Saturday, 14th December 2024

ನಾಳೆ ರಾತ್ರಿಯಿಂದ ಆಂಬ್ಯುಲೆನ್ಸ್ ಸೇವೆ ಬಂದ್ ಮಾಡಿ ಮುಷ್ಕರ

ಬೆಂಗಳೂರು: 108 ಆಂಬ್ಯುಲೆನ್ಸ್‌ ಸಿಬ್ಬಂದಿಗೆ ಮೂರು ತಿಂಗಳ ವೇತನ ಪಾವತಿಯಾಗದ ಕಾರಣಕ್ಕೆ ನಾಳೆ ಮೇ.6ರ ರಾತ್ರಿ 8 ಗಂಟೆಯಿಂದ ರಾಜ್ಯ ವ್ಯಾಪ್ತಿ ಆಂಬ್ಯುಲೆನ್ಸ್ ಸೇವೆ ಬಂದ್ ಮಾಡಿ ಮುಷ್ಕರ ಮಾಡುತ್ತಿದ್ದಾರೆ.

ಜಿವಿಕೆ ಸಂಸ್ಥೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಸಿಬ್ಬಂದಿ ತಿರುಗಿ ಬಿದ್ದಿದ್ದಾರೆ.

ಮೂರು ತಿಂಗಳಿಂದ ವೇತನ ಸಿಗದೆ 108 ಸಿಬ್ಬಂದಿಗಳಿಗೆ ಜೀವನ ನಡೆಸಲು ಕಷ್ಟವಾಗುತ್ತಿದ್ದು, ಒಂದು ಕಡೆ ಮೂರು ತಿಂಗಳಿಂದ ಸಂಬಳವಿಲ್ಲ. ಮತ್ತೊಂದು ಕಡೆ ಜಿವಿಕೆ ಸಂಸ್ಥೆ ವೇತನ ಕಡಿತಗೊಳಿಸಿದೆ ಎಂದು ಕಿಡಿಕಾರಿದ್ದಾರೆ.

ಈ ಎಲ್ಲ ಕಾರಣಗಳಿಗೆ ಸೋಮವಾರ ರಾತ್ರಿಯಿಂದ ಆಂಬ್ಯುಲೆನ್ಸ್‌ ಓಡಾಟವನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಕಳೆದ ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳ ವೇತನ ಬಾಕಿ ಇದೆ. ಜಿವಿಕೆ ಸಂಸ್ಥೆ ಈಗಾಗಲೇ ಡಿಸೆಂಬರ್, ಜನವರಿ ತಿಂಗಳ ವೇತನವನ್ನು 30 ಸಾವಿರ ರೂ. ಕಡಿತ ಮಾಡಿ, ಕೇವಲ 13 ಸಾವಿರ ರೂ. ವೇತನ ನೀಡುತ್ತಿದೆ.

ನಾಳೆ ಸಂಜೆಯೊಳಗೆ ವೇತನ ಪಾವತಿ ಮಾಡುವಂತೆ ಆರೋಗ್ಯ ಇಲಾಖೆಗೆ ಮನವಿ ಮಾಡಲಾಗಿದೆ. ಕಡಿತ ಮಾಡಿದ ವೇತನವನ್ನು ಬಿಡುಗಡೆ ಮಾಡಬೇಕು. ಒಂದು ವೇಳೆ ವೇತನ ಪಾವತಿ ಮಾಡದಿದ್ದರೆ ಮುಷ್ಕರದ ಎಚ್ಚರಿಕೆಯನ್ನು ಕರ್ನಾಟಕ ರಾಜ್ಯ ಆರೋಗ್ಯ ಕವಚ 108 ನೌಕರರ ಸಂಘ ನೀಡಿದೆ.

ರಾಜ್ಯದಲ್ಲಿ ಒಟ್ಟು 711 ಆಂಬ್ಯುಲೆನ್ಸ್‌ಗಳು ಕಾರ್ಯ ನಿರ್ವಹಿಸುತ್ತಿದೆ. ರೋಗಿಗಳಿಗೆ ತೊಂದರೆ ಆದರೆ ಸರ್ಕಾರವೇ ನೇರ ಹೊಣೆ ಎಂದು ಆಂಬ್ಯುಲೆನ್ಸ್‌ ನೌಕರರ ಸಂಘದ ಉಪಾಧ್ಯಕ್ಷ ದಯಾನಂದ ತಿಳಿಸಿದ್ದಾರೆ.