Friday, 29th November 2024

ಗಿಗ್ ಆರ್ಥಿಕತೆಯತ್ತ ವಾಲುತ್ತಿರುವ ಯುವ ಭಾರತ

ವಿದ್ಯಮಾನ

ವಿನಾಯಕ ವೆಂ.ಭಟ್ಟ, ಅಂಬ್ಲಿಹೊಂಡ

ಈ‘ಗಿಗ್’ ಕೆಲಸಗಾರರು ಎಂದರೆ ಯಾರು ಎಂದು ಸುಲಭವಾಗಿ ಹೇಳಬಹುದಾದರೆ ಸ್ವಿಗ್ಗಿ, ಓಲಾ, ಜೊಮ್ಯಾಟೊ, ಉಬರ್ ಮತ್ತು ಅಮೆಜಾನ್ ಮುಂತಾದ ಸಂಸ್ಥೆಗಳಲ್ಲಿ ಡೆಲಿವರಿ ಕೆಲಸಮಾಡುವವರನ್ನು ಗಿಗ್ ಕೆಲಸಗಾರರು ಎಂದು ಉದಾಹರಿಸಬಹುದಾಗಿದೆ. ಸಾಂಪ್ರದಾಯಿಕವಾಗಿ ಯಾವುದೇ ಸಂಸ್ಥೆಯಲ್ಲಿ ಖಾಯಂ ಉದ್ಯೋಗಿಯಾಗಿರದೇ ಪಾರ್ಟ್ ಟೈಮ, ಹಂಗಾಮಿ ಅಥವಾ ಉದ್ಯೋಗಿ – ಉದ್ಯೋಗದಾತ ಸಂಭಂಧವಿಲ್ಲದೇ ತೊಡಗಿಸಿಕೊಳ್ಳುವವರನ್ನೂ ‘ಗಿಗ್’ ಕಾರ್ಮಿಕರು ಎನ್ನುತ್ತಾರೆ.

ದಿನನಿತ್ಯ ಮಳೆ ಬಿಸಿಲೆನ್ನದೇ ಮುಂಜಾವಿನಿಂದ ಮಧ್ಯರಾತ್ರಿಯವರೆಗೆ ಮೋಟಾರ್ ಸೈಕಲ್‌ನಲ್ಲಿ ಬೆನ್ನಿಗೆ ಒಂದು ಚೀಲ ಕಟ್ಟಿಕೊಂಡು ಒಂದು ಕಡೆಯಿಂದ ಇನ್ನೊಂದು ಕಡೆಗೆ ಓಡಾಡಿ ಜನರಿಗೆ ಸೇವೆ ಒದಗಿಸುತ್ತಿರುವವರನ್ನು ನಿತ್ಯ ನಾವುಗಳು ನೋಡುತ್ತೇವೆ ತಾನೆ! ಕಡಿಮೆ ವಿದ್ಯಾರ್ಹತೆಯುಳ್ಳ ಯುವಕರು ನಗರಗಳಲ್ಲಿ ತಮ್ಮ ಜೀವನ ನಿರ್ವಹಣೆಗೆ ಇಂತಹ ಕೆಲಸಗಳನ್ನು ಮಾಡಿ ತಮ್ಮ ಆದಾಯವನ್ನು ಗಳಿಸುವವರು ಮತ್ತು ಈಗಾಗಲೇ ಇರುವ
ಉದ್ಯೋಗದಿಂದ ಬರುವ ಸಂಬಳ ಸಾಕಾಗದಿದ್ದಾಗ ದಿನದಲ್ಲಿ ಕೆಲವು ಗಂಟೆ ಈ ತರಹದ ಕೆಲಸದಲ್ಲಿ ತೊಡಗಿಸಿಕೊಳ್ಳುವವರನ್ನು ಪ್ಲಾಟ್ ಫಾರ್ಮ್  ಅಥವಾ ಗಿಗ್ ಕಾರ್ಮಿಕರು ಎಂದು ಗುರುತಿಸುತ್ತಾರೆ. ಗಿಗ್ ಆರ್ಥಿಕತೆ ಎಂಬ ಪದವು ಅಲ್ಪಾವಧಿಯ ಉದ್ಯೋಗ, ಒಪ್ಪಂದದ ಉದ್ಯೋಗಗಳು ಮತ್ತು ಸ್ವತಂತ್ರ ಗುತ್ತಿಗೆದಾರರನ್ನು ಒಳಗೊಂಡಿರುತ್ತದೆ.

ಇದನ್ನು ಫ್ರೀಲ್ಯಾನ್ಸರ್ ಆರ್ಥಿಕತೆ, ಅಜೈಲ್ ವರ್ಕ್ ಫೋರ್ಸ್, ಹಂಚಿಕೆ ಆರ್ಥಿಕತೆ ಎಂದೂ ಕರೆಯಲಾಗುತ್ತದೆ. ಅಂತೂ, ಅಸಂಘಟಿತ ಮತ್ತು
ಯಾವುದೇ ಭದ್ರತೆಯಿಲ್ಲದೇ ಕೇವಲ ತಮ್ಮ ದೈನಂದಿನ ಆದಾಯಕ್ಕಾಗಿ ಕೆಲಸ ಮಾಡುವ ಈ ತರಹದ ಕೆಲಸಗಾರರೂ ದೇಶದ ಅರ್ಥಿಕತೆಯ ಬೆಳವಣಿಗೆಗೆ
ತಮ್ಮದೇ ಆದ ಕಾಣಿಕೆ ನೀಡುತ್ತಿದ್ದಾರೆ ಎನ್ನುವುದನ್ನು ಸರಕಾರಗಳು ಗಮನಿಸಬೇಕಿದೆ. ‘ಗಿಗ್’ ಆರ್ಥಿಕತೆಯು ಅಗ್ಗದ, ಹೆಚ್ಚು ಪರಿಣಾಮಕಾರಿಯಾದ ಮತ್ತು ಸುಲಭವಾಗಿ ಮಾರುಕಟ್ಟೆಗೆ ಹೊಂದಿಕೊಳ್ಳುವ ಸೇವೆಗಳನ್ನು ಪೂರೈಸುತ್ತದೆ ಮತ್ತು ಅದು ಗ್ರಾಹಕರಿಗೆ ನಿಯಮಿತ, ಪ್ರಮಾಣಿತ ಅನನ್ಯ ಮತ್ತು ವೇಗದ ಸೇವೆಯನ್ನು ನೀಡುತ್ತದೆ ಎಂದು ವಿಶ್ಲೇಷಿಸುತ್ತಾರೆ.

ಜಗತ್ತಿನಾದ್ಯಂತ ಇದು ಇಂದಿನ ಯುವಜನರ ಅತ್ಯಂತ ನೆಚ್ಚಿನ ಉದ್ಯೋಗದ ಆಯ್ಕೆಯೂ ಆಗಿದೆ. ಯುನೈಟೆಡ್ ಸ್ಟೇಟ್ಸ್ ನಲ್ಲಿ, ಜನಸಂಖ್ಯೆಯ ಸುಮಾರು ಮೂರನೇ ಒಂದು ಭಾಗದಷ್ಟು ಜನರು ‘ಗಿಗ್’ನ ಯಾವುದಾದರೂ ರೂಪದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಈಗಾಗಲೇ ಕೋಟ್ಯಾಂತರ ಜನ ‘ಗಿಗ್’ ಆರ್ಥಿಕತೆಯಿಂದ ತಮ್ಮ ಆದಾಯವನ್ನು ಗಳಿಸುತ್ತಿದ್ದಾರೆ, ಸಮಯ ಮತ್ತು ಹಣವನ್ನು ಉಳಿಸುವ ಸಲುವಾಗಿ ಹೆಚ್ಚಿನ ಸಂಸ್ಥೆಗಳು ಸ್ವತಂತ್ರ ಗುತ್ತಿಗೆದಾರ ಪದ್ಧತಿಯ ಕೆಲಸವನ್ನು ಅಳವಡಿಸಿಕೊಳ್ಳುತ್ತಿರುವುದರಿಂದ ೨೦೩೦ ಹೊತ್ತಿಗೆ ಇದು ಇನ್ನೂ ಹೆಚ್ಚಲಿಕ್ಕಿದೆ ಎಂದು ನಮ್ಮ ನೀತಿ ಆಯೋಗ ತಿಳಿಸುತ್ತದೆ. ದೇಶದ ಯುವಕರಿಗೆ ಸ್ವತಂತ್ರವಾಗಿ ಮತ್ತು ಎರಡನೇ ಆದಾಯವನ್ನು ಗಳಿಸುವ ಮಾರ್ಗವನ್ನು ಒದಗಿಸುವು ದರಿಂದ ‘ಗಿಗ್’ ಆರ್ಥಿಕತೆಯು ಕಳೆದ ಐದಾರು ವರ್ಷಗಳಲ್ಲಿ ಭಾರತದ ದೊಡ್ಡ ನಗರಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸುತ್ತಿದೆ.

ಈ ಮಾದರಿಯನ್ನು ಅಳವಡಿಸಿಕೊಳ್ಳುವುದರಿಂದ ಉದ್ಯೋಗದಾತರಿಗೆ ಮತ್ತು ಉದ್ಯೋಗಿಗಳಿಗಿರುವ ಲಾಭ ನಷ್ಟಗಳನ್ನು ನೋಡುವುದಾದರೆ, ವೆಚ್ಚ ಗಳಲ್ಲಿನ ಕಡಿತ, ಸಂಸ್ಥೆಗಳಿಗೆ ಆಗುವ ಪ್ರಮುಖ ಪ್ರಯೋಜನವಾಗಿದೆ. ದೊಡ್ಡ ಕಚೇರಿಗಳನ್ನು ನಿರ್ವಹಿಸುವ ಅಗತ್ಯವಿರುವುದಿಲ್ಲ, ವಿಸ್ತೃತ  ಉದ್ಯೋಗಿ ಕಲ್ಯಾಣ ಯೋಜನೆಗಳ ಪ್ಯಾಕೇಜ್ ಗಳು, ನಿವೃತ್ತಿ ಯೋಜನೆಗಳು ಮತ್ತು ಪಾವತಿ ಸಹಿತ ಮತ್ತು ಅನಾರೋಗ್ಯದ ರಜೆಗಳಂತಹ ವೆಚ್ಚಗಳನ್ನು ಸದರಿ ವ್ಯವಸ್ಥೆಯಲ್ಲಿ ಸಂಪೂರ್ಣವಾಗಿ ನಿವಾರಿಸಬಹುದಾಗಿದೆ. ಇನ್ನು ಕಾರ್ಮಿಕರಿಗಿರುವ ಕೆಲವು ಅನುಕೂಲಗಳ ಬಗ್ಗೆ ಹೇಳುವುದಾದರೆ, ಗಿಗ್ ಆರ್ಥಿಕತೆ ಯಲ್ಲಿ ಸ್ವತಂತ್ರ ಗುತ್ತಿಗೆದಾರರು ಕಚೇರಿಗಳಿಗೆ ಹೋಗಿ ಕೆಲಸ ಮಾಡುವ ಅಗತ್ಯವಿರುವುದಿಲ್ಲ, ಗಿಗ್ ಮಾದರಿಯ ಉದ್ಯೋಗದಲ್ಲಿ ಕಾರ್ಯ ನಿರ್ವಹಿಸುವ ಕೆಲಸಗಾರರು ಅವರು ಬಯಸಿದ ಯಾವುದೇ ಸಮಯದಲ್ಲಿ ಕೆಲಸ ಮಾಡಲು ಅನುಕೂಲವಿದೆ.

ಮೇಲೆ ಹೇಳಿದಂತೆ, ವ್ಯಕ್ತಿಗಳು ಹೆಚ್ಚುವರಿ ಆದಾಯವನ್ನು ಗಳಿಸುವ ಸೌಲಭ್ಯದಿಂದಾಗಿ ಮತ್ತು ಕೆಲಸದ ವಿಧಾನದಲ್ಲಿ ಸ್ವಾತಂತ್ರ್ಯ ಇರುವುದರಿಂದ ಇಂದು
ಗಿಗ್ ಆರ್ಥಿಕತೆಯು ಭಾರತೀಯ ಯುವಕರಿಗೆ ಹೆಚ್ಚು ಆಕರ್ಷಕವಾದ ಮತ್ತು ಅಚ್ಚುಮೆಚ್ಚಿನ ಆಯ್ಕೆಯಾಗಿದೆ. ಸ್ವತಂತ್ರೋದ್ಯೋಗಿಗಳಾಗಿ ಕೆಲಸ ಮಾಡುವ ವ್ಯಕ್ತಿಗಳು ತಮ್ಮ ಸಂಸ್ಥೆಯಲ್ಲಿ ಪೂರ್ಣಾವಧಿಗೆ ನೇಮಕಗೊಂಡವರಂತೆ ಅಗತ್ಯ ಬದ್ಧತೆ ತೋರದೇ ಇರಬಹುದಾದ ಸಂಭವವೂ ಇಲ್ಲಿ ಇದೆ. ಜೊತೆಗೆ, ಗಿಗ್ ಆರ್ಥಿಕ ಕಂಪನಿಗಳು ಸಾಮಾನ್ಯವಾಗಿ ತಮ್ಮ ಉದ್ಯೋಗಿಗಳನ್ನು ಆರ್ಥಿಕವಾಗಿ ಹೆಚ್ಚು ಪ್ರೋತ್ಸಾಹಿಸುವುದಿಲ್ಲದ ಕಾರಣ,  ಉದ್ಯೋಗಿ ಗಳಲ್ಲಿ ಇದು ನಮ್ಮ ಸಂಸ್ಥೆ ಎನ್ನುವ ನಿಷ್ಠೆಯ ಕೊರತೆಯ ಸಮಸ್ಯೆಗಳನ್ನು ಸೃಷ್ಟಿಸಬಹುದಾಗಿದೆ.

ಇಲ್ಲಿ ಅವರ ಉದ್ಯೋಗವು ಪ್ರಾಸಂಗಿಕ ಮತ್ತು ತಾತ್ಕಾಲಿಕವಾಗಿರುವು ದರಿಂದ ನಾಳೆ ಏನು? ಎನ್ನುವ ಅಭದ್ರತೆಯಂತೂ ಉದ್ಯೋಗಿಗಳಿಗೆ ಇದ್ದೇ ಇರುತ್ತದೆ. ಭಾರತದಲ್ಲಿ ಉದ್ಯೋಗದಾತರು ಮತ್ತು ಸಾಂಪ್ರದಾಯಿಕ ಉದ್ಯೋಗಿಗಳ / ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವ ಬಹಳಷ್ಟು ಕಾನೂನುಗಳು ಸ್ವತಂತ್ರ ಪೂರ್ವ ದಿಂದಲೂ ಇವೆ, ಕಾರ್ಖಾನೆಗಳ ಕಾಯಿದೆ, ಭವಿಷ್ಯ ನಿಧಿ ಕಾಯಿದೆ, ಮಾತೃತ್ವ ಪ್ರಯೋಜನ ಕಾಯಿದೆ, ಕನಿಷ್ಠ ವೇತನ ಕಾಯಿದೆ, ಉದ್ಯೋಗಿಗಳ ರಾಜ್ಯ ವಿಮಾ ಯೋಜನೆ, ಕೈಗಾರಿಕಾ ವಿವಾದ ಕಾಯಿದೆ, ಗುತ್ತಿಗೆ ಕಾರ್ಮಿಕ (ನಿಯಂತ್ರಣ ಮತ್ತು ನಿರ್ಮೂಲನೆ) ಕಾಯಿದೆ, ಬೋನಸ್ ಕಾಯಿದೆ ಇತ್ಯಾದಿ ಕಾನೂನುಗಳನ್ನು ಉದಾಹರಿಸಬಹುದಾಗಿದೆ. ಆದರೆ, ಈ ಗಿಗ್ ಪದ್ಧತಿಯ ಕೆಲಸಗಾರರ ಹಿತರಕ್ಷಣೆಗೆ ಭಾರತದಲ್ಲಿ ಮೇಲೆ ತಿಳಿಸಿದ
ಯಾವುದೇ ಕಾನೂನಿನ ಭದ್ರತೆ ಇಲ್ಲಿಯವರೆಗೆ ಇರಲಿಲ್ಲ.

ಭಾರತದಲ್ಲಿನ ಕಾರ್ಮಿಕ ಕಾನೂನುಗಳನ್ನು ಸರಳೀಕರಿಸುವ ಉದ್ದೇಶದಿಂದ ಕೇಂದ್ರ ಸರಕಾರವು ಹಾಲಿ ಅಸ್ತಿತ್ವದಲ್ಲಿರುವ ಹಲವಾರು ಕಾರ್ಮಿಕ ಸಂಬಂಧಿ ಕಾನೂನುಗಳನ್ನು ವೇತನದ ಸಂಹಿತೆ, ಸಾಮಾಜಿಕ ಭದ್ರತೆಯ ಸಂಹಿತೆ; ಕೈಗಾರಿಕಾ ಸಂಬಂಧಗಳ ಸಂಹಿತೆ ಮತ್ತು ಔದ್ಯೋಗಿಕ, ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಸ್ಥಿತಿಯ ಸಂಹಿತೆ ಎಂದು ನಾಲ್ಕು ಪ್ರಮುಖ ಕಾರ್ಮಿಕ ಸಂಹಿತೆಗಳಾಗಿ (ಔZಚಿಟ್ಠ್ಟ ಇಟbಛಿo) ಕ್ರೋಢೀಕರಿಸಲು ಉದ್ಯುಕ್ತ ವಾಗಿದೆ. ಹಲವು ವರ್ಷಗಳಿಂದ, ಕಾರ್ಮಿಕ ಶಕ್ತಿಯ ಅಸಂಘಟಿತ ವಲಯಕ್ಕೆ ಸೇರಿದ ಗಿಗ್ ಕಾರ್ಮಿಕರು ಮತ್ತು ಪ್ಲಾಟ್ ಫಾರ್ಮ್ ಕಾರ್ಮಿಕರನ್ನು ಸರಕಾರವು ಅಧಿಕೃತವಾಗಿ ಕಾರ್ಮಿಕರು ಎಂದು ವ್ಯಾಖ್ಯಾನಿಸಿಯೆ ಇರಲಿಲ್ಲ.

ಆದರೆ, ಹೊಸದಾಗಿ ಜಾರಿಮಾಡಲು ಉದ್ದೇಶಿಸಿರುವ ಕಾರ್ಮಿಕ ಸಂಹಿತೆಗಳು, ಗಿಗ್ ಕಾರ್ಮಿಕರಿಗೆ ಕಾನೂನಿನ ಅಡಿಯಲ್ಲಿ ವ್ಯಾಖ್ಯಾನವನ್ನು ಒದಗಿಸಿ ಈ ಕಾರ್ಮಿಕರು ಆದಾಯ ಭದ್ರತೆ ಮತ್ತು ಆರೋಗ್ಯ ವಿಮೆಯಂತಹ ಸಾಮಾಜಿಕ ಭದ್ರತಾ ಪ್ರಯೋಜನಗಳ ಅಡಿಯಲ್ಲಿ ಬರುವಂತೆ ಮಾಡಬಹುದು ಎನ್ನುವ ನಿರೀಕ್ಷೆ ಇದೆ. ಈಗಾಗಲೇ ಕರ್ನಾಟಕ ಸರಕಾರದಿಂದ ತಲಾ ಎರಡು ಲಕ್ಷ ಮೌಲ್ಯದ ಆರೋಗ್ಯ ಮತ್ತು ಅಪಘಾತ ವಿಮೆಯ ಸೌಲಭ್ಯವನ್ನು ಈ ವರ್ಗದ ಕಾರ್ಮಿಕರಿಗೆ ರಾಜ್ಯದಲ್ಲಿ ಒದಗಿಸುತ್ತಿದ್ದು, ೮೦ ಸಾವಿರಕ್ಕೂ ಹೆಚ್ಚು ಕಾರ್ಮಿಕರು ಇದರ ಲಾಭಪಡೆಯುತ್ತಿದ್ದಾರೆ ಎಂದು ಸರಕಾರ ಹೇಳಿ ಕೊಂಡಿದೆ.

ಈಗ, ಕರ್ನಾಟಕ ಸರಕಾರ ಈ ಕುರಿತು ಮತ್ತೊಂದು ಸ್ವಾಗತಾರ್ಹ ಪ್ರಯತ್ನಕ್ಕೆ ಮುಂದಾಗಿದ್ದು, ‘ಕರ್ನಾಟಕ ಪ್ಲಾಟ್ ಫಾರ್ಮ್-ಆಧಾರಿತ ಗಿಗ್ ವರ್ಕರ್ಸ್
(ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ, ೨೦೨೪’ ರ ಕರಡನ್ನು ತಯಾರಿಸಿದೆ. ಕ್ಯಾಬ್ ಚಾಲಕರು, ಡೆಲಿವರಿ ಮಾಡುವವರು, ಬಡಗಿಗಳು, ಪ್ಲಂಬರ್‌ಗಳು ಮತ್ತು ರಿಪೇರಿ ಮಾಡುವವರಂತಹ ಗಿಗ್ ಕಾರ್ಮಿಕರ ಕುಂದುಕೊರತೆಗಳ ಪರಿಹಾರಕ್ಕೆ ಕಾರ್ಯವಿಧಾನವನ್ನು ಒದಗಿಸುವ ಉದ್ದೇಶ ದಿಂದ ಸದರಿ ಮಸೂದೆಯನ್ನು ಪ್ರಸ್ತಾಪಿಸಿದೆ.

ಅವರಿಗೆ ಔಪಚಾರಿಕ ಹಕ್ಕುಗಳು ಮತ್ತು ಮೂಲಭೂತ ಕನಿಷ್ಠ ಸಾಮಾಜಿಕ ಭದ್ರತೆಯನ್ನು ಒದಗಿಸುವುದು ಈ ಮಸೂದೆಯ ಇಂಗಿತವಾಗಿದೆ. ರಾಜ್ಯದಲ್ಲಿ ಸಕ್ರಿಯವಾಗಿರುವ ಎಲ್ಲ ಗಿಗ್ ಕಾರ್ಮಿಕರು ಮತ್ತು ಉದ್ಯೋಗ ದಾತರನ್ನು ನೋಂದಾಯಿಸುವ ಮತ್ತು ಕಾನೂನನ್ನು ಉಲ್ಲಂಘಿಸುವವರಿಗೆ ಶಿಕ್ಷೆ ಅಥವಾ ದಂಡ ವಿದಿಸುವುದನ್ನು ಖಚಿತಪಡಿಸಿಕೊಳ್ಳುವ ಕಲ್ಯಾಣ ಮಂಡಳಿಯನ್ನು ಸ್ಥಾಪಿಸುವುದನ್ನು ಈ ಮಸೂದೆ ಕಡ್ಡಾಯಗೊಳಿಸುತ್ತದೆ. ಇದು,
ಅನಿಯಂತ್ರಿತವಾಗಿ ಕೆಲಸದಿಂದ ತೆಗೆದು ಹಾಕಲ್ಪಡುವು ದರಿದ ಕಾರ್ಮಿಕರನ್ನು ರಕ್ಷಿಸುವ ಗುರಿಯನ್ನು ಸಹ ಹೊಂದಿದೆ. ಇದರಲ್ಲಿ ಕಾರ್ಮಿಕರಿಗೆ ವಾರ ಕ್ಕೊಮ್ಮೆಯಾದರೂ ಅವರ ಆದಾಯವನ್ನು ಪಾವತಿಸುವ ಷರತ್ತು, ವೇತನ ಕಡಿತಗಳ ಬಗ್ಗೆ ಕಾರ್ಮಿಕರಿಗೆ ಪೂರ್ವ ಮಾಹಿತಿ ನೀಡುವುದು, ಕಾರ್ಮಿಕರಿಗೆ ಹೆಚ್ಚಿನ ಸ್ವಾಯತ್ತತೆ ಒದಗಿಸುವುದು, ವಾರಕ್ಕೆ ನಿರ್ದಿಷ್ಟ ಸಂಖ್ಯೆಯ ದಿನಗಳ ಉದ್ಯೋಗದ ಭರವಸೆ, ಶೋಷಣೆಯಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಹಕ್ಕನ್ನು ನೀಡುವುದು, ರಾಜ್ಯ ಮತ್ತು ಕೇಂದ್ರದಿಂದ ಕೊಡುಗೆ ನೀಡಬೇಕಾದ ಕಲ್ಯಾಣ ನಿಧಿಯ ಸ್ಥಾಪನೆ, ಗುತ್ತಿಗೆ ಭದ್ರತೆ, ಸಕಾರಣ ಗಳೊಂದಿಗೆ ವಜಾಗೊಳಿಸುವ ಮೊದಲು ಕನಿಷ್ಠ ೧೪ ದಿನಗಳ ಸೂಚನೆ ಅವಧಿಯನ್ನು ಕಡ್ಡಾಯಗೊಳಿಸುವುದು ಮುಂತಾದ ಅಂಶಗಳನ್ನು ಮಸೂದೆ ಒಳಗೊಂಡಿದೆ.

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ವಲಯದ ಬೆಳವಣಿಗೆ ಅನಿಯಂತ್ರಿತವಾಗಿರುವುದನ್ನು ಗಮನಿಸಿ ಈ ಕಾರ್ಮಿಕರನ್ನು ಕಾನೂನಿನ ಅಡಿಯಲ್ಲಿ ತರುವ ಉದ್ದೇಶದಿಂದ ಕರ್ನಾಟಕ ಸರಕಾರ ಒಂದು ಮಸೂದೆಯನ್ನು ರಚಿಸಿ, ಕಾರ್ಮಿಕರಿಗೆ ಕನಿಷ್ಠ ವೇತನ ಮತ್ತು ವಿಮಾ ರಕ್ಷಣೆಯಂತಹ ಕೆಲವು ರೀತಿಯ ಮೂಲಭೂತ ಸಾಮಾಜಿಕ ಭದ್ರತೆಯನ್ನು ಒದಗಿಸುವ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾಗಿದೆ. ಕರ್ನಾಟಕ ಸರಕಾರದ ಈ ನಿರ್ಧಾರ, ಅನ್ಯ ರಾಜ್ಯಗಳಿಗೂ ಮಾದರಿಯಾಗಬಹುದಾದ ಸಂಗತಿಯಾಗಿದೆ. ಗಿಗ್ ವಲಯದ ಕಾರ್ಮಿಕರ ಹಿತರಕ್ಷಣೆಯ ಉದ್ದೇಶ ದಿಂದ ಕಾನೂನು ರಚಿಸಲು ಮುಂದಾಗಿರುವ ಕರ್ನಾಟಕ ಸರಕಾರದ ಕ್ರಮವನ್ನು ರಾಜ್ಯದ ಕೆಲವು ವಾಣಿಜ್ಯ ಒಕ್ಕೂಟಗಳು, ಉದ್ಯೋಗದಾತರ ಸಂಘಗಳು ಮತ್ತು ಕಾರ್ಮಿಕ ಸಂಘಗಳು ಶ್ಲಾಗಿಸುತ್ತಿವೆ. ಜತೆಗೆ, ಮಸೂದೆಯಲ್ಲಿನ ಕೆಲವು ಕೊರತೆಗಳನ್ನು ಪಟ್ಟಿಮಾಡಿ ಸರಕಾರದ ಗಮನಕ್ಕೆ ತರುವ ಕೆಲಸವನ್ನೂ ಮಾಡಿವೆ. ಈ
ಮಸೂದೆಯು ತುಂಬಾ ವಿಶಾಲವಾಗಿದೆ ಮತ್ತು ಕೆಲವು ಕಡೆ ಅಸ್ಪಷ್ಟವಾಗಿದೆ, ಉದ್ದಿಮೆಗಳು ಪ್ರಸ್ತುತ ಈಗ ವ್ಯವಹರಿಸುತ್ತಿರುವ ರೂಪದಲ್ಲಿ ವ್ಯವಹಾರ ಮಾಡುವ ಸೌಲಭ್ಯಕ್ಕೆ ಧಕ್ಕೆ ತರುತ್ತದೆ ಮತ್ತು ಹೊಸ ಗಿಗ್ ಮತ್ತು ಸ್ಟಾರ್ಟ್ ಅಪ್ ಆರ್ಥಿಕತೆಯ ಮೇಲೆ ನಿಯಂತ್ರಣದ ಹೊರೆಯನ್ನು ಹೆಚ್ಚಿಸುತ್ತದೆ ಎಂದು ತಮ್ಮ ತಮ್ಮ ಅಭಿಪ್ರಾಯಗಳನ್ನು ರಾಜ್ಯ ಸರಕಾರಕ್ಕೆ ಈಗಾಗಲೇ ತಿಳಿಸಿವೆ.

ಭಾರತೀಯ ಕೈಗಾರಿಕೆಗಳ ಒಕ್ಕೂಟ, ಸಾಫ್ಟ್ ವೇರ್ ಮತ್ತು ಸೇವಾ ಕಂಪನಿಗಳ ರಾಷ್ಟ್ರೀಯ ಸಂಘ (ನಾಸ್ಕಾಮ) ಮತ್ತು ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ, ಕರ್ನಾಟಕ ಎಂಪ್ಲಾಯರ್ಸ್ ಅಸೋಸಿಯೇಶನ್ ನಂತಹ ವಿವಿಧ ವಾಣಿಜ್ಯ ಸಂಸ್ಥೆಗಳು ರಾಜ್ಯ ಸರಕಾರಕ್ಕೆ ಮಸೂದೆಯಲ್ಲಿನ ತರಬೇಕಾದ ಬದಲಾವಣೆಗಳ ಕುರಿತು ವಿಸತವಾದ ವಿವರಗಳನ್ನೊಳಗೊಂಡ ಮನವಿ ಸಲ್ಲಿಸಿವೆ. ಈ ಮಸೂದೆಯಲ್ಲಿ ರಾಜ್ಯ ಸರಕಾರಕ್ಕೆ ವ್ಯಾಪಕವಾದ ತಪಾಸಣೆಯ ಅಽಕಾರವನ್ನು ನೀಡುವುದರ ಮೂಲಕ ಇದು ೭೦ ಮತ್ತು ೮೦ ರ ದಶಕದ ‘ಇನ್ಸ್‌ಪೆಕ್ಟರ್ ರಾಜ್’ ಅಥವಾ ‘ಲೈಸ ರಾಜ’ ವ್ಯವಸ್ಥೆಗೆ ಮರಳಿ ಹೋದಂತಾಗುತ್ತದೆ ಮತ್ತು ಕಾರ್ಮಿಕ ಸಂಹಿತೆಗಳ ಸ್ಪೂರ್ತಿ ಮತ್ತು ವ್ಯವಹಾರವನ್ನು ಸುಲಭೀಕರಣದ ಪ್ರಕ್ರಿಯೆಗೆ ವಿರುದ್ಧ ವಾಗಿದೆ.

ಹಾಗಾಗಿ, ತಪಾಸಣೆಯ ಈ ಭಾಗಗಳನ್ನು ಮಸೂದೆಯಿಂದ ತೆಗೆದು ಹಾಕಲು ಸರಕಾರವನ್ನು ವಿನಂತಿಸಿದೆ. ಉದ್ಯಮದ ದೃಷ್ಟಿಕೋನದಿಂದ ಮಾತ್ರವಲ್ಲದೆ
ಗಿಗ್ ಕಾರ್ಮಿಕರ ದೃಷ್ಟಿಕೋನದಿಂದಲೂ ಬಹಳ ಸುಧಾರಣೆಗಳ ಅಗತ್ಯಗಳು ಈ ಮಸೂದೆಯಲ್ಲಿದೆ ಎನ್ನುವುದನ್ನು ಈ ಸಂಘಟನೆಗಳು ತಮ್ಮ ಮನವಿ ಯಲ್ಲಿ ಎತ್ತಿ ತೋರಿಸಿವೆ. ಹೊಸದಾಗಿ ಕಾನೂನನ್ನು ರಚಿಸುವಾಗ ಅಪ್ಪು ತಪ್ಪುಗಳು, ಹೃಸ್ವ ದೀರ್ಘಗಳು ಆಗುವುದು ಸಹಜ ಮತ್ತು ಸ್ವಾಭಾವಿಕ ವಾಗಿದೆ. ಸಾರ್ವಜನಿಕರು, ವಾಣಿಜ್ಯೋದ್ಯಮ ಸಂಘ ಸಂಸ್ಥೆಗಳು ಮತ್ತು ಪರಿಣಿತರ ಸಲಹೆಗಳನ್ನು ಪರಿಗಣಿಸಿ ಮಸೂದೆಗೆ ಅಗತ್ಯ ತಿದ್ದುಪಡಿ ಮಾಡುವುದರ ಜತೆಗೆ,
ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಸದರಿ ಮಸೂದೆಯ ಅನುಕೂಲತೆಗಳ ಬಗ್ಗೆ ಸರಕಾರ ತಿಳುವಳಿಕೆ ನೀಡಬೇಕಾಗಿದೆ. ಕಾನೂನುಗಳ ಬಗ್ಗೆ ಸಮಗ್ರವಾದ ತಿಳುವಳಿಕೆ ಇzಗ ಮಾತ್ರ ಅವುಗಳ ಅಡಿಯಲ್ಲಿ ದೊರಕಬಹುದಾದ ಪ್ರಯೋಜನಗಳನ್ನು ಕಾರ್ಮಿಕರು ಪಡೆಯಲು ಸಾಧ್ಯವಾಗುತ್ತದೆ ಮತ್ತು ಆಗ ಮಾತ್ರ ಕಾನೂನನ್ನು ರಚಿಸಿದ ಸರಕಾರದ ಮೂಲ ಉದ್ದೇಶ ಸಾರ್ಥಕವಾದಂತಾಗುತ್ತದೆ.

ಅಂತೂ, ಯಾವುದೇ ಭದ್ರತೆಯಿಲ್ಲದೇ ಕೆಲಸ ನಿರ್ವಹಿಸುತ್ತಿದ್ದ ಸಮಾಜದ ಭಾಗವೇ ಆಗಿದ್ದ ಅಸಂಘಟಿತ ಕಾರ್ಮಿಕರುಗಳ ಕುರಿತು ತಡವಾಗಿಯಾದರೂ ನಮ್ಮ ಸರಕಾರಗಳು ಚಿಂತಿಸುತ್ತಿರುವುದು ಸ್ವಾಗಾತಾರ್ಹವಾಗಿದೆ.

(ಲೇಖಕರು: ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)