Wednesday, 11th December 2024

ಪ್ರಜಾಪ್ರಭುತ್ವದ ಕನಸು ಸಾಕಾರವಾಗುವುದಾದರೂ ಹೇಗೆ ?

ಅಭಿಮತ

ವೀಣಾ ಬಿ.ಎಂ.

ಈ ಚುನಾವಣೆಗಳು ಬಂದಾಗಲೆಲ್ಲ ನಮ್ಮ ರಾಜಕಾರಣಿಗಳು ಆಕಾಶವನ್ನು ಅಂಗೈಯ ತೋರಿಸುತ್ತಾರೆ. ಚುನಾವಣೆಗೂ ಮುನ್ನ ಹಲವಾರು ಆಶ್ವಾಸನೆಗಳನ್ನು ಘೋಷಿಸುತ್ತಾರೆ. ಆ ಮೂಲಕ ಸಾಮಾನ್ಯ ಬಡ ಜನರನ್ನು ಆಸೆ ಬುರುಕರನ್ನಾಗಿಸಿ ಚುನಾವಣೆ ಗೆಲ್ಲುವ ಮೂಲಕ ಅಧಿಕಾರಕ್ಕೆ ಬರುತ್ತಾರೆ. ಬಳಿಕ ಅವರು
ನೀಡಿರುವ ಆಶ್ವಾಸನೆಗಳ ಈಡೇರಿಕೆಗಾಗಿ ಹಣ ಹೊಂದಿಸಬೇಕಲ್ಲ; ಅದು ಪುನಃ ಬೆಲೆ ಏರಿಕೆಗಳಿಗೇ ಕಾರಣವಾಗುತ್ತದೆ. ಬೇರೆ ಬೇರೆ ಪಕ್ಷಗಳು ಈ ಉಚಿತ ಗಳಿಂದ ತಂದುಕೊಂಡ ಸಮಸ್ಯೆಗಳ ಬಗ್ಗೆ ರಾಜಕಾರಣಿಗಳಿಗೂ ಮತ್ತು ಜನರಿಗೂ ಗೊತ್ತಿರುತ್ತದೆ.

ಆದರೆ ಮತ ಹಾಕುವ ಸಂದರ್ಭದಲ್ಲಿ ಮತದಾರರು ಆಲೋಚನೆಗಳೇ ಬೇರೆಯಾಗಿ ಬಿಡುತ್ತವೆ. ಇದೀಗ ಯಾರೆಲ್ಲ ನಮಗೆ ಹೆಚ್ಚಿನ ಹಣ ಕೊಡುತ್ತಾರೆ, ಮತ್ತು ನಾಳೆ ಏನೆಲ್ಲ ಕೊಡ್ತೀವಿ ಅಂತ ಹೇಳಿದ್ದಾರೋ ಅದೆಲ್ಲವನ್ನು ನೋಡಿ ಮತ ಹಾಕುತ್ತಾರೆ. ವಾಸ್ತವ ಅಂದರೆ, ಯಾವೆಲ್ಲ ಪಕ್ಷಗಳು ಬಡವರಿಗೆ ಆಸೆ ಆಮೀಷಗಳನ್ನು ತೋರಿಸಿ ಚುನಾವಣೆಗಳನ್ನು ಗೆದ್ದಿರುತ್ತಾರೋ, ಮುಂದೆ ಅವರು ನಮ್ಮದೇ ಹಣವನ್ನು ಕಿತ್ತುಕೊಂಡು ಪುನಃ ನಮಗೆ ಕೊಡುತ್ತಾರೆ ಅನ್ನೋದು ಬಹಳಷ್ಟು ಸಾಮಾನ್ಯ ಜನರಿಗೆ ಅರ್ಥವೇ ಆಗುವುದಿಲ್ಲ.

ಸಾಮಾನ್ಯ ಜನರು ಮಾತ್ರ ಈ ರಾಜಕಾರಣಿಗಳ ಆಸೆ ಅಮಿಷಗಳಿಗತೆ ತಮ್ಮ ಅಮೂಲ್ಯವಾದ ಮತವನ್ನು ಮಾರಿಕೊಂಡು ಬಲಿಯಾಗುತ್ತಲೇ ಇರುತ್ತಾರೆ.
ಈ ಚಾಲಾಕಿ ರಾಜಕಾರಣಿಗಳಂತೂ ಸುಳ್ಳು ಹೇಳುವುದರಲ್ಲಿ ಎತ್ತಿದ ಕೈ! ಕಳೆದ ಏಳೆಂಟು ದಿನಗಳ ಹಿಂದೆ ಬೆಂಗಳೂರಿನ ಪೋ ಆಫೀಸ್ ಮುಂದೆ ಟಕಾಟಕ್, ಟಕಾಟಕ್, ಟಕಾಟಕ್ ಅಂತ ಆಕಾಶದಿಂದ ಉದುರುವ ಹಣವನ್ನು ಪಡೆದುಕೊಳ್ಳಲಿಕ್ಕಾಗಿ ಸಾವಿರಾರು ಮಹಿಳೆಯರು ಕ್ಯೂ ನಿಂತಿದ್ದರು. ಅಷ್ಟಕ್ಕೂ ಟಕಾಟಕ್ ಅಂತ ಹಣವನ್ನ ಎಲ್ಲಿಂದ ಹಾಕ್ತಾರೆ? ಯಾರು ಹಾಕ್ತಾರೆ? ಅನ್ನೊ ಅನ್ನೊದರ ಬಗ್ಗೆ ಸಾಮಾನ್ಯ ಪ್ರಜ್ಞೆ ಕೂಡಾ ಆ ಹೆಣ್ಣುಮಕ್ಕಳಿಗಿರಲಿಲ್ಲ. ರಾಜಕಾರಣಿಗಳು ಹೇಗೆಲ್ಲ ನಮಗೆ ಮೋಸ ಮಾಡುತ್ತಾರೆ ಅನ್ನೊ ಉದಾಹರಣೆ ಕೂಡ ನಮ್ಮ ಕಣ್ಮುಂದಿದೆ.

ಉಚಿತ ಕರೆಂಟ್ ಕೊಡುವ ಮೊದಲೇ ಉಳಿದೆಲ್ಲರ ಕರೆಂಟ್ ಬಿಲ್ಲುಗಳನ್ನು ಏರಿಸಿದ್ದರು. ಹೆಣ್ಣು ಮಕ್ಕಳಿಗೆ ಟಿಕೆಟ್ ಫ್ರೀ ಅಂತ ಹೇಳಿ ಗಂಡಸರ ಬಸ್ ಟಿಕೆಟ್ ಏರಿಸಿದ್ದರು. ಗಂಡಸರು ಬಸ್ಸುಗಳಲ್ಲಿ ಓಡಾಡಬೇಕು ಅಂದ್ರೆ ಟಿಕೆಟ್ ತಗೊಂಡು ಕೂಡ ನಿಂತು ಹೋಗಬೇಕಾದ ಸ್ಥಿತಿಯನ್ನು ನಿರ್ಮಾಣ ಮಾಡಿದ್ದರು. ಹೆಂಗಸರಿಗೆ ಎರಡು ಸಾವಿರ ಅಂತ ಹೇಳಿ ಗಂಡಸರ ಜೇಬುಗಳಿಗೆ ಕತ್ರಿ ಹಾಕಿದ್ದರು. ಸರಾಯಿ, ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಗಗನಕ್ಕೇರಿಸಿದರು. ಇದರ ಹೊರೆ
ಕೇವಲ ನಾವು ಪ್ರಯಾಣಿಸುವ ವಾಹನಗಳ ಮೇಲೆ ಮಾತ್ರ ಬಿಳುವುದಿಲ್ಲ ಬದಲಿಗೆ ನಾವು ಖರೀದಿಸುವ ತರಕಾರಿ ಹಾಕಿ ಬೇಳೆ ಶಾಲಾ ಮಕ್ಕಳ ವಾಹನದ ಶುಲ್ಕ ಆಟೋಚಾರ್ಯ ಹೋಟೆಲ್‌ಗಳಲ್ಲಿ ಕುಡಿಯೋ ಕಾಫಿ ತಿನ್ನೋ ಆಹಾರ ಹೀಗೆ ಎಲ್ಲದರ ಮೇಲು ಹೊರೆ ಬೀಳುತ್ತದೆ.

ಹೀಗೆ ರಾಜಕಾರಣಿಗಳು ನಮ್ಮ ಮನೆಗಳನ್ನೇ ಕೊಳ್ಳೆ ಹೊಡೆದು ಅದರಲ್ಲಿ ಅವರು ಚೆನ್ನಾಗಿ ತಿಂದು ತೇಗಿ ಉಳಿದಿದ್ದನ್ನು ನಮಗೆ ಕೊಡುತ್ತಾರೆ. ಇದೆಲ್ಲ ನಮ್ಮ ಸಾಮಾನ್ಯ ಜನರಿಗೆ ಅರ್ಥ ಆಗುವುದಾದರೂ ಯಾವಾಗ? ಈ ಭವ್ಯ ಭಾರತದ ಪ್ರಬುದ್ಧ ಮತದಾರಣ ಮನಸ್ಥಿತಿ ಬದಲಾಗಬೇಕಿದೆ. ಕೇವಲ ನಾವು, ನಮ್ಮ
ಪ್ರಜಾಪ್ರಭುತ್ವಕ್ಕೆ ಶಕ್ತಿ ಇದೆ, ಬಲಿಷ್ಠ ಪ್ರಜಾಪ್ರಭುತ್ವ ನಮ್ಮದು ಅಂತ ಜಂಬ ಕೊಚ್ಚಿಕೊಳ್ಳುವ ಬದಲು ಮುಂಬರುವ ಚುನಾವಣೆಗಳಲ್ಲಿ ಯೋಚನೆ ಮಾಡಿ ಮತದಾನ ಮಾಡಬೇಕು.

ಕರ್ನಾಟಕದ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಘೋಷಿಸಿತ್ತು. ಅದನ್ನು ಈಡೇರಿಸುವುದಕ್ಕೆ ಸುಮಾರು ೫೦ ಸಾವಿರ ಕೋಟಿಗಿಂತ ಅಧಿಕ ಪ್ರಮಾಣದ ಹಣದ ಅವಶ್ಯಕತೆ ಇತ್ತು. ಅದಕ್ಕಾಗಿ ಅವರು ರಾಜ್ಯದಲ್ಲಿ ಈಗ ಎಲ್ಲದರ ಬೆಲೆಗಳನ್ನು ವಿಪರೀತ ಪ್ರಮಾಣದಲ್ಲಿ ಏರಿಸಿದ್ದಾರೆ. ಇದರ ಮದ್ಯೆ ಲೋಕಸಭಾ ಚುನಾವಣೆಗಳು ಮುಗಿದಿವೆ. ಆದರೆ ಗ್ಯಾರಂಟಿಗಳು ಅವರ ಕೈ ಹಿಡಿದಿಲ್ಲ. ಇವರಂದುಕೊಂಡಷ್ಟು ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬಂದಿಲ್ಲ. ಹೀಗಾಗಿ ಗ್ಯಾರಂಟಿಗಳನ್ನು ತೆಗೆಯಲು ಕೆಲ ಮಂತ್ರಿ ಶಾಸಕರುಗಳು ಸಭೆಯಲ್ಲಿ ಚರ್ಚಿಸಿದ್ದರು. ಆದರೆ ಇನ್ನೂ ಕೆಲವರು ಈ ಗ್ಯಾರಂಟಿಗಳನ್ನು ತೆಗೆದರೆ ಮುಂದಿನ ಚುನಾವಣೆಯಲ್ಲಿ ಹೊಡೆತ ಬೀಳುತ್ತದೆ ಎಂಬ ಸಲಹೆಗಳನ್ನು ಕೊಟ್ಟಿದ್ದರು.ಈಗ ಅದೇ ಪರಿಸ್ಥಿತಿಯಲ್ಲಿ ಆಂಧ್ರಪ್ರದೇಶವು ಇದೆ.

ಪಕ್ಕದ ರಾಜ್ಯ ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಅವರ ನೂತನ ಸರಕಾರ ಅಧಿಕಾರಕ್ಕೆ ಬಂದಿದೆ. ಈ ಹಿಂದಿನ ಸರಕಾರ ಜಾರಿಗೆ ತಂದಿರುವ ಯೋಜನೆಗಳು ಮತ್ತು ಅವರು ಮಾಡಿಕೊಂಡ ಸಾಲದ ಜೊತೆ ಜೊತೆಗೆ ಈ ಚುನಾವಣೆಯ ಸಂದರ್ಭದಲ್ಲಿ ನಾಯ್ಡು ಘೋಷಿಸಿದ ಸೂಪರ್ ಸಿಕ್ಸ್ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಹಣದ ಅವಶ್ಯಕತೆ ಬಹಳ ಇದೆ. ಹಾಗಾಗಿ ಆ ಹಣವನ್ನು ಹೊಂದಿಸುವುದು ಹೇಗೆ ಎಂಬುದರ ಗೊಂದಲ ಅವರ ನೀಗ ಕಾಡುತ್ತಿದೆ. ಎನ್ಡಿಎ ಸರ್ಕಾರಕ್ಕೆ ೧೬ ಸಂಸದರ ಬೆಂಬಲವನ್ನು ಕೊಟ್ಟಿದ್ದ ನಾಯ್ಡು ಪಕ್ಷ ಮೊನ್ನೆ ಕೇಂದ್ರ ಸಚಿವ ಸಂಪುಟ ರಚನೆಯ ಸಂದರ್ಭದಲ್ಲಿ ಬಿಜೆಪಿ ಕೊಟ್ಟಿದ್ದ ಸ್ಥಾನಮಾನಗಳನ್ನು ಸ್ವೀಕರಿಸಿ ಸುಮ್ಮನಿದ್ದಾರೆ.

ಇದರರ್ಥ, ಇವರ ಮುಂದಿನ ಯೋಜನೆಗಳಿಗೆ ಕೇಂದ್ರ ಸರಕಾರ ಹಣದ ವಿಶೇಷ ಪ್ಯಾಕೇಜ್ ಕೊಡುತ್ತದೆ ಎಂಬ ಹುಮ್ಮಸ್ಸಿನಲ್ಲಿದ್ದಾರೆ. ಆಂಧ್ರದಲ್ಲಿ ಹಿಂದಿನ
ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರ ಸರಕಾರ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿತ್ತು. ವಿದ್ಯಾರ್ಥಿ, ಮಹಿಳೆ, ವೃದ್ಧ, ವ್ಯಾಪಾರಿ, ಕೃಷಿಕ, ಕಾರ್ಮಿಕ ಹೀಗೆ ಎಲ್ಲ ವರ್ಗಗಳಿಗೂ ಉಚಿತಗಳನ್ನು ನೀಡಿದ್ದರು. ಸರಕಾರ ಘೋಷಿಸಿದ ಎಲ್ಲ ಸಹಾಯಧನಗಳನ್ನು ಯಾವುದಾದರೊಂದು ಕುಟುಂಬ ಪಡೆದರೆ ಆ ಕುಟುಂಬಕ್ಕೆ ವಾರ್ಷಿಕ ೧.೨೦ ಲಕ್ಷದಷ್ಟು ಹಣ ಸಿಗುತ್ತೆ. ಹೀಗೆ ಹಲವು ಯೋಜನೆಗಳ ಹೆಸರಲ್ಲಿ ಜನರಿಗೆ ನೇರವಾಗಿ ಹಣವನ್ನೇ ಹಾಕುತ್ತಾ ಹೋಗಿದ್ದರಿಂದ ಅಲ್ಲಿ ಅಭಿವೃದ್ಧಿಗೆ ಬೊಕ್ಕಸದಲ್ಲಿ ಹಣ ಕಾಲಿ ಆಗಿದೆ. ಅಲ್ಲಿನ ಸರಕಾರಿ ನೌಕರರಿಗೆ ಸಮಯಕ್ಕೆ ಸರಿಯಾಗಿ ವೇತನಗಳು ಸಿಗದ ಪರಿಸ್ಥಿತಿ ನಿರ್ಮಾಣವಾಯಿತು.

ಉದ್ಯೋಗ ಸೃಷ್ಟಿ ಸಾಧ್ಯವಾಗಲಿಲ್ಲ ನಿರುದ್ಯೋಗಿ ಲಕ್ಷಾಂತರ ಯುವಕರು ಹೊಟ್ಟೆಪಾಡಿಗಾಗಿ ಪಕ್ಕದ ತೆಲಂಗಾಣ ಕರ್ನಾಟಕ ತಮಿಳುನಾಡಿಗೆ ಒಲಸೆ ಹೋಗ ಬೇಕಾದ ಸ್ಥಿತಿ ನಿರ್ಮಾಣವಾಯಿತು. ಇದರಿಂದ ಆ ಸರಕಾರದ ಬಗ್ಗೆ ಜನರಲ್ಲಿ ಜಿಗುಪ್ಸೆ ಉಂಟಾಯಿತು. ಆ ಸಂದರ್ಭದಲ್ಲಿ ಆಡಳಿತರೂಢ ಪಕ್ಷದ ಅಧಿಕಾರ ಕಸಿದುಕೊಳ್ಳಲು ಟಿಡಿಪಿಯು ಕೂಡಾ ಅಂತಹದ್ದೇ ಘೋಷಣೆಗಳನ್ನು ಮಾಡಿ ಚುನಾವಣೆಯಲ್ಲಿ ಗೆದ್ದಿದೆ. ಹೀಗಾಗಿ ಅವರ ಮುಂದೆ ಇದೀಗ ಸಾಕಷ್ಟು ಸವಾಲುಗಳಿವೆ. ಇವರ ಉಚಿತ ಯೋಜನೆಗಳನ್ನು ಜಾರಿಗೆ ತರಲು ಅಂದಾಜು ಅರವತ್ತು ಸಾವಿರ ಕೋಟಿಗಳಷ್ಟು ಹಣದ ಅವಶ್ಯಕತೆ ಇದೆ. ಇತ್ತ ನೋಡಿದರೆ ಬೊಕ್ಕಸವೆಲ್ಲ
ಖಾಲಿಯಾಗಿದೆ.

ಹಿಂದಿನ ಜಗನ್ಮೋಹನ್ ರೆಡ್ಡಿ ಸರಕಾರದ ಅವಧಿಯಲ್ಲಿ ೪,೪೨,೪೪೨ ಕೋಟಿಯಷ್ಟು ಆಂಧ್ರ ಪ್ರದೇಶದ ಸಾಲ ಇದೆ. ಇದೇ ೨೧ ಮಾರ್ಚ್ ೨೦೨೪ರ ಮಾಹಿತಿ ಯನ್ವಯ ರಾಜ್ಯದ ಒಟ್ಟು ವಿತ್ತಿಯ ಕೊರತೆ ೫೫,೮೧೭,೦೫ ಕೋಟಿ ಇದೆ. ಇದು ೨೦೧೮-೧೯ ನೇ ಸಾಲಿನಲ್ಲಿ ಇದು ೩೫.೪೪೧ ಸಾವಿರ ಕೋಟಿಗಳಷ್ಟು ಇತ್ತು ಈಗ ಶೇ.೫೭ ರಷ್ಟು ಹೆಚ್ಚಳ ಆಗಿದೆ. ನೂತನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇದಕ್ಕೆ ಪರಿಹಾರ ಹುಡುಕಬೇಕಿದೆ. ಮಹಿಳೆಯರಿಗೆ ಉಚಿತ ಬಸ್, ದೀಪಂ ಯೋಜನೆಯ ಅಡಿ ವರ್ಷಕ್ಕೆ ಮೂರು ಗ್ಯಾಸ್, ಪ್ರತಿ ಮಹಿಳೆಗೆ ವಾರ್ಷಿಕ ೧೮೦೦೦ ರುಪಾಯಿ, ೧೮ ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಹದಿನೈದು ಸಾವಿರ ವಾರ್ಷಿಕ ಬತ್ತೆ, ನಿರುದ್ಯೋಗಿ ಯುವಕರಿಗೆ ವಾರ್ಷಿಕ ೩೦೦೦ ಹಣ, ಪ್ರತಿ ಮನೆಗೆ ಉಚಿತ ಶುದ್ಧ ಕುಡಿಯುವ ನೀರಿನ ಸರಬರಾಜು ಮಾಡಬೇಕಿದೆ.

ಇದಕ್ಕೆಲ್ಲ ಪ್ರತಿ ವರ್ಷ ೬೦ ಸಾವಿರ ಕೋಟಿಯಷ್ಟು ಹಣದ ಅವಶ್ಯಕತೆ ಇದೆ. ಜೊತೆಗೆ ಇದೇ ಜುಲೈ ಒಂದರ ಒಳಗೆ ೬೫ ಲಕ್ಷ ಫಲಾನುಭವಿಗಳಿಗೆ ಪೆನ್ಷನ್ ಗಾಗಿ ೪.೫ ಸಾವಿರ ಕೋಟಿ ರು ಹಾಗೂ ಸರಕಾರಿ ನೌಕರ ವೇತನಕ್ಕಾಗಿ ೬,೦೦೦ ಕೋಟಿ ರುಪಾಯಿಗಳ ಅವಶ್ಯಕತೆ ಇದೆ. ಇದರ ಬಳಿಕ ಘೋಷಿಸಿದ ಹೊಸ ಯೋಜನೆಗಳಿಗೆ ಬೇಕಾದ ಅರವತ್ತು ಸಾವಿರ ಕೋಟಿ ರುಪಾಯಿಗಳನ್ನು ಹೊಂದಿಸಬೇಕು. ಈ ಎಲ್ಲ ಸವಾಲುಗಳು ಚಂದ್ರಬಾಬು ನಾಯ್ಡು ಸರಕಾರದ
ಮುಂದಿದೆ.

ಇನ್ನು ಇದೇ ಜೂನ್ ೨ಕ್ಕೆ ಹೈದರಾಬಾದ್ ರಾಜಧಾನಿಯ ಖುಣದ ಅವಧಿಯೂ ಮುಗಿದಿದೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಅವರಿಗೂಂದು ನೂತನ ರಾಜಧಾನಿ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಕಳೆದ ಹತ್ತು ವರ್ಷದ ಹಿಂದೆ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ
ಅಮರಾವತಿಯನ್ನು ಆಂಧ್ರಪ್ರದೇಶದ ನೂತನ ರಾಜಧಾನಿ ಅಂತ ಘೋಷಿಸಿದ್ದರು. ಅದರ ಕೆಲಸ ಕಾರ್ಯಗಳು ಕೂಡ ಆರಂಭವಾಗಿದ್ದವು. ಬಳಿಕ ನಾಯ್ಡು ನಂತರ ಬಂದ ಜಗನ್ ಸರಕಾರ ಆ ಯೋಜನೆಗೆ ಸಂಪೂರ್ಣ ಬ್ರೇಕ್ ಹಾಕಿತು. ಇದೀಗ ಮತ್ತೆ ನಾಯ್ಡು ಈ ಐದು ವರ್ಷಗಳ ಅವಧಿಯಲ್ಲಿ ಅಮರಾವತಿಯನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದಾರೆ.

ನಾಯ್ಡು ಅವರು ವಿದೇಶಿ ಹೂಡಿಕೆಗಳನ್ನು ತರುವುದರಲ್ಲಿ ಬಹಳ ಕ್ರಿಯಾಶೀಲರು. ಅವರಿಗೊಂದು ಅಭಿವೃದ್ಧಿಯ ವಿಷನ್ ಇದೆ ಆದರೆ ಅಂದುಕೊಂಡಂತೆ ಹೂಡಿಕೆ ಗಳು ರಾಜ್ಯಕ್ಕೆ ಬರಬೇಕಾದರೆ ಅಲ್ಲಿನ ಇನ್ರಾಸ್ಟ್ರಕ್ಚರ್ ತುಂಬಾ ಚೆನ್ನಾಗಿರಬೇಕಾಗುತ್ತದೆ ಇದಕ್ಕೆ ಹಣದ ಅವಶ್ಯಕತೆ ಇದೆ ಈ ಎಲ್ಲಾ ಕಾರ್ಯಗಳು ಸಾಕಾರ ಹಾಗೂ ಹೊತ್ತಿಗೆ ಅವರ ಗ್ಯಾರಂಟಿಗಳೇ ಅವರನ್ನು ಹುರಿದು ಮುಕ್ಕುವ ಸಾಧ್ಯತೆಗಳು ಹೆಚ್ಚಿದೆ. ಅವರ ಈ ಎಲ್ಲ ಕಾರ್ಯ ಯೋಜನೆಗಳನ್ನು ಸಾಕಾರ ಗೊಳಿಸಲು ಅವರಿಗೆ ಕೇಂದ್ರ ಸರಕಾರದ ಮೇಲಿನ ಡಿಪೆಂಡೆಂಸಿ ಹೆಚ್ಚಿದೆ. ಅದು ಏನಾಗುತ್ತೋ ಗೊತ್ತಿಲ್ಲ. ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಆಂಧ್ರದ ನೂತನ ಸರಕಾರ ತನ್ನ ಆರ್ಥಿಕ ಸಮಸ್ಯೆಗಳನ್ನು ಹೇಗೆ ನಿಭಾಯಿಸಿಕೊಳ್ಳುತ್ತದೆ ಎಂಬ ದೊಡ್ಡ ಸವಾಲು ಅವರ ಮುಂದಿದೆ.

(ಲೇಖಕರು: ಹವ್ಯಾಸಿ ಬರಹಗಾರರು)