ನವದೆಹಲಿ: ಭಾರತೀಯ ಕಾನೂನು ಪದ್ದತಿಯಲ್ಲಿ ಇಂದಿನಿಂದ ಹೊಸ ಬದಲಾವಣೆ ಬಂದಿದೆ. ಹೊಸ ಕಾನೂನಿನ ಪ್ರಕಾರ ದೆಹಲಿಯಲ್ಲಿ ಮೊದಲ ಎಫ್‌ಐಆರ್ ದೆಹಲಿಯಲ್ಲಿ ದಾಖಲಾಗಿದೆ.
ಹೊಸ ಕಾನೂನು ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಸೆಂಟ್ರಲ್ ದೆಹಲಿಯ ಕಮಲಾ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಸೋಮವಾರ ಮೊದಲ ಎಫ್‌ಐಆರ್ ದಾಖಲಾಗಿದೆ. ತಡರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರ ತಂಡವು ಹೊಸದಿಲ್ಲಿ ರೈಲು ನಿಲ್ದಾಣದ ಬಳಿ ವ್ಯಕ್ತಿಯೊಬ್ಬ ರಸ್ತೆ ಮಧ್ಯ ದಲ್ಲಿ ಬೀದಿ ಬದಿ ವ್ಯಾಪಾರವನ್ನು ಮಾಡುತ್ತಿರುವುದನ್ನು ಕಂಡಿದ್ದು, ಇಲ್ಲಿ ನೀರು ಮತ್ತು ಗುಟ್ಖಾ ಮಾರಾಟ ಮಾಡುತ್ತಿದ್ದ. ಇದರಿಂದ ಜನರು ಸಂಚಾರಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿ ಆ ವ್ಯಕ್ತಿಯ ವಿರುದ್ಧ ಬಿಎನ್‌ಎಸ್ ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ರಸ್ತೆ ತೆರವುಗೊಳಿಸಿ ಜನರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಪೊಲೀಸರು ಬೀದಿಬದಿ ವ್ಯಾಪಾರಿಯನ್ನು ಅಲ್ಲಿಂದ ತೆರಳುವಂತೆ ಹಲವು ಬಾರಿ ಮನವಿ ಮಾಡಿದರು. ಆದರೆ, ಪೊಲೀಸರು ಹೇಳಿದ ಮಾತನ್ನು ನಿರ್ಲಕ್ಷಿಸಿ ಪುನಃ ಅಲ್ಲೇ ವ್ಯಾಪಾರ ಮಾಡಲು ಮುಂದುವರಿದಿದ್ದರಿಂದ ಪೊಲೀಸರು ಆ ವ್ಯಕ್ತಿಯ ಹೆಸರು ಮತ್ತು ವಿಳಾಸವನ್ನು ಪಡೆದುಕೊಂಡು ಹೊಸ ಕಾನೂನು BNS ನ ಸೆಕ್ಷನ್ 285 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆಯನ್ನು ಪ್ರಾರಂಭಿಸಿದರು.
ಭಾರತೀಯ ನ್ಯಾಯಾಂಗ ಸಂಹಿತೆ, ಭಾರತೀಯ ನಾಗರಿಕ ರಕ್ಷಣಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯಿದೆಗಳು ಜುಲೈ 1 ರಿಂದ ದೇಶಾದ್ಯಂತ ಜಾರಿಗೆ ಬಂದಿವೆ. ಇವುಗಳನ್ನು ಮೂರು ಹೊಸ ಕ್ರಿಮಿನಲ್ ಕಾನೂನುಗಳು ಎಂದು ಕರೆಯಲಾಗುತ್ತದೆ.