ಅಭಿಮತ
ಮರಿಲಿಂಗಗೌಡ ಮಾಲಿಪಾಟೀಲ್
ಪಂಚೆ ಧರಿಸುತ್ತಿದ್ದ ಮೋಹನ್‌ದಾಸ್ ಕರಮ ಚಂದ ಗಾಂಧಿಯನ್ನು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಎಂದು ಒಪ್ಪಿಕೊಂಡ ದೇಶವಿದು. ತನ್ನ ದೇಶದ ಕೋಟ್ಯಂತರ ಬಡವರು ತೊಡುವುದಕ್ಕೆ ಅಂಗಿ ಇಲ್ಲದ ಸ್ಥಿತಿಯಲ್ಲಿರುವಾಗ ತಾನು ಯಾಕೆ ಅಂಗಿ ತೊಡಬೇಕು ಎಂದು ಯೋಚಿಸಿ, ಕೇವಲ ಪಂಚೆಯಲ್ಲಿಯೇ ಸಾರ್ವಜನಿಕವಾಗಿ ಕಾಣಿಸಿಕೊಂಡವರು ಮಹಾತ್ಮಾ ಗಾಂಧಿ.
ಆಫ್ರಿಕಾದಲ್ಲಿ ವಕೀಲಿ ವೃತ್ತಿ ಮಾಡಿದ್ದ ವಿದ್ಯಾವಂತ ಬಾಪು, ಪಂಚೆ ತೊಡಲು ಹಿಂಜರಿದವರಲ್ಲ. ಪಂಚೆ ತೊಟ್ಟರೆ ಯಾರು ಏನಂದಾರೋ ಎಂದು ಯಾವತ್ತೂ ಯೋಚಿಸಿದವರಲ್ಲ. ಅವರು ಬಾಹ್ಯ ಆಡಂಬರಕ್ಕೆ ಬೆಲೆ ಕೊಡಲಿಲ್ಲ. ತಮ್ಮ ಆಂತರಿಕ ಧಿಃಶಕ್ತಿಯನ್ನು ನಂಬಿ ಬದುಕಿದರು. ಹಾಗಾಗಿಯೇ ಅವರು ರಾಷ್ಟ್ರಪಿತ ಆದರು, ಮಹಾತ್ಮಾ ಎಂದು ಕರೆಸಿಕೊಂಡರು. ಆದರೆ ಅಂತಹ ಬಾಪು ಸ್ವಾತಂತ್ರ್ಯ ತಂದುಕೊಟ್ಟ ದೇಶದಲ್ಲಿಯೇ ಪಂಚೆ ಉಟ್ಟವರಿಗೆ ಬೆಲೆ ಇಲ್ಲ ಎಂಬಂತಹ ಘಟನೆ ನಡೆದಿದೆ. ಅದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಘಟಿಸಿದ್ದು ನಿಜವಾದ ದುರಂತ. ಘಟನೆಯ ವಿವರ ಸ್ಥೂಲವಾಗಿ ಹೀಗಿದೆ.
ಉತ್ತರ ಕರ್ನಾಟಕದ ರೈತ ಕುಟುಂಬದವರು ಬೆಂಗಳೂರಿಗೆ ಬಂದಾಗ ನಗರದ ಜಿಟಿ ಮಾಲ್‌ನಲ್ಲಿ ಕಲ್ಕಿ ಸಿನಿಮಾ ನೋಡಲು ಹೋಗಿದ್ದಾರೆ. ಅವರಲ್ಲಿ ಪಕೀರಪ್ಪ ಎಂಬ ರೈತ ಪಂಚೆ ತೊಟ್ಟಿದ್ದರು. ಅವರನ್ನು ಮಾಲ್‌ನ ಸೆಕ್ಯೂರಿಟಿ ಒಳಗೆ ಬಿಡಲಿಲ್ಲ. ಸಾಕಷ್ಟು ಹೊತ್ತು ಹೊರಗೆ ಕಾದು ನಿಲ್ಲಬೇಕಾಯಿತು. ಪಂಚೆ ತೊಟ್ಟ ರೈತನ ಮಗ ತಂದೆಯನ್ನು ಒಳಗೆ ಬಿಡುವಂತೆ ಸೆಕ್ಯೂರಿಟಿಗೆ ಮಾಡಿದ ಮನವಿಗೆ ಬೆಲೆ ಸಿಗಲಿಲ್ಲ. ಕೊನೆಗೆ ಆತ ತನ್ನ ಸ್ನೇಹಿತರಿಗೆ ವಿಷಯ ತಿಳಿಸಿದ.
ಮಾಧ್ಯಮದವರೂ ಬಂದರು. ಬಳಿಕ ಪಕೀರಪ್ಪ ಸಿನಿಮಾ ನೋಡಲು ಸಾಧ್ಯವಾಯಿತು. ವಿಷಯ ಬಹಿರಂಗವಾಗುತ್ತಿದ್ದಂತೆ ಕನ್ನಡ ಪರ ಸಂಘಟನೆಗಳು, ರೈತ ಮುಖಂಡರು, ಪ್ರತಿಭಟನೆ ಮಾಡಿದರು. ರೈತನಿಗಾದ ಅವಮಾನಕ್ಕೆ ವ್ಯಾಪಕ ಖಂಡನೆ ಕೇಳಿಬಂತು. ರಾಜಕಾರಣಿಗಳು ನಡೆದ ಘಟನೆಯನ್ನು ತಪ್ಪು ಎಂದರು. ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ, ಶಾಂತಕುಮಾರ್ ರೈತನಿಗಾದ ಅವಮಾನವನ್ನು ಪ್ರತಿಭಟಿಸಿದರು. ಅಂತಿಮವಾಗಿ ತಪ್ಪು ಮಾಡಿದ ವರು ರೈತನ ಕ್ಷಮೆ ಕೇಳಿ, ಶಾಲು ಹೊದೆಸಿ ಸನ್ಮಾನ ಮಾಡಿದರು. ಇಲ್ಲಿ ಕೊನೆಗೆ ಏನಾಯಿತು ಎನ್ನುವುದು ಸಣ್ಣ ವಿಷಯ.
ಆದರೆ ರೈತನೊಬ್ಬನಿಗೆ ಪಂಚೆ ತೊಟ್ಟ ಕಾರಣಕ್ಕೆ ಪ್ರವೇಶ ನಿರಾಕರಿಸಲಾಯಿತು ಎನ್ನುವುದು ಗಂಭೀರ ವಿಷಯ. ಸಂಬಂಧಪಟ್ಟವರ ಆತ್ಮಸಾಕ್ಷಿಯನ್ನು ಎಚ್ಚರಿಸಬೇಕಿರುವ ವಿಷಯ. ಈ ರಾಜ್ಯದ ಕೋಟ್ಯಂತರ ಕನ್ನಡಿಗರ ಆರಾಧ್ಯ ದೈವ ಡಾ.ರಾಜಕುಮಾರ್ ಅವರು ಸಾರ್ವಜನಿಕ ಬದುಕಿನಲ್ಲಿ ಪಂಚೆಯನ್ನೇ ತೊಟ್ಟವರು. ಈ ದೇಶದ ಮಾಜಿ ಪ್ರಧಾನಮಂತ್ರಿ ದೇವೇಗೌಡರು ಪಂಚೆ ತೊಟ್ಟೇ ಪ್ರಧಾನಿಯ ಕರ್ತವ್ಯ ನಿಭಾಯಿಸಿದವರು. ಕೇಂದ್ರದ ಮಾಜಿ ವಿತ್ತ ಸಚಿವ ಚಿದಂಬರಂ ಪಂಚೆಯುಟ್ಟು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಹಿಂಜರಿಯುತ್ತಿರಲಿಲ್ಲ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಪಂಚೆ ತೊಡುವ ವರೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕಾಂತಾರ ಚಲನಚಿತ್ರ ಹಿಟ್ ಆದ ಬಳಿಕ ಪಂಚೆ ತೊಡುವುದನ್ನೇ ರೂಢಿ ಮಾಡಿ ಕೊಂಡರು.
ಹೀಗಿದ್ದೂ ಪಂಚೆ ತೊಡುವವರು ಕೀಳಾದದ್ದು ಹೇಗೆ? ಕೆಸರುಗzಯಲ್ಲಿ ಕೆಲಸ ಮಾಡುವ ರೈತ ಪಂಚೆ ತೊಟ್ಟರೆ ಆಶ್ಚರ್ಯವಲ್ಲ. ಆತ ಬೆಂಗಳೂರಿಗೆ ಬಂದಾಗ ತಾನು ಪ್ಯಾಂಟ್ ತೊಡಬೇಕು ಎಂದು ಭಾವಿಸಬೇಕಿಲ್ಲ. ಅನ್ನದಾತ ರೈತ ತನ್ನ ವೇಶಭೂಷಣಕ್ಕಾಗಿ ಗುರುತಿಸಲ್ಪಡುವುದು ಬೇಕಿಲ್ಲ. ಆದರೂ ತೊಟ್ಟ ಬಟ್ಟೆಯ ಮೂಲಕ ಅವಮಾನಕ್ಕೀಡಾಗುವುದು ಇದೇ ಮೊದಲೂ ಅಲ್ಲ. ಬಟ್ಟೆ ಕೊಳೆಯಾಗಿದೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಮೆಟ್ರೋ ರೈಲಿನ ಒಳಕ್ಕೆ ಬಿಡದವರು ಛೀಮಾರಿ ಹಾಕಿಸಿ ಕೊಂಡಿದ್ದರು.
ಕನ್ನಡದ ದಿಗ್ಗಜ ನಟರಾಜ ವಿಷ್ಣುವರ್ಧನ್ ಮತ್ತು ಅಂಬರೀಶ್ ಜೊತೆಯಾಗಿ ನಟಿಸಿದ ದಿಗ್ಗಜರು ಚಲನಚಿತ್ರದಲ್ಲಿ ಕಾರು ಕೊಳ್ಳಲು ಶೋ ರೂಮ್‌ಗೆ
ಹೋದಾಗ ವೇಶಭೂಷಣ ನೋಡಿ, ಕಾರು ಕೊಳ್ಳು ಆರ್ಥಿಕ ಅರ್ಹತೆ ಇಲ್ಲದವರು ಎಂದು ಭಾವಿಸಿ ಅವಮಾನಿಸಿದ್ದು, ಬಳಿಕ ಮೂಟೆಯ ದುಡ್ಡು ತಂದು ಸುರಿದು ಶೋ ರೂಮ್ನ ಮ್ಯಾನೇಜರ್‌ನ ಮುಖದಲ್ಲಿ ಬೆವರಿಳಿಸಿದ್ದು ಜನಪ್ರಿಯ ಸನ್ನಿವೇಶ. ಇಂತಹ ಘಟನೆಗಳಿಂದ ಜನರು ಕಲಿಯಬೇಕಾದ ಪಾಠ ಏನೂ ಇಲ್ಲವೇ? ವಾಸ್ತವ ಘಟನೆ ಗಳನ್ನು ಬರಹಗಾರರು ಕಥೆಯಾಗಿಸುತ್ತಾರೋ? ಅಥವಾ ಕಥೆಗಳನ್ನು ಓದಿ, ಸಿನಿಮಾಗಳನ್ನು ನೋಡಿ ಜನರು ಅದನ್ನು
ಅನುಸರಿಸುತ್ತಾರೋ? ಎನ್ನುವ ಗೊಂದಲ ಮೂಡುವಂತೆ ತುಮಕೂರಿನಲ್ಲಿ ಇಂಥದ್ದೇ ಘಟನೆಯೊಂದು ನಡೆಯಿತು.
ಜೀಪ್ ಕೊಳ್ಳಲು ಶೋ ರೂಮ್‌ಗೆ ಹೋದ ರೈತನಿಗೆ ಅಲ್ಲಿನ ಸಿಬ್ಬಂದಿಗಳು ಅವಮಾನಿಸಿದಾಗ ಆತ ಸಂಜೆಯೊಳಗೆ ಪೂರ್ತಿ ಹಣ ತಂದು ಜೀಪ್ ಖರೀದಿಸಿಯೇ ಬಿಟ್ಟ. ಕೊನೆಗೆ ಸಿಬ್ಬಂದಿಗಳು ರೈತನ ಕ್ಷಮೆ ಕೇಳಿದರು. ಈ ಘಟನೆ ದೇಶದಾದ್ಯಂತ ಸುದ್ದಿಯಾಯಿತು. ತಪ್ಪು ಮಾಡುವುದು ಏಕೆ? ಮತ್ತೆ ಕ್ಷಮೆ ಕೇಳುವುದು ಏಕೆ? ನಮ್ಮ ಪರಂಪರೆಯನ್ನು ನಾವು ನೆನಪಿಸಿಕೊಳ್ಳಬೇಕು. ಪಂಚೆ ಎನ್ನುವುದು ಭಾರತೀಯರ ಅಸ್ಮಿತೆ. ನಮ್ಮ ದೇಶದ ಹೆಮ್ಮೆ ಎನ್ನಿಸುವಂತಹ ವೇದಗಳು ಎಂಬ ಜ್ಞಾನ ಸಂಪತ್ತನ್ನು ನಮಗೆ ಕೊಟ್ಟ ಋಷಿ-ಮುನಿಗಳು ಮಾನ ಮುಚ್ಚುವುದಕ್ಕೆ ಮಾತ್ರವೇ ಬಟ್ಟೆ ತೊಟ್ಟವರು. ಬಹುಶಃ ಇಂಗ್ಲಿಷರ ಅನುಕರಣೆಯಿಂದಾಗಿ ನಮಗೆ ಪ್ಯಾಂಟ್ ಬಂತೇ ಹೊರತು, ನಮ್ಮ ಹಿರಿಯರನ್ನು ನಾವು ಹೆಮ್ಮೆಯಿಂದ ಅನುಕರಿಸಿದ್ದರೆ ಪಂಚೆ ಉಡುವುದಕ್ಕೆ ನಾವು ಹೆಮ್ಮೆಪಡುತ್ತಿದ್ದೆವು. ರೈತನನ್ನು ಒಳಗೆ ಬಿಡಲು ನಿರಾಕರಿಸಿದ ಸೆಕ್ಯೂರಿಟಿಯ ಪೂರ್ವಜರು ಖಂಡಿತ ಪಂಚೆ ತೊಟ್ಟವರೆ.
‘ಬಾಹ್ಯ ಆಕಾರಕ್ಕೆ ಬೆಲೆ ಕೊಡಬೇಡ’ ಎಂಬುದನ್ನು ನಮ್ಮ ಪುರಾಣಗಳು ನಮಗೆ ಅಷ್ಟಾವಕ್ರನ ಕಥೆಯ ಮೂಲಕ ಹೇಳಿಕೊಟ್ಟಿವೆ. ಈ ಕಥೆಯ ವಿವರ ಗಳನ್ನು ಪರಿಶೀಲಿಸಿದರೆ ಕಹೋಡ ಎಂಬ ಮುನಿಗೆ ಸುಜಾತ ಎಂಬ ಪತ್ನಿ ಇದ್ದಳು. ಅವರದು ಅನ್ಯೋನ್ಯ ದಾಂಪತ್ಯ. ಸುಜಾತಾ ಗರ್ಭಿಣಿಯಾಗಿದ್ದಾಗ ಒಂದು ದಿನ ತನ್ನ ಆಶ್ರಮದಲ್ಲಿ ಮಂತ್ರವೊಂದನ್ನು ಹೇಳುತ್ತಾ ಕಹೋಡ ಕೆಲವು ತಪ್ಪುಗಳನ್ನು ಮಾಡಿದ. ಆಗ ಗರ್ಭದಲ್ಲಿದ್ದ ಮಗು ಆ ತಪ್ಪುಗಳನ್ನು ತಿದ್ದಿತು. ಇದರಿಂದ ಕೆರಳಿದ ಕಹೋಡ ಋಷಿಯು ‘ಗರ್ಭದಲ್ಲಿದ್ದ ಮಗುವಿಗೆ ನೀನು ಅಷ್ಟಾವಕ್ರ ನಾಗಿ ಹುಟ್ಟು’ ಎಂದು ಶಪಿಸಿದ. ತನ್ನ ತಪ್ಪನ್ನು ಒಪ್ಪಿಕೊಳ್ಳದೆ, ತಿದ್ದಿಕೊಳ್ಳದೆ ಭ್ರೂಣಕ್ಕೆ ಕೊಟ್ಟ ಶಾಪ ಫಲಿಸಿತು. ಮಗು ದೈಹಿಕವಾದ ಎಂಟು ವಕ್ರಗಳೊಂದಿಗೆ ಜನಿಸಿತು.
ಆದರೂ ಮಗು ಎಲ್ಲ ವಿದ್ಯೆಗಳನ್ನು ಪಡೆದು ಅಪೂರ್ವ ಜ್ಞಾನವನ್ನು ಗಳಿಸಿಕೊಂಡು ಅಷ್ಟಾವಕ್ರನೆಂದೇ ಜನಪ್ರಿಯನಾದ. ಈ ಮಧ್ಯೆ ತನ್ನ ಬಡತನದ ನಿವಾರಣೆಗಾಗಿ ಜನಕ ಮಹಾ ರಾಜನ ಆಸ್ಥಾನಕ್ಕೆ ಹೋದ ಕಹೋಡ ಋಷಿ ವಂದಿ ಎಂಬ ಪಂಡಿತನೊಂದಿಗೆ ನಡೆದ ವಾದದಲ್ಲಿ ಸೋತು ಶಿಕ್ಷೆಗೊಳ ಗಾಗಿ ತನ್ನ ಆಶ್ರಮಕ್ಕೆ ಮರಳುವುದು ಅಸಾಧ್ಯವಾಯಿತು. ಯೌವನಕ್ಕೆ ಬಂದ ಅಷ್ಟಾವಕ್ರ ತನ್ನ ತಂದೆ ಎಲ್ಲಿ ಎಂದು ತಾಯಿಯನ್ನು ಕೇಳಿದ.
ಸುಜಾತಾ(ಅಷ್ಟಾವಕ್ರನ ತಾಯಿ) ಕಣ್ಣಿರಿನೊಂದಿಗೆ ಕಹೋಡ ಋಷಿಗಾದ ದುರಂತ ಕಥೆ ಯನ್ನು ಹೇಳಿದಳು. ತನ್ನ ತಂದೆಯನ್ನು ಬಿಡಿಸಿ ಕರೆತರುತ್ತೇ ನೆಂದು ಅಮ್ಮನಿಗೆ ಮಾತು ಕೊಟ್ಟು ರಾಜನ ಆಸ್ಥಾನಕ್ಕೆ ಬಂದ. ವಂದಿಯೊಂದಿಗೆ ವಾದ ನಡೆಸಲು ತನಗೆ ಅವಕಾಶ ಕೊಡಬೇಕೆಂದು ರಾಜನಲ್ಲಿ ಕೇಳಿದ. ಅಷ್ಟಾವಕ್ರನ ದೈಹಿಕ ಆಕಾರವನ್ನು ಅದೆಷ್ಟೋ ಜನರು ಗೇಲಿ ಮಾಡಿದರು. ವಂದಿ ಮಹಾವಿದ್ವಾಂಸ, ವಾದದಲ್ಲಿ ಆತನನ್ನು ಗೆಲ್ಲುವುದು ಸಾಧ್ಯವಿಲ್ಲ ಎಂದು ಅಷ್ಟಾವಕ್ರನನ್ನು ಬೆದರಿಸಿದರು. ಆದರೆ ಅಷ್ಟಾವಕ್ರನಿಗೆ ತನ್ನ eನದ ಬಗ್ಗೆ ವಿಶ್ವಾಸವಿತ್ತು. ತನ್ನ ದೈಹಿಕ ವಕ್ರತೆಯ ಬಗೆಗೆ ಯಾವ ಕೀಳರಿಮೆಯೂ ಇರಲಿಲ್ಲ. ಕೊನೆಗೆ ರಾಜನ ಸಮ್ಮತಿಯೊಂದಿಗೆ ವಾದ ನಡೆದು, ವಂದಿಯನ್ನು ಸೋಲಿಸಿದ ಅಷ್ಟಾವಕ್ರ ತನ್ನ ತಂದೆ ಯನ್ನು ಬಂಧಮುಕ್ತ ಗೊಳಿಸಿದ. ಬಾಹ್ಯ ಆಕಾರಕ್ಕಿಂತಲೂ ಅಂತರಂಗದ ಜ್ಞಾನ ಶ್ರೇಷ್ಠ ಎಂಬುದನ್ನು ಸಾಬೀತುಪಡಿಸಿದ.
ನಮ್ಮ ಪರಂಪರೆಯ ಪರಿಚಯ ನಮಗಿಲ್ಲದಿದ್ದಾಗ, ನಮ್ಮ ಸಂಸ್ಕೃತಿಯ ಬಗ್ಗೆ ನಮಗೆ ಗೌರವ ಇಲ್ಲದಿದ್ದಾಗ ಪಂಚೆ ಉಟ್ಟವರನ್ನು ಅವಮಾನಿಸುವಂತಹ ಘಟನೆಗಳು ನಡೆಯುತ್ತವೆ. ಕೆಲವರಂತೂ ಕೆಲವು ಕಡೆಗಳಲ್ಲಿ ಇದು ಸರಿ ಎನ್ನುವ ಕಾರಣಕ್ಕೆ ಎ ಕಡೆಗಳಲ್ಲೂ ಇದನ್ನು ಹೇರಲು ಪ್ರಯತ್ನ ನಡೆಸುತ್ತಾರೆ. ಕೆಲವು ಕ್ಲಬ್‌ಗಳಲ್ಲಿ ಶೂ ಧರಿಸುವುದು ಕಡ್ಡಾಯ, ಪ್ಯಾಂಟ್ ಧರಿಸಲೇಬೇಕು ಎಂಬಂತಹ ಡ್ರೆಸ್ ಕೋಡ್‌ಗಳಿರುತ್ತವೆ. ಖಾಸಗಿ ಕ್ಲಬ್‌ಗಳು ತನ್ನ ಸದಸ್ಯರಿಗೆ ಅಂಥ ನಿರ್ಬಂಧಗಳನ್ನು ಹೇರಿದರೆ ಅದು ಅವರವರ ಇಷ್ಟ. ಒಪ್ಪುವವರು ಡ್ರೆಸ್ ಕೋಡ್ ಅನುಸರಿಸ ಬಹುದು, ಒಪ್ಪದವರು ಕ್ಲಬ್‌ನಿಂದ ದೂರ ಉಳಿಯ ಬಹುದು. ಆದರೆ ಒಂದು ಮಾಲ್ ಖಂಡಿತವಾಗಿಯೂ ಸಾರ್ವಜನಿಕ ಸ್ಥಳ. ಸಾರ್ವಜನಿಕರೆಲ್ಲರಿಗೂ ಯಾವುದೇ ತಾರತಮ್ಯವಿಲ್ಲದೇ ಪ್ರವೇಶಕ್ಕೆ ಅವಕಾಶ ಮಾಡಿಕೊಡ ಬೇಕಿರುವುದು ಕಡ್ಡಾಯ.
ಮಾಲ್‌ಗಳಲ್ಲಿ ಪ್ರದರ್ಶಿತ ವಾಗುವ ಚಲನಚಿತ್ರಗಳು ಪ್ರೇಕ್ಷಕರನ್ನೇ ನಂಬಿ ನಿರ್ಮಾಣ ವಾದ ಸಿನಿಮಾ. ಪ್ಯಾಂಟ್ ಧರಿಸಿದವರು ಮಾತ್ರ ಸಿನಿಮಾ ನೋಡಬಹುದು ಎಂಬ ನಿರ್ಬಂಧಗಳನ್ನು ಒಪ್ಪುವುದು ಸಾಧ್ಯವೇ ಇಲ್ಲ. ರೈತನನ್ನು ತಡೆದವರು ತಾವು ಪಡೆಯುವ ಸಂಬಳಕ್ಕೋಸ್ಕರ ಕೆಲಸ ಮಾಡುತ್ತಾರೆ. ತಮಗೆ ಬಂದ ನಿರ್ದೇಶನಗಳನ್ನು ಪಾಲಿಸದೇ ಹೋದರೆ ಅವರು ಕೆಲಸ ಕಳೆದುಕೊಳ್ಳ ಬಹುದು. ಆದ್ದರಿಂದ ಅವರದು ತಪ್ಪು ಎನ್ನು ವಂತಿಲ್ಲ. ಮಾಲ್‌ನ ಮಾಲೀಕರು ಈ ಘಟನೆ ಯಾಕೆ ನಡೆಯಿತು? ಹೇಗೆ ನಡೆಯಿತು? ಎಂದು ವಿಚಾರಿಸಬೇಕು. ಪಂಚೆ ಉಟ್ಟ ವರನ್ನು ನಿರ್ಬಂಧಿಸು ವಂತಹ ಗೈಡ್ಲ್ನ್‌ಗಳು ಯಾರ ಮಿದುಳಿನ ಕೂಸು? ಎನ್ನುವುದರ ವಿಚಾರಣೆ ನಡೆಯ ಬೇಕು.
ಮಾಲ್ ನಂತಹ ಸಾರ್ವಜನಿಕ ಸ್ಥಳಗಳಲ್ಲಿ ಡ್ರೆಸ್ ಆಧಾರಿತ ತಾರತಮ್ಯ ನಡೆಯಬಾರದು. ಇಂಥ ವರ್ತನೆ ಪುನರಾವರ್ತನೆಯಾದರೆ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಲ್ಪಡಬೇಕು. ದೇಶದ ಜನರಿಗೆ ಅನ್ನ ಕೊಡುವ ರೈತನಿಗೆ ತನ್ನ ವೇಶ ಭೂಷಣದ ಬಗ್ಗೆ ಚಿಂತಿಸುವಷ್ಟು ಆರ್ಥಿಕ ಅನುಕೂಲವೂ ಇಲ್ಲದಿರ ಬಹುದು. ನಮ್ಮನ್ನು ಸುರಕ್ಷಿತವಾಗಿ ಇರಿಸುವ ದೇಶದ ಸೈನಿಕರಿಗೆ ನಾವು ಎಷ್ಟು ಕೃತಜ್ಞರಾಗಿರುತ್ತೇವೋ, ಅಷ್ಟೇ ಕೃತಜ್ಞತೆಯಿಂದ ರೈತರಿಗೂ ಗೌರವ, ಮರ್ಯಾದೆ ಕೊಡಬೇಕು. ರೈತರನ್ನು ಈ ದೇಶದ ಸೆಲೆಬ್ರಿಟಿಗಳಂತೆ ಪರಿಗಣಿಸಬೇಕು. ಅವರು ಅವಮಾನಕ್ಕೆ ಒಳಗಾದರೆಂದರೆ ಅದು ನಮ್ಮ ವ್ಯವಸ್ಥೆಯ ಸೋಲಲ್ಲದೇ ಬೇರೇನೂ ಅಲ್ಲ. ತಪ್ಪು ಮಾಡುವುದು ಸಹಜ. ಆದರೆ ತಪ್ಪು ಪುನರಾವರ್ತನೆಯಾಗುವುದು ಅಸಹಜ ಮತ್ತು ಅಪರಾಧ. ರಾಜ್ಯ ದಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕಾಗಿರುವುದು ಎಲ್ಲರ ಜವಾಬ್ದಾರಿಯಾಗಿರಲಿ.