Friday, 29th November 2024

ಧರ್ಮ ರಕ್ಷಣೆಗಾಗಿ ಯುಗ ಯುಗಗಳಲ್ಲೂ ಅವತರಿಸುತ್ತಾರೆ!

ಪ್ರಸ್ತುತ

ಡಾ.ಜಗದೀಶ್ ಮಾನೆ

ಕುರುಕ್ಷೇತ್ರ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ದುರ್ಯೋಧನನು ಭೀಷ್ಮರಿಗೆ ಒಂದು ಪ್ರಶ್ನೆ ಕೇಳುತ್ತಾನೆ. ‘ಪಿತಾಮಹರೆ, ನಮ್ಮ ಸೈನ್ಯ ಪಾಂಡವರಿ ಗಿಂತಲೂ ಬಲಿಷ್ಠವಾಗಿದೆ, ಅದರಲ್ಲೂ ನೀವು ಅರ್ಜುನನಿಗಿಂತಲೂ ಬಲಶಾಲಿಯಾಗಿದ್ದೀರಿ, ಆತನಿಗೆ ವಿದ್ಯೆ ಹೇಳಿದ ಗುರು ದ್ರೋಣಾಚಾರ್ಯರು ನಮ್ಮ ಜತೆಗಿದ್ದಾರೆ, ಸಾವೇ ಇಲ್ಲದ ಅಶ್ವತ್ಥಾಮ, ಮಹಾರಥಿ ಕರ್ಣ, ರಾಜಾ ಭಗದತ್ತ, ಮಿತ್ರರಾಜ ಶಲ್ಯ, ಸಿಂಧೂ ನರೇಶ, ಸೈಂದವ, ಕೈಕೆಯ ಅರಸರು, ಮೊಹ್ಲಿಕರು, ದುಶ್ಯಾಸನ, ನಾನು ಸೇರಿದಂತೆ ಹನ್ನೊಂದು ಅಕ್ಷೋಹಿನಿ ಸೇನೆ ನಮ್ಮ ಬಳಿ ಇದೆ.

ಹೀಗಿರುವಾಗಲೂ ಈ ಯುದ್ಧದಲ್ಲಿ ಪಾಂಡವರದ್ದೇ ಮೇಲುಗೈ ಆಗುತ್ತಿದೆ. ನಮ್ಮಿಂದ ಕೇವಲ ಈ ಅರ್ಜುನನನ್ನೂ ಸೋಲಿಸುವುದಕ್ಕೆ ಸಾಧ್ಯ ವಾಗುತ್ತಿಲ್ಲ ವಲ್ಲ ಯಾಕೆ?’ ಸುಯೋಧನ ಈ ಪ್ರಶ್ನೆಗಳಿಗೆ ಭೀಷ್ಮರು ಬಹಳ ಮಾರ್ಮಿಕವಾಗಿ ಉತ್ತರಿಸುತ್ತಾರೆ. ‘ಈ ಹಿಂದೆ ಪಾಂಡವರ ಪರವಾಗಿ ಶ್ರೀಕೃಷ್ಣನು ಸಂಧಾನಕ್ಕೆ ಬಂದಿದ್ದ. ಆಗ ನಾನು ನಿನಗೆ ಒಂದು ಮಾತನ್ನು ಹೇಳಿದ್ದೆ. “ಯಥಾ ಕೃಷ್ಣಸ್ತತೋ ಧರ್ಮೋ, ಯತೋ ಧರ್ಮಸ್ತತೋ ಜಯಃ” ಎಲ್ಲಿ ಕೃಷ್ಣ ಇರುತ್ತಾನೋ ಅಲ್ಲಿ ಧರ್ಮ ಇರುತ್ತದೆ, ಎಲ್ಲಿ ಧರ್ಮವಿದೆಯೋ ಅಲ್ಲಿ ಜಯ ನಿಶ್ಚಿತವಾಗಿರುತ್ತದೆ’.

ಈ ಯುದ್ಧದಲ್ಲಿ ಶ್ರೀಕೃಷ್ಣ ಪಾಂಡವರ ಪರ ನಿಂತಿದ್ದಾನೆ, ನಿಸ್ಸಂದೇಹವಾಗಿ ಗೆಲುವು ಅವರದ್ದೇ ಆಗುತ್ತದೆ. ಆದ್ದರಿಂದ ಯುದ್ಧಕ್ಕೆ ಅವಕಾಶ ಕೊಡದೆ ಸಂಧಾನ ಮಾಡಿಕೊಂಡು ಅವರಿಗೆ ಸಲ್ಲಬೇಕಾದ ಪಾಲನ್ನು ಅವರಿಗೆ ಕೊಟ್ಟುಬಿಡಲು ನಿನಗೆ ಮನವಿ ಮಾಡಿದ್ದೇ ನಾನು. ಆದರೆ ನೀನು ನನ್ನ ಮಾತನ್ನೇ ಕೇಳಲಿಲ್ಲ ಎಂದಾಗ ಮತ್ತೆ ತನ್ನ ಮಾತುಗಳನ್ನು ಮುಂದುವರೆಸಿದ ದುರ್ಯೋಧನನು ಮತ್ತೆ ಹೀಗೆ ಕೇಳುತ್ತಾನೆ, ‘ಪಿತಾಮಹರೆ, ಈ ಶ್ರೀಕೃಷ್ಣ ಅರ್ಜುನ ನೊಂದಿಗೆ ಅಷ್ಟೊಂದು ಪ್ರೀತಿಯಿಂದ ಇದ್ದು, ಆತನಿಗೆ ಕಾವಲಾಗಿ ನಿಂತಿರುವುದಾದರೂ ಯಾಕೆ?’ ಸುಯೋಧನನ ಪ್ರಶ್ನೆಗಳಿಗೆ ಭೀಷ್ಮರು ಉತ್ತರಿಸುತ್ತಾರೆ…

‘ಸತ್ಯಯುಗದ ಕಾಲದಲ್ಲಿ “ಬದರಿಕಾಶ್ರಮ” ವೊಂದಿತ್ತು. ಅದು ಇಂದಿನ ಬದರಿನಾರಾಯಣ ದೇವಾಲಯವಿದ್ದ ಸ್ಥಳವೇ ಅಂದಿನ ಬದರಿಕಾಶ್ರಮ. ಅಲಕಾನಂದ ನದಿಯ ಪಕ್ಕದಲ್ಲಿನ ಪುಣ್ಯಭೂಮಿ. ಆ ಆಶ್ರಮದಲ್ಲಿ ಮಹಾ ವಿಷ್ಣುವಿನ ಅಂಶದಿಂದ ಜನಿಸಿದ “ನರ-ನಾರಾಯಣ” ಎಂಬ ಇಬ್ಬರು ಮುನಿಗಳಿದ್ದರು. “ನರ” ಅಂದ್ರೆ ಎಲ್ಲವನ್ನೂ ವಶಪಡಿಸಿಕೊಳ್ಳುವವನು, ಈತ ಮನುಷ್ಯ ಜಾತಿಗೆ ಸೇರಿದವನು. “ನಾರಾಯಣ” ಅಂದ್ರೆ ನರನ ಶರೀರದಲ್ಲಿ ಜನಿಸಿದ ಭಗವಂತ.

ನೀರನ್ನೆ ತನ್ನ ಆವಾಸ ಸ್ಥಾನವನ್ನಾಗಿಸಿಕೊಂಡವನು, ಮಹಾವಿಷ್ಣುವಿನ ಅಂಶ. ಈ ನರ-ನಾರಾಯಣರಿಬ್ಬರೂ ಸಾವಿರಾರು ವರ್ಷಗಳ ಕಾಲ ಬದರಿಕಾಶ್ರಮದಲ್ಲಿ ತಪಸ್ಸು ಮಾಡುತ್ತ, ವೇದಗಳ ಸಾರವನ್ನು ಜಗತ್ತಿಗೆ ತಿಳಿಸುತ್ತಾ ಕಾಮ, ಕ್ರೋಧ, ಲೋಭ, ಮಧ, ಮತ್ಸರ, ಸುಖ, ಸಂಪತ್ತು, ಅಧಿಕಾರ, ಕೀರ್ತಿ ಮುಂತಾದ ಮನುಷ್ಯ ಸಹಜ ಆಶಯಗಳೆಲ್ಲವನ್ನೂ ಗೆದ್ದಿದ್ದರು. ಇವರು ತಪಸ್ಸು ಮಾಡುತ್ತಿದ್ದ ಸಂದರ್ಭದಮ್ಮೆ ಅದನ್ನು ಭಂಗಗೊಳಿಸಲು ದೇವೇಂದ್ರನು ಅಪ್ಸರೆಯರನ್ನು ಕಳುಹಿಸುತ್ತಾನೆ. ವರುಣ ಅಲ್ಲಿನ ವಾತಾವರಣವನ್ನು ಅಹ್ಲಾದಗೊಳಿಸಿ ಕಾಮದೇವನ ಮೂಲಕ ಇಡೀ ಬದರಿಕಾಶ್ರಮ ಶೃಂಗಾರ ಮತ್ತು ಆವರಿಸುವಂತೆ ಮಾಡುತ್ತಾನೆ.

ಧ್ಯಾನಸ್ಥರಾಗಿದ್ದ ನರ-ನಾರಾಯಣರನ್ನು ಅಪ್ಸರೆಯರು ನೃತ್ಯ ಗಾಯನದ ಮೂಲಕ ಭಂಗಗೊಳಿಸುವ ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಆಗ ಕಣ್ಣು ಬಿಟ್ಟ ನಾರಾಯಣರು ತಮ್ಮ ತೊಡೆಯನ್ನು ತಟ್ಟುತ್ತಾರೆ. ಅದರಿಂದ ಸುಂದರವಾದ ಕನ್ನೆಯೊರ್ವಳು ಜನಿಸುತ್ತಾಳೆ, ಅವಳೇ “ಊರ್ವಶಿ”. ಅವಳನ್ನು ಉಳಿದ ಅಪ್ಸರೆಯರಿಗೆ ಒಪ್ಪಿಸಿದ ನಾರಾಯಣರು “ನಾವು ಸೌಂದರ್ಯವನ್ನೇ ಸೃಷ್ಟಿ ಮಾಡುವ ಶಕ್ತಿ ನಮ್ಮಲ್ಲಿದೆ. ನಿಮ್ಮ ಈ ಶೃಂಗಾರ ಸೌಂದರ್ಯಗಳು ನಮ್ಮನ್ನೇನೂ ಮರಳು ಮಾಡುವುದಕ್ಕೆ ಸಾಧ್ಯವಿಲ್ಲ. ನಮ್ಮ ಈ ಸುಂದರಿಯನ್ನು ಕರೆದೊಯ್ದು ನಿಮ್ಮ ಇಂದ್ರನಿಗೆ ಬಹುಮಾನವಾಗಿ ನೀಡಿ.

ಮತ್ತು ನಿಮ್ಮ ಇಂದ್ರನಿಗೆ ಏನೇ ಸಹಾಯ ಬೇಕಿದ್ದರೂ ನಮ್ಮ ನೆರವು ಸಿಗುತ್ತದೆ’ ಎಂಬುದಾಗಿ ಹೇಳಿ ಮತ್ತೆ ಧ್ಯಾನಸ್ಥರಾಗುತ್ತಾರೆ. ದೈವಾಂತ ಸಂಭೂತ ರಾದ ಈ ಮುನಿಗಳು ಇಂದ್ರಿಯಗಳನ್ನು ಸಂಪೂರ್ಣವಾಗಿ ಗೆದ್ದು ಎಲ್ಲ ಆಸೆ ಮೋಹಗಳನ್ನು ಜಯಿಸಿ ಜಿತೇಂದ್ರಿಯರಾಗಿದ್ದರು. ಸಮುದ್ರ ಮಂಥನದ ನಂತರ ಉಂಟಾದ ದೇವ- ದಾನವರ ಕದನದಲ್ಲಿ ನರ-ನಾರಾಯಣರ ಸಹಾಯ ಕೇಳುತ್ತಾನೆ ದೇವೆಂದ್ರ. ಆಗ ದಾನವರ ಸಂಹಾರ ಮಾಡಿ ಭೂಮಿಯ ಬಹು ಪಾಲು ಭಾರವನ್ನೇ ಕಡಿಮೆ ಮಾಡುತ್ತಾರೆ. ಈ ಮಧ್ಯೆ “ಧಂಬೋ ದ್ಭವ” ಎನ್ನುವ ಅಸುರನೊಬ್ಬ ಶಿವನ ಕುರಿತು ತಪಸ್ಸು ಮಾಡಿ ಸಹಸ್ರ
ಕವಚಗಳನ್ನು ಪಡೆದಿದ್ದ. ಆ ಕವಚಗಳ ಸಹಾಯದಿಂದ ತನ್ನನ್ನು ಯಾರೂ ಏನೂ ಮಾಡುವುದಕ್ಕೆ ಸಾಧ್ಯವಿಲ್ಲ ಎಂಬ ದುರಹಂಕಾರದಲ್ಲಿ
ಮೆರೆಯುತ್ತಿದ್ದ.

ಅವನ ಅಟ್ಟಹಾಸ ಹೆಚ್ಚಾದ ಸಂದರ್ಭದಲ್ಲಿ ನರ- ನಾರಾಯಣರೇ ಆತನ ಧಮನಕ್ಕೆ ನಿಲ್ಲುತ್ತಾರೆ. ಅವನ ಎಲ್ಲ ಕವಚಗಳನ್ನು ನಾಶ ಮಾಡಿದ ಬಳಿಕ ಪರಶಿವನ ಕೋರಿಕೆಯ ಮೇರೆಗೆ ತಮಸ್ಸು, ರಜಸ್ಸು, ಹಾಗೂ ಸಾತ್ವಿಕ ಗುಣಗಳ ಈ ಮೂರು ಕವಚಗಳನ್ನು ಮಾತ್ರ ಉಳಿಸುತ್ತಾರೆ. ಹೀಗೆ ನರ-ನಾರಾಯಣರು ಸತ್ಯಯುಗದಲ್ಲಿ ಅರಿಷಡ್ವರ್ಗಗಳನ್ನು ನಿಯಂತ್ರಿಸಿ ಅಗತ್ಯ ಬಿದ್ದಾಗ ಯುದ್ಧ ಹಾಗೂ ಉಳಿದ ಸಂದರ್ಭದಲ್ಲಿ ತಪಸ್ಸು ಹಾಗೂ eನ
ದಾಸೋಹ ಮಾಡುತ್ತಾ ಬದರಿಕಾಶ್ರಮದಲ್ಲಿ ಸಾವಿರಾರು ವರ್ಷ ಕಳೆದನಂತರ ಇದೀಗ ಮತ್ತೆ ದ್ವಾಪರ ಯುಗದಲ್ಲೂ ಜನ್ಮವೆತ್ತಿದ್ದಾರೆ.

ಸುಯೋಧನಾ…! ಈಗ ಭೂಮಿಯ ಭಾರ ಮತ್ತೆ ಹೆಚ್ಚಾಗಿದೆ. ಸತ್ಯಯುಗ ಹಾಗೂ ತ್ರೇತಾಯುಗದಲ್ಲಿರುವಂತೆ ರಾಕ್ಷಸರೀಗ ಇಲ್ಲದೇ ಇರಬಹುದು. ಆದರೆ, ರಾಕ್ಷಸ ಗುಣಗಳನ್ನೇ ಮೈತುಂಬಿಕೊಂಡ ಮನುಷ್ಯರು ನಾವಿದೀವಲ್ಲ! ಅಹಂಕಾರ, ಅಜ್ಞಾನ, ಸುಖಭೋಗ, ದುರಾಸೆಗಳ ಕವಚಗಳನ್ನು ನಾವು ತೊಟ್ಟು ನಿಂತಿದ್ದೇವೆ. ನಮ್ಮ ಈ ಸಮಾಜಕ್ಕೆ ನಾವು ಅಂಟಿಸುತ್ತಿರುವ ಕೆಟ್ಟ ಆದರ್ಶಗಳ ಕವಚಗಳನ್ನು ನಾಶ ಮಾಡುವುದಕ್ಕಾಗಿಯೇ ಈ ನರ-ನಾರಾಯಣರು ದ್ವಾಪರ ಯುಗದಲ್ಲೂ ಜನ್ಮವೆತ್ತಿzರೆ. ನಾವು ಯಾರನ್ನು ಮಧ್ಯಮ ಪಾಂಡವ ಅಂತ ಕರೆಯುತ್ತೇವೊ ಆ ಅರ್ಜುನನೇ “ನರ”. ಅವನ ಬೆನ್ನಿಗೆ ನಿಂತು ಆತನಿಂದ ಪ್ರತಿಯೊಂದನ್ನೂ ಮಾಡಿಸುತ್ತಿದ್ದಾನಲ್ಲ ಆ ಶ್ರೀ  ಕೃಷ್ಣನೇ “ನಾರಾಯಣ”.

ಈ ವಿಚಾರವನ್ನು ಸಾಕ್ಷಾತ್ ನಾರದರೆ ಋಷಿಮುನಿಗಳಿಗೆ ಹೇಳುತ್ತಿರುವುದನ್ನು ಸ್ವತಃ ನಾನು ಕೇಳಿಸಿಕೊಂಡಿದ್ದೇನೆ. ಕೃಷ್ಣಾರ್ಜುನರ ರೂಪದಲ್ಲಿರೋ ಈ ನರ-ನಾರಾಯಣರನ್ನು  ಕೊಲ್ಲುವುದಕ್ಕೆ ಎಂಥಾ ಶಕ್ತಿಗಳಿಂದಲೂ ಸಾಧ್ಯವಿಲ್ಲ. ಹೀಗಾಗಿ ಶ್ರೀ ಕೃಷ್ಣನಿಗೆ ಅರ್ಜುನನ ಮೇಲೆ ಅಪಾರವಾದ ಪ್ರೀತಿ ಇದೆ. ಅವರು ಸದಾಕಾಲ ಜತೆಯಲ್ಲಿರೋದು ಕೂಡಾ ಅದೇ ಕಾರಣಕ್ಕಾಗಿ. ಸುಯೋಧನಾ…ಈಗಲೂ ಕಾಲ ಮಿಂಚಿಲ್ಲ, ಯುದ್ಧ ಬಿಟ್ಟು ಪಾಂಡವರೊಂದಿಗೆ ಸಂಧಾನ ಮಾಡಿಕೊಂಡರೆ ನೀನು ಕಳೆದುಕೊಳ್ಳುವುದೇನೂ ಇಲ್ಲ’. ಭೀಷ್ಮರ ಆ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿ ದುರ್ಯೋಧನನಿರಲಿಲ್ಲ. ಮತ್ತು ಅಷ್ಟೊತ್ತಿ ಗಾಗಲೇ ದುರ್ಯೋಧನ ನನ್ನು ರಕ್ಷಿಸುವ ಎಲ್ಲ ಕಾರ್ಯ ಯೋಜನೆಗಳನ್ನು ಮಾಡಿ ಮುಗಿಸಿದ್ದ ಭೀಷ್ಮರು ಎಲ್ಲವನ್ನು ವಿಧಿಯ ಕೈಗೊಪ್ಪಿಸಿ ತಮ್ಮ ಕರ್ತವ್ಯವನ್ನು ಮುಂದುವರಿಸುತ್ತಾರೆ.

ಯುದ್ಧದ ಹತ್ತನೇ ದಿನ ತಮ್ಮ ಹಣೆಬರಹ ದಂತೆ ಮತ್ತು ದೇವಿ ಅಂಬೆಯ ಪುನರ್ಜನ್ಮದ ಉದ್ದೇಶದ ಸಫಲತೆಗಾಗಿ ಶಿಖಂಡಿನಿಯು ತಮ್ಮೆದುರು ಪ್ರಕಟ ವಾದಾಗ ತಮ್ಮ ಧನಸ್ಸನ್ನು ಕೆಳಗಿಳಿಸಿ ಪ್ರಾಣ ತ್ಯಾಗ ಮಾಡುತ್ತಾರೆ. ಸುಯೋಧನನಿಗೆ ಭೀಷ್ಮರು ಹೇಳಿದ ನರ-ನಾರಾಯಣರ ಈ ಕಥೆಯ ಸಾರಾಂಶ ವಿಷ್ಣು ಪುರಾಣದ ಏಳನೇಯ ಅಧ್ಯಾಯದಲ್ಲಿ ಉಲ್ಲೇಖವಿದೆ. ಈ ಕಥೆಯಿಂದ ನಾವು ತಿಳಿಯುವುದೇನೆಂದರೆ ‘ಧರ್ಮದ ರಕ್ಷಣೆಗಾಗಿ ನ್ಯಾಯ- ನೀತಿಗಳ ಸ್ಥಾಪನೆಗಾಗಿ ಸಾತ್ವಿಕ ಮನುಷ್ಯನೂ ಕೂಡಾ ಕ್ಷಾತ್ರವನ್ನು ಧರಿಸಿ ಕಾಲೂರಿನಿಂತು ದುಷ್ಟರ ವಿರುದ್ಧ ಹೋರಾಡಬೇಕಾಗುತ್ತದೆ. ಈ ಸಂದೇಶವನ್ನು ನರ-ನಾರಾಯಣರ ಕಥೆಯ ಮೂಲಕ ನಮ್ಮ ಪುರಾಣಗಳು ತಿಳಿಸಿವೆ. ಇದೀಗ ‘ಧಂಬೋದ್ಭವ’ ಎನ್ನುವ ಸಹಸ್ರ ಕವಚದಾರಿ ಬೇರೆ ಯಾರೂ ಅಲ್ಲ.

ಅದು ಮನುಷ್ಯನೇ ಆಗಿದ್ದಾನೆ. ಆತನಲ್ಲಿರುವ ಅಹಂಕಾರ, ದುರಾಸೆ, ಕ್ರೌರ್ಯ, ಮತ್ಸರ, ಕಾಮ, ಕ್ರೋಧ ಈ ಎ ಕವಚಗಳನ್ನು ತೊಟ್ಟ ಪ್ರತಿಯೊಬ್ಬ
ಮನುಷ್ಯನಲ್ಲಿಯೂ ಕೂಡಾ ಒಬ್ಬೊಬ್ಬ ‘ಧಂಬೋದ್ಭವ’ ನಿದ್ದಾನೆ. ನಾವು ಧರಿಸಿದ ಅeನ, ಅಹಂಕಾರ, ದುರಾಸೆಗಳ ಕವಚಗಳನ್ನು ಕಿತ್ತೆಸೆದು ಇತರರಿಗೆ eನವನ್ನು ಬೋಧಿಸುವ ಮೂಲಕ ಉತ್ತಮರಾಗಬೇಕಿದೆ.

(ಲೇಖಕರು: ರಾಜ್ಯಶಾಸದ ಅಧ್ಯಾಪಕರು ಹಾಗೂ ವಿಶ್ಲೇಷಕರು)