Wednesday, 11th December 2024

ಮತ್ತೆ ಬಿಕ್ಕಟ್ಟಿನತ್ತ ಕನ್ನಡ ಚಿತ್ರರಂಗ?

ಪ್ರಸ್ತುತ

ಶ್ರೀಧರ್‌ ಡಿ.ರಾಮಚಂದ್ರಪ್ಪ

ಸದ್ಯ ನಟ ದರ್ಶನ್ ದುರ್ಘಟನೆ ಒಂದೊರಲ್ಲಿ ಭಾಗಿಯಾಗಿ ಜೈಲು ಸೇರಿದ ನಂತರ ಕನ್ನಡ ಚಿತ್ರರಂಗಕ್ಕೆ ಕಾರ್ಮೋಡ ಕವಿದು, ಬಿಕ್ಕಟ್ಟು ಎದುರಿಸುತ್ತಿದೆ.

ಕರುನಾಡಿನ ಜನ ಹೇಗೆ ಶಾಂತಿ-ಸೌಹಾರ್ದತೆಗೆ ಹೆಸರುವಾಸಿಯೋ, ಹಾಗೆಯೇ ಚಂದನವನದ ಕಲಾವಿದರಾದ ನಟ-ನಟಿಯರು ಕೂಡ ಸಭ್ಯತೆ-ಸಂಸ್ಕಾರಕ್ಕೆ ಸಾಕ್ಷಿಯಾದವರು. ಈಗೀರುವಾಗ ಕನ್ನಡ ಚಿತ್ರರಂಗಕ್ಕೆ ಶತಮಾನದ ಇತಿಹಾಸ, ಹಿನ್ನೆಲೆಯಿದೆ. ಹಾಗಾಗಿ, ಇಂತಹ ಭವ್ಯ ಪರಂಪರೆ ಇರುವ ಸ್ಯಾಂಡಲ್ ವುಡ್‌ಗೆ ಅನೇಕ ಮಹನೀಯ ಕಲಾವಿದರು ಲಿಂಗ ಭೇದವಿಲ್ಲದೆ ತಮ್ಮ ಸರಳತೆ-ಸಜ್ಜನಿಕೆಯ ಜತೆ ಪ್ರತಿಭೆ ಮುಖೇನ ನಾಡಿನ ಗಡಿಯನ್ನು ದಾಟಿ ತಮ್ಮನ್ನು ಗುರುತಿಸುವಂತಹ ವ್ಯಕ್ತಿತ್ವ, ಸಾಧನೆಯ ಛಾಪನ್ನು ಮೂಡಿಸಿದ್ದರು.

ಅದರಲ್ಲೂ ನಮ್ಮ ಪ್ರಾತಃ ಸ್ಮರಣೀಯ ಕಲಾವಿದರಾದ, ಎಪ್ಪತ್ತರ ದಶಕದಲ್ಲಿ ಕನ್ನಡ ಚಿತ್ರರಂಗವನ್ನು ಮೇಲ್ಮಟ್ಟಕ್ಕೆ ಕೊಂಡೊಯ್ದ ನಟರಾದ ಉದಯ್ ಕುಮಾರ್, ಕಲ್ಯಾಣ ಕುಮಾರ್ ಹಾಗೂ ಡಾ.ರಾಜ್ ಕುಮಾರ್ ಮತ್ತು ನಟಿಯರಾದ ಕಲ್ಪನಾ, ಮಂಜುಳಾ, ಜಯಂತಿ, ಭಾರತಿಯಂತವರು ತಮ್ಮ ಪ್ರತಿಭೆಯ ಮೂಲಕ ನಾಡಿನ ಮನೆ, ಮನೆಗಳಿಗೆ ತಲುಪಿದರು. ಇಂತಹ ಸಂದರ್ಭದಲ್ಲಿ ಕುಮಾರರತ್ನರಿಗಿಂತ ಕಿರಿಯರಾದ ವಿಷ್ಣುವರ್ಧನ್, ಶಂಕರ್ ನಾಗ್, ಅನಂತನಾಗ್ ಕೂಡಾ ತಮ್ಮ ಜನಪ್ರಿಯ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಇಮೇಜ್ ಅನು ಗಳಿಸಿಕೊಂಡವರು,
ಉಳಿಸಿಕೊಂಡವರು.

ಹೀಗಾಗಿ, ಆಧುನಿಕತೆ, ತಂತ್ರಜ್ಞಾನ ಹೆಚ್ಚು ಮುಂದುವರೆದ ಕಾಲಘಟ್ಟದಲ್ಲಿ ಇಂದು ನಾವಿದ್ದೇವೆ. ಪ್ರಸ್ತುತ ಭಾರತೀಯ ಚಿತ್ರರಂಗದಲ್ಲಿ ತೆಲುಗು,
ತಮಿಳು, ಮಲಯಾಳಂ ಜತೆಗೆ ಹಿಂದಿಯ ಬಾಲಿವುಡ್ ರಂಗಗಳು ತಮ್ಮ ವಿಭಿನ್ನ ಪ್ರಯೋಗ, ಸಿನಿಮಾ ತಯಾರಿಕೆ ಮೂಲಕ ವಿಶೇಷ ಸ್ಥಾನಮಾನಗಳಿಂದ ಗುರುತಿಸಿಕೊಂಡಿವೆ. ಆದ ಕಾರಣ ಹಿಂದಿನ ಕಾಲಕ್ಕೆ ಹೋಲಿಸಿದರೆ ಈಗ ಸದ್ಯ ಮೇಕಿಂಗ್ ಸೇರಿದಂತೆ ಸಿನಿಮಾ ಕಲಾವಿದರ ಸಂಭಾವನೆ, ಗೌರವ-ಮರ್ಯಾದೆ, ಅಭಿಮಾನಿಗಳ ಗಳಿಕೆಯಲ್ಲಿ ಗಮನಾರ್ಹ ಅಂಶಗಳನ್ನು ಗಮನಿಸಬಹುದು.

ಕನ್ನಡದ ಮೇರು ನಟ ಡಾ. ರಾಜ್ ಕುಮಾರ್ ಅವರು ಆಗಾಗ್ಗೆ ನೆನಪು ಮಾಡಿಕೊಳ್ಳುವಂತೆ ಸಿನಿಮಾ ನಿರ್ಮಾಪಕರನ್ನು ಅನ್ನ ಹಾಕುವ ಧಣಿಗಳು ಎಂದು ಕರೆದರೆ, ವೀಕ್ಷಿಸುವ ಅಭಿಮಾನಿಗಳನ್ನು ದೇವರೆಂದೇ ಭಾವಿಸಿದ್ದರು. ಇವು ಅವರಲ್ಲಿ ಜೀವಪರ ಕಾಳಜಿ, ಮಾನವೀಯ ಗುಣಗಳು ಇವೆ ಎಂಬುದಕ್ಕೆ ಉದಾಹರಣೆ ಆಗಿ ದ್ದವು. ಹಾಗೆಯೇ, ಇದು ಸಾಹಸ ಸಿಂಹ ಬಿರುದಾಂಕಿತ ವಿಷ್ಣುವರ್ಧನ್, ಕರಾಟೆ ಕಿಂಗ್ ಶಂಕರ್ ನಾಗ್, ಅನಂತನಾಗ್ ಅವರಿಗೂ ಅನ್ವಯಿಸುತ್ತದೆ. ಇಂತಹ ಸನ್ನಿವೇಶದಲ್ಲಿ ಇಂದಿನ ಸ್ಯಾಂಡಲ್‌ವುಡ್‌ನ ಕಲಾವಿದರಾದ ನಟ-ನಟಿಯರನ್ನು ನೆನೆಸಿಕೊಂಡಾಗ ನಮಗೆ ಬೇಸರ-ಜಿಗುಪ್ಸೆ ಉಂಟಾಗುತ್ತದೆ.

ಹಣ, ಖ್ಯಾತಿ, ಅಂಧಾಭಿಮಾನಿಗಳ ಗಳಿಕೆಯಿಂದ ದರ್ಪ, ಅಹಂಕಾರ, ದುರ್ವರ್ತನೆ ಮೇರೆ ಮೀರಿದ್ದು ಮಾನವೀಯತೆ, ಸಾಮಾಜಿಕ ಕಾಳಜಿ-ಕಳಕಳಿ, ಪ್ರeವಂತಿಕೆ ಎಂಬ ಗುಣಗಳು ತೆರೆ ಮರೆಗೆ ಸರಿದಿವೆ. ಮದ್ಯ, ದುಶ್ಚಟ, ಪಾರ್ಟಿ, ಮೋಜು-ಮಸ್ತಿ ಎಂದು ದಿನಬೆಳಗಾದರೆ ಸುದ್ದಿಯಾಗುತ್ತಿರುವುದನ್ನು ನಾವು ಇಂದು ಕಾಣುತ್ತಿದ್ದೇವೆ. ಸಿನಿಮಾ, ನಿರ್ದೇಶಕ, ನಿರ್ಮಾಪಕ, ಅಭಿಮಾನಿಗಳೆಂದರೆ ವಿಶೇಷ ಗೌರವ- ಮರ್ಯಾದೆ-ಪ್ರೀತಿ ಇಟ್ಟುಕೊಂಡಿದ್ದ ಹಿಂದಿನ ನಟ-ನಟಿಯರ ಮುಂದೆ ಇಂದಿನ ಸಿನಿಮಾ ಕಲಾವಿದರು ಕುಬ್ಜರಾಗುತ್ತಾರೆ. ಸಿನಿಮಾ, ನಟನೆ ಎಂದರೆ ದೈವವೆಂದು ಭಕ್ತಿ ತೋರಿಸುತ್ತಿದ್ದ ಹಿಂದಿನವರೆಲ್ಲಿ, ಸಿನಿಮಾವೆಂದರೆ ಕೇವಲ ಹಣ-ಹೆಸರು ಮಾಡುವ ಕ್ಷೇತ್ರವೆಂದು ನಂಬಿರುವ ಇಂದಿನವರೆಲ್ಲಿ? ನಯ, ವಿನಯ, ಸಭ್ಯತೆ, ಸಂಸ್ಕಾರ ಗುಣಗಳನ್ನು ತಮ್ಮ ನಡವಳಿಕೆಯಲ್ಲಿ ವ್ಯಕ್ತಪಡಿಸುತ್ತಿದ್ದ, ತಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡಿದ್ದ ಹಿಂದಿನ ಡಾ.ರಾಜ, ವಿಷ್ಣುವರ್ಧನ್, ಶಂಕರ್ ನಾಗ್, ಅನಂತನಾಗ್ ಅಂತಹ ಮೇರು ನಟರಿಂದ ಈ ಕಾಲಮಾನದ ನಟರು ಕಲಿಯುವುದು ಸಾಕಷ್ಟಿದೆ.

ನನ್ನದೇ ಹವಾ, ನಾನೇ ಚಿತ್ರರಂಗ ಆಳೋದು, ನನಗೇ ಜಾಸ್ತಿ ಅಭಿಮಾನಿಗಳು ಇರುವುದು ಸೇರಿದಂತೆ ಹಣ, ಕಾರು, ಆಸ್ತಿ ನನ್ನದೇ ಹೆಚ್ಚು ಇರುವುದು. ಅದಕ್ಕಾಗಿ ನಾನೇ ಕನ್ನಡ ಚಿತ್ರರಂಗದ ನಂಬರ್ ಒನ್ ನಟಿ ಎಂದು ಠೇಂಕಾರದಿಂದ ಹೇಳಿಕೊಳ್ಳುವ ಇಂದಿನ ನಟರಲ್ಲಿ ಪ್ರಜ್ಞಾವಂತಿಕೆ, ವಿವೇಕ, ಜಾಣ್ಮೆ ಮರೆಯಾಗಿರುವುದು ಮೇಲುನೋಟಕ್ಕೆ ಎದ್ದು ಕಾಣುತ್ತದೆ. ಅಲ್ಲದೇ, ಇದು ಇಂದಿನ ಸಿನಿಮಾ ಕಲಾವಿದರಿಗೆ ಏನೋ ಕೊರತೆ ಇದೆ ಎಂಬುದನ್ನು ತೋರಿಸುತ್ತದೆ. ಸಿನಿಮಾ ತೆರೆಯ ಮೇಲೆ ಹೇಗೆ ಕಾಣುತ್ತಿದ್ದರೋ, ಅದರಂತೆ ಬದುಕಿ-ಬಾಳಿ ಹೋದವರು ಡಾ.ರಾಜ, ವಿಷ್ಣು, ಶಂಕರ್ ನಾಗ್ ಅವರುಗಳು. ಅವರಲ್ಲಿದ್ದ ಜನಪರ, ಜೀವ ಪರ ಕಾಳಜಿ ಹೀಗಿನವರಿಗೆ ಏಕಿಲ್ಲ? ಎಂಬ ಪ್ರಶ್ನೆ ಸಹಜವಾಗಿಯೇ ನಮ್ಮನ್ನು ಕಾಡುತ್ತಿದೆ.

ತೆರೆಯ ಮೇಲೆ ಹೀರೋ ಆಗಿ, ನಿಜ ಜೀವನದಲ್ಲಿ ವಿಲನ್ ಎನಿಸಿಕೊಂಡಿರುವ ಇಂದಿನ ನಟರು ಈ ನಿಟ್ಟಿನಲ್ಲಿ ತಮ್ಮನ್ನೇ ಆತ್ಮ ವಿಮರ್ಶೆಗೆ ಒಡ್ಡಿಕೊಳ್ಳುವ ಅಗತ್ಯವಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ನಮಗೆ ರಾಜ, ವಿಷ್ಣು, ಬಹುವಾಗಿ ನೆನಪಾಗುತ್ತಾರೆ.