಿನಲ್ಲಿ ಹಲವಾರು ದಾರ್ಶನಿಕರು ಆಗಿಹೋಗಿದ್ದಾರೆ. ಅವರೆಲ್ಲರೂ ಮನುಕುಲದ ಉದ್ಧಾರಕ್ಕಾಗಿ ಉಪದೇಶವನ್ನು ನೀಡಿ ತಮ್ಮದೇ ಆದ ವೈಶಿಷ್ಟ್ಯ ಗಳಿಂದ ಪ್ರಸಿದ್ಧಿಯನ್ನು ಹೊಂದಿ ಅಜರಾಮರರಾಗಿದ್ದಾರೆ. ಇವರೆಲ್ಲರಿಗೂ ಹಿಂಬಾಲಕರು ಅಥವಾ ಅನುಯಾಯಿಗಳಿದ್ದಾರೆ. ಈ ಅನುಯಾಯಿಗಳು
ತಮ್ಮ ನೆಚ್ಚಿನ ದಾರ್ಶನಿಕರನ್ನು, ಅವರ ಹಿರಿಮೆ-ಗರಿಮೆಗಳನ್ನು ಇನ್ನೂ ಜೀವಂತವಿರಿಸಿದ್ದಾರೆ. ಇಂಥ ಮಹಾನ್ ದಾರ್ಶನಿಕರಲ್ಲಿ ಭಗವಾನ್ ಮಹಾವೀರರು ಕೂಡ ಒಬ್ಬರು.

ಪಾರಮಾರ್ಥಿಕದ ಕಡೆಗೆ ಒಲವು: ಬಿಹಾರದ ಕುಂಡಲಾಪುರದಲ್ಲಿ ರಾಜ ಸಿದ್ಧಾರ್ಥ ಮತ್ತು ರಾಣಿ ತ್ರಿಶಲಾ ದಂಪತಿಗೆ ಕ್ರಿ.ಪೂ.೫೯೯ರಲ್ಲಿ ‘ಮಹಾವೀರ’
ಎಂಬ ಬಾಲಕನ ಜನನವಾಯಿತು. ಈತನ ಜನನ ಮಾತ್ರದಿಂದಲೇ ಆ ರಾಜ್ಯವು ದಿನೇದಿನೆ ಪ್ರವರ್ಧಮಾನಕ್ಕೆ ಬರತೊಡಗಿತು. ಹಾಗೆಯೇ ಕಾಲಕಾಲಕ್ಕೆ ತಕ್ಕಂತೆ ಮಳೆ-ಬೆಳೆಗಳಾಗಿ ನಾಡು ಸುಭಿಕ್ಷೆಯಿಂದ ತುಂಬಿ ತುಳುಕತೊಡಗಿತು. ರಾಜವೈಭವ, ನಾಡಿನ ಪ್ರಗತಿ, ಪ್ರಜೆಗಳ ಸುಖ-ಸಂಪತ್ತುಗಳು ಹೀಗೆ ಮಹಾವೀರನ ಜನ್ಮದ ನಂತರ ವೃದ್ಧಿಯಾಗುತ್ತಾ ಬಂದ ಕಾರಣ ದಿಂದಾಗಿ ಆತನಿಗೆ ‘ವರ್ಧಮಾನ’ ಎಂಬ ಹೆಸರು ಪ್ರಚಲಿತವಾಯಿತು.

ಅನೇಕ ಜನರ ಅಜ್ಞಾನವು ಮಹಾವೀರನ ನಿಮಿತ್ತದಿಂದ ನಿವಾರಣೆಯಾದ ಕಾರಣದಿಂದಲೂ ಆತನನ್ನು ‘ಸನ್ಮತಿ’ ಎಂಬ ಹೆಸರಿನಿಂದಲೂ ಕರೆಯುವುದು ವಾಡಿಕೆಯಾಯಿತು. ‘ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿ ನೋಡು’ ಎಂಬಂತೆ ಮಹಾವೀರನಲ್ಲಿ ಬಾಲ್ಯಾವಸ್ಥೆಯಲ್ಲೇ ಸಂಸ್ಕಾರ, ನಯ, ವಿನಯ, ಗಾಂಭೀರ್ಯ, ಬುದ್ಧಿಮತ್ತೆ ಚಿಗುರೊಡೆದು ಹೆಮ್ಮರವಾಗತೊಡಗಿತು. ಯುವ ಅವಸ್ಥೆಯನ್ನು ತಲುಪಿದ ಮಹಾವೀರನಿಗೆ ವಿವಾಹ ಮಾಡಲು ರಾಜ
ಸಿದ್ಧಾರ್ಥ ಆಲೋಚಿಸಿದ. ಆದರೆ ಆ ಯೋಜನೆಗಳನ್ನು ಬದಿಗಿರಿಸಿದ ಮಹಾವೀರನು ಅಧ್ಯಾತ್ಮ ಪ್ರಪಂಚದತ್ತ ವಾಲಿದನು. ನಮ್ಮೊಳಗೆ ಯಾಕೀ ತಾರತಮ್ಯವಿದೆ? ಕೆಲವರು ದುಃಖದಿಂದ, ಮತ್ತೆ ಕೆಲವರು ಸಂತೋಷದಿಂದ ಯಾಕಿದ್ದಾರೆ? ಕೆಲವರು ಬಡವರಾಗಿ, ಮತ್ತೆ ಕೆಲವರು ಶ್ರೀಮಂತರಾಗಿ ಇರುವುದೇಕೆ? ಉಚ್ಚ-ನೀಚ ಮನೋಭಾವ ನಮ್ಮಲ್ಲಿ ಯಾಕಿದೆ? ಎಂದೆಲ್ಲಾ ಮಹಾವೀರ ಚಿಂತನೆ ನಡೆಸಿದ.

ಕೆಲವರು ತಮ್ಮ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹವನ-ಹೋಮ, ಯಾಗಗಳನ್ನು ನಡೆಸುವುದನ್ನು, ಆ ಯಾಗಗಳಲ್ಲಿ ಮೂಕಪ್ರಾಣಿಗಳನ್ನು ಬಲಿಕೊಟ್ಟು ವಿಜೃಂಭಿಸುವುದನ್ನು ಮಹಾವೀರ ಕಂಡನು. ಮನುಷ್ಯನು ಅಲ್ಪಸುಖಕ್ಕಾಗಿ ಮಾಡಬಾರದ ಕೆಲಸಗಳನ್ನು ಮಾಡಿ ದುಃಖಪಡುವುದನ್ನು ಕಂಡು ರೋಸಿಹೋದನು. ‘ಹಾಗಾದರೆ, ನಿಜವಾದ ಸುಖ ಯಾವುದು?’ ಎಂಬ ಆಲೋಚನೆಗೆ ಒಡ್ಡಿಕೊಂಡ ಮಹಾವೀರನು ಶಾಶ್ವತ ಸುಖದ ಅನ್ವೇಷಣೆಗಾಗಿ ತನ್ನ ೩೦ನೇ ವಯಸ್ಸಿನಲ್ಲಿ ಕಾನನದ ಕಡೆಗೆ ಹೊರಟನು. ಅಲ್ಲಿ ೧೨ ವರ್ಷಗಳ ಕಾಲ ತಪಸ್ಸು ಮಾಡಿ, ಕೇವಲಜ್ಞಾನವನ್ನು ಪಡೆದು, ನಿಜವಾದ ಸುಖದ
ರಹಸ್ಯವನ್ನು ಅರಿತು ಜನಗಳಿಗಾಗಿ ಉಪದೇಶಾಮೃತ ನೀಡಲು ಪ್ರಾರಂಭಿಸಿದನು.

ಭಗವಾನ್ ಮಹಾವೀರರ ಉಪದೇಶಸಾರ: ಭಗವಾನ್ ಮಹಾವೀರರು ನಾಡಿನ ಎಲ್ಲೆಡೆ ವಿಹಾರಗೈದು, ಉಪದೇಶವನ್ನು ನೀಡಿದರು. ತಮ್ಮ ದಿವ್ಯ ವಾಣಿಯಲ್ಲಿ ಶಾಶ್ವತ ಸುಖದ ರಹಸ್ಯವನ್ನು ಎಳೆಎಳೆಯಾಗಿ ಪ್ರಚುರಪಡಿಸಿದರು. ‘ನಿನಗೆ ಬದುಕುವ ಹಕ್ಕು ಇದೆ; ಆದರೆ ನೀನು ಬದುಕುವ ಭರಾಟೆಯಲ್ಲಿ ಇತರ ಜೀವಿಗಳ ಬದುಕುವ ಹಕ್ಕನ್ನು ಕಸಿದುಕೊಳ್ಳದಿರು. ಅಂದರೆ, ನೀನೂ ಬದುಕು ಹಾಗೂ ಇತರರನ್ನೂ ಬದುಕಲು ಬಿಡು’ ಎನ್ನುವ ಪರಮವಾಣಿಯೇ ಮಹಾವೀರರ ಉಪದೇಶದ ಮುಖ್ಯಸಾರವಾಗಿತ್ತು. ಅದಕ್ಕಾಗಿ ಸರಳವಾದ ಐದು ವಿಚಾರಗಳನ್ನು ಮುಖ್ಯವಾಗಿ ಅರುಹಿದರು.

ಅವುಗಳೇ ‘ಪಂಚಾಣುವ್ರತ’ ಗಳಾಗಿವೆ. ಮನುಷ್ಯ ಈ ಐದು ವಿಚಾರಗಳಲ್ಲಿ ನಿಮಗ್ನನಾದರೆ ಆತನಿಗೆ ಆತನ ಜೀವನ ರಸಮಯವಾಗಿರುತ್ತದೆ ಎಂದು ಸಾರಿಸಾರಿ ಹೇಳಿದರು. ಸತ್ಯ, ಅಹಿಂಸೆ, ಅಚೌರ್ಯ, ಅಪರಿಗ್ರಹ ಮತ್ತು ಬ್ರಹ್ಮಚರ್ಯ ಇವು ಪಂಚಾಣುವ್ರತಗಳಾಗಿವೆ.

ಸುಲಲಿತ ಜೀವನಕ್ಕೆ ಐದು ಸೂತ್ರಗಳು
ಮನುಷ್ಯನ ಜೀವನದಲ್ಲಿ ಸತ್ಯವು ಬಹಳ ಪ್ರಾಮುಖ್ಯವನ್ನು ಪಡೆದಿದೆ. ಸುಳ್ಳು ಹೇಳುವುದರಿಂದ ತಾತ್ಕಾಲಿಕ ಸಂತೋಷ ಸಿಗಬಹುದು; ಆದರೆ ಆ ಸುಳ್ಳು
ಇನ್ನೊಬ್ಬರ ಘಾತ ಮಾಡುತ್ತದೆ ಅಥವಾ ದುಃಖಕ್ಕೆ ಈಡುಮಾಡುತ್ತದೆ. ಹಾಗಾಗಿ ಸತ್ಯವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು ಹಾಗೂ ಅದು ಸರ್ವಜೀವಿಗಳಿಗೂ ಹಿತಕಾರಿಯಾಗಿರುತ್ತದೆ. ಸತ್ಯದ ವಿಚಾರವು ಮನುಕುಲದ ಶ್ರೇಯಸ್ಸಿಗೆ ಕಾರಣೀಭೂತವಾಗುತ್ತದೆ ಎಂದು ಮಹಾವೀರರು ಸಾರಿದರು.
ಅಹಿಂಸೆಯು ಮನುಷ್ಯನ ನೈಜಸ್ವಭಾವವಾಗಿದೆ, ಹಿಂಸೆಯೆಂಬುದು ಪಾಪವಾಗಿದೆ. ಹಿಂಸೆಯು ತನ್ನನ್ನು ಮತ್ತು ಇತರರನ್ನು ಕೂಡ ದುಃಖಕ್ಕೆ ಈಡು ಮಾಡುತ್ತದೆ. ಹಾಗಾಗಿ ಹಿಂಸೆಯು ಇತರರ ಬದುಕುವ ಹಕ್ಕನ್ನು ಕೂಡ ಕಸಿದುಕೊಳ್ಳುತ್ತದೆ ಮತ್ತು ಜೀವಪಪ್ರಪಂಚದ ವೈಭವಕ್ಕೆ ಹಾನಿಯನ್ನು ಉಂಟುಮಾಡುತ್ತದೆ. ನಾವೆಲ್ಲರೂ ಬದುಕುವ ದಾರಿಯಲ್ಲಿ ಹಿಂಸೆಗಳು ಸಂಭವಿಸಿಯೇ ಸಂಭವಿಸುತ್ತವೆ. ಆ ಹಿಂಸೆಯು ಇತರರನ್ನು ಬಾಧಿಸದೆ ಒಂದು ಅತ್ಯಲ್ಪ ಮಿತಿಯೊಳಗಿದ್ದರೆ ಅದು ಸಹ್ಯವಾಗಿರುತ್ತದೆ ಎಂದು ಜೀವಜಗತ್ತಿಗೆ ಸಾರಿದ ಮಹಾವೀರರು, ಮನ-ವಚನ- ಕಾಯದ ಮೂಲಕವೂ ಹಿಂಸೆ ನಿಷೇಧವಿದೆ ಎಂದು ಅರುಹಿದರು. ಅಚೌರ್ಯ ಎಂದರೆ ಕಳ್ಳತನ ಮಾಡದೇ ಇರುವುದು. ಯಾವುದೇ ವಿಚಾರಗಳಲ್ಲಿ ಕಳ್ಳತನವೆಂಬುದು ಅಸಹ್ಯವಾಗಿದೆ. ಕಳ್ಳನಿಗೆ ಸಮಾಜದಲ್ಲಿ ಮಾನ್ಯತೆ ಇರುವುದಿಲ್ಲ ಹಾಗೂ ಆತನ ಬದುಕು ಅಯೋಮಯವಾಗಿರುತ್ತದೆ.

ಪರರ ವಸ್ತುಗಳ ಮೇಲೆ, ವಿಚಾರಗಳ ಮೇಲೆ ನಮಗೆ ಎಳ್ಳಷ್ಟೂ ಹಕ್ಕಿರುವುದಿಲ್ಲ. ಹಕ್ಕೇ ಇರದ ಮೇಲೆ ಅದರ ಸ್ವಾಮಿತ್ವವನ್ನು ನಾವು ಸಾಧಿಸಿಕೊಳ್ಳುವು ದಾದರೂ ಹೇಗೆ ಸಾಧ್ಯ ಎಂದು ಮಹಾವೀರರು ಪ್ರಚುರಪಡಿಸಿದರು. ಅಪರಿಗ್ರಹ ಎಂದರೆ ಪರಿಗ್ರಹಗಳ ಮೇಲೆ ನಿರಾಸಕ್ತಿ. ಜಗತ್ತಿನಲ್ಲಿ ನಮಗೆ ನಮ್ಮ ಬದುಕಲ್ಲಿ ಬಂದಿರುವಂಥ ಸುಖಭೋಗಗಳಲ್ಲಿ ತೃಪ್ತಿಯೆಂಬುದೇ ಇರುವುದಿಲ್ಲ. ತನ್ನ ಬಳಿ ಎಷ್ಟಿದ್ದರೂ, ‘ಇನ್ನೂ ಬೇಕು ಬೇಕು’ ಎಂಬ ಅಭಿಲಾಷೆ
ಮನುಷ್ಯನನ್ನು ಕಾಡುತ್ತಲೇ ಇರುತ್ತದೆ. ‘ಇನ್ನಷ್ಟು ಸುಖ- ಸಂಪತ್ತುಗಳು ನನಗೆ ಬೇಕು’ ಎನ್ನುವ ತುಡಿತವೇ ಮನುಷ್ಯನನ್ನು ದುಃಖಕ್ಕೆ ಈಡುಮಾಡುತ್ತದೆ.

ಭೋಗ- ಭಾಗ್ಯಗಳು ಬೇಕು ಬೇಕು ಎಂದು ಹಂಬಲಿಸುವವನಿಗೆ ದಾಹ ಹೆಚ್ಚಾಗುತ್ತಲೇ ಹೋಗಿ, ಇರುವ ಸುಖವನ್ನೂ ಆತ ಅನುಭವಿಸದೇ ದುಃಖಿ ಯಾಗಿರುತ್ತಾನೆ. ಇರುವ ಸಂಪತ್ತಿನಲ್ಲೇ ಸುಖವನ್ನು ಅನುಭವಿಸಿ ತೃಪ್ತಿಪಡುವುದೇ ನಿಜವಾದ ಸುಖದ ಪರಿಕಲ್ಪನೆಯಾಗಿದೆ. ಆದಷ್ಟೂ ಕಡಿಮೆ
ಸುಖಭೋಗಗಳಲ್ಲಿ ರಮಿಸುವುದೇ ಜಾಣತನವಾಗಿದೆ ಎಂದು ಮಹಾವೀರರು ಸಾರಿದರು. ಬ್ರಹ್ಮನಲ್ಲಿ ಅಥವಾ ಆತ್ಮನಲ್ಲಿ ತಲ್ಲೀನನಾಗಿರುವುದೇ ಬ್ರಹ್ಮಚರ್ಯವಾಗಿರುತ್ತದೆ. ಪರಸ್ತ್ರೀ ವ್ಯಾಮೋಹವು ನಿರಾಸೆ ಹಾಗೂ ದುಃಖವನ್ನು ಉಂಟುಮಾಡುತ್ತದೆ ಹಾಗೂ ಮನೆತನದ ಗೌರವ- ಮರ್ಯಾದೆ ಗಳನ್ನು ಹಾಳುಗೆಡವುತ್ತದೆ. ಇತರ ಸ್ತ್ರೀಯರನ್ನು ಅಥವಾ ಪುರುಷರನ್ನು ಸೋದರಿ/ ಸೋದರ ಸಮಾನವೆಂದು ಭಾವಿಸಿ, ತನಗೆ ಒದಗಿ ಬಂದಿರುವ ಸ್ತ್ರೀ/ಪುರುಷರಲ್ಲೇ ರಮಿಸುವುದು ಧರ್ಮಸಮ್ಮತವಾಗಿರುತ್ತದೆ. ವ್ರತ, ಉಪವಾಸಾದಿಗಳನ್ನು ಮಾಡುತ್ತ, ಜೀವನದಲ್ಲಿ ಸೀಮಿತ ಭೋಗಗಳನ್ನು ಅನುಭವಿಸು ವುದೇ ಉತ್ತಮ ಬ್ರಹ್ಮಚರ್ಯವಾಗಿದೆ ಎಂದು ಮಹಾವೀರರು ಸಾರಿದರು.

ಆಧುನಿಕ ಬದುಕಿಗೆ ಮಹಾವೀರರೇ ದಾರಿ ನಮ್ಮ ಆಧುನಿಕ ಬದುಕಿಗೆ ಭಗವಾನ್ ಮಹಾವೀರರ ವಿಚಾರಧಾರೆಗಳು ಅತ್ಯಗತ್ಯವಾಗಿವೆ. ಅತಿಯಾಸೆ, ಮೋಹಗಳಿಂದ ಬೆಂದು ಬಸವಳಿದ ಜೀವಗಳಿಗೆ ಮಹಾವೀರರ ಮಾತುಗಳು ಚೇತೋಹಾರಿಯಾಗಿವೆ. ಜಗತ್ತಿನಲ್ಲಿ ನಡೆಯುತ್ತಿರುವ ಹಿಂಸೆ, ತಾಂಡವ ವಾಡುತ್ತಿರುವ ಅಶಾಂತಿಗಳನ್ನು ನೀಗುವ ನಿಟ್ಟಿನಲ್ಲಿ ಮಹಾವೀರರ ಉಪದೇಶಗಳು ಉತ್ತಮ ಆಯ್ಕೆಗಳಾಗಿವೆ. ಮಹಾವೀರರನ್ನು ಅರಿತು ನಡೆದು, ಬದುಕನ್ನು ಸತ್ಪಥದಲ್ಲಿ ಮುನ್ನಡೆಸಿದರೆ, ಅದು ಸುಖ-ಶಾಂತಿ-ನೆಮ್ಮದಿಗಳಿಗೆ ತಳಪಾಯವಾಗುತ್ತದೆ. ಮಹಾವೀರರ ವಿಚಾರಧಾರೆಗಳು ಜಗತ್ತಿನ
ಆತ್ಮಿಕ ಸುಖದ ಪುನರುತ್ಥಾನಕ್ಕೆ ನಾಂದಿಯಾಗುತ್ತವೆ.

(ಲೇಖಕರು ಸಾಮಾಜಿಕ-ಸಾಂಸ್ಕೃತಿಕ
ಕ್ರಿಯಾವಾದಿಗಳು)