Saturday, 14th December 2024

ವಿಶ್ವ ಸಂಗೀತ ದಿನ: ಎಲ್ಲೆಲ್ಲೂ ಸಂಗೀತ

ಸ್ವರ ಸುಗ್ಗಿ

ಕೆ.ವಿ.ವಾಸು

ಸಂಗೀತವನ್ನು ಗಂಧರ್ವ ವಿದ್ಯೆ ಎಂದು ಕರೆಯಲಾಗುತ್ತದೆ. ಸಂಗೀತಕ್ಕೆ ನೆಲ, ಜಲ, ಜಾತಿ, ಬಡತನ, ಸಿರಿತನ ಇದ್ಯಾವುದರ ಸೋಂಕಿಲ್ಲ. ನಿರಂತರ ಸಾಧನೆ ಮತ್ತು ಪರಿಶ್ರಮದ ಮೂಲಕ ಇದು ಒಲಿಯಬಲ್ಲ ವಿಶಿಷ್ಟ ವಿದ್ಯೆಯೇ. ಗೀತಂ, ವಾದ್ಯಂ, ನೃತ್ಯಂ ಚತ್ರಯಂ ಸಂಗೀತ ಮುಚ್ಯತೆ, ಅಂದರೆ, ಗೀತ, ವಾದ್ಯ,
ನೃತ್ಯ, ಈ ಮೂರು ಸಂಗೀತ ಎಂಬ ಪದಕ್ಕೆ ಅರ್ಥ. ಲಲಿತ ಕಲೆಗಳಲ್ಲಿ ಶ್ರೇಷ್ಠವಾದದ್ದು ಸಂಗೀತ.

ಲೋಕದ ಡೊಂಕನ್ನು ತಿದ್ದಲು, ಸಾಮಾಜಿಕ ಮೌಲ್ಯಗಳನ್ನು ಪ್ರಚುರಪಡಿಸಲು, ಹಾಡು, ಭಜನೆ, ನಾಮ ಸಂಕೀರ್ತನೆಗಳ ಮೂಲಕ ಪುರಂದರ ದಾಸರಾ ದಿಯಾಗಿ ಹಲವಾರು ದಾಸವರೇಣ್ಯರು ಪ್ರಯತ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಹರಿ ಕಥೆಗಳನ್ನು ಸಹ ಸಂಗೀತದ ಒಂದು ಭಾಗವೆಂದು ಪರಿಗಣಿಸಬಹು ದಾಗಿದೆ. ಕೆಲವು ದಾಸಶ್ರೇಷ್ಠರು, ಸಾಧು ಸಂತರು ಸಂಗೀತವನ್ನು ಮುಕ್ತಿಯ ಮಾರ್ಗವಾಗಿ ಬಳಸಿಕೊಂಡರು. ಅವರ ಪೈಕಿ ತ್ಯಾಗರಾಜರು, ಪುರಂದರ ದಾಸರು, ಕನಕದಾಸರು, ಸೂರದಾಸ್, ತುಳಸಿದಾಸರು ಮುಂತಾದವರನ್ನು ಇಲ್ಲಿ ಸ್ಮರಿಸಬಹುದು.

ಭಾರತೀಯ ಸಂಗೀತ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ. ಜಾನಪದ ಶೈಲಿ, ಪಾಶ್ಚಿಮಾತ್ಯ ಸಂಗೀತ ಎಂಬ ಹಲವಾರು ಬೈಬಿಧ್ಯಗಳುಂಟು. ತ್ಯಾಗರಾಜ, ಪುರಂದರದಾಸ, ಕನಕದಾಸರಂತಹ ಮಹಾನುಭಾವರು ಸಂಗೀತದ ಮೂಲಕವೇ ಆತ್ಮ ಸಾಕ್ಷಾತ್ಕಾರ ಮಾಡಿಕೊಂಡಿದ್ದನ್ನು ನಾವೆ ತಿಳಿದಿದ್ದೇವೆ. ದೇವರಲ್ಲಿ ನಮ್ಮ ದಿವ್ಯ ಪ್ರಾರ್ಥನೆ ಸಲ್ಲಿಸಲು ಸಂಗೀತವೇ ಅತ್ಯಂತ ಸೂಕ್ತವಾದ ಮಾರ್ಗವೆನ್ನಬಹುದು. ಸಂಗೀತದ ಗಂಧ ಗಾಳಿಯನ್ನು ಅರಿಯದ ಅದೆಷ್ಟೋ ಗಾಯಕರು ಸುಮಧುರವಾಗಿ ಹಾಡಬಲ್ಲರು. ಸಂಗೀತಕ್ಕಿರುವ ಸಮ್ಮೋಹನಾ ಶಕ್ತಿ ಎಂತಹವರನ್ನು ಕೂಡ ಸುಲಭವಾಗಿ ಸೆಳೆಯ ಬಲ್ಲದು.

ಇಂಪಾದ ಸಂಗೀತಕ್ಕೆ ಪಶು ಪ್ರಾಣಿಗಳು ಕೂಡ ತಮ್ಮದೇ ಆದ ರೀತಿಯಲ್ಲಿ ಸ್ಪಂದಿಸುತ್ತವೆ, ಮರ ಗಿಡಗಳು ಕೂಡ ತೂಗಾಡುತ್ತವೆ. ಹೀಗಾಗಿ, ಸಂಗೀತ ಎಂಬುದು ದೈವೀಕವಾದ ಅಸಮಾನ್ಯವಾದ ವಿದ್ಯೆ ಎನ್ನಬಹುದು. ಪಂಡಿತ್ ಭೀಮಸೇನ ಜೋಷಿ, ಮಲ್ಲಿಕಾರ್ಜುನ ಮನ್ಸೂರ್, ಗಂಗೂಬಾಯಿ
ಹಾನಗಲ್, ಪುಟ್ಟರಾಜ ಗವಾಯಿ ಮುಂತಾದ ವಿದ್ವಾಂಸರು ಹಿಂದೂಸ್ತಾನಿ ಸಂಗೀತದ ಅನರ್ಘ್ಯ ರತ್ನಗಳಾಗಿದ್ದರೆ ದಿವಂಗತ ಡಾ ಬಾಲ ಮುರುಳಿಕೃಷ್ಣ ರವರನ್ನು ಕರ್ನಾಟಕ ಸಂಗೀತದ ಮೇರು ಪರ್ವತವೆನ್ನಬಹುದು. ಶಾಸೀಯ ಹಾಗೂ ಸಿನಿಮಾ ಸಂಗೀತದ ಸವ್ಯಸಾಚಿಯಾಗಿರುವ ೮೨ ವರ್ಷ ವಯಸ್ಸಿನ
ಪದ್ಮಶ್ರೀ ಡಾ. ಕೆ.ಜೆ.ಯೇಸುದಾಸ್ ರವರಂತೂ ದೇಶವಿದೇಶ ಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಇನ್ನು ಸಂಗೀತ ವಿದುಷಿಯರ ಪೈಕಿ ಮೊದಲನೇ ಸಾಲಿನಲ್ಲಿ ನಿಲ್ಲುವ ದಿವಂಗತ ಡಾ. ಎಂ.ಎಸ್.ಸುಬ್ಬ ಲಕ್ಷ್ಮಿ, ಹಿಂದಿ ಸಿನಿಮಾ ಕ್ಷೇತ್ರದ ಧೃವ ತಾರೆ ಲತಾ ಮಂಗೇಷ್ಕರ್, ಹಿಂದಿ ಚಿತ್ರರಂಗದ ಅತ್ಯಂತ ಜನಪ್ರಿಯ ಗಾಯಕರಾದ ಕಿಶೋರ್ ಕುಮಾರ್, ಮುಖೇಶ್, ಹರಿಹರನ್ ಮುಂತಾದವರನ್ನು ಸ್ಮರಿಸಬಹುದು. ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ನೂರಾರು ಸುಮಧುರ ಹಾಡು ಗಳನ್ನು ಹಾಡಿರುವ ದಿವಂಗತ ಘಂಟಸಾಲ ಕೂಡ ಓರ್ವ ಸರ್ವಶ್ರೇಷ್ಠ ಗಾಯಕ ಮತ್ತು ಸಂಗೀತ ನಿರ್ದೇಶಕರಾಗಿದ್ದರು. ಬಹುಭಾಷಾಗಾಯಕಿಯರಾದ ಎಸ್. ಜಾನಕಿ, ಪಿ.ಸುಶೀಲ, ದಿವಂಗತ ವಾಣಿ ಜಯರಾಂ ಮುಂತಾದ ಹಿನ್ನಲೆ ಗಾಯಕಿ ಯರೂ ಸಹನೆನಪಿನಲ್ಲಿ ಉಳಿಯುವಂತಹ ಸಹಸ್ರಾರು ಹಾಡುಗಳನ್ನು ಹಾಡಿ ಜನ ಮಾನಸದಲ್ಲಿ ಇಂದಿಗೂ ಕೂಡ ಪ್ರಸ್ತುತರಾಗಿದ್ದಾರೆ.

ಸಿನಿಮಾ ಸಂಗೀತದಲ್ಲಿ ಅತ್ಯುತ್ತಮ ಸೇವೆ ವಿವಿಧ ಭಾರತೀಯ ಭಾಷೆಗಳಲ್ಲಿ ೪೫,೦೦೦ ಕ್ಕೂ ಅಧಿಕ ಹಾಡು ಗಳನ್ನು ಹಾಡಿ, ೨೦೨೦ ರ ಸೆಪ್ಟೆಂಬರ್ ೨೫ ರಂದು ಕೋವಿಡ್ ಸೋಂಕಿನಿಂದ ಮೃತಪಟ್ಟ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ, ಡಾ.ರಾಜಕುಮಾರ್‌ರವರ ಶಾರೀರ ಎಂದೇ ಕರೆಯಲ್ಪಡುತ್ತಿದ್ದ
ಮತ್ತೋರ್ವ ಮೇರು ಗಾಯಕ ಪ್ರತಿವಾದಿ ಭಯಂಕರ ಶ್ರೀನಿವಾಸ್, ಜಯಚಂದ್ರನ್, ರಾಜಕುಮಾರ್ ಭಾರತಿ ಮುಂಗಾರು ಮಳೆ ಚಿತ್ರದ ಮೂಲಕ ಖ್ಯಾತಿಯ ಶಿಖರ ವೇರಿದ ಸೋನು ನಿಗಮ, ಉದಿತ್ ನಾರಾಯಣ, ಕುನಾಲ್ ಗಾಂಜಾವಾಲ, ಶ್ರೇಯಾ ಘೋಷಲ, ಕೆ.ಎಸ್. ಚಿತ್ರಾ, ಬಿ.ಕೆ. ಸುಮಿತ್ರ, ಎಲ್.ಆರ್.ಈಶ್ವರಿ ಮುಂತಾದ ಮಹಾನ್ ಗಾಯಕ ಗಾಯಕಿಯರು ಭಾರತೀಯ ಸಂಗೀತ ವನ್ನು ತಮ್ಮ ಅಪೂರ್ವ ಕಂಠ ಸಿರಿಯಿಂದ ಶ್ರೀಮಂತ ಗೊಳಿಸಿದ್ದಾರೆ.

ಡಾ.ರಾಜ್ ಕುಮಾರ್‌ಸಹ ಅದ್ಭುತ ಕಂಠ ಸಿರಿಯನ್ನು ಹೊಂದಿದ್ದ ನಟ. ಇವರು ಸಹಾ ನೂರಾರು ಸುಮಧುರ ಚಿತ್ರ ಗೀತೆಗಳ ಜೊತೆಗೆ ಭಕ್ತಿ ಗೀತೆಗಳನ್ನು ಹಾಡಿದ್ದಾರೆ. ಇನ್ನು ಸುಗಮ ಸಂಗೀತದಲ್ಲಿ ತಮ್ಮದೇ ಆದ ವಿಶಿಷ್ಟ ಚಾಪು ಮೂಡಿಸಿದ್ದ ಮೈಸೂರು ಅನಂತಸ್ವಾಮಿ, ಹಿರಿಯ ಗಾಯಕ ಸಿ.ಅಶ್ವಥ್ ಮುಂತಾ ದವರ ಕೊಡುಗೆ ಕೂಡ ಗಣನೀಯವಾಗಿದೆ. ಸಂಗೀತ ಕುರಿತಂತೆ ವಿವಿಧ ಭಾರತೀಯ ಭಾಷೆ ಗಳಲ್ಲಿ ಹಲವಾರು ಚಲನಚಿತ್ರಗಳು ತಯಾರಾಗಿದೆ. ೬೦ರ ದಶಕದಲ್ಲಿ ಡಾ ರಾಜಕುಮಾರ್ ನಾಯಕತ್ವದ ಸಂದ್ಯಾರಾಗ, ೭೦ ರ ದಶಕದಲ್ಲಿ ಅನಂತನಾಗ್ ನಾಯಕತ್ವದ ಹಂಸಗೀತೆ, ೮೦ ರ ದಶಕದಲ್ಲಿ ವಿಷ್ಣುವರ್ಧನ್ ನಾಯಕತ್ವದ ಮಲಯ ಮಾರುತ, ದ್ವಾರಕೀಶ್ ನಿರ್ಮಾಣದ ಆನಂದ ಭೈರವಿ ಮುಂತಾದ, ಚಿತ್ರಗಳನ್ನು ಇಲ್ಲಿ ಸ್ಮರಿಸಬಹುದು.

ಭಾರತೀಯ ಚಿತ್ರರಂಗದ ಬೇರೆ ಬೇರೆ ಭಾಷೆಗಳಲ್ಲಿ ಸಹ ಹಲವಾರು. ಸಂಗೀತ ಪ್ರಧಾನ ಚಿತ್ರಗಳು ತೆರೆಕಂಡಿವೆ. ತೆಲುಗು ಚಿತ್ರಗಳಾದ ಶಂಕರಾ ಭರಣಂ, ಅನ್ನಮ್ಮಯ್ಯ ಮುಂತಾದ ಚಲನಚಿತ್ರಗಳನ್ನು ಇಲ್ಲಿ ಉಖಿಸಬಹುದು. ಕನ್ನಡ ಚಿತ್ರರಂಗದಲ್ಲಿ ಹಲವಾರು ಪ್ರಖ್ಯಾತ ಸಂಗೀತ ನಿರ್ದೇಶಕರು ಅತ್ಯುತ್ತಮ ಅನ್ನಬಹುದಾದ ಸಾವಿರಾರು ಗೀತೆಗಳಿಗೆ ಸಂಗೀತ ಸ್ಪರ್ಷ ನೀಡಿದ್ದಾರೆ. ಅವರ ಪೈಕಿ ಕೆಲವರನ್ನು ಸ್ಮರಿಸಬಹುದಾದರೆ, ಆರ್.ಕೆ.ಪದ್ಮನಾಭ ಶಾಸ್ತ್ರಿ, ಸುದರ್ಶನಂ, ಗೋವರ್ಧನಂ, ಜಿ.ಕೆ.ವೆಂಕಟೇಶ್, ವಿಜಯ ಭಾಸ್ಕರ, ರಾಜನ್ ನಾಗೇಂದ್ರ, ಎಂ.ರಂಗರಾವ್, ಸತ್ಯಂ, ಇಳಯರಾಜ, ಶಂಕರ್ ಗಣೇಶ್, ಎಂ.ವೆಂಕಟರಾಜು, ಟಿ.ಜಿ.ಲಿಂಗಪ್ಪ, ಹಂಸಲೇಖ, ಮನೋಮೂರ್ತಿ ಹಾಗೂ ಇತ್ತೀಚಿನ ವರ್ಷಗಳಲ್ಲಿ ಖ್ಯಾತಿ ಪಡೆದಿರುವ ಅರ್ಜುನ ಜನ್ಯ, ಹರಿ ಕೃಷ್ಣ,
ಅನೂಪ್ ಸೀಳನ್, ರವಿ ಬಸ್ರೂರು, ಎಂ.ಎಂ.ಕೀರವಾಣಿ, ಶ್ರೀಧರ್ ಸಂಭ್ರಮ, ಅಜನೀಶ್ ಬಿ ಲೋಕನಾಥ್ ಮುಂತಾದವರನ್ನು ಹೆಸರಿಸಬಹುದು.

ಇನ್ನು ತೆಲುಗು ಚಿತ್ರರಂಗದಲ್ಲಿ ಚಕ್ರವರ್ತಿ, ವಿದ್ಯಾ ಸಾಗರ್, ಕೆ.ವಿ.ಮಹಾದೇವನ್ ಸೇರಿದಂತೆ ಹಲವಾರು ಸಂಗೀತ ನಿರ್ದೇಶಕರನ್ನು ಗುರುತಿಸಬಹುದು. ಆರ್.ಡಿ.ಬರ್ಮನ್, ಎಸ್.ಡಿ.ಬರ್ಮನ್, ಉಷಾಖನ್ನ, ಲಕ್ಷ್ಮಿ ಕಾಂತ ಪ್ಯಾರೇಲಾಲ, ಶಂಕರ್ ಜೈಕಿಶನ್, ಖಯ್ಯಾಂ, ಎ.ಆರ್.ರೆಹಮಾನ್, ರವೀಂದ್ರ ಜೈನ್,
ನದೀಮ್ ಶ್ರವಣ್, ಬಪ್ಪಿ ಲಹರಿ, ರಾಮ ಲಕ್ಷ್ಮಣ್, ರವೀ ಮುಂತಾದವರನ್ನು ಸ್ಮರಿಸಬಹುದಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಶಾಸೀಯ ಸಂಗೀತದ ಬಗ್ಗೆ ಜನರ ಒಲವು ಕಡಿಮೆಯಾದಂತೆ ತೋರುತ್ತದೆ. ಎಲ್ಲ ರೀತಿಯ ಸಂಗೀತಕ್ಕೂ ಮೂಲವಾಗಿರುವ ಶಾಸ್ತ್ರೀಯ ಸಂಗೀತವೇ ಇಂದು ಮೂಲೆ ಗುಂಪಾಗುತ್ತಿದೆಯೇನೋ ಎಂಬ ಭಾವನೆ ಹೆಚ್ಚುತ್ತಿದೆ. ಮೈಸೂರು ಸೇರಿದಂತೆ ದೇಶದ ಅನೇಕ ಭಾಗಗಳನ್ನು ಸಂಗೀತ ವಿಶ್ವವಿದ್ಯಾನಿಲಯಗಳಿದ್ದು. ಶಾಸ್ತ್ರೀಯ ಸಂಗೀತದ ಜೊತೆಗೆ ಸಂಗೀತದ ಇತರ ಪ್ರಕಾರಗಳಲ್ಲಿಯೂ, ವಾದ್ಯ ಸಂಗೀತ, ಲಘು ಸಂಗೀತ ಇತ್ಯಾದಿ ವಿಭಾಗಗಳಲ್ಲಿ ಕೂಡ ಉತ್ತಮ ಗುಣಮಟ್ಟದ ಸಂಗೀತ ಶಿಕ್ಷಕರಿಂದ ತರಗತಿಗಳು ನಡೆದು ಸಂಗೀತದಲ್ಲಿ ಸ್ನಾತಕ/ಸ್ನಾತಕೋತ್ತರ/ ಡಿಪ್ಲೋಮಾ ಪದವಿ ತರಗತಿಗಳು ನಡೆಯುತ್ತಿವೆ. ಇದು ಒಂದು ರೀತಿಯಲ್ಲಿ ಸಂತೋಷದ ಸಂಗತಿ.

ಸಂಗೀತ ಎಂಬುದು ದಿವ್ಯ ಶಕ್ತಿ. ಕಠಿಣವಾದ ಪರಿಶ್ರಮ, ಆಸಕ್ತಿ ಮತ್ತು ಬದ್ಧತೆಗಳಿಲ್ಲದೇ ಸಂಗೀತ ಖಂಡಿತಾ ಒಲಿಯುವುದಿಲ್ಲ. ಅರ್ಧಂಭರ್ಧ ಕಲಿತವರು ಖಂಡಿತಾ ಸಂಗೀತಗಾರರಾಗಲು ಸಾಧ್ಯವಿಲ್ಲ. ಕಳೆದ ಒಂದು ದಶಕದ ಕಾಲದಿಂದೀಚೆಗೆ ಕರೋಕೆ ಗಾಯನ ಹೆಚ್ಚು ಜನಪ್ರಿಯವಾಗುತ್ತಿದೆ. ಕರೋಕೆ ಗಾಯಕರಾಗಲು ಯಾವುದೇ ರೀತಿಯ ಸಂಗೀತ ಜ್ಞಾನ ಅಥವಾ ಹಿನ್ನೆಲೆ ಬೇಡ. ಸಿದ್ಧ ಪಡಿಸಿದ ಹಾಡು ಮತ್ತು ಸಂಗೀತಕ್ಕೆ ಧನಿ ಬೆರೆಸಿದರೆ ಸಾಕು. ಕರೋಕೆ ಸಂಗೀತದಿಂದ ವೃತ್ತಿಪರ ವಾದ್ಯಗಾರರಿಗೆ ಕೆಲಸವಿಲ್ಲದಂತಾಗಿದೆ. ಅನೇಕ ವೃತ್ತಿಪರ ವಾದ್ಯಗಾರರು, ತಮ್ಮ ವೃತ್ತಿ ತೊರೆದು ಬೇರೆ ಬೇರೆ ಕೆಲಸಗಳನ್ನು ಹುಡುಕಿಕೊಳ್ಳುತ್ತಿದ್ದಾರೆ. ಸಂಗೀತದ ಬೆಳವಣಿಗೆಗೆ ಇದೊಂದು ಆಘಾತಕಾರಿಯಾದ ಬೆಳವಣಿಗೆ. ಈ ಪ್ರವೃತ್ತಿ ಇನ್ನು ಮುಂದಾದರೂ ಕೊನೆಗೊಳ್ಳ ಬೇಕಾಗಿದೆ.

ಸಂಗೀತದ ಸ್ಪರ್ಷವಿಲ್ಲದ ಯಾವುದೇ ಹಾಡುಗಾರಿಕೆ ಅರ್ಧಂಬರ್ಧ ಬೆಂದ ಮಡಿಕೆ ಎನಿಸಿಕೊಳ್ಳುತ್ತದೆ. ಸಂಗೀತ ವೆಂಬುದು ಸಾಗರಕ್ಕಿಂತಲೂ ಆಳ. ಅದನ್ನು ತಿಳಿದಷ್ಟೂ ಇನ್ನೂ ತಿಳಿಯಬೇಕೆಂಬ ಹಂಬಲ ಹೆಚ್ಚುತ್ತದೆ. ಸಂಗೀತ ಎಂಬ ದೈವೀ ಕಲೆಯನ್ನು ಶ್ರದ್ಧಾ ಭಕ್ತಿಗಳಿಂದ ಉತ್ತಮ ಗುರುಗಳ ಮೂಲಕ ಕಲಿತರೆ ನಮ್ಮ ಜನ್ಮ ಪಾವನವಾಗುವುದು. ಸಂಗೀತ ಉತ್ತಮ ಸಂಸೃತಿಯನ್ನು ಸಹಾ ಕಲಿಸುತ್ತದೆ. ಅದೇ ರೀತಿ ಜೀವನ ವಿಧಾನವನ್ನು ಸಹ ಸಂಗೀತದಿಂದ ಕಲಿಯಬಹುದು.

(ಲೇಖಕರು: ವಕೀಲರು)