ಸ್ಪೂರ್ತಿ ನುಡಿ
ಪ್ರೊ.ಸಿ.ಶಿವರಾಜು
ದುಃಖ ಯಾರಿಗಿಲ್ಲ ಹೇಳಿ? ದುಃಖವು ಹುಟ್ಟಿನಿಂದಲೇ ಬಂದಿದ್ದು, ಜೀವನದ ಸಹಜ ಕ್ರಿಯೆ ಎನ್ನಬಹುದು. ದುಃಖವನ್ನು ಅನುಭವಿಸದಿರುವ ಮನುಷ್ಯರು ಈ ಜಗತ್ತಿನಲ್ಲಿ ಯಾರು ಇಲ್ಲ, ದುಃಖವನ್ನು ತಡೆಯಲಿಕ್ಕೆ ಯಾರಿಂದಲೂ ಸಾಧ್ಯವಿಲ್ಲ. ದುಃಖ ಮನುಷ್ಯನ ಸಹಜಗುಣ, ಜೀವನದ ಹಲವಾರು ಕಹಿ ಅನುಭವಗಳಿಂದ ದುಃಖ ಹುಟ್ಟುವುದು. ಅಂದುಕೊಂಡಂತೆ ಆಗದಿದ್ದಲ್ಲಿ ದುಃಖ ತಾನಾಗಿಯೇ ಬರುವುದು, ನೋವುಗಳ ನಿವಾರಣೆಯಾಗದೆ, ಕಷ್ಟಗಳ ಮೇಲೆ ಕಷ್ಟಗಳು ಬರುತ್ತಿದ್ದರೆ ದುಃ ಖವಾಗುವುದು ಆಸೆಯೇ ದುಃಖಕ್ಕೆ ಕಾರಣ, ಆಸೆಯ ಮಿತಿಯೇ ಸುಖದ ಮೂಲ ಎಂದು ಬುದ್ಧರು ಜಗತ್ತಿಗೆ ಉಪದೇಶಿಸಿ ದ್ದಾರೆ.
ನಾವು ಅಂದು ಕೊಂಡಂತೆ ಎಲ್ಲವೂ ಆಗುವುದಿದ್ದರೆ ಮನುಷ್ಯ ಜೀವಿಯನ್ನು ಯಾರು ತಡೆಯಲಿಕ್ಕೆ ಆಗುತ್ತಿರಲಿಲ್ಲ. ದುಃಖವು ಹಲವಾರು ಕಾರಣಗಳಿಂದ, ಹಲವಾರು ವಿಧಗಳಲ್ಲಿ, ಬೇರೆ ಬೇರೆ ಸಂದರ್ಭಗಳಲ್ಲಿ ಅನೇಕ ಘಟನೆಗಳು ಸಂಭವಿಸಿದಾಗ, ಬರುವುದೇ ದುಃಖ. ದುಃಖವನ್ನು ಅನುಭವಿಸಿದಾಗಲೇ ಆ ದುಃಖ, ದುಮ್ಮಾನದ ಅರಿವಾಗುವುದು. ಅದನ್ನು ಅನುಭವಿಸದ ಹೊರತು ಮನುಷ್ಯ ಗಟ್ಟಿಯಾಗಲು, ತನ್ನ ತಪ್ಪುಗಳನ್ನು ತಿದ್ದಿಕೊಳ್ಳಲು, ತನ್ನನ್ನು ತಾನು ಸರಿದಾರಿಯಲ್ಲಿ ನಡೆಯುವಂತೆ ಮಾಡಿಕೊಳ್ಳಲು ಸಾಧ್ಯವಾಗದು.
ದುಃಖ ನಿವಾರಣೆಗಿಂತ ದುಃಖದ ಕಾರಣ ಏನು ಎಂಬುದನ್ನು ಹುಡುಕಿ ಅದಕ್ಕೆ ಉತ್ತರವನ್ನು ಕಂಡುಕೊಳ್ಳಬೇಕು. ಆಗ ಮಾತ್ರ ದುಃಖದಿಂದ ಹೊರಬರಲು ಸಾಧ್ಯವಾಗುತ್ತದೆ. ಮನುಷ್ಯನಿಗೆ ಜೀವನದಲ್ಲಿ ದುಃಖವೇ ಬರಬಾರದೆಂಬುದು ತಪ್ಪು ಕಲ್ಪನೆ. ದುಃಖ ಯಾವಾಗ ಯಾವ ಸಂದರ್ಭದಲ್ಲಿ ಬರುತ್ತದೆ, ಎಂದು ಯಾರು ನಿರೀಕ್ಷಿಸಿಸಲು ಸಾಧ್ಯವಿಲ್ಲ. ನಿರೀಕ್ಷೆಗೆ ಮೀರಿ ತಮ್ಮ ಗಮನಕ್ಕೆ ಬಾರದೆ ದುಃಖ ಬಂದು ಕಾಡುತ್ತದೆ. ಯಾವ ಸಂದರ್ಭದಲ್ಲಿ ಏನಾಗು ತ್ತದೆ.? ಎಂದು ಹೇಳಲು ಯಾರಿಗೂ ಸಾಧ್ಯವಿಲ್ಲ. ಜೀವನದಲ್ಲಿ ಬಂದುದ್ದನ್ನು ಸ್ವೀಕರಿಸುವುದಷ್ಟೇ ಮನುಷ್ಯನಿಗೆ ಉಳಿದಿರುವುದು.
ದುಃಖವನ್ನಾಗಲೀ, ನೋವು, ಕಷ್ಟಗಳನ್ನಾಗಲೀ ಯಾರು ಬರಲೆಂದು ಬಯಸುವುದಿಲ್ಲ. ಆದರೆ ಬಂದ ಮೇಲೆ ಅದನ್ನು ಎದುರಿಸಿ ಮುಂದಿನ ಮೆಟ್ಟಿಲು ಗಳನ್ನು ಏರಲೇಬೇಕು. ಅದೇ ಜೀವನ ಬಂದುದ್ದೆಲ್ಲಾ ಬರಲೀ ನಾವು ಮುಂದೇ ಸಾಗೋಣ ಎಂಬ ಧ್ಯೇಯದೊಂದಿಗೆ ಜೀವನ ಸಾಗಿಸಬೇಕು. ಅದು ಅನಿವಾರ್ಯಕೂಡ. ದುಃಖ, ಬೇಸರ, ಚಿಂತೆ, ಆತಂಕ, ಒಂಟಿತನ-ಇಂತಹ ಭಾವಗಳು ಉಂಟಾದಾಗ ನಾವು ಅದನ್ನು ಹೇಗೆ ಸ್ವೀಕರಿಸುತ್ತೇವೆ ? ಹೇಗೆ ಅರ್ಥೈಸುತ್ತೇವೆ? ಜೀವನದಲ್ಲಿ ಅನೇಕ ಬಾರಿ ಇಂತಹ ನಕಾರಾತ್ಮಕ ಭಾವಗಳನ್ನು ಹಾದುಬಂದ ಅನುಭವವಿದ್ದರೂ, ವರ್ತಮಾನದಲ್ಲಿ ಇವು ಕಾಡಿಸು ವಾಗ ಹಿಂದೆ ಕಲಿತ ಪಾಠವೆಲ್ಲಾ ಮರೆತುಗೋಗಿ, ಏನೂ ಉಪಯೋಗಕ್ಕೆ ಬಾರದಂತಾಗಿ ಮತ್ತೆ ಮತ್ತೆ ಉಸಿರುಗಟ್ಟಿಸುವ ಸುಳಿಯೊಳಗೆ ಸಿಕ್ಕಂತೆ ಒದ್ದಾಡುತ್ತೇವೆ.
ಇದಕ್ಕೆ ಕಾರಣವೂ ಇರುವುದಿಲ್ಲ, ನಾವು ಬುದ್ಧಿಯಿಂದ ಕಲಿತದ್ದು ಮರೆತುಹೋಗುತ್ತದೆ. ಅನುಭವಗಳನ್ನು ಅಂತರ್ಗತಗೊಳಿಸಿಕೊಂಡು ಹೊಸ ವರ್ತ ನೆಗಳನ್ನು ಮೈಗೂಡಿಸಿಕೊಂಡಿರುವುದು ಉಳಿಯುತ್ತದೆ. ಹಾಗಾದರೆ ದುಃಖವು ನಮ್ಮನ್ನು ಆವರಿಸಿದಾಗ ನಾವೇನನ್ನು ಸಾಧಾರಣವಾಗಿ ಮರೆಯುತ್ತೇವೆ? ಏನನ್ನು ರೂಢಿಸಿಕೊಂಡರೆ ನಿರಾಳವಾಗಿರಬಹುದು ಎಂದು ಚಿಂತಿಸಬೇಕು. ದುಃಖದಿಂದ ಹೊರತಾದವರು ಈ ಜಗತ್ತಿನಲ್ಲಿ ಯಾರೂ ಇಲ್ಲ ಎಂಬ ಅರಿವಿರುತ್ತದೆ. ಆದರೆ ನಾವು ದುಃಖದಲ್ಲಿರುವಾಗ ದುಃಖವನ್ನು ವೈಯಕ್ತಿಕವಾಗಿ ತೆಗೆದುಕೊಂಡು ನಾನು ಮಾತ್ರ ಕಷ್ಟದಲ್ಲಿರೋದು, ಇದು ನನಗೆ ಮಾತ್ರ ಬಂದಿರುವ ಸಮಸ್ಯೆ, ಎಂಬಂತಾಡುತ್ತೇವೆ.
ಎಲ್ಲರೂ ಸುಖದಲ್ಲಿದ್ದಾರೆ, ನಾನು ಮಾತ್ರ ದುಃಖದಲ್ಲಿರುವುದು ಎಂಬ ಭ್ರಮೆಯುಂಟಾದಾಗ ಮತ್ತಷ್ಟು ಸಂಕಟಪಡುತ್ತೇವೆ. ಸುತ್ತಲಿನ ಸಮಾಜದಿಂದ ಕುಟುಂಬದಿಂದ, ಸಮುದಾಯದಿಂದ ನಮ್ಮನ್ನು ನಾವು ಬೇರೆಯಾಗಿಸಿಕೊಂಡು ತೊಳಲಾಡುತ್ತೇವೆ. ದುಃಖವು ಎಲ್ಲರಿಗೂ ಇರುವಂಥದ್ದೇ ಎಂಬ ತಿಳುವಳಿಕೆ ನಮ್ಮನ್ನು ಮತ್ತೆ ಪ್ರಪಂಚದೊಟ್ಟಿಗೆ ಬೆಸೆಯುತ್ತದೆ. ಇದಕ್ಕಾಗಿ ನಾವು ಮಾಡಬೇಕಾದುದೆಂದರೆ, ನಂಬಿಕೆಗೆ ಅರ್ಹರು, ಸ್ನೇಹಿತರು ಎಂದು ತಿಳಿದುಕೊಂಡವರ ಜೊತೆ ನಮ್ಮ ದುಃಖವನ್ನು ಬಿಚ್ಚಿಡುವುದು. ಮೊದಲಿಗೆ ಇದು ಸ್ವಲ್ಪ ಕಷ್ಟವೆನಿಸಬಹುದು. ನಾವು ನಮ್ಮ ಚಿಂತೆ, ಸಂಕಟಗಳನ್ನು ತೋರ್ಪಡಿಸಿಕೊಂಡರೆ ನಮ್ಮನ್ನು ಕನಿಕರದಿಂದ ನೋಡುತ್ತಾರೆ, ನಮಗೆ ಸಲಹೆಗಳನ್ನು ಕೊಡಲು ಅಥವಾ ನಮ್ಮನ್ನು ಟೀಕಿಸಲು ಮುಂದಾಗುತ್ತಾರೆ, ತಪ್ಪು ತಿಳಿದು ದೂರವಾಗುತ್ತಾರೆ, ಎಂಬ ಭಯದಿಂದ ಹೊರಬಂದು ದುಃಖದ ಬಗ್ಗೆ ಮಾತನಾಡಬೇಕು.
ನಾವು ತೆರೆದುಕೊಂಡಾಗ ನಾವು ಅವರಲ್ಲಿಟ್ಟ ನಂಬಿಕೆ, ವಿಶ್ವಾಸದಿಂದ ಪ್ರಭಾವಿತರಾಗಿ ಅವರೂ ತಮ್ಮ ದುಃಖವನ್ನು ತೋಡಿಕೊಳ್ಳಬಹುದು. ಒಂದು ವೇಳೆ ಅವರು ನಮ್ಮ ವಿಶ್ವಾಸವನ್ನು ದುರುಪಯೋಗಪಡಿಸಿಕೊಂಡು ನಮ್ಮನ್ನು ಹೀನಾಯವಾಗಿ ಕಾಣುತ್ತಲೋ, ನಮ್ಮ ನೋವಿಗೆ ಸಂತಸಪಡುತ್ತಲೋ ಇದ್ದರೆ ಅದು ಅವರ ಅಪ್ರಬುದ್ಧತೆಯೇ ಹೊರತು ನಮ್ಮ ತಪ್ಪಲ್ಲ. ದುಃಖವು ಸಂವೇದನಾಶೀಲತೆಯ ಪ್ರತೀಕ, ಬದುಕಿನ ಕ್ಷಣಿಕತೆಯನ್ನು ದುರ್ಬಲತೆ ಯನ್ನು ಗ್ರಹಿಸಿದ್ದೇವೆ ಎಂಬುದರ ಸಂಕೇತ. ಅದು ಮನುಷ್ಯತ್ವದ ಗುರುತೂ ಹೌದು. ದುಃಖವಿದೆ ಎಂಬ ಮಾತ್ರಕ್ಕೆ ನಾವು ಅದರಲ್ಲೇ ಮುಳುಗಿಹೋಗಿ ಜೀವನದ ಸಂಭ್ರಮಕ್ಕೆ ವಿಮುಖರಾಗ ಬೇಕಿಲ್ಲ.
ಆದ್ದರಿಂದ ಬುದ್ಧರು ಹೇಳಿದ ಪಂಚಶೀಲಗಳಾದ ಸಮಾನತೆ, ಸಹೋದರತೆ, ಮೈತ್ರಿ, ಪ್ರe, ಹಾಗೂ ಕರುಣೆ, ಇವುಗಳೊಂದಿಗೆ ಜೀವಿಸಬೇಕಾಗಿದೆ. ಮನುಷ್ಯನಾಗಿ ಹುಟ್ಟಿದ ಮೇಲೆ ಜೀವನದಲ್ಲಿ ಏನಾದರೊಂದು ಕಷ್ಟ, ದುಃಖ, ದುಮ್ಮಾನಗಳು ಬರುತ್ತವೆ. ಅದನ್ನು ಬದಿಗಿರಿಸಿ ಏನಾದರೂ ಸಾಧನೆ ಮಾಡಬೇಕು. ಎಂದು ಎಲ್ಲರೂ ಬಯಸುತ್ತಾರೆ. ಬೆಳವಣಿಗೆ ಎಂದರೆ ಕೇವಲ ಆರ್ಥಿಕ ಬೆಳವಣಿಗೆ ಅಷ್ಟೇ ಅಲ್ಲ. ಒಬ್ಬೊಬ್ಬರದು ಒಂದೊಂದು ಕನಸು (ಗುರಿ) ಇರುತ್ತದೆ. ಅವರ ಕನಸುಗಳು ಈಡೇರದಿದ್ದಾಗ ದುಃಖ ತಾನಾಗಿಯೇ ಬರುತ್ತದೆ. ಇಂತಹ ಸಮಯದಲ್ಲಿ ತಾಳ್ಮೆ ಬಹಳ ಮುಖ್ಯವಾಗುವುದು. ತಾಳ್ಮೆ, ಇದ್ದರೆ ಎಂತಹ ಕಷ್ಟ, ದುಃಖಗಳು ಕಾಡಿದರೂ ಜಯಿಸಬಹುದು.
ಜೀವನದಲ್ಲಿ ಯಾವುದು ಶಾಶ್ವತವಲ್ಲ, ಎಂದು ಬುದ್ಧರು ಹೇಳಿದ್ದಾರೆ. ಜೀವನದಲ್ಲಿ ಬದಲಾವಣೆ ಸಹಜವಾದ ನಿಯಮ ಹೀಗಾಗಿ ಸತ್ಯವನ್ನು ಅರಿತು ಕೊಂಡರೆ, ದುಃಖಕ್ಕೆ ನಮ್ಮಲ್ಲಿ ಜಾಗವೇ ಇರುವುದಿಲ್ಲ. ಜೀವನದಲ್ಲಿ ಒಪ್ಪಿಕೊಳ್ಳುವುದು ಬಿಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕೆಂದು ಬುದ್ಧರು ಹೇಳುತ್ತಾರೆ. ಆಲೋಚನೆ ಮತ್ತು ಕಾರ್ಯದಲ್ಲಿ ಉದಾತ್ತ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಆಸೆಯನ್ನು ಮಿತಿಯಲ್ಲಿಟ್ಟುಕೊಳ್ಳಬೇಕು. ಆಗಮಾತ್ರ ಅನಾವಶ್ಯಕ ಗೊಂದಲಗಳನ್ನು ನಾವು ಕಡಿಮೆ ಮಾಡಿಕೊಳ್ಳಬಹುದು. ನಮ್ಮ ಆಸೆ ಮಿತಿಯಲ್ಲಿದ್ದರೆ, ನಿರಾಸೆಗೆ (ದುಃಖಕೆ) ಆಸ್ಪದ ವಿರುವುದಿಲ್ಲ.
ನಮ್ಮಲ್ಲಿ ಬಂಗಾರ ಇದ್ದ ಮಾತ್ರಕ್ಕೆ ನಮ್ಮ ಬದುಕು ಬಂಗಾರವಾಗುವುದಿಲ್ಲ. ನಮ್ಮ ಮನಸ್ಸಿಗೆ ನೆಮ್ಮದಿ ಇದ್ದರೆ ಮಾತ್ರ ನಮ್ಮ ಬದುಕು ಬಂಗಾರವಾಗುತ್ತದೆ. ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ
ಮಾರ್ಗವನ್ನು ಕಂಡು ಹಿಡಿದ ಭಗವಾನ್ ಗೌತಮ ಬುದ್ಧರು, ವಿಪಶನ ಧ್ಯಾನ ಮಾರ್ಗವು, ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ ಎಂದು ಉಪದೇಶಿಸಿದ್ದಾರೆ. ದುಃಖದ ಬಗ್ಗೆ ಗುಹೇಶ್ವರರು ಹೀಗೆ ಹೇಳಿರುತ್ತಾರೆ. ಸಾಸಿವೆ ಕಾಳಿನ ಗಾತ್ರದ ಆನಂದಕ್ಕಾಗಿ, ಸಂಕಟದ ಸಾಗರ, ನೀವು ನೋಡುತ್ತೀರಿ.
ಇಂದ್ರಿಯಗಳ ಕ್ಷಣದ ಆನಂದಕ್ಕಾಗಿ ಒಬ್ಬರು ಹೇಗೆ ಕೆಲಸ ಮಡುತ್ತಾರೆ ಎಂಬುದು ಅದ್ಭುತವಾಗಿದೆ ಕ್ಷಣದ ಆನಂದವನ್ನು ಸಾಧಿಸಲು ತನ್ನ ನಿಜವಾದ ಆತ್ಮವನ್ನು ತ್ಯಜಿಸುವುದು, ಮುಂದೆ ಇದುವೇ ದುಃಖಕ್ಕೆ ಕಾರಣವಾಗುತ್ತದೆ. ಜಗತ್ತಿನಲ್ಲಿ ದುಃಖವಿದೆ ಆ ದುಃಖ ಎಲ್ಲಾ ಕಡೆ ಇದೆ ನೂರಕ್ಕೆ ತೊಂಬತೈದು ಮಂದಿ ಒಂದಲ್ಲ ಒಂದು ರೀತಿಯಾದ ದುಃಖವನ್ನು ಅನುಭವಿಸುತ್ತಾ ಅಥವಾ ನೋವಿನ ಬಾದೆಯಲ್ಲಿ ನರಳುತ್ತಿದ್ದಾರೆ. ದುಃಖದಲ್ಲಿ ನರಳುತ್ತಿರುವ ಮನಷ್ಯ ಆ ದುಃಖದಿಂದ ವಿಮೋಚನೆಗೊಳಿಸುವುದೇ ಬುದ್ಧರ ಉಪದೇಶವಾಗಿದೆ.
ಸರಳತೆಯ ಜೀವನ ನಡೆಸುವವರಿಗೆ ದುರಾಸೆಯು ಬರುವುದಿಲ್ಲ. ದುರಾಸೆ ಇಲ್ಲದವರಿಗೆ ದುಃಖವು ಬರುವುದಿಲ್ಲ ಬೇರೆ ರೀತಿಯ ದುಃಖ ಬರಬಹುದು, ಮನೆಯಲ್ಲಿ ಸಾವಿನಿಂದ ಬರುವ ದುಃಖವೇ ಬೇರೆ, ಆ ದುಃಖ ವಾಸ್ತವ ಏಕೆಂದರೆ ಮನುಷ್ಯ ಹುಟ್ಟಿದ ಮೇಲೆ ಮರಣ ಹೊಂದಲೇ ಬೇಕಾಗಿರುವುದರಿಂದ ಆ ದುಃಖವು ಬಂದೇ ಬರುತ್ತದೆ. ಆ ದುಃಖವನ್ನು ನಿಗ್ರಹಿಸುವ ಶಕ್ತಿಯನ್ನು, ಮನೋಬಲವನ್ನು ನಾವು ಬೆಳೆಸಿಕೊಳ್ಳಬೇಕಾಗಿದೆ. ಕಷ್ಟಗಳು ಬರುವುದು.
ನಿಮ್ಮನ್ನು ನಾಶಮಾಡಲು ಅಲ್ಲ. ನಿಮ್ಮೊಳಿಗಿನ ಶಕ್ತಿಯನ್ನು ಅರ್ಥಮಾಡಿಸಲು ನಿಮ್ಮ ವ್ಯಕ್ತಿತ್ವದ ಗಟ್ಟಿತನವನ್ನು ಮನವರಿಕೆ ಮಾಡಿಸಲು ದುಃಖ ಬರುವುದು ನಿಮ್ಮನ್ನು ಜಾಗೃತಗೊಳಿಸಲು, ಎಂತಹ ಸಂದರ್ಭದಲ್ಲಾದರೂ ನಿಮ್ಮ ತನವನ್ನು (ಒಳ್ಳೆಯತನ) ಬಿಡಬಾರದು.
ದುಃಖವನ್ನು ಸಹಿಸದ ಮನುಷ್ಯ ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸಲು ಹೇಗೆ ಸಾಧ್ಯ? ಸವಾಲುಗಳ ಮೇಲೆ, ಸವಾಲುಗಳನ್ನು ಎದುರಿಸುವ ವ್ಯಕ್ತಿ ದುಃಖಕ್ಕೆ ಹೆದರುವುದಿಲ್ಲ. ಒಂದು ಕಲ್ಲು ಹಲವು ಪೆಟ್ಟುಗಳನ್ನು ತಿಂದ ಮೇಲೆಯೆ ವಿಗ್ರಹವಾಗಲು ಸಾಧ್ಯ ಮನಷ್ಯನು ಕೂಡ ಹಲವಾರು ಕಷ್ಟ, ದುಃಖ, ನೋವು ಸಂಕಟಗಳನ್ನು ಅನುಭವಿಸಿದ ಮೇಲೆಯೇ ಪರಿಪೂರ್ಣ ಮನುಷ್ಯನಾಗಲೂ ಸಾಧ್ಯವಾಗುತ್ತದೆ. ಕಷ್ಟ (ದುಃಖ) ಕಲಿಸುತ್ತದೆ. ಸುಖ ಮರೆಸುತ್ತದೆ. ಒಳ್ಳೆಯತನ ಮೈತ್ರಿ ಆತ್ಮವಿಶ್ವಾಸ ಮಾತ್ರ ಬಾನೆತ್ತರಕ್ಕೆ ಬೆಳೆಸುತ್ತದೆ. ಎಂಬ ಸಂದೇಶವನ್ನು ಬುದ್ಧರು ನಮಗೆ ನೀಡಿದ್ದಾರೆ. ಬುದ್ದರು ಬೋದನೆಗಳಲ್ಲಿ ಮೊದಲನೆಯದಾಗಿ ಜೀವನವೂ ದುಃಖದಿಂದ ಕೂಡಿದೆ, ಜನನ, ಮರಣ ರೋಗ, ವೃದ್ದಾಪ್ಯ, ವಿರಹ, ದೇಹಗಳ ವ್ಯವಸ್ಥೆಯೇ ದುಃಖ ಮಯ, ಈ ದುಃಖಕ್ಕೆ ಕಾರಣವಿದೆ, ಮನುಷ್ಯ ತನ್ನ ಮೂಲ ರೂಪವನ್ನು ಅರಿಯದಿರುವುದು, ಈ ಅಜ್ಞಾನಗಳಿಂದಾಗಿಯೇ ಆತ್ಮ, ದೇಹ,
ಮನಸ್ಸು ಗಳಿಗೆ ಅಂಟಿಕೊಳ್ಳುತ್ತಾನೆ.
ಈ ಯಾತನೆಗಳಿಗೆ ಕಾರಣ ಆಯಾ ವ್ಯಕ್ತಿಗಳೇ ಹೊರತು ವಿಧಿ ಆಕಸ್ಮಿಕ ಇತ್ಯಾದಿಗಳೆಲ್ಲಾ ಸುಳ್ಳು ಎಂದು ನಮಗೆ ಭೋದಿಸಿದ್ದಾರೆ. ದುಃಖದಿಂದ ಬಿಡುಗಡೆ ಯಾಗಬೇಕಾದರೆ ಅಷ್ಟಾಂಗ ಮಾರ್ಗಗಳಾದ ಯೋಗ್ಯವಾದ ದೃಷ್ಟಿ, ಯೋಗ್ಯವಾದ ಸಂಕಲ್ಪ, ಯೋಗ್ಯವಾದ ವಾಣಿ, ಯೋಗ್ಯವಾದ ದೈಹಿಕ ಕರ್ಮ, ಯೋಗ್ಯವಾದ ಜೀವನೋಪಾಯ, ಯೋಗ್ಯವಾದ ಪ್ರಯತ್ನ, ಯೋಗ್ಯವಾದ ಅರಿವು ಮತ್ತು ಯೋಗ್ಯವಾದ ಏಕಾಗ್ರತೆ, ಮನುಷ್ಯ ಈ ಮಾರ್ಗ ಗಳನ್ನು ಅನುಸರಿಸಿ ನಡೆದರೆ ದುಃಖದ ನಿವಾರಣೆಯನ್ನು ಮಾಡಿಕೊಳ್ಳಬಹುದು, ಬುದ್ಧರು ಸ್ವಯಂ ತನ್ನ ಕೊನೆಯ ಕ್ಷಣದವರೆಗೂ ತಾವೇ ಅಷ್ಟಾಂಗ ಮಾರ್ಗ ಗಳನ್ನು ಆಚರಿಸಿದರು. ಬುದ್ಧ ಮತ್ತು ದುಃಖದ ಪರಿಕಲ್ಪನೆ ಬುದ್ಧರು ದುಃಖ ಲೌಕೀಕ ದುಃಖವೇ ಹೊರತು ಜನ್ಮಾಂತರಗಳದ್ದಲ್ಲ.
ಅದು ಮನಸ್ಸಿಗೆ ಅಂಟಿಕೊಳ್ಳುವ ವಿಕಾರಗಳೇ ಹೊರತು ಬೇರೇನೂ ಅಲ್ಲ. ಹುಟ್ಟು ಕೂಡ ಒಂದು ದುಃಖ ಅನ್ನುವ ಕಲ್ಪನೆ, ಎಂದಿದ್ದಾರೆ. ಹುಟ್ಟು
ಒಂದು ದುಃಖ ಎಂದಾದರೆ ಜೀವನಕ್ಕೆ ಅರ್ಥವಿಲ್ಲ ಜೀವನದಲ್ಲಿ ದುಃಖಗಳಿವೆ, ಆದರೆ ಅದಕ್ಕೆ ಪರಿಹಾರ ಮಾರ್ಗಗಳಿವೆ ಎಂದು ಬೋಧಿಸಿದ್ದೇ ಬುದ್ಧರ ಶ್ರೇಷ್ಠತೆ. ಆದ್ದರಿಂದ ಭೌದ್ದಧರ್ಮ ನಿರಾಶವಾದವನ್ನು ಬೋಧಿಸುವುದಿಲ್ಲ. ಬುದ್ಧರ ಅನಿತ್ಯವಾದ ಬುದ್ಧರು ‘ಸರ್ವಂ ಕ್ಷಣಿಕಮ್’ ಎಂದಿದ್ದಾರೆ. ಈ ಜಗತ್ತು ನಿರಂತರ ಬದಲಾವಣೆಗೆ ಒಳಪಟ್ಟಿದೆ. ನಿರಂತರ ಬದಲಾವಣೆಗೆ, ಈ ಜಗದ ನಿಯಮ ಎಂಬುದೇ ಅನಿತ್ಯವಾದ ಸಿದ್ಧಾಂತ. ಜಗತ್ತು ಭ್ರಮೆಯೆಂಬ
ಸಿದ್ಧಾಂತಂತ ಇದು ಭಿನ್ನವಾದದ್ದು ಎಂದು ಪ್ರತಿವಾದಿಸಿದ್ದಾರೆ.
ಬುದ್ಧರ ನಂತರ ಬಸವಣ್ಣನವರ ಬಸವಯುಗ ಪ್ರಾರಂಭವಾಗಿ, ಸಮಾಜದ ದುಃಖ ದುಮ್ಮಾನಗಳಿಗೆ, ಅಸಮಾನತೆಗೆ, ಕಷ್ಟಗಳಿಗೆ, ನೋವು, ನಲಿವುಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಮಾರ್ಗವನ್ನು ಕಂಡುಕೊಂಡು ದೊಡ್ಡ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ್ದಾರೆ. ಆಡುಮುಟ್ಟದ ಸೊಪ್ಪಿಲ್ಲ ಬಸವಣ್ಣನವರು ಮಾಡದ ಕ್ರಾಂತಿಯಿಲ್ಲ ಎಂದು ಹೇಳಬಹುದು. ಅಸ್ಪಶ್ಯತೆಯಯಾತನೆ, ಶೂದ್ರತ್ವ , ಸೀತ್ವ ಮುಂತಾದ ಶೋಷಣೆಯಿಂದ ಬಳಲುತ್ತಿದ್ದ, ಜನಸಾಮಾನ್ಯರಿಗೆ ಅವರ ದುಃಖದ ನಿವಾರಣೆಗೆ ನಿರಂತರವಾಗಿ ಸಾಮಾಜಿಕ ಕ್ರಾಂತಿಯನ್ನು ಮಾಡಿದ್ದಾರೆ.
ಮನುಷ್ಯ ಯಾವುದನ್ನಾದರು ಸಾಧಿಸಬೇಕಾದರೆ ಹಲವಾರು ದುಃಖ, ವೇದನೆ, ನೋವುಗಳೆಂಬ ಶಿಖರವನ್ನು ದಾಟಿದಾಗ ಮಾತ್ರ ನಮ್ಮ ಗುರಿ ಸಾಧಿಸಲು ಸಾಧ್ಯ. ಅದಕ್ಕೆ ಬದಲಾಗಿ ಇದನ್ನು ಸಾಧಿಸಲಾಗದ ಮನಷ್ಯನು ಇದು ನನ್ನ ಪಾಪದ ಕರ್ಮ, ನನ್ನ ಹಣೆಬರಹ, ನನಗೆ ಇದನ್ನು ಪಡೆಯಲು ಪುಣ್ಯವಿಲ್ಲ ವೆಂದು ಕಾಣದ ಶಕ್ತಿಯ ಮೇಲೆ. ಮೂಡನಂಬಿಕೆಯಿಂದ, ಉದಾಸೀನದಿಂದ, ಹತಾಶೆಯಿಂದ, ಉದ್ವೇಗದಿಂದ ಹಾಗೂ ಸೋಮಾರಿತನದಿಂದ ಕಾಲಕಳೆದು ಇಡೀ ಜೀವನವನ್ನೇ ವ್ಯರ್ಥ ಮಾಡಿಕೊಳ್ಳುತ್ತಾನೆ, ಎಂಬ ಸಂದೇಶವನ್ನು ವಿಶ್ವಕ್ಕೇ ಸಾರಿದ್ದಾರೆ.
ಡಾಂಭಿಕವಾಗಿ ಮನಸ್ಸಿನಲ್ಲಿ ಒಂದು, ಬಾಹ್ಯದಲ್ಲಿ ಮತ್ತೊಂದು ಅಂತರವನ್ನು ಕೂಡಲಸಂಗಮ ಮೆಚ್ಚಲಾರನು, ಎನ್ನುತ್ತಾ ಮನಸ್ಸು ಹತೋಟಿ ಯಿದ್ದರೆ, ಆಸೆ ದುರಾಸೆಗಳು ಹುಟ್ಟುವುದಿಲ್ಲ. ದುರಾಸೆಗಳು ಈಡೇರದೆ ಹೋದಾಗ ದುಃಖ ಬರುತ್ತದೆ. ಆದ್ದರಿಂದ ಮನಸ್ಸಿನ ನಿಯಂತ್ರಣ ಬಹಳ ಮುಖ್ಯವೆಂಬುದು ಇದರ ಸಾರಾಂಶ. ಬಸವಣ್ಣನವರ ನಂತರ ಅಂಬೇಡ್ಕರ್ ರವರು ತಮ್ಮ ನುಡಿ ಮುತ್ತಿನಲ್ಲಿ ನಗುವ ಹೃದಯಕ್ಕಿಂತ ನಗಿಸುವ ಹೃದಯ ಮುಖ್ಯ ದುಃಖ ಪಡುವ ಮನಸ್ಸಿಗಿಂತ ದುಃಖ ಮರೆಸುವ ಮನಸ್ಸು ಮುಖ್ಯ ಎಂದು ಹೇಳಿದ್ದಾರೆ. ಅಂದರೆ ದುಃಖದಲ್ಲಿರುವ, ಕಷ್ಟದಲ್ಲಿರುವ, ನೋವಿನಲ್ಲಿ ರುವ ಕಣ್ಣೀರನ್ನು ಒರೆಸುವ ಪ್ರಯತ್ನ ಮಾಡಬೇಕು.
ಅದು ಎಲ್ಲರಿಗೂ ಬರುವುದಿಲ್ಲ. ಸಹನೆ, ಕರುಣೆ, ಪ್ರೀತಿ, ತಾಳ್ಮೆ, ದಯೆ, ಮಾನವೀಯತೆಯಿಂದ ಕೂಡಿರುವ, ಸರಳ ಜೀವನ ನಡೆಸುವ, ಮುಖ್ಯವಾಗಿ ನೆಮ್ಮದಿಯ ಜೀವನವನ್ನು ಕಂಡು ಕೊಂಡಿರುವ ವ್ಯಕ್ತಿಗಳಿಂದ ಮಾತ್ರ ಸಾದ್ಯ. ಶ್ರೀಮಂತಿಕೆಯಿಂದ ಸಂಪತ್ತನ್ನು ಹೊಂದಿರುವ ದರ್ಪದಿಂದ ಕೂಡಿದ ದುರ್ಜನರಿಂದ ದುಃಖಕ್ಕೆ ಸಾಂತ್ವನ ಸಿಗಲಾರದು, ಅಪಮಾನಕ್ಕಿಂತ ಆಳವಾದ ಗಾಯ ಇನ್ನೊಂದಿಲ್ಲ. ಯಾರದಾದರೂ ಒಂದು ಪೆಟ್ಟು ಹೊಡೆದರೆ ತಡೆದುಕೊಳ್ಳಬಹುದು. ಆದರೆ ಅವಮಾನ ಮಾಡಿದರೆ ಅದರಿಂದಾಗುವ ದುಃಖವನ್ನು ತಡೆಯಲ್ಲಿಕ್ಕಾಗುವುದಿಲ್ಲ. ಆದ್ದರಿಂದಲೇ ಅಂಬೇಡ್ಕರ್ ರವರು ಆತ್ಮಗೌರವ ಬಹಳ ಶ್ರೇಷ್ಟವಾದದ್ದು, ಅದಕ್ಕೆ ದಕ್ಕೆಯಾಗದ ರೀತಿ ನೋಡಿಕೊಳ್ಳುವುದು ಯಾವಾಗಲೂ ಒಳ್ಳೆಯದು ಎಂದಿದ್ದಾರೆ ಸಂತಸದ ಸಮಯದಲ್ಲಿ ಚಪ್ಪಾಳೆ ತಟ್ಟುವ ಹತ್ತು ಬೆರಳುಗಳಿಗಿಂತ ದುಃಖದ ಸಮಯದಲ್ಲಿ ಕಣ್ಣೀರು ಒರೆಸುವ ಒಂದು ಬೆರಳು ಶ್ರೇಷ್ಠವಾದದು ಎಂಬ ಜಾಣ್ಮೆಯ ನುಡಿಯನ್ನು ನಮ್ಮ ಮುಂದಿಟ್ಟಿದ್ದಾರೆ.
ಬುದ್ಧರು ತೋರಿದ ಅಷ್ಟಾಂಗ ಮಾರ್ಗಗಳು, ಪಂಚಶೀಲಗಳು, ಉದಾತ್ತ ಸತ್ಯಗಳು ಹಾಗೂ ಮಧ್ಯಮ ಮಾರ್ಗದಲ್ಲಿ ನಡೆಯುವುದರಿಂದ ದುಃಖದ ನಿವಾರಣೆಯಾಗಿ, ಮನುಷ್ಯ ನೆಮ್ಮದಿಯ ಜೀವನ ಸಾಗಿಸಬಹುದು. ಪಾಲಿಗೆ ಬಂದದ್ದು ಪಂಚಾಮೃತ ಎಂದು ಬಸವಣ್ಣನವರ ಹಿತನುಡಿ. ಆಸೆಯನ್ನು
ಮಿತಿಯಲ್ಲಿಟ್ಟುಕೊಳ್ಳಬೇಕೆಂದು ಬುದ್ಧರ ನುಡಿ. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬುದು ಹಿರಿಯರ ಸಂದೇಶ, ದುಃಖ ಪಡುವ ಮನಸ್ಸಿಗಿಂತ, ದುಃಖ ಮರೆಸುವ ಮನಸ್ಸು ಮುಖ್ಯ ಎಂಬ ಅಂಬೇಡ್ಕರ್ ರವರ ನುಡಿಮುತ್ತುಗಳಿಂದ ನಮಗೆ ಅರಿವಾಗಬೇಕಾಗಿದೆ. ಆಗ ಮಾತ್ರ ಜೀವನದಲ್ಲಿ ಬರುವ ದುಃ
ಖದಿಂದ ಪಾರಾಗಲು ಸಾಧ್ಯವಾಗುತ್ತದೆ.
(ಲೇಖಕರು: ಸಂಸ್ಕೃತ ವಿಭಾಗದ ಅಧ್ಯಕ್ಷರು, ಬೆಂಗಳೂರು
ವಿಶ್ವವಿದ್ಯಾಲಯ)