Saturday, 23rd November 2024

ಮಧ್ಯಪ್ರದೇಶದ ಕಾಳಿಕಾ ದೇವಾಲಯದಲ್ಲಿ ವಸ್ತ್ರಸಂಹಿತೆ ಜಾರಿ

ಭೋಪಾಲ್:‌ ದೇವಾಲಯಗಳಿಗೂ ತುಂಡುಡುಗೆ ಧರಿಸಿ ಬರುವ ಭಕ್ತರ ಸಂಖ್ಯೆ ಜಾಸ್ತಿಯಾಗಿರುವ ಕಾರಣ ಭಾರತದ ಹಲವು ದೇವಾಲಯಗಳಲ್ಲಿ ವಸ್ತ್ರಸಂಹಿತೆ ಜಾರಿಗೆ ತರಲಾಗಿದೆ.

ಮಧ್ಯಪ್ರದೇಶದ ರತ್ಲಾಮ್‌ನ ಕಾಳಿಕಾ ದೇವಾಲಯವು ಕೂಡ ವಸ್ತ್ರಸಂಹಿತೆ ಜಾರಿಗೊಳಿಸಿದ್ದು, ಭಕ್ತಾದಿಗಳು ವಿದೇಶಿ ಹಾಗೂ ತುಂಡುಡುಗೆ ಧರಿಸಿ ಬರುವಂತಿಲ್ಲ ಎಂದು ಆದೇಶಿಸಿದೆ.

ದೇವಾಲಯದ ಅರ್ಚಕ ರಾಜೇಂದ್ರ ಶರ್ಮಾ ಅವರು ವಸ್ತ್ರಸಂಹಿತೆ ಜಾರಿಗೊಳಿಸಿದ್ದಾರೆ.

“ದೇವಾಲಯದ ಪಾವಿತ್ರ್ಯ ಕಾಪಾಡಲು, ಭಕ್ತರು ವಿದೇಶಿ ಹಾಗೂ ತುಂಡುಡುಗೆ, ಶಾರ್ಟ್ಸ್‌ಗಳನ್ನು ಧರಿಸಿ ಬಂದರೆ, ಅವರಿಗೆ ದೇವಾಲಯ ಪ್ರವೇಶಿಸಲು ಅನುಮತಿ ನೀಡುವುದಿಲ್ಲ. ದೇವಾಲಯದ ಗರ್ಭಗುಡಿ ಪ್ರವೇಶಿಸಲು ಭದ್ರತಾ ಸಿಬ್ಬಂದಿಯು ಬಿಡುವುದಿಲ್ಲ. ಅಂತಹ ಭಕ್ತಾದಿಗಳು ದೇವಾಲಯದ ಹೊರಗಿನಿಂದಲೇ ದರ್ಶನ ಪಡೆದು ಹೋಗಬೇಕಾಗುತ್ತದೆ” ಎಂಬುದಾಗಿ ಅರ್ಚಕ ತಿಳಿಸಿದ್ದಾರೆ.

ಸುಮಾರು 400 ವರ್ಷಗಳ ಹಿಂದೆ ರತ್ಲಾಮ್‌ ಅರಸನಾಗಿದ್ದ ರತನ್‌ ಸಿಂಗ್‌ ಅವರು ಕಾಳಿಕಾ ದೇವಿಯ ಆರಾಧಕರಾಗಿದ್ದು, ಅವರು ದೇವಾಲಯವನ್ನು ನಿರ್ಮಿಸಿದ್ದಾರೆ. ಪ್ರಸಕ್ತ ದೇವಾಲಯದ ನಿರ್ವಹಣೆಯನ್ನು ಕೋರ್ಟ್‌ ಆಫ್‌ ವಾರ್ಡ್ಸ್‌ ಕಾಯ್ದೆ ಅಡಿಯಲ್ಲಿ ಜಿಲ್ಲಾಡಳಿತವೇ ನೋಡಿಕೊಳ್ಳುತ್ತದೆ. ತಹಸೀಲ್ದಾರ್‌ ರಿಷಭ್‌ ಠಾಕೂರ್‌ ಅವರು ಕೂಡ ವಸ್ತ್ರಸಂಹಿತೆ ಕುರಿತು ಮಾತನಾಡಿದ್ದಾರೆ.

ಕಾಳಿಕಾ ದೇವಾಲಯದಲ್ಲಿ ಪಾಶ್ಚಿಮಾತ್ಯ ಹಾಗೂ ತುಂಡುಡುಗೆ ನಿಷೇಧಿಸಿರುವ ದೇವಾಲಯ ಆಡಳಿತ ಮಂಡಳಿ ತೀರ್ಮಾನವನ್ನು ಭಕ್ತರು ಸ್ವಾಗತಿಸಿದ್ದಾರೆ.