Saturday, 14th December 2024

ಭಾರತದ ರಾಜತಾಂತ್ರಿಕತೆಗೆ ವಿಶ್ವದಲ್ಲಿ ಶಹಬಾಸ್ !

ಅಭಿಮತ

ಡಾ.ಜಗದೀಶ್ ಮಾನೆ

ಅಮೆರಿಕದಲ್ಲೀಗ ವಿಶ್ವಸಂಸ್ಥೆ ೭೭ನೇ ಮಹಾ ಅಧಿವೇಶನ ನಡೆಯುತ್ತಿದೆ. ಹಾಗಾಗಿ ಭಾರತದ ವಿದೇಶಾಂಗ ಸಚಿವರು ಅಮೆರಿಕ ಪ್ರವಾಸದಲ್ಲಿದ್ದಾರೆ. ಆ ಅಧಿವೇಶನದಲ್ಲಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳೆಲ್ಲವೂ ಭಾಗಿಯಾಗಿವೆ. ಪ್ರಮುಖವಾಗಿ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರು ಆ
ಅಧಿವೇಶನದಲ್ಲಿ ಮಾಡಿರುವ ಭಾಷಣವು ಎಲ್ಲರನ್ನೂ ನಿಬ್ಬೆರಗಾಗಿಸುವಂತೆ ಮಾಡಿದೆ. ಅದಕ್ಕೆ ಅಂತಾರಾಷ್ಟ್ರೀಯ ವಿಶ್ಲೇಷಕರು ಬಹಳಷ್ಟು ಮೆಚ್ಚುಗೆ ಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಭಾರತದ ನಿರ್ಧಾರಗಳು ಬಹಳಷ್ಟು ಗಟ್ಟಿಯಾಗಿದೆ ಮತ್ತು ಮುಂಬರುವ ದಿನಗಳಲ್ಲಿ ಭಾರತ ಜಾಗತಿಕಮಟ್ಟದಲ್ಲಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯ ಲಿದೆ ಎನ್ನುವ ಬಗ್ಗೆ ಸುದೀರ್ಘ ಚರ್ಚೆಗಳು ನಡೆದಿವೆ. ಆ ಮೂಲಕ ಭಾರತದ ವಿದೇಶಾಂಗ ನೀತಿಯಲ್ಲಿ ಹೊಸ ಬೆಳಕು ಮೂಡುತ್ತಿದೆ. ಹೀಗಿರುವಾಗ ಜೈಶಂಕರ್ ಅವರು ಮಾತನಾಡಿzದರೂ ಏನು? ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಸುಮಾರು ಹತ್ತಾರು ವರ್ಷಗಳ ಹಿಂದೆ ಭಾರತ ವಿದೇಶಿ ನೆಲದಲ್ಲಿ ನಿಂತು ಪಾಕಿಸ್ತಾನವನ್ನು ಟೀಕೆ ಮಾಡುತ್ತಿತ್ತು. ಕಾರಣ, ಪಾಕಿಸ್ತಾನದ ಉಗ್ರವಾದದ ಪೋಷಣೆ ಹಾಗೂ ಕ್ರಾಸ್ ಬಾರ್ಡರ್ ಭಯೋತ್ಪಾದನೆಯನ್ನು ಮಾಡುತ್ತಿತ್ತು. ಭಾರತದಲ್ಲಿ ಅಶಾಂತಿ ಮೂಡಿಸಲು ಪಾಕಿಸ್ತಾನ ಅನೇಕ ಹಿಂಸಾತ್ಮಕ ದುಷ್ಕೃತ್ಯಗಳನ್ನು ಮಾಡುತ್ತಲೇ ಇದೆ ಅಂತ ಭಾರತ ಪದೇ ಪದೇ ಹೇಳುತ್ತಲೇ ಇತ್ತು. ಅತ್ತ ಪಾಕಿಸ್ತಾನವು ಕೂಡಾ ಇದೇ ರಾಗ ಎಳೆಯುತ್ತಾ ‘ಭಾರತದಲ್ಲಿ
ಮೈನಾರಿಟಿಗೆ ತೊಂದರೆಯಾಗುತ್ತಿದೆ, ಅಲ್ಲಿನ ಮುಸ್ಲಿಮರಿಗೆ ಶಾಂತಿಯೇ ಇಲ್ಲ. ಮತ್ತು ಕಾಶ್ಮೀರದ ವಿಚಾರದಲ್ಲಿ ಭಾರತ ಏಕಪಕ್ಷಿಯ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ’ ಅನ್ನುವ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಲೇ ಇತ್ತು.

ಹೀಗೆ ಎರಡೂ ರಾಷ್ಟ್ರಗಳು ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ಮುಳುಗಿದ್ದವು. ಆದರೆ ಇದೀಗ ಭಾರತ ಬದಲಾದರೂ ಪಾಕಿಸ್ತಾನ ಮಾತ್ರ ನಾಯಿ ಬಾಲದಂತೆ ಇನ್ನೂ ತನ್ನ ಹಳೆಯ ವರಸೆಯನ್ನೆ ಮುಂದುವರೆಸಿರುವುದು ವಾಸ್ತವ. ಇದೀಗ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಪಾಕ್ ಅಧ್ಯಕ್ಷ ಶಹಬಾದ್ ಶರೀಫ್ ಭಾರತವನ್ನು ನಿಂದಿಸಿದ್ದಾರೆ. ‘ಭಾರತದ ಹಿಂದುತ್ವ, ಕಾಶ್ಮೀರ ಹಾಗೂ ಆರ್‌ಎಸ್‌ಎಸ್’ ಹೀಗೆ ಅವರ ಇಡೀ ಭಾಷಣದ ಸಾರವೇ ಭಾರತದ ಕೇಂದ್ರಿತ ಆಗಿತ್ತು. ಬಳಿಕ ಅನೇಕರು ಜೈಶಂಕರ್ ಕೂಡಾ ಇದಕ್ಕೆ ಕೌಂಟರ್ ಕೊಡಬಹುದೆನೊ ಅಂತಲೇ ಭಾವಿಸಿದ್ದರು!

ಆದರೆ ಜೈಶಂಕರ್ ಎಲ್ಲಿಯೂ ಕೂಡಾ ಪಾಕಿಸ್ತಾನದ ಹೆಸರನ್ನು ಬಳಸಲಿಲ್ಲ. ಅವರ ಈ ಮಾತಿನ ಹಿಂದೆ ಭಾರತದ ದೊಡ್ಡ ರಾಜತಾಂತ್ರಿಕತೆ ಇರುವುದು
ಅರ್ಥವಾಗುತ್ತದೆ. ಭಾರತ ಎಲ್ಲಿಯವರೆಗೆ ಪಾಕಿಸ್ತಾನದೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತಿರುತ್ತದೆಯೊ ಅಲ್ಲಿಯವರೆಗೆ ಇಡೀ ವಿಶ್ವಕೂಡಾ ಭಾರತವನ್ನು ಅದೇ ದೃಷ್ಟಿಯಲ್ಲಿ ನೋಡುತ್ತಿರುತ್ತದೆ. ಈ ಅಂಶವನ್ನು ಭಾರತ ಚೆನ್ನಾಗಿ ಅರೆತಂತಿದೆ.

ಪಾಕಿಸ್ತಾನವಿಂದು ಅತ್ಯಂತ ಕಡುಬಡ ರಾಷ್ಟ್ರ. ಅಲ್ಲಿ ತಿನ್ನೋದಕ್ಕೆ ಅನ್ನ ಇಲ್ಲ. ಧರ್ಮದ ಅಫೀಮನ್ನೇ ಮೈಗೂಡಿಸಿಕೊಂಡು ಕೇವಲ ಭಯೋತ್ಪಾದನೆ ಯಲ್ಲೇ ಮುಳುಗಿದ ಅವರಿಗೆ ನೂರೆಂಟು ಸಮಸ್ಯೆಗಳು ಕಾಡುತ್ತಿವೆ. ಹೀಗಿರುವಾಗ ಭಾರತಕ್ಕೆ ಪಾಕಿಸ್ತಾನದ ಗೋಜಿಗೆ ಹೋಗುವ ಅವಶ್ಯಕತೆಯಾದರೂ ಏನಿದೆ? ಬದಲಿಗೆ ಭಾರತ ತನ್ನ ವಿದೇಶಾಂಗ ನೀತಿ ನಿಲುವುಗಳನ್ನು ಬದಲಿಸಿಕೊಂಡಿದೆ. ಹಿಗಾಗಿ ಭಾರತಕ್ಕೆ ಪಾಕಿಸ್ತಾನದೊಂದಿಗೆ ಕಂಪೇರ್ ಮಾಡಿ ಕೊಳ್ಳುವ ಅವಶ್ಯಕತೆಯೇ ಇಲ್ಲ. ಭಾರತಕ್ಕೆ ಪಾಕ್ ಅಂತಹ ದೊಡ್ಡ ತ್ರೆಡ್ ಏನೂ ಅಲ್ಲ. ಭಾರತ ಮನಸ್ಸು ಮಾಡಿದರೆ ಯಾವುದೇ ಕ್ಷಣದಲ್ಲೂ ಪಾಕಿಸ್ತಾನವನ್ನು ಹೊಸಕಿ ಹಾಕಿಬಿಡುಬಹುದು.

ಅಂತ ಶಕ್ತಿ ಭಾರತಕ್ಕಿದೆ. ಹೀಗಾಗಿ ಪಾಕಿಸ್ತಾನದ ಬಗ್ಗೆ ಮಾತನಾಡುವುದೇ ವ್ಯರ್ಥ! ಹೀಗೆ ಮಾತನಾ ಡುವುದರಿಂದ ರಾಜತಾಂತ್ರಿಕವಾಗಿ ಭಾರತಕ್ಕೆ
ಯಾವುದೇ ಲಾಭ ಆಗುವುದಿಲ್ಲ. ಇದನ್ನು ಭಾರತ ಸ್ಪಷ್ಟವಾಗಿ ಅರಿತಿದೆ. ಆ ಮೂಲಕ ವಿಶ್ವದ ಯಾವುದೇ ವೇದಿಕೆಯ ಮೇಲೂ ಭಾರತ ಪಾಕಿಸ್ತಾನದ ಬಗ್ಗೆ ಚರ್ಚೆಯನ್ನ ಮಾಡುವುದಿಲ್ಲ. ಬದಲಿಗೆ ಭಾರತ ತನ್ನ ಸಮನಾದ ಚೀನಾಗೆ ಕೌಂಟರ್ ಕೊಡುತ್ತಿದೆ. ಚೀನಾದೊಂದಿಗೆ ಕಾಂಪೀಟ್ ಮಾಡುತ್ತಿದೆ. ಕಾರಣ ಚೀನಾ ಇಂದು ಜಾಗತಿಕವಾಗಿ ಬೆಳೆದು ನಿಂತಿದೆ, ಚೀನಾದಿಂದ ಭಾರತಕ್ಕೆ ಆಗುತ್ತಿರುವ ಸಮಸ್ಯೆಯ ಕಡೆ ತನ್ನ ಗಮನವನ್ನು ಹರಿಸುತ್ತಿದೆ ಭಾರತ.

ಜೈಶಂಕರ್ ಅವರು ವಿಶ್ವಸಂಸ್ಥೆಯ ಮಹಾ ಅಧಿವೇಶನದ ತಮ್ಮ ಭಾಷಣದಲ್ಲಿ ಬಹಳ ಸೂಕ್ಷ್ಮವಾಗಿ ಚೀನಾಗೆ ಕೌಂಟರ್ ಕೊಟ್ಟಿದ್ದರು. ಇಂದು ಕೆಲ ರಾಷ್ಟ್ರಗಳು ಭಯೋತ್ಪಾದನೆಯನ್ನು ಪೋಷಿಸುವಂತಹ ರಾಷ್ಟ್ರಗಳಿಗೆ ಬೆಂಬಲ ಕೊಡುತ್ತಿವೆ. ಇದರ ಪರಿಣಾಮವನ್ನು ಮುಂದೆ ಅವರೆ ಎದುರಿಸ ಬೇಕಾಗುತ್ತದೆ. ಇದಕ್ಕೆ ಇತಿಹಾಸ ಕೂಡಾ ನಮ್ಮ ಕಣ್ಮುಂದೆ ಇದೆ. ಆಫ್ಘಾನಿಸ್ತಾನದಲ್ಲಿದ್ದ ಯುಎಸ್‌ಎಸ್‌ಆರ್ ಹಿಡಿತವನ್ನು ತಪ್ಪಿಸುವ ದೃಷ್ಟಿಯಿಂದ ತಾಲಿಬಾನನ್ನು ಅಮೆರಿಕ ಬೆಳೆಸಿತ್ತು. ಆದರೆ ಒಂದೊಮ್ಮೆ ಅದೇ ತಾಲಿಬಾನ್ ಮುಖ್ಯಸ್ಥ ಅಮೆರಿಕದ ಮೇಲೆ ತಿರುಗಿ ಬಿದ್ದ. ಇದರಿಂದ ಹೈರಾಣಾದ ಅಮೆರಿಕ ಸುಮಾರು ೨೦ ವರ್ಷಗಳ ಕಾಲ ಅಫ್ಘಾನಿಸ್ತಾನದಲ್ಲಿ ತಳ ಊರುವ ಸ್ಥಿತಿ ಎದುರಾಗಿತ್ತು. ಇಂದಿಗೂ ಉಗ್ರರಿಂದ ವಿಶ್ವವು ಬಹಳಷ್ಟು ಸಂಕಷ್ಟ
ಎದುರಿಸುತ್ತಿದೆ. ಹೀಗೆ ಜೈಶಂಕರ್ ಸೂಕ್ಷ್ಮವಾಗಿ ಚೀನಾಗೆ ಚಾಟಿ ಬೀಸಿದ್ದರು.

ಜೊತೆಗೆ ಜೈಶಂಕರ್ ಇಂಗ್ಲೆಂಡಿಗೂ ಕೂಡಾ ಮುಟ್ಟಿ ಮುಟ್ಟಿ ನೋಡಿಕೊಳ್ಳುವ ಕೌಂಟರ್ ಕೊಟ್ಟಿದ್ದರು. ಭಾರತ ೧೮ನೇ ಶತಮಾನದಲ್ಲಿ ವಿಶ್ವದ ಅತಿ ದೊಡ್ಡ ಜಿಡಿಪಿಯನ್ನು ಹೊಂದಿತ್ತು. ಆ ಸಂದರ್ಭದಲ್ಲಿ ಭಾರತದ ಆರ್ಥಿಕತೆಗೆ ಯಾವುದೇ ರಾಷ್ಟ್ರವನ್ನು ಹೋಲಿಕೆ ಮಾಡಲು ಸಾಧ್ಯ ಆಗುತ್ತಿರಲಿಲ್ಲ. ಅಷ್ಟೊಂದು ದೊಡ್ಡ ಶಕ್ತಿಯಾಗಿ ಬೆಳೆದಿತ್ತು ಭಾರತ. ಆದರೆ ಬ್ರಿಟಿಷರು ಭಾರತದಲ್ಲಿ ೨೦೦ ವರ್ಷಗಳ ಕಾಲ ಆಳ್ವಿಕೆ ಮಾಡಿ ೧೯೪೭ರಲ್ಲಿ ಬಿಟ್ಟು ಹೊಗುವ ಸಂದರ್ಭದಲ್ಲಿ ಭಾರತ ವಿಶ್ವದ ಅತಿ ದೊಡ್ಡ ಬಡದೇಶವಾಗಿ ನಿರ್ಮಾಣವಾಗಿತ್ತು. ಆದರೆ ಭಾರತ ಇದನ್ನು ದೂಷಿಸದೆ ಸ್ವತಂತ್ರ ಬಂದ ೭೫ ವರ್ಷಗಳ ಬಳಿಕ ಇಂದು ಇಂಗ್ಲೆಂಡನ್ನೇ ಬೀಟ್ ಮಾಡಿ ವಿಶ್ವದ ಐದನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ.

ಭಾರತ ಇಂತಹ ಚಾಲೆಂಜುಗಳನ್ನು ಎದುರಿಸಿ ಜಯಿಸಿದೆ ಅಂತ ಗಟ್ಟಿ ದನಿಯಲ್ಲಿ ಜೈಶಂಕರ್ ಗುಡುಗಿದ್ದರು. ಭಾರತ ಸ್ವತಂತ್ರಗೊಂಡು ೧೯೪೭ಕ್ಕೆ ೧೦೦
ವರ್ಷ ಆಗುತ್ತದೆ, ಆ ಹೊತ್ತಿಗೆ ಭಾರತ ಮತ್ತಷ್ಟು ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುವ ಗುರಿಯನ್ನು ಮೋದಿ ಹೊಂದಿದ್ದಾರೆ. ನಾವಿಂದು ಡಿಜಿಟಲೈಜೆ ಷನ್‌ಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ ಜತೆಗೆ ಬಹಳ ಮುಖ್ಯವಾಗಿ ಬಡತನದ ನಿರ್ಮೂಲನೆಗೆ ಭಾರತ ಸರಕಾರ ನಿರಂತರವಾಗಿ ಶ್ರಮಿಸುತ್ತಲೇ ಇದೆ ಎಂದು ಹೇಳಿದ್ದರು.

ಮತ್ತೊಂದೆಡೆ ಭಾರತ ತನ್ನ ಅಭಿವೃದ್ಧಿಯೊಂದಿಗೆ ಅಕ್ಕಪಕ್ಕದ ಸಣ್ಣಪುಟ್ಟ ರಾಷ್ಟ್ರಗಳಿಗೂ ಹೆಚ್ಚಿನ ಸಹಾಯವನ್ನು ಮಾಡುತ್ತಲಿದೆ. ಕೋವಿಡ್ ಸಂದರ್ಭ ದಲ್ಲಿ ವ್ಯಾಕ್ಸಿನ್ ಕಂಡು ಹಿಡಿದ ನಂತರ ಅದನ್ನು ಕೇವಲ ಭಾರತದಲ್ಲಿ ಮಾತ್ರ ಉಪಯೋಗಿಸದೆ ಅನೇಕ ರಾಷ್ಟ್ರಗಳಿಗೂ ಉಚಿತವಾಗಿ ಹಂಚಿತ್ತು ಭಾರತ. ಆಫ್ಘಾನಿಸ್ತಾನದಲ್ಲಿ ಆಹಾರ ಸಮಸ್ಯೆ ಅದಾಗಲೂ ೫೦,೦೦೦ ಟನ್ ಗೋಧಿಯನ್ನು ಅಫ್ಘಾನಿಗಳಿಗೆ ನೀಡಿತ್ತು ಭಾರತ. ಶ್ರೀಲಂಕಾ ಆರ್ಥಿಕ ಸಂಕಷ್ಟ ದಲ್ಲಿದ್ದ ಸಂದರ್ಭದಲ್ಲಿ ೩.೮ ಬಿಲಿಯನ್ ಡಾಲರ್ ಹಣವನ್ನು ಶ್ರೀಲಂಕಾಗೆ ನೆರವಿನ ರೂಪದಲ್ಲಿ ಭಾರತ ನೀಡಿತ್ತು. ಮಯನ್ಮಾರ್ ದೇಶಕ್ಕೂ ಹತ್ತು ಸಾವಿರ ಟನ್ ಆಹಾರವನ್ನು ಒದಗಿಸಿತ್ತು. ಈ ಮೂಲಕ ಭಾರತ ತನ್ನ ಸಾಮಾಜಿಕ ಬದ್ಧತೆಯನ್ನು ಮೆರೆಯುವುದರ ಜೊತೆ ಜೊತೆಗೆ ಸಂಕಷ್ಟದಲ್ಲಿರುವ ಬಡ ದೇಶಗಳನ್ನೂ ಕೂಡಾ ಮೇಲೆತ್ತುವಂತ ಪ್ರಯತ್ನವನ್ನು ಮಾಡುತ್ತಿದೆ. ಹೀಗೆ ವಿದೇಶಾಂಗ ಸಚಿವರು ಬಹಳಷ್ಟು  ಬುದ್ಧತೆಯಿಂದ ಮಾತನಾಡಿದರು.

ಹೀಗೆ ಜಯಶಂಕರ್ ಅವರ ಜಾಣ್ಮೆಯಿಂದ ಭಾರತಕ್ಕೆ ಸಾಕಷ್ಟು ಲಾಭಗಳಾಗಿವೆ. ಬಳಿಕ ಆ ಅಽವೇಶನದಲ್ಲಿ ರಷ್ಯಾ ಭಾರತದ ಪರವಾಗಿ ಬ್ಯಾಟ್ ಬೀಸಿದ್ದು ಬಹಳ ವಿಶೇಷ, ಭಾರತಕ್ಕೂ ಕೂಡಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಸ್ಥಾನವನ್ನು ನೀಡಬೇಕಂತ ರಷ್ಯಾ ಪ್ರತಿಪಾದಿಸಿತ್ತು. ಬಳಿಕ ಅಮೆರಿಕದ ಅಧ್ಯಕ್ಷ ಜೊಬಿಡನ್ ಕೂಡಾ ಆ ಸಭೆಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ಸ್ಥಾನ ಸಿಗಬೇಕು ಅದಕ್ಕೆ ನಮ್ಮ ತೀವ್ರವಾದ ಒತ್ತಾಯವಿದೆ ಅಂತ ಹೇಳಿದ್ದರು. ಅಮೆರಿಕ ಹಾಗೂ ರಷ್ಯಾ ಎರಡೂ ರಾಷ್ಟ್ರಗಳು ಭಾರತವನ್ನು ಬೆಂಬಲಿಸುತ್ತಿವೆ. ಅಚ್ಚರಿಯ ಸಂಗತಿ ಎಂದರೆ ವಿಶ್ವದಲ್ಲಿಂದು ಎರಡು ಬಣಗಳಾಗುತ್ತಿವೆ.

ಒಂದು ಅಮೆರಿಕದ ಬಣ ಮತ್ತೊಂದು ರಷ್ಯಾ ಬಣ. ಆದರೆ ಭಾರತ ಈ ಎರಡು ಬಣಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮನ್ವಯ ಸಾಧಿಸಿಕೊಂಡು ಹೋಗುತ್ತಿರುವುದು ಸಾಮಾನ್ಯ ಸಂಗತಿಯಲ್ಲ. ಜೈ ಶಂಕರ್ ಮಾತನಾಡುವ ಸಂದರ್ಭದಲ್ಲಿ ಅನೇಕರು ನೀವು ಉಕ್ರೇನ್ ಅಥವಾ ರಷ್ಯಾ ಯಾವ ದೇಶದ ಪರ ಅಂತ ಕೇಳಿದ್ದರು. ಅದಕ್ಕೆ ಜೈಶಂಕರ್ ನಾವು ಎರಡರ ಪರವೂ ಅಲ್ಲ. ‘ನಾವು ಶಾಂತಿಯ ಪರ’ ಭಾರತ ಯಾವತ್ತೂ ಕೂಡಾ ಶಾಂತಿಯ ಪರವಾಗಿ ನಿಲ್ಲುತ್ತದೆ ಅಂದಿದ್ದರು. ವಿಶ್ವಕ್ಕೆ ಭಾರತದ ಸಂದೇಶ ಬಹಳ ಕ್ಲಿಯರ್ ಆಗಿದೆ. ಅದನ್ನು ವಿಶ್ವವೂ ಒಪ್ಪಿಕೊಂಡಿದೆ.

ಮತ್ತೊಂದು ವಿಶೇಷವಾದ ಅಂಶ ಅಂದ್ರೆ, ಕಳೆದ ಸಭೆಯಲ್ಲಿ ಮೆಕ್ಸಿಕೋ ರಾಷ್ಟ್ರದ ಅಧ್ಯಕ್ಷರು ‘ವಿಶ್ವಕ್ಕೊಂದು ಶಾಂತಿ ಕೂಟ ಬೇಕಿದೆ’ ಅದರಲ್ಲಿ ಭಾರತದ
ಪ್ರಧಾನಿ ನರೇಂದ್ರ ಮೋದಿ, ಪೋಪ್ ಹಾಗೂ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಈ ಮೂವರನ್ನು ಒಳಗೊಂಡಂತೆ ಕೂಟ ರಚನೆ ಆಗಬೇಕು, ಇದರಿಂದ ವಿಶ್ವದಲ್ಲಿ ಶಾಂತಿ ನೆಲೆಸುತ್ತದೆ ಅಂತ ಪ್ರತಿಪಾದಿಸಿದ್ದರು. ಆದರೆ ಅವರು ಈ ವರ್ಷ ನಡೆದ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಬಹಳ ಅಚ್ಚರಿಯ ಮಾತುಗಳನ್ನಾ ಡಿದ್ದರು. ಪೋಪ್ ಹಾಗೂ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಇಬ್ಬರ ಹೆಸರುಗಳನ್ನೂ ಕೈ ಬಿಟ್ಟು ಕೇವಲ ವಿಶ್ವದ ಶಾಂತಿಗೆ ನರೇಂದ್ರ ಮೋದಿ ಮಾತ್ರ ಇರಬೇಕು ಅಂತ ಪ್ರತಿಪಾದನೆ ಮಾಡಿದ್ದರು.

ಇವರ ಮಾತುಗಳನ್ನು ಆಲಿಸಿದ ಇಡೀ ಸಭೆ ಮೌನಕ್ಕೆ ಜಾರಿತು. ಇದರ ಅರ್ಥ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ಸಿಗಲೇಬೇಕು ಎನ್ನುವು ದಾಗಿತ್ತು. ಈ ಸಭೆಯಲ್ಲಿ ಜೈ ಶಂಕರ್‌ರ ಜಾಣ್ಮೆಯ ಮಾತುಗಳು ಅಲ್ಲಿನ ಎಲ್ಲಾ ದೇಶದ ಪ್ರತಿನಿಧಿಗಳಲ್ಲಿ ತಲ್ಲಣ ಉಂಟಾಗುವಂತೆ ಮಾಡಿತು. ಜೈ ಶಂಕರ್ ಅವರ ಪ್ರಬುದ್ಧತೆ, ಹಾಗೂ ಅವರ ಸಾಮರ್ಥ್ಯ ಭಾರತವನ್ನು ಮುಂದಿನ ದಿನಮಾನಗಳಲ್ಲಿ ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ನಿಟ್ಟಿನಲ್ಲಿ ಭಾರತ ವಿಶ್ವದ ಅತಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲು ಬೇಕಾದ ಎಲ್ಲ ತಯಾರಿಗಳನ್ನೀಗ ಮಾಡಿಕೊಳ್ಳು ತ್ತಿದೆ.

(ಲೇಖಕರು: ರಾಜ್ಯಶಾಸ್ತ್ರ ಅಧ್ಯಾಪಕರು ಹಾಗೂ
ಹವ್ಯಾಸಿ ಬರಹಗಾರರು)