Wednesday, 11th December 2024

ಗ್ಯಾಂಗ್‌ಸ್ಟರ್ ಛೋಟಾ ರಾಜನ್‌ಗೆ ಜೀವಾವಧಿ ಶಿಕ್ಷೆ

ಮುಂಬೈ: ಮುಂಬೈನ ಹೊಟೇಲ್ ಉದ್ಯಮಿ ಜಯಾ ಶೆಟ್ಟಿ ಅವರನ್ನು ಹತ್ಯೆ ಮಾಡಿದ ಪ್ರಕರಣ(2001)ದಲ್ಲಿ ಗ್ಯಾಂಗ್‌ಸ್ಟರ್ ಛೋಟಾ ರಾಜನ್‌ಗೆ ಮುಂಬೈ ವಿಶೇಷ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ(MCOCA) ಅಡಿಯಲ್ಲಿ ದಾಖಲಾದ ಪ್ರಕರಣಗಳ ವಿಶೇಷ ನ್ಯಾಯಾಧೀಶ ಎ.ಎಂ.ಪಾಟೀಲ್ ಅವರು, ಜಯಾ ಶೆಟ್ಟಿ ಕೊಲೆ ಪ್ರಕರಣದಲ್ಲಿ ರಾಜನ್‌ ಅಪರಾಧಿ ಎಂದು ಘೋಷಿಸಿದರು.

ಜಯಾ ಶೆಟ್ಟಿ ಅವರು ಸೆಂಟ್ರಲ್ ಮುಂಬೈನ ಗಮದೇವಿಯಲ್ಲಿ ಗೋಲ್ಡನ್ ಕ್ರೌನ್ ಹೋಟೆಲ್ ನಡೆಸುತ್ತಿದ್ದರು. ಮೇ 4, 2001ರಂದು ರಾಜನ್ ಗ್ಯಾಂಗ್‌ನ ಇಬ್ಬರು ಸದಸ್ಯರು ಜಯಾ ಶೆಟ್ಟಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಹೋಟೆಲ್ ಮ್ಯಾನೇಜರ್ ನೀಡಿದ ದೂರಿನ ಮೇರೆಗೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು.

ಜಯಾ ಶೆಟ್ಟಿ ಅವರ ಬಳಿ ಕೋಟಿ ಕೋಟಿ ಸುಲಿಗೆ ಮಾಡಲು ಚೋಟಾ ರಾಜನ್ ಮುಂದಾಗಿದ್ದ. ದೂರವಾಣಿ ಮೂಲಕ ಅವರಿಗೆ ಬೆದರಿಕೆ ಹಾಕಿದ್ದ. ಮುಂಬೈನ ಶ್ರೀಮಂತ ಉದ್ಯಮಿಯಾಗಿದ್ದ ಜಯಾ ಶೆಟ್ಟಿಗೆ ಮುಂಬೈ ಪೊಲೀಸರು ಭದ್ರತೆ ನೀಡಿದ್ದರು.

ನಂತರ 2001ರ ಮಾರ್ಚ್ ಅಂತ್ಯದಲ್ಲಿ ಭದ್ರತೆ ಹಿಂತೆಗೆದುಕೊಳ್ಳುವಂತೆ ಜಯಾ ಶೆಟ್ಟಿ ಅವರು ಪೊಲೀಸರಿಗೆ ಮನವಿ ಮಾಡಿದ್ದರು ಮತ್ತು ಅವರ ಮನವಿ ಮೇರೆಗೆ ಮುಂಬೈ ಪೊಲೀಸರು ಭದ್ರತೆ ಹಿಂತೆಗೆದುಕೊಂಡಿದ್ದರು. ಎರಡೇ ತಿಂಗಳಲ್ಲಿ ಜಯಾ ಶೆಟ್ಟಿ ಮೇಲೆ ಇಬ್ಬರು ಅಪರಿಚಿತರು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದರು.