Friday, 29th November 2024

ಬಜೆಟ್ ವಿಚಾರದಲ್ಲೂ ವಿಭಜಕ ನೀತಿ ಏಕೆ ?

ಅಭಿಮತ

ಪ್ರಕಾಶ್ ಶೇಷರಾಘವಾಚಾರ್‌

ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಮುಂಗಡ ಪತ್ರವನ್ನು ಪಕ್ಷ ರಾಜಕೀಯದಿಂದ ಹೊರಬಂದು ವಸ್ತುನಿಷ್ಠೆಯಿಂದ ವಿಶ್ಲೇಷಣೆ ಮಾಡುವ ಪದ್ಧತಿಯೇ
ಇಲ್ಲ. ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು ಅಪ್ಪ ಹಾಕಿದ ಆಲದ ಮರಕ್ಕೇ ಜೋತು ಬೀಳುತ್ತಾರೆ. ಈ ಬಾರಿ ಹೊಸ ರಾಗವೊಂದು ಹಾಡಲು ಆರಂಭಿಸಿದೆ.

ಅದು ‘ನಮ್ಮ ರಾಜ್ಯಕ್ಕೇನು ಕೊಟ್ಟಿಲ್ಲ ಓಟು ನಮ್ಮದು ಯೋಜನೆ ಬೇರಯವರದ್ದು’ ಎಂಬ ವರಸೆ. ಈಗಾಗಲೇ ಪ್ರಾದೇಶಿಕತೆಯ ಹೆಸರಲ್ಲಿ ದೇಶದ ಏಕತೆಗೆ ಧಕ್ಕೆ ತರುವ ಹಲವಾರು ಪ್ರಚೋದನಕಾರಿ ಶಕ್ತಿಗಳು ಕೆಲಸ ಮಾಡುತ್ತಿರುವಾಗ, ಮುಂಗಡವನ್ನು ರಾಜಕೀಯಕರಣಗೊಳಿಸಿ ನಮಗೇನು ಇಲ್ಲ ಎನ್ನುವ ತಪ್ಪು ಮಾಹಿತಿಯು ನೀಡಿ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ. ಕಳೆದ ೭೫ ವರ್ಷದ ಇತಿಹಾಸದಲ್ಲಿ ಮುಂಗಡ ಪತ್ರವು ರಾಜ್ಯ ಕೇಂದ್ರೀಕೃತ ವಾಗಿ ಮಂಡನೆಯಾಗಿಲ್ಲ. ೨೦೨೪-೨೫ ಮುಂಗಡ ಪತ್ರವು ಕೂಡಾ ಇದರಿಂದ ಭಿನ್ನವಾಗಿಲ್ಲ. ಆದರೆ ಭಿನ್ನವಾಗಿ ವರ್ತಿಸುತ್ತಿರುವುದು ಕಾಂಗ್ರೆಸ್ ಪಾರ್ಟಿ. ದೇಶದಲ್ಲಿ ೫೫ ಮುಂಗಡ ಪತ್ರವನ್ನು ಮಂಡಿಸಿರುವ ಕಾಂಗ್ರೆಸ್‌ಗೆ ಮುಂಗಡ ಪತ್ರದ ಆದ್ಯತೆಯ ಬಗ್ಗೆ ಗೊತ್ತಿದೆ ಆದರೆ ರಾಹುಲ್ ಗಾಂಧಿಯವರು ಇತ್ತೀಚಿನ ದಿನಗಳಲ್ಲಿ ಸುಳ್ಳು ವಿಷಯವನ್ನು ಹಬ್ಬಿಸುವ ಮೂಲಕ ಪ್ರಚೋದನಕಾರಿ ರಾಜಕೀಯ ತಂತ್ರಗಾರಿಕೆಯನ್ನು ಅಳವಡಿಸಿಕೊಂಡಿದ್ದಾರೆ.

ಆಂಧ್ರಪ್ರದೇಶ ರಾಜ್ಯ ವಿಂಗಡಣೆಯ ಒಪ್ಪಂದ ಪ್ರಕಾರ ಕಾನೂನಾತ್ಮಕವಾಗಿ ವಿಶೇಷ ಸವಲತ್ತು ಒದಗಿಸಬೇಕಾಗಿದೆ. ಸಂವಿಧಾನಾತ್ಮಕ ಭಾಧ್ಯತೆಯನ್ನು ಕೇಂದ್ರ ಸರಕಾರ ಪೂರೈಸುತ್ತಿದೆ. ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ರವರು ಬಜೆಟ್ ಮುನ್ನ ಆಂಧ್ರಕ್ಕೆ ವಿಶೇಷ ಅನುದಾನ ನೀಡಲು ಬೆಂಬಲಿಸಿ
ದ್ದರು, ಆದರೆ ಈಗ ಕುರ್ಸಿ ಬಚಾವ್ ಬಜೆಟ್ ಎಂದು ಲೇವಡಿ ಮಾಡುತ್ತಿದ್ದಾರೆ. ೨೦೧೨-೧೩ ರಲ್ಲಿ ಯುಪಿಎ ಸರಕಾರವು ಸ್ಟಾರ್ಟ್ ಅಪ್ ಕಂಪನಿಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಯ ಮೇಲೆ ಶೇ.೩೦ರಷ್ಟು ತೆರಿಗೆ ವಿಧಿಸುವ ಏಂಜಲ್ ಟ್ಯಾಕ್ಸ್ ವಿಧಿಸಿದ್ದರು. ಬಂಡವಾಳಕ್ಕೆ ಪರದಾಡುವ ನವ ಉದ್ದಿಮೆಗಳ ಮೇಲೆ ಇದೊಂದು ಹೊರಲಾರದ ಹೊರೆಯಾಗಿತ್ತು.

ಅಂತಿಮವಾಗಿ ತಡವಾಗಿಯಾದರೂ ಈ ಬಾರಿಯ ಮುಂಗಡ ಪತ್ರದಲ್ಲಿ ಏಂಜಲ್ ಟ್ಯಾಕ್ಸ್ ರದ್ದು ಪಡಿಸಲಾಗಿದೆ. ಇದನ್ನು ರದ್ದು ಪಡಿಸಲು ಕೇಂದ್ರ ಸರಕಾರ ಹತ್ತು ವರ್ಷ ವಿಳಂಬ ಮಾಡಕಿತ್ತಾ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ. ಮುಂಗಡ ಪತ್ರದಲ್ಲಿ ಘೋಷಿಸಿರುವ ಗಮನ ಸೆಳೆಯುವ ಯೋಜನೆ ಯೆಂದರೆ ದೇಶದ ಪ್ರತಿಷ್ಠಿತ ೫೦೦ ಕಂಪನಿಗಳಲ್ಲಿ ಒಂದು ಕೋಟಿ ಯುವಕ ಮತ್ತು ಯುವತಿಯರಿಗೆ ಇಂಟನ್ ಶಿಪ್‌ಗೆ ಅವಕಾಶ ಕಲ್ಪಿಸಲು ಉದ್ದೇಶಿಸಿರು ವುದು. ಈ ಯೋಜನೆಯಿಂದ ಯುವಕರು ಪ್ರತಿಷ್ಠಿತ ಕಂಪನಿಗಳಲ್ಲಿ ಕೌಶಲ್ಯ ಪಡೆದು ತರಬೇತಿಯ ಅವಽ ಮುಗಿದ ತರುವಾಯ ಹಲವರು ಅದೇ ಸಂಸ್ಥೆ ಯಲ್ಲಿ ಮುಂದುವರೆಯುವ ಅವಕಾಶ ಲಭ್ಯವಾಗಬಹುದು ಅಥವಾ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಲ್ಲಿ ಇದರಿಂದ ಕೆಲಸ ಪಡೆಯಲು ಸಹಾಯ ವಾಗುವುದು. ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸುಲಭವಾಗಿ ತರಬೇತಿ ಪಡೆದ ನುರಿತ ಉದ್ಯೋಗಿಗಳು ದೊರೆಯುವುದರಿಂದ ಅವರಿಗೆ ತಾತ್ಕಾಲಿಕ ವಾಗಿ ನೇಮಕಾತಿ ಮಾಡಿಕೊಂಡು ತರಬೇತಿ ನೀಡುವ ಕಷ್ಟವು ಇಲ್ಲವಾಗುತ್ತದೆ.

ಮಧ್ಯಮ ವರ್ಗಕ್ಕೆ ಮುಂಗಡ ಪತ್ರದಿಂದ ಲಾಭವಾಗಿಲ್ಲ ಎಂದು ಸಾಮಾಜಿಕ ತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಅವರ ವಾದ ನಾವು ಸಂಬಳದಾರರು ನಿಯತ್ತಿನಿಂದ ಆದಾಯ ತೆರಿಗೆ ಪಾವತಿ ಮಾಡುತ್ತೇವೆ. ಹೀಗಾಗಿ ನಮ್ಮ ಮೇಲೆ ಎಲ್ಲ ಹೊರೆ ಹೊರೆಸುತ್ತಾರೆ. ಆದರೆ ಲಕ್ಷಾಂತರ ಉದ್ದಿಮೆದಾರರು ವಾರ್ಷಿಕವಾಗಿ ೨೫ಲಕ್ಷಕ್ಕೂ ಹೆಚ್ಚು ಸಂಪಾದಿಸುತ್ತಿದ್ದರು ಅವರು ನಯಾಪೈಸೆ ಆದಾಯ ತೆರಿಗೆ ಪಾವತಿಸುವುದಿಲ್ಲ ಮತ್ತು ಇವರನ್ನು ಆದಾಯ ತೆರಿಗೆ ವ್ಯಾಪ್ತಿಗೆ ತರುವ ಯಾವುದೇ ಪ್ರಯತ್ನ ನಡೆಯುವುದಿಲ್ಲ. ಎಂಬುದು ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವವರ ವಾದ.

ನಮ್ಮ ವ್ಯವಸ್ಥೆಯಲ್ಲಿನ ದೋಷದ ಕಾರಣ ಪರಿಸ್ಥಿತಿಯಲ್ಲಿ ಬದಲಾವಣೆ ಕಾಣದೆ ಮುಂದುವರೆದಿರುವುದರಿಂದ ಅವರ ಆಕ್ರೋಶವು ನ್ಯಾಯಯುತ ವಾಗಿದೆ. ದೇಶದಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರು ೮.೧ಕೋಟಿ ಜನ ಅದರಲ್ಲಿ ಶೇಕಡಾ ೫೦ರಷ್ಟು ಜನ ಮಾತ್ರ ತೆರಿಗೆ ಪಾವತಿ ಮಾಡುವುದು. ಹೊಸ ತೆರಿಗೆಯ ಪದ್ಧತಿ ಅಳವಡಿಸಿಕೊಂಡರೆ ೭.೭೫ ಲಕ್ಷ ರು. ಆದಾಯದ ವರೆಗೂ ತೆರಿಗೆ ವಿನಾಯತಿ ದೊರೆಯುತ್ತದೆ. ಕಳೆದ ಬಾರಿ ೭.೫ ಲಕ್ಷ ರು. ನವರೆಗೂ ವಿನಾಯಿತಿ ದೊರೆತಿತ್ತು. ಅಂದರೆ ಮಾಸಿಕ ೬೦ ಸಾವಿರ ರು. ಸಂಬಳ ಪಡೆಯುವವರು ಯಾವುದೇ ತೆರಿಗೆ ಯನ್ನು ಕಟ್ಟುವ ಅಗತ್ಯವಿಲ್ಲ. ಯುಪಿಎ ಅವಧಿಯಲ್ಲಿ ತೆರಿಗೆ ವಿನಾಯತಿ ದೊರೆಯುತ್ತಿದಿದ್ದು ಕೇವಲ ೨ಲಕ್ಷಕ್ಕೆ ರು.ಗೆ ಮಾತ್ರ. ಆದರೆ, ಬಿಜೆಪಿ ಅವಧಿಯಲ್ಲಿ ೭.೭೫ ಸಾವಿರ ರು.
ವಾಗಿದೆ.

ಈ ಬಾರಿಯ ಮುಂಗಡ ಪತ್ರದಲ್ಲಿ ದೀರ್ಘಾವಽ ಶೇರು ಹೂಡಿಕೆಯ ಮೇಲಿನ ಲಾಭದ ಮೇಲೆ ಕ್ಯಾಪಿಟಲ್ ಗೇ ತೆರಿಗೆಯನ್ನು ಶೇ.೧೫ ರಿಂದ ೨೦ ಕ್ಕೆ ಹೆಚ್ಚಳ ಮಾಡಲಾಗಿದೆ. ಹಾಗೆಯೇ ಅಲ್ಪಾವಽ ಶೇರು ಹೂಡಿಕೆಯ ಮೇಲಿನ ಲಾಭದ ಮೇಲೆ ಕ್ಯಾಪಿಟಲ್ ಗೇ ತೆರಿಗೆಯನ್ನು ಶೇಕಡಾ ೧೦ ರಿಂದ ೧೨.೫ ಕ್ಕೆ ಹೆಚ್ಚಳ ಮಾಡಲಾಗಿದೆ. ಶೇರು ಹೂಡಿಕೆಯ ಮೇಲಿನ ಲಾಭದ ಮೇಲೆ ಹೆಚ್ಚಿಸಿರುವ ಈ ಅಲ್ಪ ತೆರಿಗೆಯು ವ್ಯಾಪಕ ಟೀಕೆಗೆ ಕಾರಣವಾಗಿದೆ. ಮಧ್ಯಮ ವರ್ಗದಿಂದ  ಶೇರು ಮಾರುಕಟ್ಟೆಗೆ ಮಹತ್ವಾಕಾಂಕ್ಷೆಯ ಭಾರತೀಯರು ಪ್ರವೇಶಿಸಿzರೆ. ಅವರಿಗೆ ಶೇ.೨.೫ ದೀರ್ಘಾವಧಿಯ ಬಂಡವಾಳದ ಲಾಭಗಳ ಮೇಲಿನ ಹೆಚ್ಚುವರಿ ತೆರಿಗೆಯು ಹಾನಿಕಾರಕವೆಂದು ಭಾವಿಸುತ್ತಾರೆ.

ವಿತ್ತ ಸಚಿವರು ಇದನ್ನು ಮುಟ್ಟದಿದ್ದರೆ ಸೂಕ್ತವಾಗಿತ್ತು. ಉತ್ತಮ ಅಂಶಗಳ ಬಗ್ಗೆ ಚರ್ಚೆಗಿಂತ ಶೇ.೨.೫ ಹೆಚ್ಚಳದ ಬಗ್ಗೆಯೇ ಇಂದು ಹೆಚ್ಚು ಸದ್ದು ಕೇಳುತ್ತಿದೆ. ಆರ್ಥಿಕ ತಜ್ಞೆ ಕೃಪಾ ವೆಂಕಟೇಶ್ ರವರು ನಿರ್ಮಲಾರವರು ಉತ್ತಮವಾದ ಬಜೆಟ್ ಮಂಡಿಸಿದ್ದಾರೆ ಆದರೆ ಹೊಸ ತೆರಿಗೆ ಪದ್ಧತಿಯನ್ನು ಮತ್ತಷ್ಟು ಆಕರ್ಷಣೀಯ ಮಾಡಬೇಕಿತ್ತು ಮತ್ತು ಇಕ್ವಿಟಿ ಮೇಲಿನ ತೆರಿಗೆ ಹೆಚ್ಚಳ ಮಾಡಿದ್ದು ಸರಿಯಲ್ಲ ಎನ್ನುತ್ತಾರೆ. ಮುಂಗಡ ಪತ್ರದಲ್ಲಿ ಪ್ರವಾಸೋ ದ್ಯಮಕ್ಕೆ ಆದ್ಯತೆ ಇಲ್ಲವಾಗಿದೆ. ಮಂದಿರ ಪ್ರವಾಸೋದ್ಯಮಕ್ಕೆ ಉತ್ತೇಜಿಸಲು ಮತ್ತಷ್ಟು ಪ್ರಮುಖ ಪುಣ್ಯಕ್ಷೇತ್ರಗಳನ್ನು ಪರಿಗಣಿಸಿ ಅನುದಾನ ನೀಡುವ ಅಗತ್ಯವಿತ್ತು.

೨೩-೨೪ ರಲ್ಲಿ ಮೊದಲ ಬಾರಿಗೆ ಬ್ಯಾಂಕಿಂಗ್ ಕ್ಷೇತ್ರವು ನಿವ್ವಳ ೩ ಲಕ್ಷ ಕೋಟಿ ರು. ಲಾಭಗಳಿಸಿದೆ. ನಷ್ಟದಲ್ಲಿದ್ದ ರಾಷ್ಟ್ರೀಕೃತ ಬ್ಯಾಂಕ್‌ಗಳು ಭರ್ಜರಿ ಯಾದ ಲಾಭದತ್ತ ಮುಖ ಮಾಡಿದೆ. ೨೩-೨೪ರಲ್ಲಿ ದಾಖಲೆಯ ೧.೪ಲಕ್ಷಕೋಟಿ ರು. ಲಾಭ ಗಳಿಸಿದೆ. ಸಾಲ ವಸೂಲಿಯಲ್ಲಿಯೂ ಪರಿಣಾಮಕಾರಿ
ಕ್ರಮಗಳಿಂದ ಬ್ಯಾಂಕ್‌ಗಳ ಆರೋಗ್ಯ ಸುಧಾರಿಸಿದೆ ಇದರಿಂದ ಉದ್ದಿಮೆ ಆರಂಭಿಸುವವರಿಗೆ ಹೆಚ್ಚಿನ ಸಾಲ ದೊರೆಯಲು ಅನುಕೂಲವಾಗುತ್ತಿದೆ.

ಕೇವಲ ಬ್ಯಾಂಕ್‌ಗಳು ಲಾಭಗಳಿಸುತ್ತಿಲ್ಲ ಮೋದಿ ಸರಕಾರದಲ್ಲಿ ಸಾರ್ವಜನಿಕ ಉದ್ದಿಮೆಗಳು ಬ್ಲೂಚಿಪ್ ಕಂಪನಿಗಳಾಗಿ ಪರಿವರ್ತಿತವಾಗುತ್ತಿದೆ. ಒಂದು ಕಾಲದಲ್ಲಿ ರೋಗಗ್ರಸ್ತ ಉದ್ದಿಮೆ ಎಂದು ಹಣೆ ಪಟ್ಟಿ ಹೊಡೆದುಕೊಂಡಿದ್ದ ಸಂಸ್ಥೆಗಳು ಇಂದು ಶೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಲಕ್ಷಾಂತರ ರುಪಾಯಿ ಲಾಭವನ್ನು ತಂದು ಕೊಡುತ್ತಿದೆ. ಶೇರು ಮಾರುಕಟ್ಟೆಯಲ್ಲಿ ನೊಂದಣಿಯಾಗಿರುವ ಯಾವುದೇ ಸಾರ್ವಜನಿಕ ಉದ್ದಿಮೆಗಳ ಶೇರಿನಿಂದ ಹೂಡಿಕೆದಾರರಿಗೆ ನಷ್ಟವುಂಟಾಗಿಲ್ಲ. ಕಳೆದ ಹತ್ತು ವರ್ಷದಲ್ಲಿ ಕೈಗೊಂಡಿರುವ ಸುಧಾರಣೆಯಿಂದ ಉದ್ದಿಮೆಗಳು ಲಾಭದಾಯಕವಾಗಿ ನಡೆಯುತ್ತಿದೆ.

ಮುಂಗಡ ಪತ್ರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಿ ಚೊಂಬು ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯನವರು ತಮ್ಮ ಹಳೆಯ ಚೊಂಬು ರಾಗವನ್ನು ಮತ್ತೇ ಹಾಡಿದ್ದಾರೆ. ಈಗಾಗಲೇ ಕೇಂದ್ರ ಸರಕಾರ ಬೆಂಗಳೂರು ಉಪನಗರ ರೈಲು ನಿರ್ಮಾಣಕ್ಕೆ ೬,೦೦೦ ಕೋಟಿ ರು. ಕೊಡುತ್ತಿದೆ. ಈ ವರ್ಷ ೩೫೦ ಕೋಟಿ ರು. ನೀಡಲು ಅನುಮೋದಿಸಿದೆ. ೨೪-೨೫ ರಲ್ಲಿ ರಾಜ್ಯದ ರೈಲು ಯೋಜನೆಗಳಿಗೆ ೭,೫೫೯ ಕೋಟಿ ರು. ಅನುಮೋದನೆ ದೊರೆತಿದೆ. ಬೆಂಗಳೂರು ಮೆಟ್ರೋ ಯೋಜನೆಗೆ ಕೇಂದ್ರ ಅನುದಾನ ಭೂ ಸ್ವಾಧೀನಕ್ಕೆ, ತೆರಿಗೆ ವಿನಾಯತಿ ಮತ್ತು ಇಕ್ವಿಟಿ ಮೂಲಕ ಬಂಡವಾಳ ಹೂಡಿಕೆಗೆ ಬೆಂಬಲಿಸುತ್ತಿದೆ.

ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ‘ರಾಜ್ಯದಲ್ಲಿ ರಸ್ತೆ ನಿರ್ಮಾಣ ಮಾಡಲು ೨ಲಕ್ಷ ಕೋಟಿ ರು. ಕೊಡಲು ಸಿದ್ಧ, ರಾಜ್ಯ ಸರಕಾರ ಭೂಸ್ವಾಧೀನ ಮಾಡಿ ಕೊಡಿ’ ಎಂದು ತಿಳಿಸಿzರೆ. ಚೆನ್ನೈ ಮತ್ತು ಬೆಂಗಳೂರು ಇಂಡಸ್ಟ್ರೀಯಲ್ ಕಾರಿಡಾರ್ ತರುವಾಯ ಈ ಬಾರಿ ಹೈದರಾಬಾದ್
ಮತ್ತು ಬೆಂಗಳೂರು ಕೈಗಾರಿಕಾ ಕಾರಿಡಾರ್ ಘೋಷಿಸಲಾಗಿದೆ. ಇದರ ಲಾಭ ಕೋಲಾರ ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಗಳಲ್ಲಿ ಉದ್ಯೋಗ ಸೃಷ್ಟಿಗೆ
ಸಹಕಾರಿಯಾಗುವುದು.

ಕೇಂದ್ರದ ಮುಂಗಡ ಪತ್ರದಲ್ಲಿ ೧೧ ಲಕ್ಷ ಕೋಟಿ ರು. ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ನಿಗದಿಯಾಗಿದೆ. ರಾಜ್ಯ ಸರಕಾರ ತ್ವರಿತವಾಗಿ ಪ್ರಸ್ತಾವನೆಗಳನ್ನು ಸಲ್ಲಿಸಿಗರಿಷ್ಠ ಅನುದಾನ ಪಡೆಯಲು ಗಮನ ನೀಡಬೇಕು. ಮೂರು ಕೋಟಿ ಮನೆಗಳ ನಿರ್ಮಾಣಕ್ಕೆ ಅನುದಾನ ಮೀಸಲಿದೆ ಇದರ
ಗರಿಷ್ಠ ಲಾಭ ರಾಜ್ಯ ಸರಕಾರ ಪಡೆಯಬೇಕು. ಕೇಂದ್ರ ಸರಕಾರ ಘೋಷಿಸುವ ಪ್ರತಿಯೊಂದು ಯೋಜನೆಗಳು ಎಲ್ಲ ರಾಜ್ಯಗಳಿಗೆ ಲಾಭವಾಗುವುದು ಅದನ್ನು ಪಡೆದುಕೊಳ್ಳುವ ಜಾಣ್ಮೆ ರಾಜ್ಯ ಸರಕಾರ ತೋರಬೇಕಾಗಿದೆ.

ನಾಳೆಯೇ ಪ್ರಧಾನಿಯಾಗಲು ಹಾತೊರೆಯುತ್ತಿರುವ ರಾಹುಲ್ ಗಾಂಧಿಯವರು ಕೇಂದ್ರ ಮತ್ತು ರಾಜ್ಯಗಳ ಸಂಬಂಧಕ್ಕೆ ಹುಳಿ ಹಿಂಡಲು ಇದೊಂದು ಎನ್‌ಡಿಎ ಬಜೆಟ್ ಭಾರತದ ಬಜೆಟ್ ಅಲ್ಲ ಎಂದು ಟೀಕಿಸಿದ್ದಾರೆ. ಟೀಕೆ ಮಾಡುವ ಮುನ್ನ ತಮ್ಮ ಸರಕಾರ ಇಲ್ಲಿಯತನಕ ಮಂಡಿಸಿರುವ ೫೫ ಮುಂಗಡ
ಪತ್ರಗಳ ಹಣೆಬರಹವನ್ನು ಓದಬೇಕಿತ್ತು ಆದರೆ ಅವರಿಗೆ ಪ್ರಚೋದಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಮುಖ್ಯವಾಗಿರುವುದು ದುರಂತದ ಸಂಗತಿ.