Saturday, 14th December 2024

ಬಗೆಹರಿದ ಏರ್​ಪೋರ್ಟ್​ಗಳ ಸರ್ವರ್: ಸಾಮಾನ್ಯ ಕಾರ್ಯಾಚರಣೆ ಆರಂಭ

ನವದೆಹಲಿ: ಈಗ ಏರ್​ಪೋರ್ಟ್​ಗಳ ಸರ್ವರ್​ಗಳು ಮೊದಲಿನಂತೆಯೇ ಕಾರ್ಯನಿರ್ವಹಿಸುತ್ತಿವೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

ಭಾರತದಲ್ಲಿರುವ ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಗಿನ ಜಾವದಿಂದಲೇ ಸಾಮಾನ್ಯ ಕಾರ್ಯಾಚರಣೆ ಆರಂಭಗೊಂಡಿದೆ ಎಂದು ಹೇಳಿದೆ.

ಈ ಕುರಿತು ಎಕ್ಸ್​ನಲ್ಲಿ ನಾಗರಿಕ ವಿಮಾನಯಾನ ಸಚಿವ ರಾಮ್​ ಮೋಹನ್ ನಾಯ್ಡು ಕಿಂಜರಾಪು ಪೋಸ್ಟ್​ ಮಾಡಿ ಅಧಿಕೃತ ಹೇಳಿಕೆ ನೀಡಿದ್ದಾರೆ. ಇದೀಗ ವಿಮಾನ ಹಾರಾಟಗಳು ಸುಗಮವಾಗಿ ಸಾಗುತ್ತಿದೆ. ನಿನ್ನೆ ಉದ್ಭವಿಸಿದ ಸಮಸ್ಯೆಗಳಿಂದಾಗಿ ಬಾಕಿ ಉಳಿದಿರುವ ಸಮಸ್ಯೆಗಳು ಕ್ರಮೇಣವಾಗಿ ಬಗೆಹರಿಯು ತ್ತಿವೆ.

ಮೈಕ್ರೋಸಾಫ್ಟ್ ಸ್ಥಗಿತವು ದೇಶಾದ್ಯಂತ ವಿಮಾನ ಕಾರ್ಯಾಚರಣೆಗಳ ಮೇಲೆ ತೀವ್ರ ಪರಿಣಾಮ ಬೀರಿದ ನಂತರ, ಭಾರತದಲ್ಲಿನ ವಿಮಾನ ನಿಲ್ದಾಣ ಗಳಾದ್ಯಂತ ವಿಮಾನಯಾನ ವ್ಯವಸ್ಥೆಗಳು ಶನಿವಾರ ಮುಂಜಾನೆ 3 ಗಂಟೆಯಿಂದ ಸಾಮಾನ್ಯವಾಗಿ ಕಾರ್ಯಾಚರಣೆಯನ್ನು ಪುನರಾರಂಭಿಸಿದವು ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

ಮೈಕ್ರೋಸಾಫ್ಟ್ 365 ಸ್ಥಗಿತದ ಪರಿಣಾಮವು ವಾಯುಯಾನ ವಲಯದಲ್ಲಿ ಹೆಚ್ಚು ಸ್ಪಷ್ಟವಾಗಿ ಕಂಡುಬಂದಿದೆ. ಇಂಡಿಗೋ, ಏರ್ ಇಂಡಿಯಾ, ಸ್ಪೈಸ್‌ಜೆಟ್ ಮತ್ತು ಆಕಾಶ ಏರ್ ಸೇರಿದಂತೆ ನೂರಾರು ವಿಮಾನಗಳು ವಿಳಂಬಗೊಂಡವು ಮತ್ತು ಏರ್‌ಲೈನ್ ಆಪರೇಟರ್‌ಗಳು ತಮ್ಮ ಸಿಸ್ಟಮ್‌ಗಳು ನಿಷ್ಕ್ರಿಯವಾಗಿದ್ದವು.

ದೆಹಲಿ ವಿಮಾನ ನಿಲ್ದಾಣದಲ್ಲಿ 400ಕ್ಕೂ ಹೆಚ್ಚು ವಿಮಾನಗಳು ವಿಳಂಬಗೊಂಡಿವೆ, 50ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ.ಈ ಸಂಪೂರ್ಣ ಸಮಸ್ಯೆಯನ್ನು ಪರಿಹರಿಸಲು ಸುಮಾರು 17 ಗಂಟೆಗಳನ್ನು ತೆಗೆದುಕೊಂಡಿತು. ಇಂಡಿಗೋ 192 ವಿಮಾನಗಳನ್ನು ರದ್ದುಗೊಳಿಸಿದೆ.

ಅಮೆರಿಕನ್ ಏರ್‌ಲೈನ್ಸ್, ಸ್ಪೇನ್, ಟರ್ಕಿಯೆ ಸೇರಿದಂತೆ ಹಲವು ವಿಮಾನ ನಿಲ್ದಾಣಗಳು ಸಮಸ್ಯೆ ಎದುರಿಸಿವೆ.