ʼಕ್ಯಾನ್ಸರ್ ಔಷಧಿಗಳಿಗೆ ಕಸ್ಟಮ್ಸ್ ಸುಂಕ ವಿನಾಯ್ತಿ ಸ್ವಾಗತಾರ್ಹ; ದುಬಾರಿ ಬೆಲೆ ಕಾರಣಕ್ಕೆ ಪ್ರಯೋಜನ ಸೀಮಿತʼ
ʼಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಲಾಗುವ ಮೂರು ಔಷಧಿಗಳಾದ ಟ್ರಾಸ್ಟುಜುಮಾಬ್ ಡೆರುಕ್ಸ್‌ಟೆಕಾನ್, ಒಸಿಮರ್ಟಿನಿಬ್ ಮತ್ತು ಡುರ್ವಾಲುಮಾಬ್‌ಗಳಿಗೆ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಮೂಲ ಕಸ್ಟಮ್ಸ್ ಸುಂಕದಿಂದ ವಿನಾಯ್ತಿ ನೀಡಿರುವುದು ಸ್ವಾಗತಾರ್ಹವಾಗಿದ್ದರೂ, ಅವುಗಳ ದುಬಾರಿ ಬೆಲೆಗಳ ಕಾರಣಕ್ಕೆ ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಅದರಲ್ಲೂ ಕಡಿಮೆ ಆದಾಯದವರಿಗೆ ಇದರಿಂದ ಹೆಚ್ಚಿನ ಪ್ರಯೋಜನ ದೊರೆಯುವುದಿಲ್ಲʼ ಎಂದು ಹೆಲ್ತ್‌ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಡಾ.ಬಿ.ಎಸ್. ಅಜೈಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ.
ʼಕೇಂದ್ರ ಸರ್ಕಾರದ ಉದ್ದೇಶವು ಉತ್ತಮವಾಗಿದೆ. ಆದರೆ, ಅದರ ಫಲಿತಾಂಶವು ನಿರೀಕ್ಷಿತ ಉದ್ದೇಶ ಸಾಧಿಸಲು ವಿಫಲವಾಗಲಿದೆ. ವೈದ್ಯಕೀಯ ಎಕ್ಸ್-ರೇ ಯಂತ್ರಗಳಲ್ಲಿ ಬಳಸುವ ಎಕ್ಸ್-ರೇ ಟ್ಯೂಬ್‌ಗಳು ಮತ್ತು ಫ್ಲ್ಯಾಟ್ ಪ್ಯಾನಲ್ ಡಿಟೆಕ್ಟರ್‌ಗಳಿಗೆ ಮೂಲ ಕಸ್ಟಮ್ಸ್ ಸುಂಕದಲ್ಲಿನ ಉದ್ದೇಶಿತ ಬದಲಾವಣೆಗಳ ಪರಿಣಾಮಗಳ ಬಗ್ಗೆ ವಿವರವಾಗಿ ಅಧ್ಯಯನ ನಡೆಸುವ ಅಗತ್ಯ ಇದೆ. ಈ ನಿಟ್ಟಿನಲ್ಲಿನ ಸರ್ಕಾರದ ಪ್ರಯತ್ನ ಶ್ಲಾಘನೀಯವಾಗಿದೆ.
ʼಆರೋಗ್ಯ ರಕ್ಷಣೆ ಕ್ಷೇತ್ರಕ್ಕೆ ಬಜೆಟ್ ಹಂಚಿಕೆಯು ಸ್ವಲ್ಪಮಟ್ಟಿಗೆ ಹೆಚ್ಚಿನ ಪ್ರಮಾಣದಲ್ಲಿ ಇದ್ದರೂ, ಇತರ ಅಗತ್ಯ ಮತ್ತು ಆದ್ಯತೆಗಳ ಬಗ್ಗೆ ಗಮನ ನೀಡುವಲ್ಲಿ ವಿಫಲವಾಗಿದೆ. ರಕ್ಷಣೆ ಮತ್ತು ಇತರ ಆದ್ಯತಾ ಕ್ಷೇತ್ರಗಳಿಗೆ ನೀಡಲಾಗಿರುವ ಗಣನೀಯ ಪ್ರಮಾಣದ ಬಜೆಟ್ ನೆರವಿಗೆ ಹೋಲಿಸಿದರೆ, ಆರೋಗ್ಯ ಕ್ಷೇತ್ರಕ್ಕೆ ನೀಡಿರುವ ನೆರವಿನ ಹೆಚ್ಚಳವು ಅತ್ಯಲ್ಪ ಪ್ರಮಾಣದಲ್ಲಿ ಇರುವುದು ಸ್ಪಷ್ಟವಾಗುತ್ತದೆ. ಎರಡು ಬಗೆಯ ಬೆಲೆ ನೀತಿಯ ಕ್ರಾಸ್ ಸಬ್ಸಿಡಿ ಮಾದರಿಯ ಮೂಲಕ ಏಕರೂಪದ ಚಿಕಿತ್ಸೆ ಜಾರಿಗೊಳಿಸಲು ಸಾರ್ವತ್ರಿಕ ಆರೋಗ್ಯ ರಕ್ಷಣೆ ಸೌಲಭ್ಯದ ಮೂಲಕ ಮಾತ್ರ ಪರಿಹರಿಸಬಹುದಾದ ಸಮಸ್ಯೆಗೆ ಗಮನ ಕೊಡದೆ ಹೋಗುವುದು ಮತ್ತೆ ಮುಂದುವರೆದಿದೆ. ಇದರಿಂದ ಬಡವರು ಮತ್ತು ಅವಕಾಶ ವಂಚಿತರು ಸುದೀರ್ಘ ಸಮಯದಿಂದ ದುಬಾರಿ ಚಿಕಿತ್ಸೆಯ ಹಣಕಾಸು ಒತ್ತಡ ಮತ್ತು ಸಾಲದ ಸುಳಿಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ.
ʼಜೀವ ರಕ್ಷಕ ಔಷಧಗಳು ಮತ್ತು ತುರ್ತು ಚಿಕಿತ್ಸೆಗಳಿಗೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ತೆರಿಗೆ ಸ್ವರೂಪದಲ್ಲಿ ಯಾವುದೇ ಸರಳೀಕರಣ ಕಂಡು ಬರುತ್ತಿಲ್ಲ. ಆರೋಗ್ಯ ಸೇವೆಗಳ ಲಭ್ಯತೆ ಮತ್ತು ಕೈಗೆಟುಕುವ ದರಕ್ಕೆ ಸಂಬಂಧಿಸಿದಂತೆ ನಗರ-ಗ್ರಾಮೀಣ ಪ್ರದೇಶಗಳ ನಡುವಣ ಅಂತರ ಕಡಿಮೆ ಮಾಡುವುದಕ್ಕೆ ಖಾಸಗಿ ವಲಯವನ್ನು ಉತ್ತೇಜಿಸುವ ಜಿಎಸ್‌ಟಿ ಉಪಕ್ರಮಗಳು ಬಜೆಟ್‌ನಲ್ಲಿ ಇಲ್ಲದಿರುವುದು ನಿರಾಶೆ ಮೂಡಿಸಿದೆ. ಶಿಕ್ಷಣ ಕ್ಷೇತ್ರದ ಬಗ್ಗೆ ಮಾತನಾ ಡುವುದಾದರೆ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಸುಸ್ಥಿರ ರೀತಿಯಲ್ಲಿ ಪರಿವರ್ತಿಸಲು ಸರ್ಕಾರವು ಧನ ಸಹಾಯ ಒದಗಿಸಲು ಇದು ಸಕಾಲವಾಗಿದೆ.
ʼಆದಾಯ ತೆರಿಗೆಯಲ್ಲಿನ ಕೆಲವು ರಿಯಾಯ್ತಿಗಳು ಸ್ವಾಗತಾರ್ಹವಾಗಿವೆ. ಆದರೆ, ಆರ್ಥಿಕ ಬೆಳವಣಿಗೆಗೆ ಯಾವುದೇ ಉತ್ತೇಜನ ಕ್ರಮಗಳು ಬಜೆಟ್‌ನಲ್ಲಿ ಕಂಡು ಬಂದಿಲ್ಲ. ಸಿಂಗಪುರದಂತಹ ದೇಶಗಳು ತೆರಿಗೆ ವಿನಾಯ್ತಿಗಳು, ಕಡಿಮೆ ಪ್ರಮಾಣದ ಕಾರ್ಪೊರೇಟ್ ತೆರಿಗೆ ಮತ್ತು ಬಂಡವಾಳ ಲಾಭ ತೆರಿಗೆ ಸೇರಿದಂತೆ ನಾಗರಿಕರು ಮತ್ತು ಉದ್ಯಮಿಗಳ ಮೇಲೆ ಯಾವುದೇ ಹೊರೆ ವಿಧಿಸದೆ ತಮ್ಮ ಅನುಕೂಲಕರ ಹಣಕಾಸು ನೀತಿಗಳಿಂದ ಗರಿಷ್ಠ ಪ್ರಯೋಜನ ಗಳನ್ನು ಪಡೆದುಕೊಂಡಿವೆ. ಈ ದೇಶಗಳು ಜಾರಿಗೊಳಿಸಿರುವ ಮಾದರಿಯನ್ನು ಅಳವಡಿಸಿಕೊಳ್ಳಲು ಭಾರತವು ಹಿಂದೆ ಬಿದ್ದಿರುವುದು ಏಕೆ ಎನ್ನುವುದು ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆʼ ಎಂದು ಡಾ. ಅಜೈಕುಮಾರ್ ಅವರು ಅಭಿಪ್ರಾಯಪಟ್ಟಿದ್ದಾರೆ.