ಪ್ರಸ್ತುತ
ಮಲ್ಲಿಕಾರ್ಜುನ ಹೆಗ್ಗಳಗಿ
ಪ್ರಿಯ ರಾಹುಲ್ ಜಿ,
ಲೋಕಸಭೆಯ ವಿರೋಧಿ ಪಕ್ಷದ ನಾಯಕನಾಗುವುದಕ್ಕೆ ಚಡಪಡಿಸದೆ, ಸ್ವಲ್ಪ ದಿನ ತಡೆದು,ಯೋಚಿಸಿ, ಈ ಜವಾಬ್ದಾರಿಯನ್ನು ಒಪ್ಪಿಕೊಂಡಿದ್ದೀರಿ. ಆರಂಭದ ನಿಮ್ಮ ಈ ನಡೆ ಬಹಳ ಸಂತೋಷವನ್ನುಂಟು ಮಾಡಿತು. ವಿರೋಧಿ ಪಕ್ಷದ ನಾಯಕರಾಗಿ ಸರಕಾರದ ನೀತಿ ನಿರ್ಣಯಗಳನ್ನು ಪ್ರಶ್ನಿಸುವ, ಸರಕಾರದ ಹೆಜ್ಜೆಗಳ ಮೇಲೆ ಸದಾ ಕಣ್ಣಿಡುವ, ಒಂದು ವೇಳೆ ಸರಕಾರ ಪತನವಾದರೆ ಮತ್ತೊಂದು ಸರಕಾರ ರಚಿಸುವ ಹೊಣೆ ಈಗ ನಿಮ್ಮದಾಗಿದೆ.
ನಿಮ್ಮ ಸ್ಥಾನ ಬಲದಿಂದ ಪ್ರಧಾನಿಗೆ ಸಮ ನೀಡಬಲ್ಲ ಜಂಟಿ ಸದನ ಸಮಿತಿಗೆ ನೀವು ಸದಸ್ಯರಾಗಿರುತ್ತೀರಿ. ಸಿಬಿಐ, ಇಡಿ, ಮಾನವ ಹಕ್ಕುಗಳ ಅಧ್ಯಕ್ಷರ ನೇಮಕ ಸಮಿತಿಗೂ ನೀವು ಸದಸ್ಯರಾಗಿರುತ್ತೀರಿ. ವಿಪಕ್ಷ ನಾಯಕನನ್ನು ‘ಛಾಯಾ ಪ್ರಧಾನಿ’ಎಂದೇ ಗುರುತಿಸಲಾಗುತ್ತದೆ. ವಿರೋಧಿಗಳು ‘ಪಪ್ಪು’ ಎಂದು ಕರೆದು ವಿಪರೀತ ಅಪಪ್ರಚಾರ ಮಾಡಿದರು. ಲೋಕಸಭೆಯ ಸದಸ್ಯತ್ವ ರದ್ದು ಮಾಡಿದರು. ಕೊನೆಗೆ ಮನೆ ಕೂಡ ಬಿಡಿಸಿದರು. ಕಾಂಗ್ರೆಸ್ ಪೂರ್ಣ ನಿರ್ಣಾಮ ನಮ್ಮ ಗುರಿಯಂದರು. ಜನ ಇದನ್ನೆಲ್ಲ ಕೇಳಿಸಿ ಕೊಂಡರು, ನೋಡಿದರು. ಚುನಾವಣೆಯಲ್ಲಿ ಮಾಡಬೇಕಾದದ್ದನ್ನು ಮಾಡಿ ತೋರಿಸಿದರು.
ಅತ್ಯಂತ ದೊಡ್ಡ ವಿರೋಧಿ ಪಕ್ಷ ಇಂದು ಲೋಕಸಭೆಯಲ್ಲಿದೆ. ಇದು ಭಾರತದ ಜನತೆಯ ಆತ್ಮಶ್ರೀ ಸಂವಿಧಾನದ ಸೊಬಗು. ಎಲ್ಲ ಕಿರುಕುಳಗಳನ್ನು ಸಹನೆಯಿಂದ, ದಿಟ್ಟತನದಿಂದ ಎದುರಿಸಿದಿರಿ. ಯಾವ ಸಂದರ್ಭದಲ್ಲಿಯೂ ನಿರಾಸೆಯ ಛಾಯೆ ಮುಖದ ಮೇಲೆ ಕಾಣಲಿಲ್ಲ. ಇದು ನಾಯಕನಾದವನಿಗೆ ಇರಬೇಕಾದ ಗುಣ. ಸರಕಾರವು ನಂಬಿಕೆಯ ಆಧಾರದ ಮೇಲೆ ನಡೆಯಬೇಕು. ‘ಭಾರತದ ಜನರ ಧ್ವನಿಯು’ ಸಂಸತ್ತಿನಲ್ಲಿ ಮೊಳಗಬೇಕು ಎಂದು ಮೊದಲು ದಿನ ಸದನದಲ್ಲಿ ನೀವು ಹೇಳಿದ್ದು ಉತ್ತಮ ಆರಂಭದ ಸೂಚನೆಯಾಗಿದೆ. ನಿಮ್ಮ ಭಾಷೆ ಬಹಳ ವಿನಯದಿಂದ ಕೂಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ.
ಅಮಿತ್ ಷಾಜೀ ಎಂದು ನೀವು ಮಾತು ಆರಂಭಿಸುತ್ತೀರಿ. ವಿರೋಧಿ ಪಕ್ಷದ ನಾಯಕನಾಗಿ ಅಧಿಕಾರವಹಿಸಿಕೊಂಡ ಗಳಿಗೆಯಲ್ಲಿ ಹಲವು ಗಣ್ಯರಿಗೆ ಹಸ್ತಲಾಘವ ನೀಡಿದರಿ. ಬದಿಯಲ್ಲಿಯೇ ನಿಂತ ಸದನದ ಚಪರಾಸಿಗೂ ಹಸ್ತಲಾಘವ ನೀಡಿದ್ದನ್ನು ನೋಡಿ ಹೆಮ್ಮೆ ಅನಿಸಿತು. ಮನುಷ್ಯರನ್ನು ಪ್ರೀತಿಸು ವವರು ಮಾತ್ರ ಹೀಗೆ ನಡೆದುಕೊಳ್ಳುತ್ತಾರೆ. ನಾಯಕನಾದವನು ಎಂಥ ಒತ್ತಡದ ನಡುವೆಯೂ ಆಲೋಚಿಸುವ ಮನಸ್ಸು, ಕೇಳುವ ಕಿವಿ ಮತ್ತು ಸಹನೆ ಯನ್ನು ಕಳೆದುಕೊಳ್ಳಬಾರದು. ಈ ಮಾತನ್ನು ಪ್ರಧಾನಿಯಾಗಿದ್ದ ಚಂದ್ರಶೇಖರ್ ಅವರಿಗೆ ಪತ್ರಕರ್ತ ಪಿ. ಲಂಕೇಶ್ ಹೇಳಿದ್ದರು. ಇದು ಎಲ್ಲ ನಾಯಕ ರಿಗೂ ಅನ್ವಯಿಸುವ ಹಿತನುಡಿ.
ಸರಕಾರದ ಈಗಿನ ನಡೆ ನೋಡಿದರೆ ವಿರೋಧ ಪಕ್ಷವನ್ನು ನಿರ್ಲಕ್ಷಿಸುವ ಲಕ್ಷಣ ಕಾಣುತ್ತಿದೆ. ಆದರೆ ಪ್ರಜಾಪ್ರಭುತ್ವದಲ್ಲಿ ಇದನ್ನು ಒಪ್ಪಲಾಗದು.
ಪರಿಣಾಮಕಾರಿ ನಡೆಯಿಂದ ವಿರೋಽ ಪಕ್ಷವನ್ನು ಸರಿದಾರಿಗೆ ತರಬಹುದು. ಮಾಜಿ ಪ್ರಧಾನಿಯಾಗಿದ್ದ ರಾಜೀವ್ ಗಾಂಽ ೧೯೮೯ -೯೦ರಲ್ಲಿ, ಸೋನಿಯಾ
ಗಾಂಧಿ ೧೯೯೯-೨೦೦೪ ರಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿದ್ದರು. ತಂದೆ, ತಾಯಿ ಮತ್ತು ಮಗ ಲೋಕಸಭೆಯ ವಿರೋಧಿ ಪಕ್ಷದ ನಾಯಕರಾಗಿದ್ದು ಒಂದು ಅಪೂರ್ವ ದಾಖಲೆ.
ಕೂಲಿಕಾರರಿಂದ ಕೃಷಿಕರಿಂದ ದುಡಿಯೋ ವರ್ಗದ ಜನರಿಂದ ಸಂಪತ್ತು ಸೃಷ್ಟಿಯಾಗುತ್ತಿದೆ. ದುಡಿಯುವವರು ಬಡವರಾಗಿದ್ದಾರೆ. ದುಡಿಸಿಕೊಳ್ಳುವವರು ಶ್ರೀಮಂತರಾಗುತ್ತಿದ್ದಾರೆ, ಆರ್ಥಿಕ ಅಸಮಾನತೆ ಬಹಳ ಹೆಚ್ಚಾಗಿದೆ. ವೈಜ್ಞಾನಿಕ ತಂತ್ರಜ್ಞಾನ ಬಹಳಷ್ಟು ಬೆಳೆದಿದೆ. ಆರ್ಥಿಕ ಅಪರಾಧಗಳನ್ನು ಪತ್ತೆ ಹಚ್ಚಬಹುದು ಮತ್ತು ತಡೆಯಬಹುದು. ಉದ್ಯೋಗ ಸೃಷ್ಟಿಗೆ ಒತ್ತುಕೊಡಬೇಕು.
ನಾಯಕನಾದವನು ವೈಜ್ಞಾನಿಕ ಮನೋಭಾವ ಹೊಂದಿರಬೇಕು. ಗುಡಿ ಗುಂಡಾರ ಮಠ ಸುತ್ತುವುದು ಮಾಡಬಾರದು. ಲೋಕಸಭೆ ಪರಮೋಚ್ಛ
ದೇವಸ್ಥಾನ. ಸಂವಿಧಾನವೇ ಧರ್ಮ ಗ್ರಂಥ. ಪ್ರತಿಭಟನೆ ಆರೋಗ್ಯ ಪೂರ್ಣ ಸಮಾಜದ ಲಕ್ಷಣ. ಜನಪದ ಚಳವಳಿಗಳು ದುರ್ಬಲವಾದ ಕಾಲದಲ್ಲಿ ತೀವ್ರ ಶೋಷಣೆ, ಹಿಂಸೆಗಳು ಚಾಲ್ತಿಗೆ ಬರುತ್ತವೆ. ‘ನಾನು ಪ್ರತಿಭಟಿಸುತ್ತೇನೆ ಆದ್ದರಿಂದ ನಾವೆಲ್ಲ ಇದ್ದೇವೆ’ ಎಂದು ಚಿಂತಕ ರಾಬರ್ಟ್ ಕಾಮೂ ಹೇಳುತ್ತಾರೆ.
ಒಬ್ಬ ವ್ಯಕ್ತಿ ಅಥವಾ ಒಂದು ಸಣ್ಣ ಸಮೂಹ ಶಿಸ್ತು ಬದ್ಧ ಪ್ರತಿಭಟನೆ ನಡೆಸಿದರೆ ಸಾಕು ತನ್ನಷ್ಟಕ್ಕೆ ತಾನೇ ಎಲ್ಲವೂ ಸರಿ ಹೋಗುತ್ತದೆ. ಪ್ರತಿರೋಧ ಕೂಡ ನಿರಂತರ ಕ್ರಿಯೆ ಆಗಿರಬೇಕು.
ಕೌಟುಂಬಿಕ ಹಿನ್ನೆಲೆಯಿಂದಾಗಿ ಈ ಸ್ಥಾನ ನಿಮಗೆ ಸುಲಭವಾಗಿ ಧಕ್ಕಿದೆ. ಈಗಿನ ರಾಜಕಾರಣ ಹೆಚ್ಚು ಕಠಿಣವಾಗಿದೆ. ಜನರು ಎಲ್ಲವನ್ನೂ ಸೂಕ್ಷ್ಮವಾಗಿ
ಅವಲೋಕಿಸುವ ಅರ್ಥ ಮಾಡಿಕೊಳ್ಳುವ ವಿಮರ್ಶಿಸುವ ಪ್ರಜ್ಞೆಯನ್ನು ಬೆಳೆಸಿಕೊಂಡಿzರೆ. ಸರಕಾರ ಮತ್ತು ಜನತೆ ಒಪ್ಪುವಂತೆ ತರ್ಕಬದ್ಧವಾಗಿ ಸದನ ದಲ್ಲಿ ವಿಷಯ ಮಂಡಿಸುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಒಳ್ಳೆಯ ಹೃದಯವನ್ನು ಸುಲಭವಾಗಿ ಎದುರಿಸುವುದು ಸಾಧ್ಯವಿಲ್ಲ. ವಿಲಿಯಂ ಷೇಕ್ಸ್ ಪಿಯರ್ ಹೇಳಿದ ಈ ಮಾತು ಸದಾ ನೆನಪಿರಲಿ.
(ಲೇಖಕರು: ಹವ್ಯಾಸಿ ಬರಹಗಾರರು)