ಕರಾಚಿ: ಮುಂಬರುವ ಟಿ20 ವಿಶ್ವಕಪ್ಗೆ ತಂಡ ಪ್ರಕಟಿಸಲು ಮೇ 1 ಅಂತಿಮ ದಿನವಾಗಿದ್ದರೂ ಕೂಡ ಪಾಕ್ ಇದುವರೆಗೆ ತಂಡವನ್ನು ಪ್ರಕಟಿಸಿಲ್ಲ.
ಈಗಾಗಲೇ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್ ಸೇರಿ ಹಲವು ದೇಶಗಳು ತಮ್ಮ ತಂಡವನ್ನು ಪ್ರಕಟಿಸಿದೆ.
ಕೆಲವು ಪ್ರಮುಖ ಆಟಗಾರರು ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಮೇ 23 ಅಥವಾ 24ರ ವೇಳೆ ತಂಡವನ್ನು ಪ್ರಕಟಿಸುವುದು ಪಿಸಿಬಿ ಯೋಜನೆಯಾಗಿದೆ.
ಪ್ರಮುಖ ಟಿ20 ಆಟಗಾರರಾದ ಮೊಹಮ್ಮದ್ ರಿಜ್ವಾನ್, ಆಜಂ ಖಾನ್, ಇರ್ಫಾನ್ ಖಾನ್ ನಿಯಾಜಿ ಮತ್ತು ಹ್ಯಾರಿಸ್ ರೌಫ್ ಅವರು ಫಿಟ್ನೆಸ್ ಹೊಂದಿಲ್ಲ. ಹೀಗಾಗಿ ಇವರನ್ನು ಮುಂಬರುವ ಐರ್ಲೆಂಡ್, ಇಂಗ್ಲೆಂಡ್ ಸರಣಿಗಳಲ್ಲಿ ಆಡಿಸಿ ನೋಡುವುದು ಪಾಕ್ನ ಉದ್ದೇಶವಾಗಿದೆ.
ಮೇ 24 ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಲು ಅಂತಿಮ ದಿನವಾಗಿದೆ.
ಭಾರತ ಮತ್ತು ಪಾಕಿಸ್ತಾನ ತಂಡಗಳು ಜೂನ್ 9ರಂದು ನಡೆಯುವ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ನ್ಯೂಯಾರ್ಕ್ನಲ್ಲಿ ತಾತ್ಕಾಲಿಕವಾಗಿ ತಲೆ ಎತ್ತಿದ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇತ್ತಂಡಗಳ ನಡುವಣ ಪಂದ್ಯ ನಡೆಯಲಿದೆ.
34 ಸಾವಿರ ಪ್ರೇಕ್ಷಕರು ಕೂರುವಷ್ಟು ಸಾಮರ್ಥ್ಯದ ಸ್ಟೇಡಿಯಂ ಇದಾಗಿದ್ದು. ಭಾರತ-ಪಾಕ್ ಪಂದ್ಯಕ್ಕಾಗಿಯೇ ಇದನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗಿದೆ. ಈ ಪ್ರದೇಶದಲ್ಲಿ 7,11,000 ಭಾರತೀಯ ಮತ್ತು ಸುಮಾರು 1,00,000 ಪಾಕಿಸ್ತಾನ ಮೂಲದ ಜನರು ವಾಸಿಸುತ್ತಿದ್ದಾರೆ ಎನ್ನಲಾಗಿದೆ.
ನ್ಯೂಯಾರ್ಕ್ ಮತ್ತು ನವದೆಹಲಿ ನಡುವೆ 10.5 ಗಂಟೆಗಳ ಸಮಯದ ವ್ಯತ್ಯಾಸವಿರುವುದರಿಂದ, ಸಂಘಟಕರು ಕೆಲವು ಪಂದ್ಯಗಳನ್ನು, ವಿಶೇಷವಾಗಿ ಭಾರತವನ್ನು ಒಳಗೊಂಡ ಪಂದ್ಯಗಳನ್ನು ಬೆಳಗ್ಗೆ ಪ್ರಾರಂಭಿಸಲು ಒಪ್ಪಿಕೊಂಡಿದ್ದಾರೆ. ಜೂನ್ 9 ಕೂಡ ಭಾನುವಾರವಾಗಿದೆ. ಅಮೆರಿಕದಲ್ಲಿ ರಾತ್ರಿ ಪಂದ್ಯ ಆಯೋಜಿಸಿದರೆ, ಭಾರತದಲ್ಲಿ ಸೋಮವಾರ ಮುಂಜಾನೆ ಪಂದ್ಯ ಪ್ರಸಾರವಾಗುತ್ತದೆ.