Saturday, 14th December 2024

ಹೊರನಾಡ ಕನ್ನಡಿಗರು ಎದುರಿಸುತಿರುವ ಪ್ರಶ್ನೆಗಳು

ಪ್ರಸ್ತುತ

ಪ್ರೊ.ಪಂಡಿತ್ ರಾವ್ ಚಂದ್ರಶೇಖರ ಧರೆನ್ನವರ

ಕರ್ನಾಟಕದಿಂದ ಸಾವಿರಾರು ಮೈಲು ದೂರ ಇರುವ ಹೊರ ನಾಡು ಕನ್ನಡಿಗರು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಹೆಮ್ಮೆಯಿಂದ ಹಾಡಿ ಹೊಗಳಿ ಹೊರ ರಾಜ್ಯದ ಜನರನ್ನು ಕರ್ನಾಟಕ ದತ್ತ ಮನಸೆಳೆಯುವ ಕೆಲಸ ಸದಾ ಮಾಡುತ್ತಾ ಇರುತ್ತಾರೆ. ಆದರೆ ಕೆಲವು ದಿನಗಳಿಂದ ಕರ್ನಾಟಕದಲ್ಲಿ ಆದ ಕೆಲವು ಘಟನೆಗಳು ಹೊರ ನಾಡು ಕನ್ನಡಿಗರನ್ನು ಹೊರ ರಾಜ್ಯದ ಜನರ ಮುಂದೆ ತಲೆತಗ್ಗಿಸುವಂತಾಗಿದೆ.

ಐಟಿ-ಬಿಟಿಗೆ ಹೆಸರಾದ ಕರ್ನಾಟಕ ಅದು ಹೇಗೆ ತಾನೇ ತಾಂತ್ರಿಕ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಕೇಳುತ್ತಿರುವ ಹೊರ ರಾಜ್ಯದ ಜನರ ಪ್ರಶ್ನೆಗಳಿಗೆ ಹೊರನಾಡು ಕನ್ನಡಿಗರ ಹತ್ತಿರ ಉತ್ತರವೇ ಇಲ್ಲದಂತಾಗಿದೆ. ಜನಪ್ರತಿನಿಧಿಗಳೇ ವಿಧಾನಸೌಧದಲ್ಲಿ ನಗ್ನ ಚಿತ್ರವನ್ನು ನೋಡುವ ಘಟನೆ ಗಳಿಂದ ಹಿಡಿದು ಇದೀಗ ನಡೆದ ರೇಣುಕಾಸ್ವಾಮಿ – ಚಿತ್ರನಟ ದರ್ಶನ್ ಘಟನೆಗೆ ತಾಂತ್ರಿಕ ದುರುಪಯೋಗವೇ ಕಾರಣವಲ್ಲವೇ ಎಂದು ಕೇಳುವ ಪ್ರಶ್ನೆಗಳಿಗೆ ಹೊರನಾಡು ಕನ್ನಡಿಗರು ಅದು ಹೇಗೆ ತಾನೇ ಉತ್ತರ ನೀಡುವರು? ಹೊರ ರಾಜ್ಯದಲ್ಲಿ ವಾಸಿಸುತ್ತಿರುವ ಹೊರನಾಡು ಕನ್ನಡಿಗರಿಗೆ ಕೇಳುವ ಪ್ರಶ್ನೆಗಳು ಇಲ್ಲಿಗೇ ನಿಲ್ಲುವದಿಲ್ಲ.

ಹಿರಿಯ ರಾಜಕಾರಣಿ ಪೋಸ್ಕೋ ಕಾನೂನಿನಲ್ಲಿ ಅದು ಹೇಗೆ ತಾನೇ ಬುಕ್ ಆದರು? ಪ್ರೇಮ ಎಂಬ ಭಾವನೆಯಲ್ಲಿ ಹಾಡ ಹಗಲೇ ಹರೆಯದ ಹುಡುಗಿ ಯೊಬ್ಬಳನ್ನು ಚಾಕುವಿನಿಂದ ಹಲವು ಬಾರಿ ಚುಚ್ಚಿ ಕೊಂದ ಆ ಪ್ರೇಮಿಯ ಹುಚ್ಚುತನ ಅದೆಷ್ಟು ಮಟ್ಟಿಗೆ ಏರಿತ್ತು? ಕನ್ನಡದವರು ಇಂಥವರೇ?
ಎಂದು ಕೇಳುವ ಹೊರ ರಾಜ್ಯದ ಜನರ ಪ್ರಶ್ನೆಗಳು ಹೊರನಾಡು ಕನ್ನಡಿಗರ ಹೃದಯದಲ್ಲಿ ದುಃಖ ತರುತ್ತದೆ.

ಸಾಮಾನ್ಯವಾಗಿ ಜಗದ ಎಲ್ಲ ಸ್ಥಳಗಳಲ್ಲಿ ಇಂತಹ ಘಟನೆಗಳು ನಡೆಯುತ್ತವೆ. ಆದರೆ ಕರ್ನಾಟಕದಲ್ಲಿ ಸತತವಾಗಿ ನಡೆಯುತ್ತಿರುವ ಹಿಂಸಾತ್ಮಕ ಮತ್ತು ಅಮೌಲ್ಯಿಕ ಘಟನೆಗಳು ಕರ್ನಾಟಕದಲ್ಲಿ ಮೌಲ್ಯಿಕ ರೂಢಿಗಳು ಕುಗ್ಗುತ್ತಿರುವ ದಿಕ್ಸೂಚಿಯಾಗಿವೆ. ಬಸವನ ನಾಡಿನಲ್ಲಿ ಬುದ್ಧಿ ಇಲ್ಲದಂತೆ ಜೀವನ ನಡೆಸುತ್ತಿರುವ ಕೆಲವರ ಕಾರಣದಿಂದಾಗಿ ಸಂಪೂರ್ಣ ಕರ್ನಾಟಕ ತಲೆತಗ್ಗಿಸುವಂತಾಗುತ್ತಿದೆ. ಸರ್ವಜ್ಞ, ಸಂತ ಶಿಶುನಾಳ ಷರೀಫರ ತತ್ವದ ನುಡಿಗಳನ್ನು ಕೇಳುವ ಕನ್ನಡಿಗರಲ್ಲಿ ಈಗೀಗ ಕೆಲವು ಕನ್ನಡಿಗರು ಅಭದ್ರ, ಅಶ್ಲೀಲ ಗೀತೆಗಳನ್ನು ಕೇಳಿ ಏಕೆ ಕುಣಿಯುತ್ತಿzರೆ? ದಾಸರ ಕೀರ್ತನೆ ಕೇಳಿ ಕಾಣದಾ ದೇವರ
ಲೀಲೆಯನ್ನು ಅನುಭವಿಸುತ್ತಿದ್ದ ಕನ್ನಡಿಗರಲ್ಲಿ ಈಗೀಗ ಕೆಲವು ಕನ್ನಡಿಗರು ಹೆಂಡದ ಹಾಡುಗಳನ್ನು ಕೇಳಿ ಕೇಳಿ, ಕಟ್ಟಿಕೊಂಡ ಹೆಂಡತಿಯನ್ನೇ ಬಿಟ್ಟು ಇನ್ನೊಬ್ಬಳ ಜೊತೆ ಜೀವನ ಅದೇಕೆ ನಡೆಸುತ್ತಿದ್ದಾರೆ? ಸ್ವಚ್ಛ ಜೀವನ ನಡೆಸುವ ರೀತಿಯನ್ನು ತಿಳಿಹೇಳುವ ಪವಿತ್ರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳದೆ ಆಧುನಿಕತೆಯಲ್ಲಿ ಅದು ಏಕೆ ತಾನೇ ಬದಲಾವಣೆ ಆಗುತ್ತಿದ್ದಾರೆ? ಸಮಾಜದಲ್ಲಿ ಬದಲಾಗುತ್ತಿರುವ ಮೌಲ್ಯಿಕ ಜೀವನವನ್ನು ನಿಯಂತ್ರಿಸುವದು ಪೊಲೀಸ ಮತ್ತು ಕೋರ್ಟಿನ ಕೆಲಸವಲ್ಲ.

ಸಮಾಜದಲ್ಲಿ ಕುಗ್ಗುತ್ತಿರುವ ಮೌಲ್ಯಿಕ ಜೀವನವನ್ನು ಸುಧಾರಿಸುವದು ಮಠ, ಮಂದಿರ, ಮಸೀದಿ, ಗುರುದ್ವಾರ ಹಾಗೂ ಚರ್ಚ್ನಲ್ಲಿರುವ ಧಾರ್ಮಿಕರ ಆದ್ಯ ಕರ್ತವ್ಯವಾಗಿತ್ತು. ಸಮಾಜದೊಂದಿಗೆ ಜನ ಜಾಗ್ರತಿ ಹೆಚ್ಚಿಸುವ ಕೆಲಸ ಇವರದಾಗಿತ್ತು. ಸರಕಾರದಿಂದ ತುಟ್ಟಿ ಭತ್ತೆಗಾಗಿ ಸದಾ ಕಾಯುವ ಸರಕಾರಿ ನೌಕರರು ಸಮಾಜದಲ್ಲಿ ಮೌಲ್ಯ ರೂಢಿಗಳನ್ನು ಎತ್ತಿ ಹಿಡಿಯಲು ಶ್ರಮಿಸಬೇಕಾಗಿತ್ತು. ೬ನೇ ವೇತನ ಆಯೋಗದ ಲಾಭ ಗಿಟ್ಟಿಸಿಕೊಂಡು ೭ನೇ ವೇತನ ಆಯೋಗಕ್ಕಾಗಿ ಕಾಯುತ್ತಿರುವ ಪ್ರತಿಯೊಬ್ಬ ಅಧ್ಯಾಪಕರು ಕೇವಲ ಕ್ಲಾಸ್ ರೂಮಿನಲ್ಲಿ ಪಾಠ ಹೇಳದೇ, ಸಮಾಜದ ವಿವಿಧ ಪಂಗಡಗಳಿಗೆ ಪಾಠ ಹೇಳುವ ಕೆಲಸ ಮಾಡಬೇಕಾಗಿತ್ತು.

ದುರ್ದೈವ ವೇನೆಂದರೆ, ಶಿಕ್ಷಕರು ಕ್ಲಾಸ್ರೂಮಿಗೆ ಸೀಮಿತರಾದರು. ನೌಕರರು ೯ ರಿಂದ ೫ರ ವರೆಗಿನ ಸಮಯಕ್ಕೆ ಸೀಮಿತರಾದರು. ಮಠ, ಮಂದಿರ,
ಮಸೀದಿ, ಗುರುದ್ವಾರ ಹಾಗೂ ಚರ್ಚ್ನ ಧಾರ್ಮಿಕರು ತಮ್ಮದೇ ಆದ ದಿನನಿತ್ಯದ ಚಟುವಟಿಕೆಗಳಲ್ಲಿ ಸೀಮಿತರಾದರು. ಅದಕ್ಕಾಗಿಯೇ ಸಮಾಜದಲ್ಲಿ ಮೌಲ್ಯಿಕ ರೂಢಿಗಳು ಕುಗ್ಗುತ್ತಿವೆ. ಸಮಯದ ಬೇಡಿಕೆ ಯೇನೆಂದರೆ, ಸಮಾಜದ ಜನಸಾಮಾನ್ಯರನ್ನು ಜಾಗ್ರತಗೊಳಿಸುವ ದಾಗಿದೆ. ವಚನ, ಕೀರ್ತನೆ, ತತ್ವಸಾರ, ಗೀತಾ ಬೋಧನೆಗಳನ್ನು ಸಾಮಾನ್ಯ ಜನರಿಗೆ ತಿಳಿಹೇಳುವ ಸಮಯ ಇದಾಗಿದೆ. ಹೊರನಾಡು ಕನ್ನಡಿಗರು ಕನ್ನಡೇತರರಿಂದ ಎದುರಿಸುತ್ತಿರುವ ಎಲ್ಲ ಪ್ರಶ್ನೆಗಳಿಗೆ ಸರಿಯಾದ ಉತ್ತರ ಜನಜಾಗ್ರತಿ ಹುಟ್ಟಿಸುವುದಾಗಿದೆ.

ಸ್ವಾಭಿಮಾನ, ಸತ್ಯ ಹಾಗೂ ನಿಷ್ಠೆಯ ಜೀವನ ನಡೆಸುವ ಕನ್ನಡಿಗರ ಕನ್ನಡ ನಾಡಿನ ಅಸ್ಮಿತೆಯನ್ನು ಉಳಿಸಿ ಬೆಳೆಸುವ ಸಮಯ ಇದಾಗಿದೆ.

(ಲೇಖಕರು: ಸಹಾಯಕ ಪ್ರಾಧ್ಯಾಪಕರು,
ಸಮಾಜ ಶಾಸ್ತ, ಚಂಡೀಗಢ (ಪಂಜಾಬ್)