ಮುಂಬಯಿ: ಜಾಗತಿಕ ಷೇರುಪೇಟೆಯಲ್ಲಿ ಮಿಶ್ರ ವಹಿವಾಟುಗಳು ಕಂಡುಬಂದಿದ್ದು, ಪೇಟೆಯ ವಹಿವಾಟಿನಲ್ಲಿ ಹೆಚ್ಚಿನ ಏರಿಳಿತ ದಾಖಲಾಗಿವೆ. ಭಾರತದ ಷೇರುಪೇಟೆಯಲ್ಲಿ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ ಸೂಚ್ಯಂಕಗಳು ಮಂಗಳವಾರ ನೀರಸವಾಗಿ ವಹಿವಾಟು ಶುರುಮಾಡಿವೆ.
ಷೇರುಪೇಟೆ ವಹಿವಾಟು ಆರಂಭಕ್ಕೆ ಮುನ್ನ ನಿಫ್ಟಿ 24,350ಕ್ಕಿಂತ ಕೆಳಗೆ ಮತ್ತು ಸೆನ್ಸೆಕ್ಸ್ ಕೂಡ ಸೋಮವಾರ ವಹಿವಾಟು ನಿಲ್ಲಿಸಿದ ಸ್ತರಕ್ಕಿಂತ ಕೆಳಕ್ಕೆ ಕುಸಿದಿದೆ. ಷೇರುಪೇಟೆ ವಹಿವಾಟು ಶುರುವಾಗುತ್ತಿದ್ದಂತೆ ಸೆನ್ಸೆಕ್ಸ್ 79,615ರಲ್ಲಿ ಮತ್ತು ನಿಫ್ಟಿ 50 ಸೂಚ್ಯಂಕ 24,342.35 ಅಂಶದಲ್ಲಿ ವಹಿವಾಟು ಆರಂಭಿಸಿದವು.
ನಿಫ್ಟಿ 50 ಕೇವಲ 4.65 ಪಾಯಿಂಟ್ (0.02%) ಕುಸಿದು 24,342.10 ರಲ್ಲಿ ವಹಿವಾಟು ಶುರುಮಾಡಿ ಮತ್ತಷ್ಟು ಕುಸಿತ ಕಂಡಿದೆ. ಬಿಎಸ್‌ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ ಸ್ವಲ್ಪ ಕುಸಿದು ಬಳಿಕ 96.41 ಪಾಯಿಂಟ್ (0.12%) ಇಳಿದು 79,552.51ರಲ್ಲಿ ವಹಿವಾಟು ನಡೆಸಿದೆ. ಬ್ಯಾಂಕ್ ನಿಫ್ಟಿ ಸೂಚ್ಯಂಕವು 182.60 ಪಾಯಿಂಟ್ (0.36%) ಇಳಿದು 50,395.35ರಲ್ಲಿ ವಹಿವಾಟು ನಡೆಸಿದೆ.
ನಿಫ್ಟಿ 50 ಸೂಚ್ಯಂಕದಲ್ಲಿ 32 ಷೇರುಗಳು ಲಾಭಾಂಶದಲ್ಲಿ ವಹಿವಾಟು ನಡೆಸಿದರೆ, 18 ಷೇರುಗಳು ನಷ್ಟದ ವಹಿವಾಟು ನಡೆಸಿವೆ. ಇದರ ಪರಿಣಾಮ ನಿಫ್ಟಿ50 ಸೂಚ್ಯಂಕದ ಮೇಲಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಷೇರು ಒಂದೇ ಶೇಕಡ 2ಕ್ಕಿಂತ ಹೆಚ್ಚು ಕುಸಿತ ಕಂಡಿದೆ.