Wednesday, 11th December 2024

ನೈಜೀರಿಯನ್ ಯುವತಿಗೆ ಯಶಸ್ವಿ ಡ್ಯುಯಲ್ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ

ಎರಡೂ ಕಿವಿಗಳಲ್ಲೂ ಶ್ರವಣದೋಷ ಅನುಭವಿಸುತ್ತಿದ್ದ ನೈಜೀರಿಯನ್ ಯುವತಿಗೆ ಯಶಸ್ವಿ “ಡ್ಯುಯಲ್ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ” ನಡೆಸಿದ ಫೋರ್ಟಿಸ್‌ ವೈದ್ಯರು

ಬೆಂಗಳೂರು: ವೈರಲ್‌ ಜ್ವರದ ಬಳಿಕ ಎರಡೂ ಕಿವಿಗಳು ಶ್ರವಣದೋಷಕ್ಕೆ ಒಳಗಾಗಿದ್ದ ನೈಜೀರಿಯಾ ಮೂಲದ 23 ವರ್ಷದ ಯುವತಿಗೆ ಏಕಕಾಲದಲ್ಲೇ “ಡ್ಯುಯಲ್ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ” ಮೂಲಕ ಯುವತಿಗೆ ಎರಡು ಶ್ರವಣ ಸಾಧನಗಳನ್ನು ಫೋರ್ಟಿಸ್‌ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಅಳವಡಿಸಿದ್ದಾರೆ.

ಫೋರ್ಟಿಸ್‌ ಆಸ್ಪತ್ರೆಯ ಇಎನ್‌ಟಿ, ಕಾಕ್ಲಿಯರ್ ಇಂಪ್ಲಾಂಟ್ ಮತ್ತು ಸ್ಕಲ್ ಬೇಸ್ ಸರ್ಜನ್ ಹಿರಿಯ ಸಲಹೆಗಾರ ಡಾ.ಎಚ್. ಕೆ. ಸುಶೀನ್ ದತ್ ಹಾಗೂ ತಜ್ಞರ ಆರೈಕೆಯಲ್ಲಿ ಈ ಸಂಕೀರ್ಣ ಕಾರ್ಯವಿಧಾನವನ್ನು 9 ಗಂಟೆಗಳಲ್ಲಿ ಪೂರ್ಣಗೊಳಿಸಲಾಯಿತು.

ಈ ಕುರಿತು ಮಾತನಾಡಿದ ಡಾ.ಎಚ್. ಕೆ. ಸುಶೀನ್ ದತ್, 23 ವರ್ಷದ ನೈಜೀರಿಯಾ ಮೂಲದ ಲೀನಾ (ಹೆಸರು ಬದಲಿಸಲಾಗಿದೆ) ಗೆ ಮೂರು ವರ್ಷಗಳ ಹಿಂದೆ ಅತಿಯಾದ ವೈರಲ್‌ ಜ್ವರ ಕಾಣಿಸಿಕೊಂಡಿದೆ, ಈ ಜ್ವರದ ತೀವ್ರತೆಯಿಂದ ಕ್ರಮೇಣ ಅವರು ಮೊದಲು ಬಲಕಿವಿಯ ಕೇಳುವ ಶಕ್ತಿ ಕಳೆದು ಕೊಂಡರು, ನಂತರ ಎಡ ಕಿವಿಯು ಶ್ರವಣವೂ ಹೋಯಿತು. ದೊಡ್ಡ ಶಬ್ಧವನ್ನೂ ಸಹ ಅವರು ಕೇಳಲು ಸಾಧ್ಯವಾಗದ ಸ್ಥಿತಿಗೆ ತಲುಪಿದರು.

ನಂತರ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದ ಬಳಿಕ ಅವರ ಕಿವುಡುತನದ ತೀವ್ರತೆ ಅರಿವಾಯಿತು. ಇವರಿಗೆ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ ಮಾಡಲು ನಿರ್ಧರಿಸಿದೆವು. ಆದರೆ ಇವರಿಗೆ ಎರಡೂ ಕಿವಿಗಳಿಗೂ ಈ ಸರ್ಜರಿ ಅವಶ್ಯಕತೆ ಇತ್ತು, ಸಾಮಾನ್ಯವಾಗಿ ಈ ಸರ್ಜರಿಯನ್ನು ಒಮ್ಮೆಲೆ ಒಂದು ಕಿವಿಗೆ ಮಾತ್ರ ಮಾಡಲು ಸಾಧ್ಯ. ಆದರೆ, ನಮ್ಮ ತಂಡ ಏಕಕಾಲದಲ್ಲೇ ಎರಡೂ ಕಿವಿಗಳಿಗೂ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ ಮಾಡಲು ನಿರ್ಧರಿಸಿದೆವು. ಇದಕ್ಕೆ ಸೂಕ್ತ ತಂತ್ರಜ್ಞಾನಗಳ ಬಳಕೆಯಿಂದ 9 ಗಂಟೆಗಳ ನಿರಂತರ ಶಸ್ತ್ರಚಿಕಿತ್ಸೆಯ ಬಳಿಕ ಅವರಿಗೆ ಶ್ರವಣ ಸಾಧನಗಳನ್ನು ಅಳಡಿಸಲಾಗಿದೆ.

ಶಸ್ತ್ರಚಿಕಿತ್ಸೆಯ 5 ದಿನಗಳ ನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಅವರು ನೈಜೀರಿಯಾದಲ್ಲಿ ಶ್ರವಣೇಂದ್ರಿಯ ಮೌಖಿಕ ತರಬೇತಿಯನ್ನು ಪಡೆಯುತ್ತಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದರು.