Wednesday, 11th December 2024

ಸಿಬ್ಬಂದಿ ಕೊರತೆ: ಏರ್‌ ಇಂಡಿಯಾದ 75 ವಿಮಾನಗಳ ಹಾರಾಟ ಬಂದ್

ಮುಂಬೈ: ಸಿಬ್ಬಂದಿ ಕೊರತೆಯಿಂದಾಗಿ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನ 75 ವಿಮಾನಗಳು ಶುಕ್ರವಾರ ಹಾರಾಟ ನಡೆಸಲಿಲ್ಲ. ಸಂಸ್ಥೆ ಮತ್ತು ಸಿಬ್ಬಂದಿ ನಡುವಿನ ಜಾಟಪಟಿಯಿಂದಾಗಿ ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಭಾನುವಾರದ ಹೊತ್ತಿಗೆ ಇದು ಪರಿಹಾರವಾಗುವ ಸಾಧ್ಯತೆ ಇದೆ ಎಂದೆನ್ನಲಾಗಿದೆ.

ಹಾರಾಟ ರದ್ದತಿಯಿಂದಾಗಿ ಟಿಕೆಟ್‌ ಶುಲ್ಕದ ಜತೆಗೆ ಪ್ರಯಾಣಿಕರಿಗೆ ಪರಿಹಾರ ರೂಪದಲ್ಲಿ ನೀಡಲಾಗುತ್ತಿರುವ ಹಣದಿಂದ ಸಂಸ್ಥೆಗೆ ₹30 ಕೋಟಿ ನಷ್ಟ ಉಂಟಾಗಿದೆ’ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸಂಸ್ಥೆಯ ಕೆಲ ಸಿಬ್ಬಂದಿ ದಿಢೀರನೆ ಪ್ರತಿಭಟನೆಗೆ ಮುಂದಾಗಿದ್ದರಿಂದಾಗಿ ಮಂಗಳವಾರದಿಂದ ಸುಮಾರು 170ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿದೆ. ಇದರ ಬೆನ್ನಲ್ಲೇ 25 ಕ್ಯಾಬಿನ್‌ ಸಿಬ್ಬಂದಿಯ ವಜಾ ಆದೇಶವನ್ನು ಸಂಸ್ಥೆಯು ಗುರುವಾರ ಸಂಜೆ ಹಿಂಪಡೆದಿದೆ.

ಶನಿವಾರವೂ 45ರಿಂದ 50 ವಿಮಾನಗಳು ಹಾರಾಟ ನಡೆಸುವುದು ಬಹುತೇಕ ಅನುಮಾನ ಎಂದೆನ್ನಲಾಗಿದೆ.

ಸಿಬ್ಬಂದಿಯನ್ನು ನಡೆಸಿಕೊಳ್ಳುವಲ್ಲಿ ತಾರತಮ್ಯ ಹಾಗೂ ಸಂಸ್ಥೆಯ ನಿರ್ವಹಣೆಯಲ್ಲಿನ ಸಮಸ್ಯೆಯಿಂದಾಗಿ ಕ್ಯಾಬಿನ್ ಸಿಬ್ಬಂದಿ ಪ್ರತಿಭಟನೆ ಆರಂಭಿಸಿದರು.

ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಬಳಿ ಸುಮಾರು 6 ಸಾವಿರ ಸಿಬ್ಬಂದಿ ಇದ್ದಾರೆ. ಇದರಲ್ಲಿ 2 ಸಾವಿರ ಸಿಬ್ಬಂದಿ ಕ್ಯಾಬಿನ್‌ ಒಳಗೆ ಕಾರ್ಯ ನಿರ್ವಹಿಸುವವರಾಗಿದ್ದಾರೆ. ಹಿಂದೆ ಏರ್ ಏಷ್ಯಾ ಇಂಡಿಯಾ ಎಂದು ಕರೆಯಲಾಗುತ್ತಿದ್ದ ಎಐಎಕ್ಸ್‌ ಕನೆಕ್ಟ್ ಅನ್ನು ತನ್ನಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಯನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಆರಂಭಿಸಿದೆ.