Friday, 13th December 2024

ಚುನಾವಣೆಗಳು ಉತ್ತಮ ಹವಾಮಾನದಲ್ಲೇ ನಡೆಯಲಿ

ವಿಶ್ಲೇಷಣೆ

ರಾಮನಾಥ ಕೋವಿಂದ್

ನಿಮಗೆಲ್ಲರಿಗೂ ಗೊತ್ತಿರುವಂತೆ ನಾವೀಗ ಸಾರ್ವತ್ರಿಕ ಚುನಾವಣೆಯ ಮಧ್ಯೆ ಇದ್ದೇವೆ. ಇದು ಒಂದಕ್ಕಿಂತ ಹೆಚ್ಚು ಕಾರಣಗಳಿಗಾಗಿ ನಿರ್ಣಾಯಕ ಪ್ರಾಮುಖ್ಯದ ಒಂದು ಸಂದರ್ಭವಾಗಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಈ ಬಾರಿ ೯೬.೮೮ ಕೋಟಿಯಷ್ಟು ನಾಗರಿಕರು ಮತದಾನದ ಅರ್ಹತೆ ಹೊಂದಿದ್ದಾರೆ.

ಪ್ರತಿಯೊಂದು ಮತವೂ, ಅದು ಯಾವುದೇ ಅಭ್ಯರ್ಥಿಗೆ ಚಲಾವಣೆಯಾಗಲಿ, ಪ್ರಜಾಪ್ರಭುತ್ವಕ್ಕೆ ಸಲ್ಲುವ ಮತವೇ ಆಗಿರುತ್ತದೆ ಎಂಬುದನ್ನು ಮರೆಯಲಾಗದು. ಈ ವರ್ಷ, ವಿಶ್ವಾದ್ಯಂತದ ಗಣನೀಯ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಚುನಾವಣೆಗಳು ನಡೆಯುತ್ತಿದ್ದು, ಅಂಥ ಪ್ರತಿಯೊಂದು ಚುನಾವಣೆಯಫಲಿತಾಂಶವೂ ವಿಶ್ವದ ವಿಭಿನ್ನ ಘಟನೆಗಳನ್ನು ಬಗೆಬಗೆಯಾಗಿ ಪ್ರಭಾವಿಸಲಿದೆ ಎಂಬುದಂತೂ ನಿಜ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಬೇರುಗಳು ಮತ್ತಷ್ಟು ಆಳಕ್ಕಿಳಿದು ಗಟ್ಟಿಯಾ ಗಲು ಭಾರತದಲ್ಲಿ ಪ್ರಸ್ತುತ ನಡೆಯುತ್ತಿರುವ ಚುನಾವಣೆಗಳು ಮಹತ್ತರ ಕೊಡುಗೆಯನ್ನು ನೀಡುತ್ತವೆ ಎಂಬುದನ್ನೂ ತಳ್ಳಿಹಾಕಲಾಗದು.

ಜನರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವಷ್ಟರ ಮಟ್ಟಿಗೆ ನಮ್ಮ ದೇಶದ ಚುನಾವಣೆಗಳನ್ನ ಕಾರ್ಯಸಾಧ್ಯವಾಗಿಸಬೇಕಿರುವುದು ನಿಸ್ಸಂಶಯ ವಾಗಿ ಈ ಕ್ಷಣದ ಅನಿವಾರ್ಯತೆಯಾಗಿದೆ. ಈ ವಿಷಯದಲ್ಲಿ ಭಾರತದ ಚುನಾವಣಾ ಆಯೋಗದ ಬೆನ್ನು ತಟ್ಟಲೇಬೇಕು; ಕಾರಣ, ಮತದಾರ ರಿಗೆ ಸುಲಭ ಸಾಧ್ಯವಾಗುವ ರೀತಿಯಲ್ಲಿ, ಹೆಚ್ಚೆಚ್ಚು ಜನರು ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತಾಗುವಲ್ಲಿ ಅದು ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿಸಿ ಕೊಂಡಿದೆ, ಯಥೋಚಿತ ವ್ಯವಸ್ಥೆಗಳನ್ನು ಮಾಡಿದೆ. ಅಷ್ಟೇ ಏಕೆ, ತಲುಪುವುದು ಕಷ್ಟ ಎನಿಸಿರುವ ದೂರದ ಸ್ಥಳಗಳಲ್ಲೂ ಮತದಾನ ಪ್ರಕ್ರಿಯೆಯು ಸುಲಲಿತವಾಗಿ ನಡೆಯುವಂತೆ ಆಯೋಗವು ಮಾಡುತ್ತಿರುವ ಪ್ರಯತ್ನಗಳಿಗೆ ಅಭಿನಂದನೆ ಸಲ್ಲಿಸಲೇಬೇಕು.

‘ಮತದಾನವು ನಾಗರಿಕರ ಹಕ್ಕೂ ಹೌದು, ಕರ್ತವ್ಯವೂ ಹೌದು’ ಎಂಬ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಾಗರಿಕ ಸಮಾಜದ ಸಾಕಷ್ಟು ಸಂಘ-ಸಂಸ್ಥೆಗಳು ಹಾಗೂ ಸುದ್ದಿ ಮಾಧ್ಯಮಗಳು ಗಣನೀಯ ಪ್ರಮಾಣದಲ್ಲಿ ಪ್ರಚಾರಾಂದೋಲನದಲ್ಲಿ ತೊಡಗಿವೆ. ಈ ಕರೆಗೆ ಸಕಾರಾತ್ಮಕವಾಗಿಯೇ ಸ್ಪಂದಿಸಿರುವ ಮತದಾರರು, ಚುನಾವಣೆಯ ಮೊದಲ ಎರಡು ಹಂತಗಳಲ್ಲಿ ತಮ್ಮ  ಹಕ್ಕನ್ನು ಹುರುಪು-ಹುಮ್ಮಸ್ಸಿನಿಂದಲೇ ಚಲಾಯಿಸಿದ್ದಾರೆ. ಇದುವರೆಗೆ ಕಂಡುಬಂದಿರುವ ಪ್ರವೃತ್ತಿಯು ತೃಪ್ತಿದಾ ಯಕವಾಗಿದೆ ಎನ್ನಬೇಕು. ಆದರೆ, ಶೇಕಡಾವಾರು ಮತದಾನದ ಅಂಕಿ-ಅಂಶಗಳು ಚರ್ಚೆಗೆ ಬಂದಾಗಲೆಲ್ಲಾ, ಚುನಾವಣಾ ವೀಕ್ಷಕರು ಮತ್ತು ವಿಶ್ಲೇಷಕರು ಒಂದು ದೊಡ್ಡ ಸವಾಲನ್ನು ಉಲ್ಲೇಖಿಸುವುದು ಸಾಮಾನ್ಯವಾಗಿದೆ.

ಅದುವೇ- ಪ್ರಸ್ತುತ ಕಾಣಬರುತ್ತಿರುವ ಅತಿರೇಕದ ಧಗೆಯ ವಾತಾವರಣ. ಇಂಥ ರಣರಣ ಬಿಸಿಲಿನ ನಡುವೆಯೂ ಮತದಾರರು ಮನೆಯಿಂದ ಹೊರ ಬಿದ್ದು ಉತ್ತಮ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಂಡಿದ್ದಾರೆ; ಒಂದು ವೇಳೆ, ಇಷ್ಟೊಂದು ಅಸಹನೀಯವಲ್ಲದ ಹವಾಮಾನದಲ್ಲಿ ಚುನಾವಣೆಗಳು ನಡೆಯು ವಂತಾಗಿದ್ದಿದ್ದರೆ, ಈ ಪ್ರಜಾಸತ್ತೀಯ ಪ್ರಕ್ರಿಯೆಯಲ್ಲಿನ ಅವರ ಪಾಲ್ಗೊಳ್ಳುವಿಕೆ ಇನ್ನಷ್ಟು ಹೆಚ್ಚಾಗುತ್ತಿತ್ತು. ಆದರೆ, ಈಗಿನ ಕಾರ್ಯಯೋಜನೆ ಯಲ್ಲಿ ಹವಾಮಾನ ಎಂಬುದು ಒಂದು ಅನಿವಾರ್ಯ ಅಥವಾ ತಪ್ಪಿಸಿಕೊಳ್ಳಲಾಗದ ಅಂಶವಾಗಿಬಿಟ್ಟಿದೆ. ೧೭ನೇ ಲೋಕಸಭೆಯ ಕಾರ್ಯಾವಧಿ  (ಜೂನ್ ೧೬) ಮುಗಿಯುವುದಕ್ಕೂ ಮುನ್ನ ಫಲಿತಾಂಶಗಳು ಹೊರಹೊಮ್ಮುವ ರೀತಿಯಲ್ಲಿ ನಮ್ಮ ಚುನಾವಣಾ ಕಾರ್ಯಸೂಚಿಯನ್ನು ಸಜ್ಜುಗೊಳಿಸ ಬೇಕಾದ ಅಗತ್ಯವಿತ್ತು. ಚುನಾವಣಾ ಸಿಬ್ಬಂದಿ/ಅಽಕಾರಿಗಳ ಸಾಗಣೆ, ವ್ಯವಸ್ಥಾಪನೆ ಮತ್ತು ಭದ್ರತಾ ಅವಶ್ಯಕತೆಗಳನ್ನು ಪರಿಗಣಿಸಿ ಮತದಾನ ಪ್ರಕ್ರಿಯೆ ಯನ್ನು ಹಲವಾರು ವಾರಗಳವರೆಗೆ ವಿಸ್ತರಿಸಬೇಕಾದ ಅಗತ್ಯ ಎದುರಾಯಿತು. ಈ ಎರಡು ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿರುವ ಚುನಾವಣಾ ಕಾರ್ಯಸೂಚಿಯು ಏಪ್ರಿಲ್‌ನಿಂದ ಶುರುವಾಗಿ ಜೂನ್ ಮೊದಲ ವಾರದಲ್ಲಿ ಸಂಪನ್ನಗೊಳ್ಳುವಂತಿರುವುದು ನಿಮಗೆ ಗೊತ್ತೇ ಇದೆ.

ಆದರೆ, ಈ ಅವಽಯಲ್ಲಿನ ಸೂಕ್ಷ್ಮ ಸಂಗತಿಯೊಂದನ್ನು ಗಮನಿಸಬೇಕು. ಇದು ನಿಖರವಾಗಿ ಭಾರತದ ಬಹುತೇಕ ಪ್ರದೇಶಗಳು ಮಿತಿಮೀರಿದ ಧಗೆಯಿಂದ ಬಳಲುವ ಅವಧಿಯೇ ಆಗಿರುತ್ತದೆ. ಇದೇ ಕೊಂಚಮಟ್ಟಿಗಿನ ಆತಂಕದ ಸಂಗತಿ. ಇಲ್ಲಿ ಗಮನಿಸಬೇಕಾದುದೆಂದರೆ, ಚುನಾವಣಾ ದಿನಾಂಕಗಳನ್ನು ನಿಗದಿಪಡಿಸು ವಾಗ ಭಾರತದ ಚುನಾವಣಾ ಆಯೋಗವು ಹವಾಮಾನ ಸಂಬಂಽತ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ; ಆದರೆ ಅದು ಜೂನ್ ೧೬ರ ಅಂತಿಮ ಗಡುವಿಗೆ ಅಂಟಿಕೊಳ್ಳಬೇಕಾಗಿ ಬಂದುದರಿಂದ ಜನರು ಮತದಾನದ ವೇಳೆ ಬಿಸಿಲಿನ ಧಗೆಗೆ ಒಡ್ಡಿಕೊಳ್ಳುವಂತಾಗಿದೆ.

ದೇಶದ ಅನೇಕ ಜಿಲ್ಲೆಗಳಲ್ಲಿ ಏಪ್ರಿಲ್ ಅವಽಯಲ್ಲಿ ಶಾಖದ ಅಲೆಗಳು ಏಳುವುದರ ಕುರಿತಾಗಿ ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ಕೊಟ್ಟಿದ್ದರ ಜತೆಗೆ ಸಾಕಷ್ಟು ಎಚ್ಚರಿಕೆಗಳನ್ನೂ ನೀಡಿದ್ದರಿಂದಾಗಿ ಚುನಾವಣಾ ಆಯೋಗವು ಕ್ಷಿಪ್ರ ಕ್ರಮವನ್ನು ಕೈಗೊಂಡಿತು. ಇದರ ಭಾಗವಾಗಿ, ‘ಪ್ರತಿ ಮತದಾನದ ಹಂತಕ್ಕೆ ಐದು ದಿನಗಳು ಪೂರ್ವಭಾವಿಯಾಗಿ ಈ ಶಾಖದ ಅಲೆಗಳು ಮತ್ತು ಆರ್ದ್ರತೆಯ ಪ್ರಭಾವವನ್ನು ಅವಲೋಕಿಸಲು ಮತ್ತು ಒಂದೊಮ್ಮೆ ಏನಾದರೂ ಕಳವಳಕಾರಿ ಬೆಳವಣಿಗೆಗಳಾದಲ್ಲಿ ಅದನ್ನು ತಗ್ಗಿಸುವ ಉಪಕ್ರಮಗಳ ಕುರಿತು ಮಾಹಿತಿ ನೀಡಲು’ ಒಂದು ಕಾರ್ಯಪಡೆ ಯನ್ನು ರೂಪಿಸಲು ಆಯೋಗ ನಿರ್ಧರಿಸಿತು.

ಚುನಾವಣಾ ಆಯೋಗ, ಭಾರತೀಯ ಹವಾಮಾನ ಇಲಾಖೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇವೇ ಮೊದಲಾದವುಗಳ ಅಧಿಕಾರಿಗಳು ಈ ಕಾರ್ಯಪಡೆಯ ಭಾಗವಾಗಿದ್ದರು. ಒಂದು ವೇಳೆ, ಶಾಖದ ಅಲೆಗಳ ತೀವ್ರತೆಯು ಚುನಾವಣಾ
ಕಾರ್ಯಾಚರಣೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂಥ ಸಂದರ್ಭ ಎದುರಾದಲ್ಲಿ ಸನ್ನದ್ಧರಾಗಿದ್ದು ನೆರವು ನೀಡುವಂತಾಗಲು ಆಯಾ ರಾಜ್ಯ ಗಳಲ್ಲಿನ ಆರೋಗ್ಯಾಧಿಕಾರಿಗಳಿಗೆ ಅವಶ್ಯಕ ಸೂಚನೆಗಳನ್ನು ನೀಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ನಿರ್ದೇಶಿಸಲಾಗಿತ್ತು. ಮಾತ್ರವಲ್ಲ, ಮತದಾನ ಕೇಂದ್ರಗಳಲ್ಲಿ ನೆರಳಿನ ಆಸರೆ, ಕುಡಿಯುವ ನೀರು ಹಾಗೂ ವಿದ್ಯುತ್ ಪಂಖಗಳ ವ್ಯವಸ್ಥೆ ಮಾಡುವಂತೆಯೂ ರಾಜ್ಯ ಮಟ್ಟದ ಪ್ರಾಧಿಕಾರಗಳಿಗೆ ಚುನಾವಣಾ ಆಯೋಗವು ಸೂಚನೆ ನೀಡಿತ್ತು.

ಈ ಉಪಕ್ರಮಗಳು ಮತದಾರರಿಗೆ ಕೊಂಚ ಮಟ್ಟಿಗಾದರೂ ಸಮಾಧಾನವನ್ನು ನೀಡುತ್ತವೆ ಎಂಬುದು ನನಗೆ ಖಾತ್ರಿಯಿದೆ. ಇಷ್ಟಾಗಿಯೂ ಅವು ಚುನಾವಣಾ ಪ್ರಕ್ರಿಯೆಯ ಒಂದು ಮಗ್ಗುಲನ್ನು ಮಾತ್ರವೇ ತಮ್ಮ ವ್ಯಾಪ್ತಿಗೆ ತೆಗೆದುಕೊಂಡು ಅಗತ್ಯ ನೆರವನ್ನು ನೀಡುತ್ತವೆ ಎಂಬುದನ್ನು ಮರೆಯ ಲಾಗದು. ಏಕೆಂದರೆ, ಆಯಾ ಮತಕ್ಷೇತ್ರದ ಅಭ್ಯರ್ಥಿಗಳು, ರಾಜಕೀಯ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ಚುನಾವಣಾ ಪ್ರಚಾರವನ್ನು ನಡೆಸುವುದು ಬಿರುಬಿಸಿಲಿನಲ್ಲಿ ಮತ್ತು ಧೂಳಿನ ಮಡುವಿನ ನಡುವೆ. ಹೀಗಾಗಿ, ಒಂದಷ್ಟು ಹಿರಿಯ ನಾಯಕರು ಸಾರ್ವಜನಿಕ ಸಭೆಗಳಲ್ಲಿ ಮೂರ್ಛೆ ಹೋದ ವರದಿಗಳು ಬಂದಿದ್ದು ಆಘಾತಕಾರಿಯಾಗಿದ್ದರೂ ಅವೇನೂ ಅಚ್ಚರಿ ದಾಯಕವಾಗಿರಲಿಲ್ಲ.

ಹೀಗಾದಾಗ, ತಥಾಕಥಿತ ‘ಮತದಾರರ ನಿರಾಸಕ್ತಿ’ಯು ಚುನಾವಣಾ ಪ್ರಚಾರ ಕಾರ್ಯದ ಹಂತದಲ್ಲೇ ಕಾಣಿಸಿಕೊಳ್ಳಬಹುದು. ಮತದಾನ ಕೇಂದ್ರಗಳಲ್ಲಿ ಮಾಡಲಾಗಿರುವ ವ್ಯವಸ್ಥೆಗಳು ಮತ್ತು ಕಲ್ಪಿಸಲಾಗಿರುವ ಪೂರಕ ಸೌಲಭ್ಯಗಳನ್ನು ಶ್ಲಾಸಬೇಕಾದ್ದೇ; ಆದರೆ, ಈ ಕೇಂದ್ರಗಳಿಗೆ ಬರಲು ಸುಡುಬಿಸಿಲಿನಲ್ಲಿ ಗಣನೀಯ ಅಂತರವನ್ನು ಕ್ರಮಿಸಬೇಕಾಗಿ ಬರುವ ಗ್ರಾಮೀಣ ಪ್ರದೇಶಗಳ ಮತದಾರರು, ಇಂಥ ದುಸ್ಸಾಹಸಕ್ಕೆ ಕೈಹಾಕದಿರಲು ಅಥವಾ ಮನೆಯಿಂದ ಹೊರಗೇ ಹೊರಡದಿರಲು ಬಯಸುವ ಸಾಧ್ಯತೆಯೇ ಇರುತ್ತದೆ. ಆದ್ದರಿಂದ, ಇಂಥ ಸನ್ನಿವೇಶಗಳು ಅಪವಾದಾತ್ಮಕವಾಗಿವೆ ಎನ್ನುವುದಕ್ಕಿಂತ ಹೆಚ್ಚಾಗಿ ಬಹುತೇಕ ಕಡೆ ವಾಡಿಕೆಯ ಪರಿಸ್ಥಿತಿಯೇ ಆಗಿಬಿಟ್ಟಿವೆ ಎಂಬುದನ್ನು ನಾವು ಗಮನಿಸಬೇಕು.

ಭಾರತದಲ್ಲಿ ಕಾಣಬರುವ ಬೇಸಗೆಯ ವಿಷಯದಲ್ಲಿ ಹೇಳುವುದಾದರೆ ಇಂಥದೊಂದು ಹವಾಮಾನವು ಅಸಾಮಾನ್ಯವೇನಲ್ಲ. ಉತ್ತರ ಭಾರತದ ಕೆಲವೊಂದು ಬಯಲು ಪ್ರದೇಶಗಳು, ದಕ್ಷಿಣ ಭಾರತದ ಪರ್ಯಾಯದ್ವೀಪ ಸದೃಶ ಪ್ರದೇಶಗಳು ಮತ್ತು ಕರಾವಳಿಯ ಸೀಮೆಗಳಲ್ಲಿ ಬಿರುಬೇಸಗೆಯ ತಾಪಮಾನವು ೪೦ ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚಾಗಿರುತ್ತದೆ. ಅಷ್ಟೇಕೆ, ಕೆಲವೊಂದು ಪ್ರದೇಶಗಳಲ್ಲಂತೂ ಇದು ೪೫ ಡಿಗ್ರಿಯನ್ನೂ ಮೀರುವು ದುಂಟು. ಎಲ್ಲಕ್ಕಿಂತ ಮುಖ್ಯವಾಗಿ, ಮುಂಬರುವ ವರ್ಷಗಳಲ್ಲಿ ಮತದಾನವು ಮೇ ಮತ್ತು ಜೂನ್ ತಿಂಗಳಲ್ಲಿ ನಡೆದಾಗಲೆಲ್ಲಾ, ಇದೇ ತೆರನಾದ ಅತಿರೇಕದ ಹವಾಮಾನದ ಸಮಸ್ಯೆಗಳು ಕಂಡುಬರುವುದು ಕಟ್ಟಿಟ್ಟಬುತ್ತಿ ಎನಿಸುತ್ತದೆ.

‘ಏಕಿಂಥ ಹತಾಶವಾದ?’ ಎಂದು ನಿಮಗನ್ನಿಸಬಹುದು. ಜಾಗತಿಕ ತಾಪಮಾನ ಏರಿಕೆ ಹಾಗೂ ಹವಾಮಾನದಲ್ಲಿನ ವೈಪರೀತ್ಯದಿಂದಾಗಿ ಈ ಪರಿಸ್ಥಿತಿಗಳು
ಮುಂಬರುವ ದಿನಗಳಲ್ಲಿ ಹದಗೆಡುವ ಸಾಧ್ಯತೆಗಳೇ ಹೆಚ್ಚು ಎಂಬ ಹಿನ್ನೆಲೆಯಲ್ಲಿ ಇಂಥ ಹತಾಶೆಯನ್ನು ಹೊಮ್ಮಿಸುವಂತಾಗಿದೆ. ಆದ್ದರಿಂದ, ಮತದಾರರು, ಚುನಾವಣಾ ಪ್ರಚಾರಕರು ಹಾಗೂ ಚುನಾವಣಾ ಪ್ರಕ್ರಿಯೆಗಳ ನಿರ್ವಹಣೆಯ ಹೊಣೆ ಹೊತ್ತ ಅಧಿಕಾರಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಚುನಾವಣೆಯ ಕಾಲಯೋಜನೆಯನ್ನು ಮರುಪರಿಷ್ಕರಣೆ ಮಾಡಬೇಕಿದೆ. ಈ ನಿಟ್ಟಿನ ಚರ್ಚೆಯಲ್ಲಿ ನಾವು ಕೂಡ ತೊಡಗಿಸಿಕೊಳ್ಳಬೇಕಿದೆ. ಇದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಸ್ವಾಸ್ಥ್ಯವನ್ನು ಕಾಪಾಡುವಲ್ಲಿಯೂ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

ಆದ್ದರಿಂದ, ಸಾರ್ವತ್ರಿಕ ಚುನಾವಣೆಗಳಿಗೆ ಸಂಬಂಧಿಸಿದಂತೆ ಒಂದು ಹವಾಮಾನ-ಸ್ನೇಹಿ ವೇಳಾಪಟ್ಟಿಯನ್ನು ಸಜ್ಜುಗೊಳಿಸಬೇಕು ಎಂದು ನಾವು ಪ್ರಸ್ತಾಪಿಸುವುದಕ್ಕೆ ಇದು ಸಕಾಲವಾಗಿದೆ. ಇಲ್ಲಿ ಇನ್ನೊಂದು ವಿಷಯವನ್ನು ನಾನು ಸ್ಪಷ್ಟೀಕರಿಸಲೇಬೇಕು- ಈ ವಿಷಯವು ನಾನು ಅಧ್ಯಕ್ಷನಾಗಿದ್ದ ‘ಏಕಕಾಲಿಕ ಚುನಾವಣೆ ಸಂಬಂಧಿತ ಉನ್ನತ ಮಟ್ಟದ ಸಮಿತಿ’ಯ ಉಲ್ಲೇಖದ ನಿಬಂಧನೆಗಳ ಭಾಗವಾಗಿರಲಿಲ್ಲ. ಚುನಾವಣಾ ಕಾರ್ಯಸೂಚಿ/ ವೇಳಾಪಟ್ಟಿಗೆ ಸಂಬಂಧಿಸಿ ದಂತೆ ನಾನಿಲ್ಲಿ ನೀಡಿರುವ ಸಲಹೆ-ಸೂಚನೆಗಳು, ನನ್ನ ಅಧ್ಯಕ್ಷತೆಯ ಆ ಸಮಿತಿಯು ನೀಡಿದ್ದ ಶಿಫಾರಸುಗಳಿಂದ ಪ್ರತ್ಯೇಕವಾಗಿವೆ ಮತ್ತು ವೈಯಕ್ತಿಕ ನೆಲೆ ಗಟ್ಟಿನಲ್ಲಿ ಮಾಡಿದಂಥವಾಗಿವೆ ಎಂಬುದು ನಿಮ್ಮ ಗಮನಕ್ಕೆ. ಪರಿಸರ ಸಂಬಂಧಿತ ಈ ಕಾಳಜಿಯು, ಸಾಕಷ್ಟು ಚಿಂತನ-ಮಂಥನದ ತರುವಾಯ ಪರಿಗಣಿಸಲ್ಪಟ್ಟ ಮತ್ತು ಸಾಮೂಹಿಕ ನೆಲೆಗಟ್ಟಿನ ಪ್ರತಿಸ್ಪಂದನವನ್ನು ಬಯಸುವಷ್ಟರ ಮಟ್ಟಿಗೆ ಗಂಭೀರ ಸ್ವರೂಪದ್ದಾಗಿದೆ ಎಂದು ನಾನು ಭಾವಿಸುತ್ತೇನೆ.

ಇದನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಒಂದಿಡೀ ಸಮಾಜದ ಮತ್ತು ವ್ಯವಸ್ಥೆಯ ಎಲ್ಲ ಸಹಭಾಗಿಗಳು ಒಗ್ಗೂಡಬೇಕು ಹಾಗೂ ನಮ್ಮ ಪ್ರಜಾ ಪ್ರಭುತ್ವದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಸವಾಲನ್ನು ಪರಿಹರಿಸುವ ನಿಟ್ಟಿನಲ್ಲಿ ಕೈಜೋಡಿಸಬೇಕು. ಹೀಗಾದಾಗ ಮಾತ್ರವೇ ಸರ್ವಸಮ್ಮತ ಹಾಗೂ ಕಾರ್ಯಸಾಧ್ಯ ಮಾರ್ಗವೊಂದು ಕಂಡೀತು. ಈ ದೇಶದ ಪ್ರಜ್ಞಾವಂತ ನಾಗರಿಕರು ಗರಿಷ್ಠ ಸಂಖ್ಯೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವುದಕ್ಕೆ ಅನುವು ಮಾಡಿಕೊಡುವಂಥ ಹವಾಮಾನ ಪರಿಸ್ಥಿತಿಗಳಲ್ಲಿ ಚುನಾವಣೆಗಳನ್ನು ನಡೆಸುವುದು ನಮ್ಮ ಉದ್ದೇಶವಾಗಿರಬೇಕು; ಇಂಥ ದೊಂದು ನಡೆಯಿಂದಾಗಿ ಭಾರತದ್ದು ಮಾತ್ರವಲ್ಲದೆ ವಿಶ್ವದ ವಿವಿಧ ದೇಶಗಳಲ್ಲಿ ನೆಲೆಗೊಂಡಿರುವ ಪ್ರಜಾಪ್ರಭುತ್ವದ ಉದ್ದೇಶವು ಮತ್ತಷ್ಟು ಗಟ್ಟಿಯಾಗುತ್ತದೆ, ಸಮರ್ಥವಾಗಿ ಸಾಕಾರಗೊಳ್ಳುತ್ತದೆ.

(ಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್)
(ಲೇಖಕರು ಭಾರತದ ಮಾಜಿ ರಾಷ್ಟ್ರಪತಿ)