Friday, 13th December 2024

ಮೋದಿ ಮಣಿಸಲು ಸುಳ್ಳುಗಳೇ ಹಲವರಿಗೆ ಆಸರೆ

ಪ್ರಕಾಶ ಪಥ

ಪ್ರಕಾಶ್ ಶೇಘರಾಘವಾಚಾರ್‌

sprakashbjp@gmail.com

ದೇಶದಲ್ಲಿ ಲೋಕಸಭಾ ಚುನಾವಣೆ ಘೋಷಣೆ ಯಾದಾಗಿನಿಂದ ಪ್ರತಿಪಕ್ಷದ ನಾಯಕರು ಒಬ್ಬೊಬ್ಬರ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ೨೦೧೯ರ ಸೋಲಿನ ಕಹಿ ಪ್ರತಿಯೊಬ್ಬರ ಮನಸ್ಸಿ ನಲ್ಲಿ ಈಗಲೂ ಇರುವುದು ಸ್ಪಷ್ಟವಾಗುತ್ತದೆ. ಇಂಡಿ ಒಕ್ಕೂಟದ ಬಹುತೇಕರು ಮೋದಿಯನ್ನು ಮಣಿಸಲು ‘ಸುಳ್ಳು’ಗಳನ್ನೇ ಆಸೆರೆಯಾಗಿಟ್ಟುಕೊಂಡು ಹೋರಾಡುತ್ತಿದ್ದು, ಅದನ್ನೇ ಜನರ ಮುಂದಿಟ್ಟು ನಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಾದಿಯಾಗಿ ಬಹುತೇಕರು, ಇದೇ ಮನಸ್ಥಿತಿಯಲ್ಲಿದ್ದಾರೆ. ಖರ್ಗೆ ಅವರು, ೨೦೧೯ರಲ್ಲಿ ತಮ್ಮ ಸ್ವಂತ ಕ್ಷೇತ್ರದಲ್ಲಿ ಅನುಭವಿಸಿದ ಸೋಲಿನ ಕಹಿಯನ್ನು ತಮ್ಮ ಮಾತುಗಳು ಪ್ರಕಟಿಸುತ್ತಿದ್ದಾರೆ. ಮೋದಿಯವರನ್ನು ಮಣಿಸುವ ತಂತ್ರಗಾರಿಕೆಯ
ಭಾಗವಾಗಿ ಕಾಂಗ್ರೆಸ್ ಸುಳ್ಳಿಗೆ ಶರಣಾಗಿ ಬಹುತೇಕರು, ಸುಳ್ಳನ್ನೇ ನಿಜವಾಗಿರುವ ಕೆಲಸದಲ್ಲಿ ನಿರತರಾಗಿದ್ದಾರೆ. ೨೦೨೪ರ ಲೋಕಸಭಾ ಚುನಾವಣೆಯ ತಮ್ಮ ಮೊದಲ ಪ್ರಚಾರ ಸಭೆಯನ್ನು ಜಾರ್ಖಂಡಿನ ಛಾತ್ರ ಕ್ಷೇತ್ರದಲ್ಲಿ ಭಾಷಣ ಮಾಡುತ್ತಾ ತಾವು ದಲಿತ ಎಂದು ತಮಗೆ ಅಪಮಾನ ಮಾಡಬಹುದು ಎಂಬ ಭೀತಿಯಿಂದ ರಾಮ ಮಂದಿರದ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮಕ್ಕೆ ಹೋಗಲಿಲ್ಲ ಎನ್ನುವ ಸುಳ್ಳನ್ನು ಹೇಳಿದರು. ಖರ್ಗೆಯವರು ಕಳೆದ ಐವತ್ತು ವರ್ಷದ ರಾಜಕೀಯ ಜೀವನದಲ್ಲಿ ಒಂದಲ್ಲ ಒಂದು ಅಧಿಕಾರ  ಅನುಭವಿಸುತ್ತಲೇ ಬಂದಿದ್ದಾರೆ. ಈ ಸಂದರ್ಭದಲ್ಲಿ ಇವರು ದಲಿತರು ಎಂದು ಯಾವ ಮಂದಿರದೊಳಗೆ ಬರಲು ಅವಕಾಶ ನೀಡದೇ ಅಪಮಾನ ಮಾಡಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಲಿ.

ರಾಜಕೀಯ ಸ್ವಾರ್ಥಕ್ಕಾಗಿ ರಾಮ ಮಂದಿರದ ಉದ್ಘಾಟನೆಯ ಪವಿತ್ರ ಸಮಾರಂಭಕ್ಕೂ ಮಸಿ ಬಳೆಯುವ ಸಣ್ಣತನವೇಕೆ? ವೋಟಿನ ರಾಜಕಾರಣಕ್ಕೆ ರಾಮ ಮಂದಿರದ ಪಾವಿತ್ರತ್ಯೆಗೆ ಧಕ್ಕೆ ತರಲು ಹಿಂಜರಿಯಲಿಲ್ಲ. ಇನ್ನು ಕಾಂಗ್ರೆಸ್ ನಾಯಕರ ಬಹುತೇಕ ಭಾಷಣಗಳನ್ನು ಗಮನಿಸಿದರೆ, ಅವರಿಗೆ ಮೋದಿ ಅವರ ಮೇಲಿನ ಅಸಹನೆ ಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಈ ಬಾರಿ ಮೋದಿಯವರು ಮತ್ತೊಮ್ಮೆ ಚುನಾವಣೆ ಗೆದ್ದರೆ, ದೇಶದಲ್ಲಿ ಇದು ಕೊನೆಯ
ಚುನಾವಣೆಯಾಗಿ ಸರ್ವಾಧಿಕಾರದ ಆಡಳಿತ ಸ್ಥಾಪನೆಯಾಗುತ್ತದೆ. ರಷ್ಯಾದ ಅಧ್ಯಕ್ಷ ಪುಟಿನ್‌ರವರು ಪ್ರತಿಪಕ್ಷಗಳನ್ನು ಬೆದರಿಸಿ ಗೆಲ್ಲುತ್ತಿರುವ ಹಾಗೆ ನಮ್ಮ ದೇಶದಲ್ಲಿಯೂ ಅದೇ ಪರಿಸ್ಥಿತಿ ಬರುತ್ತದೆ ಎಂದು ತಮ್ಮ ಬತ್ತಳಿಕೆಯಿಂದ ಖರ್ಗೆ ಅವರು ತಮ್ಮ ಎರಡನೆಯ ಸುಳ್ಳಿನ ಬಾಣವನ್ನು ಬಿಟ್ಟರು.

ಆದರೆ ಕಾಂಗ್ರೆಸಿಗರು ಅರ್ಥ ಮಾಡಿಕೊಳ್ಳದಿರುವ ಒಂದು ವಿಷಯವೆಂದರೆ, ದೇಶದಲ್ಲಿ ಸರ್ವಾಧಿಕಾರ ಸ್ಥಾಪನೆಯಾಗಿದ್ದು ೧೯೭೫ರಲ್ಲಿ. ಅದೂ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಮತ್ತು ೧೯೭೬ ರಲ್ಲಿ ನಡೆಯಬೇಕಿದ್ದ ಚುನಾವಣೆಯನ್ನು ಒಂದು ವರ್ಷ ಮುಂದೂಡಿ ೧೯೭೭ರಲ್ಲಿ ನಡೆಸಿದ ಕುಖ್ಯಾತಿಯಿದೆ. ಖರ್ಗೆಯವರು ೧೯೭೨ರಲ್ಲಿ ಇಂದಿರಾ ಕಾಂಗ್ರೆಸ್‌ಗೆ ಜಿಗಿದು ಗುರುಮಿಠಕಲ್ ಮೀಸಲು ಕ್ಷೇತ್ರದಿಂದ ಶಾಸಕರಾಗಿದ್ದರು ಅಂದು ಸರ್ವಾಧಿ ಕಾರಿ ಆಡಳಿತದ ವಿರುದ್ದ ಚಕಾರವೆತ್ತಿರಲಿಲ್ಲ. ಇನ್ನೂ ಮೂರನೆಯ ಸುಳ್ಳೆಂದರೆ, ಬಿಜೆಪಿಗೆ ಮೂರನೆ ಎರಡು ಬಹುಮತ ಬಂದರೆ ಸಂವಿಧಾನ ಬದಲಾಗುತ್ತದೆ ಮತ್ತು ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕುತ್ತದೆ ಎಂದು ರಾಹುಲ್ ಗಾಂಧಿಯವರು ಮಾಡುತ್ತಿರುವ ಭಾಷಣದ ಪ್ರಮುಖ ಅಂಶವಾಗಿದೆ.

೧೯೭೫ರಲ್ಲಿ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಪ್ರತಿಪಕ್ಷದ ಬಹುತೇಕ ನಾಯಕರನ್ನು ಸೆರೆಮನೆಗೆ ಕಳುಹಿಸಿದ್ದರು. ಸಂಸತ್ತಿನಲ್ಲಿ ಪ್ರತಿಪಕ್ಷಗಳ ಅನುಪಸ್ಥಿತಿಯ ದುರ್ಲಬ ಪಡೆದು ೧೯೭೬ರಲ್ಲಿ ಸಂವಿಧಾನಕ್ಕೆ ೪೨ನೇ ತಿದ್ದುಪಡಿಯನ್ನು ತಂದು ಮೂಲ ಸಂವಿಧಾನದಲ್ಲಿ ಬಹು ದೊಡ್ಡ ಬದಲಾವಣೆಯನ್ನು ತಂದರು. ಸಂವಿಧಾನದ ಪಿಠೀಕೆ ಯಲ್ಲಿ ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯವನ್ನು ಸಾರ್ವಭೌಮ ಸಮಾಜವಾದಿ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯ ಎಂದು ತಿದ್ದುಪಡಿ ಮಾಡಿ ಮೂಲ ಸಂವಿಧಾನ ಪಿಠೀಕೆಯನ್ನೇ ತಿರುಚಿದ ಕುಖ್ಯಾತಿ ಕಾಂಗ್ರೆಸ್ ಸರಕಾರಕ್ಕೆ ಸಲ್ಲುತ್ತದೆ.

೪೨ನೇ ತಿದ್ದುಪಡಿಯಲ್ಲಿ ಸಂಸತ್ತಿನ ಅತ್ಯುನ್ನತ ಸಂಸ್ಥೆ ಯಾಯಿತು ಮತ್ತು ಸಂವಿಧಾನ ತಿದ್ದುಪಡಿಯನ್ನು ಸುಪ್ರೀಂಕೋರ್ಟ್ ಪರಾಮರ್ಶೆಯಿಂದ ಹೊರಗಿಡಲಾಯಿತು. ಸಂಸತ್ತಿಗೆ ಯಾವುದೇ ನ್ಯಾಯಾಲಯದ ಅಂಕುಶವಿಲ್ಲದೆ ಕಾನೂನು ರೂಪಿಸುವ ಅಽಕಾರವನ್ನು ನೀಡಿತು. ಅನೇಕ ಅಂಶಗಳನ್ನು ಸೇರ್ಪಡೆ ಮಾಡಿದ ಕಾರಣ ಸಂವಿಧಾನದ ೪೨ನೇ ತಿದ್ದುಪಡಿಯನ್ನು ಚಿಕ್ಕ ಸಂವಿಧಾನವೆಂದೇ ಕರೆಯಲಾಗಿತ್ತು. ಸಂವಿಧಾನ ಬದಲಾವಣೆಯೆಂದರೆ ೧೯೭೬ರಲ್ಲಿ ತಂದ ೪೨ನೇ ತಿದ್ದುಪಡಿಯೂ, ಕರ್ನಾಟಕ ಅಂದಿನ ಕಾಂಗ್ರೆಸ್ ರಾಜ್ಯ ಸರಕಾರಗಳು ಅನುಮೋದಿಸಿದ್ದವು. ಅಂದು ಶಾಸಕರಾಗಿದ್ದ ಖರ್ಗೆ ಯವರು ಉಸಿರೆತ್ತದೆ ಸಂವಿಧಾನದ ಬದಲಾವಣೆಗೆ ಬೆಂಬಲ ನೀಡಿದ್ದು ಮರೆತಿದ್ದಾರೆ.

ಪ್ರತಿಪಕ್ಷದ ನಾಯಕರನ್ನು ಜೈಲಿಗೆ ಕಳುಹಿಸಿ ಸಂವಿಧಾನ ಬಾಹಿರವಾಗಿ ತಂದ ತಿದ್ದುಪಡಿಯ ಮೂಲಕ ಕಾಂಗ್ರೆಸ್ ನಿರಂಕುಶಾಧಿಕಾರವನ್ನು ಸ್ಥಾಪಿಸಲು ಸಿದ್ದತೆ ನಡೆಸಿತ್ತು. ದುರಾದೃಷ್ಚವಶಾತ್ ೧೯೭೭ರಲ್ಲಿ ಮತ್ತೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದ್ದರೆ ೪೨ನೇ ತಿದ್ದುಪಡಿಯು ಮೂಲಸ್ವರೂಪದಲ್ಲಿಯೇ
ಜಾರಿಯಾಗುತ್ತಿತ್ತು. ಇದರಿಂದ ಕಾಂಗ್ರೆಸ್ ತನಗಿದ್ದ ಬಹುಮತವನ್ನು ಬಳಸಿಕೊಂಡು ಚುನಾವಣೆಯನ್ನೇ ರದ್ದು ಮಾಡಿ ಪ್ರಜಾಪ್ರಭುತ್ವಕ್ಕೆ ಇತಿಶ್ರೀ ಹಾಡುತ್ತಿದ್ದರು.

ರಾಹುಲ್ ಕೈಯಲ್ಲಿ ಸಂವಿಧಾನದ ಪುಸ್ತಕವನ್ನು ಹಿಡಿದುಕೊಂಡು ಬಿಜೆಪಿ ಈ ಪುಸ್ತಕವನ್ನು ಹರಿದು ಹಾಕಲು ಬಯಸುತ್ತದೆ, ಆದರೆ ನಾವು ಕಾಂಗ್ರೆಸ್ ಮತ್ತು ಭಾರತದ ಜನರು ಇದನ್ನು ಅನುಮತಿಸುವುದಿಲ್ಲ ಎಂದು ತಮ್ಮ ಕೈಯಲ್ಲಿರುವ ಸಂವಿಧಾನದ ಪುಸ್ತಕವನ್ನು ತೋರಿಸುತ್ತಿದ್ದಾರೆ. ರಾಹುಲ್
ರವರು ಮಾಡಬೇಕಾಗಿರುವುದು ತಮ್ಮ ಎರಡೂ ಕೈಜೋಡಿಸಿಕೊಂಡು ನನ್ನ ಅಜ್ಜಿ ಇಂದಿರಾ ಗಾಂಧಿಯವರು ೧೯೭೬ರಲ್ಲಿ ಸಂವಿಧಾನದ ೪೨ನೇ ತಿದ್ದುಪಡಿಯ ಮೂಲಕ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಮರಣಶಾಸನ ಬರೆದಿದ್ದರು ಅವರ ಪರವಾಗಿ ನಾನು ಕ್ಷಮೆ ಕೋರುತ್ತೇನೆ ಎಂದು ಹೇಳಬೇಕಾಗಿದೆ.

ಇನ್ನು ಕಾಂಗ್ರೆಸ್‌ನ ನಾಲ್ಕನೇ ಸುಳ್ಳು, ಬಿಜೆಪಿ ಅಧಿಕಾರಕ್ಕೆ ಬಂದರೆ ಮೀಸಲು ರದ್ದು ಮಾಡುತ್ತದೆ. ರಾಜಕೀಯ ದುರುದ್ದೇಶದಿಂದ ಈ ಬುಡವಿಲ್ಲದ ಆರೋಪವನ್ನು ಖರ್ಗೆ ಮತ್ತು ರಾಹುಲ್ ಗಾಂಧಿ ಮಾಡುತ್ತಿದ್ದಾರೆ. ತಮ್ಮ ಆರೋಪದ ಸಮರ್ಥನೆಗೆ ಅನಗತ್ಯವಾಗಿ ಆರ್‌ಎಸ್‌ಎಸ್ ಎಳೆದು ತಂದಿದ್ದಾರೆ. ಆರ್‌ಎಸ್‌ಎಸ್ ಎಂದೂ ಮೀಸಲಾತಿಯನ್ನು ವಿರೋಧಿಸಿಲ್ಲದಿದ್ದರು ಜನರ ದಾರಿ ತಪ್ಪಿಸಲು ಈ ಆರೋಪವನ್ನು ಮಾಡಿ ದಲಿತರ ಮತವನ್ನು ಸೆಳೆಯಲು
ಮಾಡಿರುವ ಷಡ್ಯಂತರವಾಗಿದೆ.

ಐದನೆಯ ಸುಳ್ಳು, ಸರಕಾರದಲ್ಲಿ ಕೇವಲ ಗುತ್ತಿಗೆಯಾಧಾರದ ಮೇಲೆ ಸಿಬ್ಬಂದಿಗಳ ನೇಮಕ ಮಾಡಿಕೊಂಡು ದಲಿತರಿಗೆ ನೌಕರಿಯಿಂದ ವಂಚಿಸುತ್ತಿದ್ದಾರೆ ಎಂದು ತಪ್ಪು ಮಾಹಿತಿ ನೀಡಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನವಷ್ಟೆ. ವಾಸ್ತವವಾಗಿ ಪಿಎಂ ರೋಜ್ ಗಾರ್ ಯೋಜನೆಯ ಮೂಲಕ ಕೇಂದ್ರ
ಸರಕಾರದಲ್ಲಿ ಕಳೆದ ಒಂದು ವರ್ಷದಲ್ಲಿ ಅತ್ಯಂತ ಪಾರದರ್ಶಕ ವ್ಯವಸ್ಥೆಯ ಮೂಲಕ ೭ಲಕ್ಷಕ್ಕೂ ಹೆಚ್ಚು ಜನರಿಗೆ ನೇರ ನೇಮಕ ಮಾಡಿಕೊಂಡಿದೆ.
ದಲಿತರು, ಶೋಷಿತರು ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದ ಬಗ್ಗೆ ಭಾವಾನಾತ್ಮಕ ಸಂಬಂಧವನ್ನು ಹೊಂದಿದ್ದಾರೆ.

ಇದನ್ನು ದುರುಪಯೋಗ ಮಾಡಿಕೊಂಡು ದಲಿತರ ಮತವನ್ನು ಸೆಳೆಯಲು ಈ ಎ ಸುಳ್ಳಿನ ಕಂತೆಯನ್ನು ಕಾಂಗ್ರೆಸ್ ನಾಯಕರು ಹೆಣೆಯುತ್ತಿದ್ದಾರೆ. ಮೋದಿ ಸರಕಾರವು ಭೂಸ್ವಾಧೀನ ಕಾಯಿದೆಗೆ ತಿದ್ದುಪಡಿಯನ್ನು ಸಂಸತ್ತಿನ ಉಭಯ ಸದನದಲ್ಲಿ ಅನುಮೋದಿಸಲು ಮಂಡಿಸಿತು. ತಾತ್ಕಲಿಕವಾಗಿ ಜಾರಿಗೆ ತರಲು ಸುಗ್ರೀವಾಜ್ಞೆಗೆ ಮೊರೆ ಹೋಯಿತು. ಆದರೆ ಕಾಯಿದೆಯ ಬಗ್ಗೆ ಒಮ್ಮತ ಮೂಡದ ಕಾರಣ ಕಾಯಿದೆಯನ್ನು ಹಿಂದಕ್ಕೆ ಪಡೆಯಬೇಕಾ ಯಿತು.

ಕೃಷಿ ಕ್ಷೇತ್ರಕ್ಕೆ ಕಾಯಕಲ್ಪ ನೀಡಲು ತಂದ ಮೂರು ಕೃಷಿ ಸುಧಾರಣೆಯ ಕಾಯಿದೆಯು ಎರಡೂ ಸದನದಲ್ಲಿ ಅನುಮೋದನೆಯಾದ ನಂತರ ಕಾಯಿದೆಯ ಜಾರಿಗೆ ರೈತ ಸಮುದಾಯ ತೋರಿದ ಪ್ರಬಲ ಪ್ರತಿರೋಧಕ್ಕೆ ಸರಕಾರ ಮಣಿದು ಮೂರೂ ಕಾಯಿದೆಯನ್ನು ಹಿಂದಕ್ಕೆ ಪಡೆಯಿತು.
ಸರಕಾರ ವಾಮಮಾರ್ಗ ಬಳಸಿ ಕಾಯಿದೆಗಳ ಜಾರಿಗೆ ಪ್ರಯತ್ನ ಮಾಡದೆ ಜನಾಭಿಪ್ರಾಯವನ್ನು ಗೌರವಿಸಿ ಪ್ರಜಾಪ್ರಭುತ್ವ ಮೌಲ್ಯವನ್ನು ಎತ್ತಿ ಹಿಡಿಯಿತು.

ಕಾಂಗ್ರೆಸ್ ಚುನಾವಣೆಯಲ್ಲಿ ಮತಯಾಚಿಸಲು ಸಂಪೂರ್ಣವಾಗಿ ಜಾತಿ ರಾಜಕಾರಣವನ್ನು ಅವಲಂಬಿಸಿದೆ. ರಾಹುಲ್ ಗಾಂಧಿಯವರು ಕೇಂದ್ರ ಸರಕಾರದ ಉನ್ನತ ಹುದ್ದೆಗಳಲ್ಲಿ ಶೇ.೧ರಷ್ಟು ಮಾತ್ರ ಹಿಂದುಳಿದ ವರ್ಗಕ್ಕೆ ಸೇರಿದ ಅಧಿಕಾರಿಗಳು ಇರುವುದು ಎಂದು ಆರೋಪಿಸಿದ್ದಾರೆ. ೧೯೯೦ರಲ್ಲಿ ಮಂಡಲ್ ವರದಿ ಜಾರಿಗೆ ಬಂದ ತರುವಾಯ ಕೇಂದ್ರ ಸರಕಾರದ ಹುದ್ದೆಗಳಿಗೆ ಮೀಸಲಾತಿ ನೀತಿಯನ್ವಯ ಕಳೆದ ಮೂವತ್ತು ವರ್ಷದಿಂದ ನೇಮಕ ನಡೆಯುತ್ತಿದೆ. ಸೇವಾ ಜೇಷ್ಠತೆಯನ್ವಯ ಅಽಕಾರಿಗಳಿಗೆ ಬಡ್ತಿ ಕಾನೂನು ಬದ್ಧವಾಗಿ ದೊರೆಯುತ್ತದೆ. ಆದ್ದರಿಂದ ಜಾತಿಯ ಆಧಾರದ
ಮೇಲೆ ಬಡ್ತಿ ದೊರೆಯುವುದಿಲ್ಲ ಮತ್ತು ಯಾರಿಗೂ ಹಿಂದುಳಿದವರು ಎಂಬ ಕಾರಣಕ್ಕೆ ಬಡ್ತಿಯನ್ನೂ ನಿರಾಕರಿಸಲು ಸಾಧ್ಯವಿಲ್ಲ.

ಸತ್ಯ ಸಂಗತಿಯೇನಂದರೆ ಇವರ ತಂದೆ ರಾಜೀವ್ ಗಾಂಧಿಯವರು ಮಂಡಲ್ ವರದಿ ಜಾರಿಗೆ ಕಡು ವಿರೋಧ ವ್ಯಕ್ತಪಡಿಸಿದ್ದರು. ಐಐಟಿ ಮತ್ತು ಯುಪಿಎಸ್‌ಸಿ ಪ್ರಶ್ನಪತ್ರಿಕೆಗಳು ಮೇಲ್ವರ್ಗಕ್ಕೆ ಸೇರಿದವರು ಸಿದ್ದಪಡಿಸುವುದರಿಂದ ಹಿಂದುಳಿದವರು ಹೆಚ್ಚು ಉತ್ತೀರ್ಣರಾಗಲು ಸಾಧ್ಯವಾಗುತ್ತಿಲ್ಲ ಎಂಬ
ಕಪೋಲಕಲ್ಪಿತ ಮತ್ತು ಜಾತಿ ಸಂಘರ್ಷಕ್ಕೆ ದಾರಿಯಾಗುವ ಆರೋಪವನ್ನು ರಾಹುಲ್ ಗಾಂಧಿ ಮಾಡಿದ್ದಾರೆ. ಮೋದಿ ಯವರು ಧರ್ಮಾಧಾರಿತ ಮೀಸಲಾತಿ ಸಂವಿಧಾನಕ್ಕೆ ವಿರುದ್ದ ಮತ್ತು ಹಿಂದುಳಿದವರ ಖೋಟಾದಲ್ಲಿ ಅದನ್ನು ನೀಡಿ ಅನ್ಯಾಯ ಮಾಡಲಾಗುತ್ತಿದೆ ಎಂದರೆ, ಅದು ಕೋಮು
ಭಾವನೆಯನ್ನು ಕೆರಳಿಸುವ ಹೇಳಿಕೆಯಾಗುತ್ತದೆ. ಆದರೆ ಖರ್ಗೆ ಮತ್ತು ರಾಹುಲ್ ಗಾಂಧಿಯವರ ಜಾತಿ ಜಾತಿಯ ನಡುವೆ ವಿಷಬೀಜ ಬಿತ್ತುವ ಅಜೆಂಡಾ ಬಗ್ಗೆ ಪ್ರಧಾನಿಯ ಹೇಳಿಕೆಯನ್ನು ಕಟುವಾಗಿ ಟೀಕೆ ಮಾಡುತ್ತಿರುವವರ ಬಳಿ ಉತ್ತರವಿಲ್ಲ.

ವಿಷಯಾಧಾರಿತ ಚುನಾವಣೆಯೂ ಮತ್ತು ಆಡಳಿತದಲ್ಲಿರುವ ಸರಕಾರದ ವೈಫಲ್ಯಗಳು ಚುನಾವಣೆಯ ವಿಷಯವಾಗಿಸಲು ಕಾಂಗ್ರೆಸ್ ಸೋತಿರುವುದು ಸ್ಪಷ್ಟ. ಹತ್ತು ವರ್ಷದ ಯುಪಿಎ ಸರಕಾರದ ಸಾಧನೆಯನ್ನು ಹತ್ತು ವರ್ಷದ ಮೋದಿ ಸರಕಾರದ ಸಾಧನೆಯೊಂದಿಗೆ ತುಲನಾತ್ಮಕವಾಗಿ ಅಂಕಿ ಅಂಶಗಳ ಆಧಾರದ ಆಡಳಿತ ಪಕ್ಷವನ್ನು  ಇಕ್ಕಟ್ಟಿಗೆ ಸಿಲುಕಿಸಲಿಲ್ಲ. ಮೋದಿ ಸರಕಾರದ ಆಡಳಿತದ ಲೋಪದೋಷಗಳನ್ನು ಬಯಲು ಮಾಡಿ ಮತ್ತು ನಡದಿದೆ
ಎನ್ನಲಾದ ಹಗರಣಗಳನ್ನು ಪ್ರಸ್ತಾಪಿಸಿ ಜನರ ಮುಂದೆ ಹೋಗಲು ವಿಷಯದ ಅಭಾವದಿಂದ ಸೋತಿದೆ. ದೇಶದ ಭದ್ರತೆಯ ವೈಫಲ್ಯವನ್ನು ತಮ್ಮ ಹತ್ತು ವರ್ಷದ ಆಡಳಿತದೊಂದಿಗೆ ಹೋಲಿಕೆ ಮಾಡಿ ಮೋದಿ ಸರಕಾರದ ಮೇಲೆ ವಾಗ್ದಾಳಿ ದಾಳಿ ಮಾಡಲಾಗಿಲ್ಲ.

ಮೋದಿಯವರ ವರ್ಚ್ಚಸ್ಸು ಎದುರಿಸುವ ಜನಪ್ರಿಯ ನಾಯಕನಿಲ್ಲದ ಇಂಡಿಯ ಸುಳ್ಳಿನ ಆಧಾರದ ಮೇಲೆ ಮೋದಿಯನ್ನು ಮಣಿಸಲು ಹುಡುಕಿರುವ ಅಸವೇ ಜಾತಿ, ಸಂವಿಧಾನ ಮತ್ತು ಮೀಸಲಾತಿಯಾಗಿದೆ. ತಮ್ಮ ಕಾರ್ಯಸೂಚಿಯಿಂದ ಸಮಾಜದಲ್ಲಿ ಉಂಟು ಮಾಡುವ ಕ್ಷೋಭೆಯ ಬಗ್ಗೆ ಲವಲೇಶವು ಚಿಂತೆಯಿಲ್ಲದೆ ಅಧಿಕಾರ ಗಳಿಕೆಯೇ ಇವರಿಗೆ ಬಹುಮುಖ್ಯ ಉದ್ದೇಶವಾಗಿದೆ.