ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಕೊಲೆಯ ಘಟನೆ ಇನ್ನೂ ಹಸಿಹಸಿಯಾಗಿರುವಾಗಲೇ ಕೊಡಗಿನ ಸೋಮವಾರಪೇಟೆ ತಾಲೂಕಿನ ಸೂರ್ಲ ಬ್ಬಿಯ ಕುಂಬಾರ ಗಡಿಗೆ ಎಂಬಲ್ಲಿ ಆಗ ತಾನೆ ಎಸ್‌ಎಸ್ ಎಲ್‌ಸಿ ಮುಗಿಸಿದ ವಿದ್ಯಾರ್ಥಿನಿಯ ಬರ್ಬರ ಹತ್ಯೆಯಾಗಿದೆ.
ಪ್ರೇಮ ಪ್ರಕರಣದಿಂದಾಗಿ ನೇಹಾ ಹತ್ಯೆಯಾದರೆ, ಮದುವೆ ಮುರಿದುಬಿತ್ತು ಎಂಬ ಕಾರಣಕ್ಕೆ ಮೀನಾ ಹತ್ಯೆಯಾಗಿದೆ. ಕೊಲೆಗಾರನಿಗೆ ವಿದ್ಯಾರ್ಥಿನಿ ಯನ್ನು ಮದುವೆ ಮಾಡಿಕೊಡುವ ನಿರ್ಧಾರಕ್ಕೆ ಕುಟುಂಬಸ್ಥರು ಬಂದಿದ್ದರು. ಆದರೆ ಇದು ಸಮಾಜ ಕಲ್ಯಾಣ ಇಲಾಖೆಗೆ ತಿಳಿದು ಅಧಿಕಾರಿಗಳು ಮಧ್ಯ ಪ್ರವೇಶಿಸಿ ಬಾಲ್ಯ ವಿವಾಹ ಎನ್ನುವ ಕಾರಣಕ್ಕಾಗಿ ಮದುವೆಯನ್ನು ತಡೆದರು.
ಇಲ್ಲವಾದರೆ ಕೊಲೆಗಾರನ ಜತೆಗೆ ಆ ವಿದ್ಯಾರ್ಥಿನಿ ಮದುವೆಯಾಗಿ ಜೀವನ ಪೂರ್ತಿ ಏಗಬೇಕಾಗಿತ್ತು. ಹತ್ತನೇ ತರಗತಿಯ ವಿದ್ಯಾರ್ಥಿನಿಯನ್ನು ಈ
ಸೈಕೋಪಾತ್‌ಗೆ ವಿವಾಹ ಮಾಡಿಸಿಕೊಡುವುದು ಯಾವ ಕೊಲೆಗಿಂತಲೂ ಕಡಿಮೆಯೇನೂ ಅಲ್ಲ. ಮದುವೆಯಾಗಿದ್ದರೆ ಈತನ ಜತೆಗೆ ಆಕೆ ಜೀವಚ್ಛವವಾಗಿ ಬದುಕಬೇಕಾಗಿತ್ತೇನೋ? ಈ ಮೂಲಕ, ಇನ್ನೂ ಹೇಗೆ ಗ್ರಾಮಾಂತರ ಪ್ರದೇಶದಲ್ಲಿ ಬಾಲ್ಯ ವಿವಾಹ ಜೀವಂತವಾಗಿದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಮದುವೆ ಮುರಿದು ಬಿದ್ದ ಒಂದೇ ಕಾರಣಕ್ಕಾಗಿ ಹುಡುಗಿಯನ್ನು ಕೊಂದು ಹಾಕುವ ಸ್ಥಿತಿಗೆ ಕೊಲೆಗಾರ ಯಾಕೆ ತಲುಪಿದ? ಇದರ ಹಿಂದೆ ಇನ್ನಷ್ಟು ಕಾರಣಗಳೂ ಇದ್ದಿರಬಹುದು.
ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಮಾತ್ರವಲ್ಲ, ಇಂತಹ ಬಾಲ್ಯ ವಿವಾಹಗಳಿಗೆ ಬಲಿಯಾಗಿ ನರಕದ ಜೀವನವನ್ನು ನಡೆಸುತ್ತಿರುವ ತರುಣಿಯರ ಬಗ್ಗೆಯೂ ಸಮಾಜ ಕಲ್ಯಾಣ ಇಲಾಖೆ ತನಿಖೆ ನಡೆಸಬೇಕು. ಈ ವಿದ್ಯಾರ್ಥಿನಿಯನ್ನು ಈತನಿಗೆ ಮದುವೆ ಮಾಡಿಸಲು ಹೊರಟ ಎಲ್ಲರೂ ಈ ಕೊಲೆ ಕೃತ್ಯದಲ್ಲಿ ಸಹಭಾಗಿಗಳಾಗಿzರೆ. ತಾನು ಮಾಡದ ತಪ್ಪಿಗೆ ವಿದ್ಯಾರ್ಥಿನಿ ಅತ್ಯಂತ ಬರ್ಬರವಾಗಿ ಕೊಲೆಗೀಡಾಗಬೇಕಾಯಿತು. ಈ ಹಿನ್ನೆಲೆಯಲ್ಲಿ ಮದುವೆಯ ನಿಶ್ಚಿತಾರ್ಥದಲ್ಲಿ ಶಾಮೀಲಾದ ಎಲ್ಲರನ್ನೂ ಪೊಲೀಸರು ವಶಕ್ಕೆ ಪಡೆದು ಇದರ ಹಿಂದಿರುವ ಇತರ ಕಾರಣಗಳನ್ನು ಬಯಲಿಗೆಳೆಯಬೇಕು. ಆ ಮೂಲಕ ಬಾಲ್ಯವಿವಾಹಗಳಿಗೆ ಶಾಶ್ವತ ಕಡಿವಾಣ ಹಾಕಬೇಕು.