ಬೆಂಗಳೂರು: ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಜೆಡಿಎಸ್ ಶಾಸಕ ಹೆಚ್ಡಿ ರೇವಣ್ಣ ಜೈಲಿನಿಂದ ಹೊರ ಬಂದ ನಂತರ ಇದೀಗ ಕಾನೂನು ಹೋರಾಟಕ್ಕಿಳಿದಿದ್ದಾರೆ. ದೇವರ ದರ್ಶನದ ಜೊತೆ ಜೊತೆಗೆ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ. ನ್ಯಾಯಾಲಯದ ಆದೇಶಕ್ಕೆ ತಲೆಬಾಗುತ್ತೇನೆ ಎಂದಿದ್ದಾರೆ.
ಮಂಗಳವಾರ ಮಧ್ಯಾಹ್ನ ಜೈಲಿನಿಂದ ಹೊರಬಂದ ಹೆಚ್ಡಿ ರೇವಣ್ಣ ಬೆಂಗಳೂರಿನ ಎರಡು ದೇವಸ್ಥಾನಗಳಿಗೆ ಭೇಟಿ ನೀಡಿದರು. ಸಂಜೆ ಚಾಮುಂಡಿ ಬೆಟ್ಟಕ್ಕೂ ಹೋಗಿ ದರ್ಶನ ಪಡೆದಿದರು. ಹೀಗೆ ದೇವರ ಮೊರೆಹೋಗಿರೋ ರೇವಣ್ಣ, ಜೊತೆ ಜೊತೆಗೆ ಕಾನೂನು ಹೋರಾಟವನ್ನೂ ಮುಂದುವರೆಸಿದ್ದಾರೆ. ನಾನೇನೂ ತಪ್ಪು ಮಾಡಿಲ್ಲ ಎಲ್ಲವನ್ನೂ ದೇವರಿಗೆ ಬಿಟ್ಟಿದ್ದೇನೆ ಎಂದು ಹೇಳಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ರೇವಣ್ಣ ಇವತ್ತು ಹಾಸನಕ್ಕೆ ಹೋಗುವ ಯೋಜನೆ ಇತ್ತು. ಆದರೆ, ನಾನೆಲ್ಲೂ ಹೋಗಲ್ಲ ಎಂದಿರುವ ರೇವಣ್ಣ, ಬೆಂಗಳೂರಲ್ಲೇ ಇದ್ದು ಕಾನೂನು ಸಮರ ಸಾರಿದ್ದಾರೆ. ವಕೀಲರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ದೇವೇಗೌಡರ ಸಲಹೆ ಪಡೆದು ಹೆಜ್ಜೆ ಇಟ್ಟಿದ್ದಾರೆ.
ವಕೀಲರ ಭೇಟಿಗೂ ಮುನ್ನ ಬೆಂಗಳೂರಿನ ಜೆಪಿ ನಗರದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ರೇವಣ್ಣ ಎರಡು ಗಂಟೆಗಳ ಕಾಲ ವಿಶೇಷ ಪೂಜೆ ಸಲ್ಲಿಸಿದ್ದಾರೆ.