ವಿಶ್ಲೇಷಣೆ
ಹೊಸೂರು ರತ್ನಾಕರ ಶೆಟ್ಟಿ
ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎನಿಸಿಕೊಂಡಿರುವ ಭಾರತದ ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ಪೈಪೋಟಿ ಗಿಳಿಯುವುದು ಸಹಜ. ವಿವಿಧ ರಾಜಕೀಯ ಪಕ್ಷಗಳ ಸೋಲು-ಗೆಲುವುಗಳ ನಡುವೆ ಪ್ರಜಾಪ್ರಭುತ್ವದ ಮೆರುಗನ್ನು ಉಳಿಸಿಕೊಂಡು ಬಂದ ಹಿರಿಮೆ ನಮ್ಮದು. ಆದರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ಜನಸಾಮಾನ್ಯರಿಗೆ ಉಚಿತ ಕೊಡುಗೆಗಳು ಅಥವಾ ‘ಫ್ರೀಬೀ’ಗಳನ್ನು ಹಂಚುವಲ್ಲಿ ಪೈಪೋಟಿಗೆ ಇಳಿದಿರುವುದು ಅತೀವ ಬೇಸರದ ಸಂಗತಿ.
ಒಂದೆಡೆ ಸರಕಾರದ ಖಜಾನೆ ಖಾಲಿಯಾದರೂ, ಎಲ್ಲಿಂದಲಾದರೂ ಹಣ ಹೊಂದಿಸಿ ಸೌಲಭ್ಯಗಳನ್ನು ನೀಡಿ, ‘ನುಡಿದಂತೆ ನಡೆಯುವ ಸರಕಾರ’ ನಮ್ಮದು ಎಂದು ಹೇಳಿಕೊಳ್ಳುವ ಧಾವಂತ ಆಡಳಿತಾರೂಢ ಸರಕಾರದ್ದಾದರೆ, ಪ್ರತಿಪಕ್ಷಗಳು ಅಧಿಕಾರದ ಕನಸು ಕಾಣಬೇಕಿದ್ದರೆ ಇರುವ ‘ಫ್ರೀಬೀ’ಗಳನ್ನು ಮುಂದುವರಿಸುವುದಲ್ಲದೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಘೋಷಿಸಬೇಕಾದ ಅನಿವಾರ್ಯ ಪರಿಸ್ಥಿತಿಗೆ ತಲುಪುತ್ತಿವೆ. ಇಲ್ಲಿ ಆರ್ಥಿಕ ಹೊರೆ ಹೊರುವ ಸರಕಾರದ ಸಾಮರ್ಥ್ಯ ನಗಣ್ಯವೆಂದು ಭಾವಿಸುವ ಮನೋವೃತ್ತಿಯು ಘೋಷಣೆ ಕೂಗುವ ರಾಜಕೀಯ ಪಕ್ಷಗಳದ್ದಾಗಿರುವುದು ದುರದೃಷ್ಟಕರ.
ಅಧಿಕಾರ ಹಿಡಿಯುವುದೇ ಏಕಮೇವ ಗುರಿಯಾದಾಗ, ರಾಷ್ಟ್ರಹಿತ ಹಿನ್ನೆಲೆಗೆ ಜಾರುವುದು ಸ್ವಾಭಾವಿಕ. ಹಾಸಿಗೆ ಇದ್ದಷ್ಟು ಕಾಲು ಚಾಚದೆ, ಸಾಲ ಮಾಡಿಯಾದರೂ ತುಪ್ಪ ತಿನ್ನುವ ಚಪಲಕ್ಕೆ ಬಿದ್ದ ನಮ್ಮ ನೆರೆರಾಷ್ಟ್ರಗಳ ಪಾಡು ನಮ್ಮ ಕಣ್ಣ ಮುಂದೆ ತಾಂಡವವಾಡುತ್ತಿದ್ದರೂ ನಮ್ಮ ರಾಜಕೀಯ ನೇತಾರರು ‘ಕ್ಯಾರೇ’ ಎನ್ನುತ್ತಿಲ್ಲ. ‘ನಾವು ಸದೃಢವಾಗಿದ್ದೇವೆ; ಅಂಥ ಪರಿಸ್ಥಿತಿ ಬಂದಾಗ ನೋಡಿಕೊಂಡರಾಯಿತು’ ಎಂಬ ಚಿತ್ತಸ್ಥಿತಿ ಇಂಥ ನೇತಾರರಲ್ಲಿ
ಮನೆಮಾಡಿದೆ.
ಇನ್ನು, ಈ ವ್ಯವಸ್ಥೆಯ ಫಲಾನುಭವಿಗಳನ್ನು ಅವಲೋಕಿಸಿದರೆ, ಇವರಲ್ಲಿ ಹೆಚ್ಚಿನವರು ತೀರಾ ಬಡವರು ಮತ್ತು ಅಂಥವರಿಗೆ ಜೀವನಮಟ್ಟ
ಸುಧಾರಿಸಲು ಯಾವುದಾದರೂ ಆರ್ಥಿಕ ಸಹಾಯ ತೀರಾ ಅಗತ್ಯವೆನ್ನುವುದು ಮೇಲ್ನೋಟಕ್ಕೆ ಅನ್ನಿಸದಿರದು. ದೇಶದ ಸಂಪತ್ತಿನ ದೊಡ್ಡ ಪಾಲು ಬೆರಳೆಣಿಕೆಯ ಜನರಲ್ಲಿ ಶೇಖರಣೆಯಾಗಿರುವುದರಿಂದ, ವಂಚಿತ ವರ್ಗಕ್ಕೆ ನ್ಯಾಯ ಒದಗಿಸುವ ಹೊಣೆ ಸರಕಾರದ್ದು ನಿಜ. ಹಾಗಾಗಿ ಸರಕಾರದ ಅತ್ಯಮೂಲ್ಯ ವಿರಳ ಸಂಪತ್ತನ್ನು, ಉದ್ದೇಶಿತ ಶೋಷಿತ ವರ್ಗದ ಜನರ ಏಳಿಗೆಗಾಗಿನ ಶಾಶ್ವತ ಯೋಜನೆಗಳನ್ನು ರೂಪಿಸಲು ವಿನಿಯೋಗಿಸಬೇಕೇ
ವಿನಾ, ಅಗ್ಗದ ಜನಪ್ರಿಯ ಯೋಜನೆಗಳ ಹಿಂದೆ ಬೀಳಬಾರದು. ಇಲ್ಲಿ ಚಿಂತನೆಯು, ಮೀನು ಹಿಡಿಯಲು ಕಲಿಸುವುದರ ಬಗ್ಗೆ ಹೊಮ್ಮಬೇಕೇ ಹೊರತು, ಹಿಡಿದ ಮೀನುಗಳನ್ನು ಹಂಚುವುದರಲ್ಲಿ ಅಲ್ಲ. ‘ಫ್ರೀಬೀ’ಗಳಿಂದಾಗುವ ದೂರಗಾಮಿ ದುಷ್ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಚುನಾವಣಾ ಆಯೋಗವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಮತದಾರರಿಗೆ ನೇರವಾಗಿ ಹಣ ಹಂಚುವ ಯೋಜನೆಗಳನ್ನು ನಿರ್ದಾಕ್ಷಿಣ್ಯವಾಗಿ ನಿಷೇಧಿಸಬೇಕು.
(ಲೇಖಕರು ಹವ್ಯಾಸಿ ಬರಹಗಾರರು)