ಮುಂಬೈ: ಪ್ಯಾರಿಸ್ ಚಾರ್ಲ್ಸ್ ಡಿ ಗೌಲ್ ವಿಮಾನ ನಿಲ್ದಾಣದಿಂದ ಹೊರಟಿದ್ದ ವಿಸ್ತಾರಾ ವಿಮಾನದ ಏರ್‌ಸಿಕ್‌ನೆಸ್ ಬ್ಯಾಗ್‌ನಲ್ಲಿ ಬಾಂಬ್ ಬೆದರಿಕೆ ಪತ್ರ ಪತ್ತೆಯಾದ ನಂತರ ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಬಾಂಬ್ ಬೆದರಿಕೆ ಪತ್ರದ ಬಗ್ಗೆ ಸಿಬ್ಬಂದಿ ವರದಿ ಮಾಡಿದ ಬಳಿಕ ಭಾನುವಾರ ಬೆಳಗ್ಗೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಯಿತು.
ಈ ವಿಮಾನದಲ್ಲಿ 294 ಪ್ರಯಾಣಿಕರು ಮತ್ತು 12 ಸಿಬ್ಬಂದಿಗಳು ಪ್ರಯಾಣಿಸುತ್ತಿದ್ದರು. ಪ್ಯಾರಿಸ್‌ನಿಂದ ಮುಂಬೈಗೆ ಹೊರಟಿದ್ದ ವಿಸ್ತಾರಾ ಫ್ಲೈಟ್ ಯುಕೆ 024ನಲ್ಲಿ ನಮ್ಮ ಸಿಬ್ಬಂದಿ ಸುರಕ್ಷತೆಯ ಕಾಳಜಿಯನ್ನು ವಹಿಸಿದ್ದಾರೆಂದು ನಾವು ಖಚಿತಪಡಿಸುತ್ತೇವೆ ಎಂದು ವಿಸ್ತಾರಾ ಏರ್‌ಲೈನ್ಸ್ ವಕ್ತಾರರು ತಿಳಿಸಿದ್ದಾರೆ.
ವಿಮಾನವು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ತಕ್ಷಣ ಪ್ರೋಟೋ ಕಾಲ್ ಅನ್ನು ಅನುಸರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಎಲ್ಲಾ ಕಡ್ಡಾಯ ತಪಾಸಣೆಗಾಗಿ ಭದ್ರತಾ ಏಜೆನ್ಸಿ ಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ. ಪೊಲೀಸರು ತನಿಖೆಯಲ್ಲಿ ತೊಡಗಿದ್ದು, ನಿರಂತರ ಶೋಧ ನಡೆಸುತ್ತಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ.
ವಾರಾಣಸಿಯಿಂದ ನವದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಇದೇ ರೀತಿಯ ಬೆದರಿಕೆ ಬಂದ ಕೇವಲ ಒಂದು ದಿನದ ನಂತರ ವಿಸ್ತಾರಾ ವಿಮಾನದಲ್ಲಿ ಬಾಂಬ್ ಬೆದರಿಕೆ ಪತ್ರ ಪತ್ತೆಯಾಗಿದೆ.