ತುಮಕೂರು: ದೇಶದಲ್ಲಿ ವಕ್ರಪಾದದಿಂದ ಜನಿಸುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮೂಢನಂಬಿಕೆ ಬಿಟ್ಟು ಆರಂಭದಲ್ಲಿಯೇ ಪೋಷಕರು ಚಿಕಿತ್ಸೆ ಕೊಡಿಸಬೇಕು ಎಂದು ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ತಿಳಿಸಿದರು.
ನಗರದ ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ ಹಾಗೂ ಸರ್ವ್ ಟುಗೆದರ್ ಸಂಸ್ಥೆಯ ಸಹಭಾಗಿತ್ವದಲ್ಲಿ ನಡೆದ ವಿಶ್ವ ವಕ್ರಪಾದ ದಿನಾಚರಣೆ ಉದ್ಘಾಟಿಸಿ ಮಾತನಾಡಿ ಪ್ರತಿ ಹತ್ತು ನಿಮಿಷಕ್ಕೆ ಜನಿಸುವ ಒಟ್ಟು ಮಕ್ಕಳಲ್ಲಿ ಒಂದು ಮಗುವಿಗೆ ವ್ರಕಪಾದದ ಸಮಸ್ಯೆ ಯಿದ್ದು ಹುಟ್ಟಿದ ಕೆಲವೇ ದಿನಗಳಲ್ಲಿ ಚಿಕಿತ್ಸೆ ನೀಡುವ ಮೂಲಕ ಸರಿಪಡಿಸಬಹುದು. ನಮ್ಮ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಇದಕ್ಕಾಗಿಯೇ ಉಚಿತ ಚಿಕಿತ್ಸೆ ನೀಡುವ ವಿಶೇಷ ವಿಭಾಗವಿದ್ದು ಪೋಷಕರು ನಮ್ಮ ಸೇವೆ ಉಪಯೋಗಿಸಿಕೊಳ್ಳಬೇಕು ಎಂದರು.
ಮಕ್ಕಳ ಮೂಳೆ ತಜ್ಞರಾದ ಡಾ.ರಾಹುಲ್ ಮಾತನಾಡಿ ವಕ್ರಪಾದ ಮಕ್ಕಳಲ್ಲಿ ಹುಟ್ಟಿನಿಂದಲೇ ಕಂಡುಬರುವ ಹಿಮ್ಮಡಿಯ ಮತ್ತು ಪಾದದ ವಿಕಾರ ವಾಗಿದ್ದು, ಪ್ಲಾಸ್ಟರ್ ಹಾಕುವ ಮೂಲಕ ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ಚಿಕಿತ್ಸೆ ಆರಂಭಿಸಿ,ಮಗುವಿನ ಪಾದ ಮೂಲ ಸ್ವರೂಪದಲ್ಲಿರುವಂತೆಯೇ, ನೋವಿಲ್ಲದಂತೆ ಮತ್ತು ನಡೆದಾಡುವಂತೆ ಮಾಡಬಹುದು ಎಂದರು.
ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಶಾಲಿನಿ ಮಾತನಾಡಿ ವಕ್ರಪಾದ ಚಿಕಿತ್ಸೆಗೆ ಸರ್ಕಾರಿ ಆರೋಗ್ಯ ಸಂಸ್ಥೆಗಳನ್ನು ಹೊರತುಪಡಿಸಿ ಖಾಸಗಿಯಾಗಿ ನಮ್ಮ ಆಸ್ಪತ್ರೆಯಲ್ಲಿ ನೂತನ ವಿಭಾಗ ಆರಂಭಿಸಿದ್ದು ಸಾರ್ವಜನಿಕರಿಗೆ ಹೆಚ್ಚಿನ ಆಯ್ಕೆಗಳನ್ನು ಒದಗಿಸುತ್ತದೆ. ಪ್ರತಿ ಶುಕ್ರವಾರ ಈ ಸೇವೆ ಸಾರ್ವಜನಿಕರಿಗೆ ದೊರೆಯಲಿದೆ ಎಂದರು
ಸರ್ವ್ ಟುಗೆದರ್ ಸಂಸ್ಥೆ ನಿರ್ದೇಶಕರಾದ ಗೋಪಿ ಬೂಶನಾಥಮ್, ಆರ್ಥೊಪೆಡಿಕ್ ವಿಭಾಗ ಮುಖ್ಯಸ್ಥ ಡಾ.ಮಹೇಶ್, ಸಿಇಒ ಡಾ.ಸಂಜೀವಕುಮಾರ್, ಡಾ.ನಾರಾಯಣಗೌಡ, ಡಾ.ಲೋಹಿತ್, ಡಾ.ಕಾರ್ತಿಕ್, ಡಾ.ದುಷ್ಶಂತ್, ಡಾ.ನಿತಿನ್, ಡಾ.ಶ್ರವಣ್, ಡಾ.ಸುಮುಖ್ ಮುಂತಾದವರು ಉಪಸ್ಥಿತರಿದ್ದರು.