Saturday, 30th November 2024

ಬದಲಾದ ಕೌಟುಂಬಿಕ ವ್ಯವಸ್ಥೆಯ ಸುತ್ತಮುತ್ತ

ಪ್ರಸ್ತುತ

ವಿದ್ಯಾ ಶಂಕರ ಶರ್ಮ

ಬದಲಾವಣೆ ಎಂಬುದು ಎಂದೂ ಬದಲಾಗದೆ ಇರದ ಸೃಷ್ಟಿಯ ಸಂಗತಿ. ಒಂದು ಕಾಲಘಟ್ಟದಿಂದ ಇನ್ನೊಂದು ಕಾಲಘಟ್ಟಕ್ಕೆ ಸಮಾಜದ ರೀತಿ ನೀತಿಗಳು ಬದಲಾಗುತ್ತ ಹೋಗುತ್ತವೆ. ಆಧುನಿಕತೆಯನ್ನು ಮೈಗೂಡಿಸಿಕೊಂಡು ಮುಂದೆ ಸಾಗುತ್ತಿರುವ ಧಾವಂತದಲ್ಲಿ ಕೌಟುಂಬಿಕ ವ್ಯವಸ್ಥೆ ಸಂಪೂರ್ಣ  ಬದಲಾಗಿದೆ.

ಅವಿಭಕ್ತ ಕುಟುಂಬಗಳು ಮರೆಯಾಗಿ, ಒಂದೇ ಕುಟುಂಬದ ಸದಸ್ಯರು ಬೇರೆ ಬೇರೆಯಾಗಿ ಇರುವುದು ಸಾಮಾನ್ಯ ಎನ್ನುವಂತಾಗಿದೆ. ಬದಲಾದ ಜೀವನ ಶೈಲಿ, ನಗರೀಕರಣಗಳಿಂದ ಹಳ್ಳಿಗಳು ಕಡಿಮೆಯಾಗಿ ಪಟ್ಟಣಗಳ ಬೆಳವಣಿಗೆ ನಾಗಾಲೋಟ ಪಡೆದಿದೆ. ಈ ಬದಲಾವಣೆಯಿಂದ ಬಹಳವಾಗಿ ನಲುಗಿ ಹೋಗಿದೆ ಮಾನವ ಸಂಬಂಧಗಳು. ಮೊದಲೆಲ್ಲ ಕುಟುಂಬಗಳು ಒಗ್ಗಟ್ಟಾಗಿ ಇರುವಾಗ, ಸಂಬಂಧಗಳು ಹೆಚ್ಚು ಧೃಡವಾಗಿರುತ್ತಿದ್ದವು. ಹೆಚ್ಚಿನ ಎಲ್ಲ ನಿರ್ಧಾರಗಳನ್ನು ಕುಟುಂಬದ ಎಲ್ಲ ಸದಸ್ಯರು ಸೇರಿ ತೀರ್ಮಾನಿಸುತ್ತಿದ್ದರು ಅಥವಾ ಕುಟುಂಬದ ಹಿರಿಯರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಣಯ ಕೈಗೊಳ್ಳುತ್ತಿದ್ದರು.

ಈ ಪ್ರಕ್ರಿಯೆಯ ಅತಿ ಮುಖ್ಯ ಬಲವೆಂದರೆ, ತೆಗೆದುಕೊಂಡ ನಿರ್ಧಾರಗಳಿಂದ ವ್ಯತಿರಿಕ್ತ ಪರಿಣಾಮಗಳು ಉಂಟಾದಾಗ ಅದರ ಸಮರ್ಪಕ ನಿರ್ವಹಣೆ. ಇದು ಬಹಳ ಗಮನಾರ್ಹ ಸಂಗತಿ, ಏಕೆಂದರೆ ಇಂದು ನಾವು ನೋಡುತ್ತಿರುವ, ಕೇಳುತ್ತಿರುವ ಅನೇಕ ಕೌಟುಂಬಿಕ ಕಲಹಗಳು, ಘರ್ಷಣೆಗಳು ಮುಖ್ಯವಾಗಿ ಕುಟುಂಬ ಒಕ್ಕೂಟ ವ್ಯವಸ್ಥೆಯು ಇಲ್ಲದಿರುವುದೇ ಕಾರಣವಾಗಿದೆ. ಬದುಕಿನಲ್ಲಿ ಎಡವಟ್ಟುಗಳು ಆದಾಗ ಬೆಂಬಲಕ್ಕೆ ಯಾರೂ ಇಲ್ಲದ ಪರಿಸ್ಥಿತಿ ಎದುರಾಗಿದೆ, ಇದರಿಂದ ಹಲವು ಬಾರಿ ಸಾವು ನೋವುಗಳು ಕೂಡ ಉಂಟಾಗಿವೆ.

ಸಂಪೂರ್ಣ ಬದಲಾದ ಕೌಟುಂಬಿಕ ಜೀವನ ಶೈಲಿಯ ಅತಿ ಹೆಚ್ಚು ಪ್ರಭಾವ ಆಗಿರುವುದು ಮಕ್ಕಳ ಮೇಲೆ. ಹಿಂದೆಲ್ಲ ಸಂಬಂದಿಗಳ ಒಡನಾಟ, ಹಬ್ಬ ಹರಿದಿನಗಳನ್ನು ಒಟ್ಟಿಗೆ ಆಚರಿಸುವುದು, ಬಂಧು ಬಳಗದಲ್ಲಿ ನೆಡೆಯುವ ಶುಭ ಕಾರ್ಯಗಳಿಗೆ ಹೋಗುವುದು ಇವೆಲ್ಲ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡುವುದರ ಜೊತೆಗೆ ಜನ ಸಂಪರ್ಕದ ರೀತಿ ರಿವಾಜುಗಳ ಬಗ್ಗೆ ತರಬೇತಿಯಂತಿರುತ್ತಿದ್ದವು. ಇವೆಲ್ಲ ಈಗ ಗತವೈಭವದಂತಾಗಿ ಮಕ್ಕಳು ಸಂಪೂರ್ಣ ವಾಗಿ ವಿಭಿನ್ನ ಸಾಮಾಜಿಕ ವಾತಾವರಣದಲ್ಲಿ ತಮ್ಮ ಬಾಲ್ಯವನ್ನು ಕಳೆಯುತ್ತಿzರೆ. ಬಾಲ್ಯದಿಂದ ಪ್ರೌಢಾವಸ್ಥೆಗೆ ಬರುವ ಸಮಯ ಮಕ್ಕಳ ಮಾನಸಿಕ ಪ್ರಗತಿಗೆ ಬಹಳ ಪ್ರಮುಖವಾದ ಸಮಯ.

ತಮಗೆ ಯಾವುದು ಶ್ರೇಯಸ್ಕರ, ಯಾವುದರಿಂದ ಹಾನಿ, ತಾವು ಯಾವುದಕ್ಕೆ ಎಷ್ಟು ಆದ್ಯತೆ ನೀಡಬೇಕು ಎಂಬ ನಿರ್ಣಾಯಕ ಬೌದ್ಧಿಕ ಪ್ರೌಢಿಮೆಯ ಪ್ರಗತಿ ಈ ಘಟ್ಟದಲ್ಲಿಯೇ. ಇದು ಅವರ ಮುಂದಿನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಇದರಿಂದ ವಂಚಿತರಾದ ಇಂದಿನ ಮಕ್ಕಳು ಅದರಿಂದ ಅನೇಕ ರೀತಿಯ ಸವಾಲುಗಳನ್ನು ಎದುರಿಸುವಂತಾಗಿದೆ.

ಕುಟುಂಬಗಳ ಮೇಲೆಯೇ ಇಡೀ ಸಮಾಜ ನಿಂತಿರುವುದು, ಅದೇ ತಳಹದಿ ಕೂಡ. ಕುಟುಂಬದಲ್ಲಿ ಉನ್ನತ ಮೌಲ್ಯಗಳ ಸಂರಕ್ಷಣೆ ಆಗದಿದ್ದರೆ ನಾವು ಉತ್ತಮ ಸಮಾಜವನ್ನು ನಿರೀಕ್ಷಿಸಲಾಗುವುದಿಲ್ಲ. ‘ವಸುಧೈವ ಕುಟುಂಬಕಂ’ ಎಂಬ ಶ್ರೇಷ್ಠ ಜೀವನ ಪರಿಕಲ್ಪನೆಯ ಹಿನ್ನೆಲೆ ಹೊಂದಿರುವ ನಾವುಗಳು, ಬದಲಾವಣೆ ಅನಿವಾರ್ಯವಾದರೂ ಜೀವನದ ಉತ್ತಮ ಅಂಶಗಳನ್ನು, ಸೌಹಾರ್ದಯುತ ವಾತಾವರಣವನ್ನು, ಕುಟುಂಬ ಜೀವನದ ಅಡಿಪಾಯದ
ಮಹತ್ವವನ್ನು ಪ್ರಯತ್ನ ಪೂರ್ವಕವಾಗಿ ನಮ್ಮ ಬದುಕಿನ ಭಾಗವನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಇದಕ್ಕೆ ಕುಟುಂಬದ ಎಲ್ಲ ಸದಸ್ಯರ
ಸಹಕಾರದ ಅಗತ್ಯವಿದೆ. ಅಷ್ಟರ ಮಟ್ಟಿಗೆ ನಾವು ನಮ್ಮ ಪ್ರಯತ್ನದಲ್ಲಿ ಜಯ ಪಡೆದರೆ, ನಾವೇ ಅದೃಷ್ಟವಂತರು ಎನ್ನಬಹುದು.