Wednesday, 11th December 2024

ಎನ್​ಡಿಎ, ಇಂಡಿ ಒಕ್ಕೂಟ ಮಹತ್ವದ ಸಭೆ ಇಂದು: ಒಂದೇ ವಿಮಾನದಲ್ಲಿ ನಿತೀಶ್​ ಕುಮಾರ್​, ಆರ್​ಜೆಡಿಯ ತೇಜಸ್ವಿ ಯಾದವ್​​..!

ವದೆಹಲಿ: ಬಿಜೆಪಿ 240 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಬಿಜೆಪಿ ನೇತೃತ್ವದ ಎನ್​ಡಿಎ ಬಹುಮತ ಪಡೆದಿರುವುದರಿಂದ 3ನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಮಂತ್ರಿ ಆಗಲಿದ್ದಾರೆ ಎಂದು ವರದಿಯಾಗಿವೆ. ಇಂದು ಎನ್​ಡಿಎ ಮತ್ತು ಇಂಡಿ ಒಕ್ಕೂಟ ಮಹತ್ವದ ಸಭೆಯನ್ನು ನಡೆಸಲಿವೆ.

ಒಟ್ಟು 543 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ 294 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಸರ್ಕಾರ ರಚನೆಗೆ ಬೇಕಿರುವ 272 ಬಹುಮತದ ಗುರಿಗಿಂತ 22 ಸ್ಥಾನಗಳಲ್ಲಿ ಮುಂದಿದೆ. ಇತ್ತ ಇಂಡಿ ಒಕ್ಕೂಟ 234 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದು, ಬಹುಮತದ ಗುರಿಗಿಂತ 38 ಸ್ಥಾನಗಳು ಕಡಿಮೆ ಇದೆ. ಇದೀಗ ಸರ್ಕಾರ ರಚನೆಯಲ್ಲಿ ಆಂಧ್ರ ಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ತೆಲಗು ದೇಶಂ ಪಾರ್ಟಿ (ಟಿಡಿಪಿ) ಮತ್ತು ಬಿಹಾರದ ಹಾಲಿ ಸಿಎಂ ನಿತೀಶ್​ ಕುಮಾರ್​ ಅವರ ಜೆಡಿಯು ಪಕ್ಷಗಳು ಪ್ರಮುಖ ಪಾತ್ರ ವಹಿಸುತ್ತವೆ. ಇನ್ನು ಈ ಎರಡು ಪಕ್ಷಗಳು ಬಿಜೆಪಿ ಜತೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿದ್ದವು. ಹೀಗಾಗಿ ಟಿಡಿಪಿ ಮತ್ತು ಜೆಡಿಯು ಎನ್​ಡಿಎ ಮೈತ್ರಿಕೂಟದ ಭಾಗವಾಗಿವೆ.

ಚುನಾವಣಾ ಫಲಿತಾಂಶ ಹೊರಬಿದ್ದ ಒಂದು ದಿನದ ಬೆನ್ನಲ್ಲೇ ಎನ್​ಡಿಎ ಮತ್ತು ಇಂಡಿ ಒಕ್ಕೂಟ ಇಂದು ಮಹತ್ವದ ಸಭೆಗಳನ್ನು ನಡೆಸಲಿವೆ. ಜೆಡಿಯು ನಾಯಕ ನಿತೀಶ್​ ಕುಮಾರ್​ ಮತ್ತು ಆರ್​ಜೆಡಿ ನಾಯಕ ತೇಜಸ್ವಿ ಯಾದವ್​​ ಇಬ್ಬರು ಒಂದೇ ವಿಮಾನದಲ್ಲಿ ದೆಹಲಿಗೆ ತೆರಳಿರುವುದು ತೀವ್ರ ಕುತೂಹಲ ಮೂಡಿಸಿದೆ.

ಇಂದು ನಡೆಯುವ ಪ್ರಮುಖ ಸಭೆಗಾಗಿ ರಾಷ್ಟ್ರ ರಾಜಧಾನಿಗೆ ಪ್ರಯಾಣ ಬೆಳೆಸಿರುವ ಇಂಡಿ ಒಕ್ಕೂಟದ ನಾಯಕರಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಆರ್‌ಜೆಡಿಯ ತೇಜಸ್ವಿ ಯಾದವ್, ಶಿವಸೇನೆಯ ಉದ್ಧವ್ ಠಾಕ್ರೆ, ಎನ್​ಸಿಪಿಯ ಶರದ್ ಪವಾರ್ ಮತ್ತು ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಸೇರಿದ್ದಾರೆ.

ಎನ್‌ಡಿಎ ಸಭೆಯಲ್ಲಿ ಪಾಲ್ಗೊಳ್ಳಲು ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು, ಶಿವಸೇನೆ ನಾಯಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಹಿಂದೂಸ್ತಾಂ ಅವಾಮ್ ಮೋರ್ಚಾ ಮುಖ್ಯಸ್ಥ ಜಿತನ್ ರಾಮ್ ಮಾಂಝಿ, ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್, ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್ ಮತ್ತು ಜೆಡಿಎಸ್‌ ನಾಯಕ ಹಾಗೂ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ದೆಹಲಿಗೆ ಪಯಣ ಬೆಳೆಸಿದ್ದಾರೆ.