Saturday, 14th December 2024

ಖಾರ್ವಿಕೇರಿಯಲ್ಲಿ ಮತದಾನದ ಆ ದಿನ

ಅಂತರ್ಗತ

ಜಯಪ್ರಕಾಶ ಪುತ್ತೂರು

ಮಣಿಪಾಲದಲ್ಲಿ ಬ್ಯಾಂಕ್‌ನ ಕೇಂದ್ರ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಉಡುಪಿ ವಾಸ್ತವ್ಯದ ವೇಳೆ, ನಮಗೆಲ್ಲಾ ಈ ಚಾರಿತ್ರಿಕ ನಗರ ವಿವಿಧ ಆಸಕ್ತಿ ದಾಯಕ ವಿಚಾರಗಳಲ್ಲಿ ತೊಡಗಿಸಲು ವಿಪುಲ ಅವಕಾಶಗಳನ್ನು ತೆರೆದಿಟ್ಟಿತ್ತು. ಆಗ ನೋಡಿದರೆ ಬೆಂಗಳೂರು ಮೈಸೂರು ಬಿಟ್ಟರೆ ಅತ್ಯಂತ ಚಟುವಟಕೆಯ ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಧಾರ್ಮಿಕ ಕೇಂದ್ರ ಉಡುಪಿ, ರಥಬೀದಿ ಗೆಳೆಯರು, ರಂಗಭೂಮಿ ಸುಚಿತ್ರಾ ಫಿಲಂ ಸೊಸೈಟಿ, ಜೇಸಿಸ್
ಹೀಗೆ ಒಂದೇ… ಎರಡೇ…? ಆ ವೇಳೆಯಲ್ಲಿ ಕು.ಶಿ. ಹರಿದಾಸ ಭಟ್ಟ, ಟಿ.ಏ.ಪೈ, ಮುರಾರಿ ಬಲ್ಲಾಳ- ಹೀಗೆ ವಿವಿಧ ಕ್ಷೇತ್ರಗಳ ಉದ್ದಾಮ ನಾಯಕರು ಈ ಪರಿಸರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

ಮಣಿಪಾಲದ ಬ್ಯಾಂಕ್ ಸಿಬ್ಬಂದಿಗಳೇ ಸೇರಿ ಸಂಘಟಿಸಿದ ಮಣಿಪಾಲ ಯುನಿಟ್‌ನಲ್ಲಿ ಒಂದು ರೀತಿಯಲ್ಲಿ ವೈಟ್ ಕಾಲರ್ ಉದ್ಯೋಗಿಗಳೆಲ್ಲಾ ಸೇರಿ ಕೊಂಡ ಕಾರಣ ಶಿಸ್ತು ಹಾಗೂ ಕಾರ್ಯಕ್ಷಮತೆಗೆ ಹೆಸರು ವಾಸಿಯಾಗಿತ್ತು. ಇಲ್ಲವಾದರೆ ಈ ನಾಗರಿಕ ರಕ್ಷಣೆಯ ತಂಡಕ್ಕೆ ಯಾವಾಗ ಸುಶಿಕ್ಷಿತ ವ್ಯಕ್ತಿಗಳ ಸೇರ್ಪಡೆ ಕಡಿಮೆ. ಹೀಗಾಗಿ ನಾವೆಲ್ಲಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮ್ಮ ತಂಡದ ಕಾರ್ಯ ಚಟುವಟಿಕೆಗಳಿಂದ ಹೆಸರುವಾಸಿಯಾಗಿದ್ದೆವು. ನಾಗರಿಕ ರೆಫೈಲ್ ತರಬೇತಿ, ಅನ್ ಅರ್ಮಡ್ ಕೊಂಬಾಟ್ ಹಾಗೂ ಅಗ್ನಿಶಾಮಕ ಸೇವಾ ತರಬೇತಿ ಇವುಗಳೆಲ್ಲಾ ನಮ್ಮನ್ನು ತೊಡಗಿಸಿಕೊಳ್ಳಲು ಪ್ರೇರೇಪಿಸಿದ್ದವು.

ಮುಖ್ಯವಾಗಿ ಸಿಂಡಿಕೇಟ್ ಬ್ಯಾಂಕ್‌ನ ಕೇಂದ್ರ ಕಚೇರಿಯೂ ಇಂತಹ ಸಮಾಜಮುಖಿಯಾದ ಚಟುವಟಿಕೆಗಳಿಗೆ ತನ್ನ ಸಿಬ್ಬಂದಿಗಳಿಗೆ ಪ್ರೋತ್ಸಾಹ ಹಾಗೂ ನೆರವನ್ನು ಸದಾ ನೀಡುವ ಕಾರಣ ಎಲ್ಲವೂ ಸುಗಮವಾಗಿ ಸಾಗುತ್ತಿತ್ತು. ನಮ್ಮ ೫ ವರ್ಷದ ಅವಧಿಯಲ್ಲಿ ಅಖಿಲ ಭಾರತ ಬಂದ್, ವಿವಿಧ ಮುಷ್ಕರಗಳು,
ಚುನಾವಣೆಗಳು, ಪರ್ಯಾಯ ಸಮಾರಂಭ, ವಿವಿಐಪಿ ಬಂದೋಬಸ್ತ್- ಹೀಗೆ ಹಲವು ಸಂದರ್ಭಗಳಲ್ಲಿ ಸ್ಥಳೀಯ ಪೋಲಿಸ್ ಇಲಾಖೆಗೆ ನೆರವು ನೀಡುವ ಅವಕಾಶ ಲಭಿಸಿತ್ತು. ಮಂಗಳೂರು, ಉಡುಪಿ ನಗರಗಳಲ್ಲಿ ವಿವಿಐಪಿ ಭೇಟಿ ವೇಳೆ ಟ್ರಾಫಿಕ್ ಸಿಗ್ನಲ್‌ಗಳಲ್ಲಿ, ವಿವಿಧ ಸ್ಟೇಷನ್‌ಗಳಲ್ಲಿ ಹಾಗೂ ಗಸ್ತು
ತಿರುಗುವ ವಾಹನ ಹೀಗೆ ಹತ್ತು ಹಲವು ಅವ ಕಾಶಗಳು ನಮಗೆ ಹೊಸ ಅನುಭವದ ಪಾಠಗಳನ್ನು ನೀಡಿತ್ತು.

ಎಷ್ಟೋ ವೇಳೆ ನಗರದ ಪರಿಚಿತ ಪತ್ರಕರ್ತರು ಅಭಿಮಾನ ಪೂರ್ವಕವಾಗಿ ನೋಡಿ, ‘ಏನ್ ಸಾರ್, ಈ ಶ್ರಮ ನಿಮಗೆ ಬೇಕಿತ್ತಾ?’ ಎಂದು ಆಶ್ಚರ್ಯ ಪಡುತ್ತಿದ್ದರು. ಚುನಾವಣೆ ಸಿಬ್ಬಂದಿಗಳೊಂದಿಗೆ ತಾಲೂಕು ಕಚೇರಿಯಿಂದ ವಿವಿದ ಹಳ್ಳಿ ಗಳಿಗೆ ಮತದಾನದ ಸಲಕರಣೆಯೊಂದಿಗೆ ಪ್ರಯಾಣ ಹಳ್ಳಿ ಶಾಲೆಗಳಲ್ಲಿ ರಾತ್ರಿ ವಾಸ್ತವ್ಯ ಕನಿಷ್ಠ ಸೌಲಭ್ಯಗಳಿಲ್ಲದಿದ್ದರೂ, ಅನುಭವ ಪಡೆಯುವ ನೆಲೆಯಲ್ಲಿ ಒಂದು ತರದ ಉತ್ಸಾಹ. ಈಗ ಆ ದಿನಗಳನ್ನು ಜ್ಞಾಪಿಸಿಕೊಂಡರೆ ಮೈ ಜುಮ್ ಎನ್ನಿಸುತ್ತದೆ. ಕೋಟ ಗ್ರಾಮದ ಹಳ್ಳಿಯ ಸರಕಾರಿ ಶಾಲೆಯ ವಾಸ್ತವ್ಯದ ವೇಳೆ ಹಂಚುಗಳು ಬಿದ್ದು ಹೋಗಿದ್ದ, ಸೊಳ್ಳೆಕಾಟದ, ಸ್ನಾನ ಶೌಚಗಳ ಸೌಲಭ್ಯ ಕಾಣದೇ ಕಷ್ಟಪಟ್ಟ ಆ ರಾತ್ರಿಗಳು. ಆ ಊರಿನ ಸಜ್ಜನರೊಬ್ಬರು ಹಿಂದಿನ ಕಾಲದ ಪಟೇಲ ವಂಶದವರು.

ಈ ನಮ್ಮ ವಿಷಯ ತಿಳಿದು, ಮುಂಜಾನೆ ಶಾಲೆಗೆ ಬಂದು ಒತ್ತಾಯ ಪೂರ್ವಕವಾಗಿ ಮನೆಗೆ ಕರೆದೊಯ್ದು ಸ್ನಾನ, ಉಪಚಾರ ಎಲ್ಲಾ ವ್ಯವಸ್ಥೆ ಮಾಡಿ ಅಭಿಮಾನ ತೋರಿದಾಗ ಪರವಾಗಿಲ್ಲ, ಈ ದಿನಗಳಲ್ಲಿಯೂ ಹಳ್ಳಿಗಳಲ್ಲಿ ಒಳ್ಳೆಯ ನಾಯ ಕರುಗಳಿಗೆ ಕೊರತೆ ಆಗಿಲ್ಲ ಎಂದು ಸಮಾಧಾನ ಮೂಡಿತ್ತು.
ಈ ಎಲ್ಲಾ ಅನುಭವಗಳ ನಡುವೆ ಈಗಲೂ ಮನುಷ್ಯರಲ್ಲಿ ಅಚ್ಚಳಿಯದೇ ಉಳಿದ ಒಂದು ಘಟನೆಯನ್ನು ಪ್ರಸ್ತಾಪಿಸುವುದು ಅತ್ಯಂತ ಪಸ್ತುತ. ಆ ವೇಳೆ ಲೋಕಸಭಾ ಚುನಾವಣೆ ಯ ವಿವಿಧ ಪ್ರಕ್ರಿಯೆಗಳು ಮುಗಿದು ನಮಗೆಲ್ಲಾ ಕರ್ತವ್ಯದ ಬಗ್ಗೆ ತರಬೇತಿ ಹಾಗೂ ವಿಚಾರಗಳನ್ನು ತಿಳಿಹೇಳಿದ ನಂತರ,
ಹಳ್ಳಿಯ ವಿವಿಧ ಮತದಾನ ಕೇಂದ್ರಗಳಿಗೆ ಚುನಾವಣಾ ಅಧಿಕಾರಿ ಹಾಗೂ ವಿವಿಧ ಸಿಬ್ಬಂದಿಗಳೊಂದಿಗೆ ಸಮವಸ್ತ್ರ ತೊಟ್ಟು ಲಾಠಿ ಹಿಡಿದು ಸಾಗಿದ್ದು.

ಹಿಂದಿನ ದಿನವೇ, ಅಲ್ಲಿನ ಸರಕಾರಿ ಶಾಲೆಗಲ್ಲಿ ರಾತ್ರಿ ವಾಸ್ತವ್ಯ ಹಾಗೂ ಮತದಾನದ ಸಲಕರಣೆ ಹಾಗೂ ದಾಖಲೆಗಳಿಗೆ ಕಾವಲು ಕಾಯುವ ಡ್ಯೂಟಿ ಲಭಿ
ಸಿತ್ತು. ಆ ವೇಳೆ ನನಗೆ ಕುಂದಾಪುರದ ನಗರದ ಪಕ್ಕದ ‘ಖಾರ್ವಿಕೇರಿ’ ಎಂಬ ಬಡಾವಣೆಯಲ್ಲಿ ಡ್ಯೂಟಿ ಲಭಿಸಿತ್ತು. ಈ ಬಡಾವಣೆಯಲ್ಲಿ ಮೂಲತಃ ಖಾರ್ವಿಗಳೆಂಬ ಮೀನುಗಾರರು ವಾಸ್ತವ್ಯ ಮಾಡಿದ್ದು ಅವರೆಲ್ಲಾ ಸದಾ ಒಂದಲ್ಲ ಒಂದು ಗಲಾಟೆ, ದೊಂಬಿಗಳಲ್ಲಿ ತೊಡಗುವ ಪ್ರತೀತಿಯಿತ್ತು. ಕೆಲವು ತಿಂಗಳ ಹಿಂದೆ ಅಲ್ಲಿ ಅಣ್ಣು ಖಾರ್ವಿ ಎಂಬ ವ್ಯಕ್ತಿಯ ಆಕಸ್ಮಿಕ ಮರಣ ಸ್ಥಳೀಯ ಪೋಲಿಸ್ ಠಾಣೆಯಲ್ಲಿಯೇ ಬಂಧಿಸಿರುವಾಗ ಆಗಿದ್ದು- ಊರಿನಲ್ಲಿ ತುಂಬಾ ಕೊಲಾಹಲ ಉಂಟುಮಾಡಿತ್ತು.

ಹೇಳಿಕೇಳಿ ಖಾರ್ವಿಗಳಿಗೆ ಪೋಲಿಸರು ಅಂದರೆ ತೀರಾ ಸಿಟ್ಟು ಹಾಗೂ ಜಿಗುಪ್ಸೆ ಬಂದಿತ್ತು. ಹೀಗಾಗಿ, ಅಂದು ಬೆಳಗ್ಗೆ ನಾವೆಲ್ಲಾ ಚುನಾವಣೆಯ ಕರ್ತವ್ಯಕ್ಕೆ ಸಿದ್ದರಾಗಿ ನಿಂತರೆ ನಮಗೆಲ್ಲಾ ಯಾವಾಗ ಸಂಜೆ ಆಗಿ ನಮ್ಮೆಲ್ಲರ ಡ್ಯೂಟಿ ಯಾವಾಗ ಮುಗಿಯುತ್ತದೆ ಎಂಬ ಚಿಂತೆ. ದೇವರ ದಯದಿಂದ ಅಲ್ಲಿಯವರೆಗೆ ಎಲ್ಲವೂ ಶಾಂತವಾಗಿ ಕಳೆಯುವುದು ಎಂದು ಕೊಂಡಿದ್ದರೆ, ೧೨ ಘಂಟೆಗೆ ಸರಿಯಾಗಿ ನಾವು ಭಯ ನಿರೀಕ್ಷೆಮಾಡಿದ ಪ್ರಸಂಗವೊಂದು ನಡೆದೇ ಹೊಯಿತು!

ಮುಸ್ಲಿಂ ಮಹಿಳೆಯೊಬ್ಬರು ಮತದಾನಗಟ್ಟೆಗೆ ಚೀಟಿ ಪಡೆದು ಸಾಗುವ ವೇಳೆ ಹಿರಿಯೊರ್ವರು ಮತದಾನದ ಕಟ್ಟೆಯ ಒಳಗಿನ ಆವರಣದಿಂದ ಸಾಗಿ ಆಕೆಗೆ ದಾರಿತೋರಿಸಿದ ಒಂದು ಸಣ್ಣ ಪ್ರಸಂಗ. ನೋಡಿ, ಅದೇ ಇವರಿಗೆ ಸಾಕಾಗಿ ಹೋಯಿತು. ಪಕ್ಕದಲ್ಲಿದ್ದ ರಾಜಕೀಯ ಪಕ್ಷದ ಏಜೆಂಟ್ ಗುಡಾರದಿಂದ ಆಗಮಿಸಿದ ಕೆಲವೊಂದು ಯುವಕರು ಆಕ್ಷೇಪಣೆ ಮಾಡುತ್ತಾ ಗೊಂದಲವನ್ನು ಆರಂಭಿಸಿದರು. ನನ್ನ ಜತೆಯಲಿದ್ದ ಪೋಲಿಸ್ ಕಾನ್ಸ್‌ಟೇಬಲ್ ಗೌಡ ಕೂಡಲೇ ಅವರನ್ನು ಸಮಾಧಾನಿಸಲು ಪ್ರಯತ್ನಿಸಿದರೂ ಶಾಂತವಾಗಲಿಲ್ಲ. ತೀವ್ರವಾಗಿ ಅವರ ಪ್ರತಿಭಟನೆಯ ಭರ ಮುಂದುವರಿಯಿತು. ಆಗಿನ್ನೂ ಮೊಬೈಲ್ ಬಿಡಿ, ಆ ಶಾಲೆಯಲ್ಲಿ ಫೋನ್ ಕೂಡಾ ಇರಲಿಲ್ಲ.

ಆಗಾಗ್ಗೆ ಬಂದು ಹೋಗಬೇಕಿದ್ದ ಗಸ್ತು ವಾಹನದ ಪತ್ತೆಯಿಲ್ಲ. ಆ ಸಮಯದಲ್ಲಿ ವಾಕಿಟಾಕಿ ಸಾಧನವೂ ಕಂಡುಬರಲಿಲ್ಲ. ನನಗೂ ಜೀವಮಾನದ ಅತ್ಯಂತ ಕಟ್ಟೆಚ್ಚರದ ಕ್ಷಣಗಳು ಎಂದು ಭಾಸವಾಗಿ ಹೇಗೆ ವರ್ತಿಸಲಿ ಎಂಬ ಚಿಂತೆ. ಪೋಲಿಸ್ ಸಿಬ್ಬಂದಿ ಗೌಡರಿಗೆ ವಿನಂತಿಸಿದೆ. ‘ಏನ್ರೀ… ಏನು ಮಾಡು ತ್ತೀರಿ? ನೀವು ಲಾಠಿ ಹಿಡಿದು ಮುಂದೆ ಹೋಗಿ’ ಎಂದೆ. ಅದಕ್ಕೆ ಉತ್ತರವಾಗಿ ಗೌಡರು ಪ್ರತಿಕ್ರಿಯಿಸಿದನ್ನು ಕೇಳಿ ನನ್ನ ಜಂಘಾಬಲ ಕುಸಿದು ಹೋಯಿತು.

‘ಸರ್, ಈ ಅಣ್ಣು ಖಾರ್ವಿ ಪ್ರಸಂಗದಿಂದ ಪೋಲಿಸರಿಗೆ ಇಲ್ಲಿ ಮರ್ಯಾದೆ ಇಲ್ಲದಂತಾಗಿದೆ. ನೀವು ನಾಗರಿಕರು, ಅಲ್ಲದೆ ಈ ಊರಿನ ಹೆಣ್ಣನ್ನು ವಿವಾಹ ವಾಗಿ ಒಂದು ಸಂಬಂಧ ಇದ್ದವರು. ನೀವೇ ಮಾತಾಡಿ ನೋಡಿ ಸರ್…’ ಎಂದರು. ನನಗಾದರೂ ಒಂದು ದೊಡ್ಡ ಉದ್ರಿಕ್ತ ಗುಂಪನ್ನು ಎದುರು ಹಾಕಿ ಕೊಳ್ಳುವುದು ಪ್ರಥಮ ಅನುಭವ. ಆಗಲೇ ನೂರು, ಇನ್ನೂರು ಜನ ಓಡುತ್ತಾ ಬಂದು ಜಮಾಯಿಸಿದ್ದರು ಏನೇ ಆಗಲಿ ಬಂದುದನ್ನು ನೋಡೋಣ ಎಂದು ಎಲ್ಲಾ ಧೈರ್ಯವನ್ನು ತಂದುಕೊಂಡು ಮುಂದೆ ಬಂದು, “ನೋಡ್ರಪ್ಪಾ ಒಂದ್ನಿಮಿಷ ನನ್ನ ಮಾತುಕೇಳಿ…” ಎಂದು ಕೈಮುಗಿದು ಕೇಳಿಕೊಂಡೆ. ಇದೊಂದು ಸಣ್ಣ ಘಟನೆ.

ಇಲ್ಲಿ ಹಿರಿಯರೊಬ್ಬರು ಮಹಿಳೆಗೆ ಸಹಾಯ ಮಾಡಲು ಅಲ್ಲಿವರೆಗೆ ಸಾಗಿ ಹಿಂದೆ ಬಂದಿದ್ದಾರೆ. ವಿಶೇಷವಾಗಿ ಯಾವುದೇ, ಪ್ರಮಾದ ಅಥವಾ ಯಾರಿಗೂ ಅನ್ಯಾಯ ಆಗಿಲ್ಲ. ದಯಮಾಡಿ ವೃಥಾ ಹೀಗೆ ಮಾಡಬೇಡಿ, ನೋಡಿ ನಾನು ಖಾಕಿ ಹಾಕಿಕೊಂಡು ಬಂದಿರುವ ಓರ್ವ ಬ್ಯಾಂಕ್ ಅಧಿಕಾರಿ, ಒಂದು ಕರ್ತವ್ಯದ ಉದ್ದೇಶದಿಂದ ಬಂದಿದ್ದೇನೆ. ಅಲ್ಲದೆ ನಿಮ್ಮ ಊರಿನ ಅಳಿಯ. ಪಕ್ಕದ ಗ್ರಾಮದ ಹೆಣ್ಣು ಮಗಳನ್ನು ವಿವಾಹವಾಗಿದ್ದೇನೆ. ನಾನು ನಿಮ್ಮವನೇ, ನನ್ನ ಮಾತು ಕೇಳಿ. ದಯಮಾಡಿ ಎಲ್ಲರೂ ಹಿಂದೆ ಸರಿಯಿರಿ, ದೂರ ಸಾಗಿರಿ, ಗಲಾಟೆ ಮಾಡದಿರಿ, ನೀವು ಇಲ್ಲಿ ಏನಾದರೂ ಹಿಂಸೆ ಮಾಡಿದರೆ ನಿಮ್ಮೂರಿನ ಹುಡುಗನಿಗೆ ತೊಂದರೆ ಮಾಡಿದಂತೆಯೇ ಸರಿ. ಇಷ್ಟಾಗಿಯೂ ನೀವು ಕೇಳದಿದ್ದರೆ ಬನ್ನಿ ನನಗೆ ಹೊಡೆಯಿರಿ, ನಾನು ಏಟು ತಿನ್ನಲು ಸಿದ್ಧ” ಎಂದೆ.

ಏನು ಚಮತ್ಕಾರ ನಡೆಯಿತೋ ತಿಳಿಯದು. ಅವರೊಳಗೆ ಸಣ್ಣ ಮಾತುಕಥೆ ನಡೆಸಿದ ಬಳಿಕ, “ಅಗಲಿ ಸರ್, ನೀವು ನಮ್ಮ ಊರಿಗೆ ಸಂಬಂಧಪಟ್ಟವರು. ಅನ್ಯಾಯ ಮಾಡಲಾರಿರಿ ಎಂಬ ಧೈರ್ಯದಿಂದ ಹಿಂದೆ ಹೋಗುತ್ತೇವೆ. ಆದರೆ ಆ ಪೋಲಿಸಪ್ಪನನ್ನು ಕಂಡು ನಾವು ಹೋಗುತ್ತಿಲ್ಲ…” ಎಂದಾಗಲೇ ನಿಟ್ಟುಸಿರು ಬಿಟ್ಟದ್ದು. ಕೊನೆಗೆ ಗುಂಪು ಚದುರಿ ಹೋಯಿತು, ಎಲ್ಲವೂ ತಿಳಿಯಾಯಿತು. ಎಲ್ಲರ ಮುಖದಲ್ಲೂ ಸಮಾಧಾನದ ಛಾಯೆ ಕಾಣಿ ಸಿತು. ಈ ವಾರ್ತೆ ಸ್ಥಳೀಯ ಡಿವೈಎಸ್‌ಪಿ ಮ್ಯಾಗೇರಿ ಸಾಹೇಬರಿಗೆ ತಲುಪಿತು. ಕೂಡಲೇ ಸಂಜೆ ವೇಳೆಗೆ ಆಫೀಸ್‌ಗೆ ಕರೆಯಿಸಿಕೊಂಡು, ಕಾಫಿ ಕುಡಿಸಿ, ಸತ್ಕರಿಸಿ ಧನ್ಯವಾದ ಹೇಳಿದರು.

ಮರುದಿನದಿಂದ ನನ್ನನ್ನು ಹೊರಗೆ ಡ್ಯೂಟಿಗೆ ಹೋಗದೆ ಅವರ ಕಛೇರಿಯಲ್ಲಿಯೇ ಇದ್ದು, ಅವರೊಂದಿಗೆ ಗಸ್ತು ಹೊಡೆಯುವ ಕಾರ್ಯಕ್ಕೆ ಸೇರಿಕೊಳ್ಳಲು ಹೇಳಿದರು. ನಾನು, “ಇದು ಸರಿ ಅಲ್ಲ ಸರ್, ನನ್ನನ್ನು ಉಳಿದವರಂತೆ ತಿಳಿಯಿರಿ. ಹೆಚ್ಚಿನ ರಿಯಾಯಿತಿ ಮಾಡದಿರಿ” ಎಂದು ಕೇಳಿಕೊಂಡರೂ ಅವರು ಕೇಳಲಿಲ್ಲ. ಆದ್ದರಿಂದ ಮರುದಿನ ಅವರ ಆಜ್ಞೆಯಂತೆ ಅವರ ಕಚೇರಿಯಿಂದಲೇ ಕರ್ತವ್ಯ ನಿರ್ವಹಿಸುವುದು ಅನಿವಾರ್ಯವಾಯಿತು.

(ಲೇಖಕರು : ಎಡಿಎ ಮತ್ತು ಡಿಆರ್‌ಡಿಒ ಇಲಾಖೆಯ
ನಿವೃತ್ತ ಸಾರ್ವಜನಿಕ ಅಧಿಕಾರಿ)