ಕೊಪ್ಪಳ: ತುಂಗಭದ್ರ ಜಲಾಶಯದ ಕ್ರಸ್ಟ್ ಗೇಟ್ ಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಯಾರ ಮೇಲೆಯೂ ಆರೋಪ ಮಾಡುವುದಿಲ್ಲ. ರಾಜಕೀಯ ಆರೋಪಗಳ ಬಗ್ಗೆ ನಾನು ಉತ್ತರಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಹಾನಿಗೊಳಗಾದ ತುಂಗಭದ್ರ ಡ್ಯಾಂ ಪರಿಶೀಲನೆಗೂ ಮೊದಲು ಕೊಪ್ಪಳದ ಬಸಾಪೂರ ವಿಮಾನ ನಿಲ್ದಾಣದಲ್ಲಿ ಮಾತನಾಡಿ, ಸರಕಾರದ ಹೊಣೆ ಗೇಡಿತನದಿಂದ ಡ್ಯಾಂ ಗೇಟ್ ಗೆ ಹಾನಿಯಾಗಿದೆ ಎಂಬುದು ಬಿಜೆಪಿಯ ರಾಜಕೀಯ ಹೇಳಿಕೆ. ಸರಕಾರದ ಮೇಲೆ ಗೂಬೆ ಕೂಡಿಸುವುದೇ ಅವರ ಕೆಲಸ ವಾಗಿದೆ. ಇಂಥ ರಾಜಕೀಯ ಹೇಳಿಕೆಗೆ ನಾನು ಉತ್ತರ ನೀಡುವುದಿಲ್ಲ. ತುಂಗಭದ್ರ ಮಂಡಳಿಯಿಂದ ಜಲಾಶಯದ ಕ್ರಸ್ಟ್ ಗೇಟ್ ನಿರ್ವಹಣೆ ಮಾಡಲಾಗುತ್ತದೆ. ಬೋರ್ಡ್ ಗೆ ಕಾರ್ಯದರ್ಶಿ ಮತ್ತು ಅಧ್ಯಕ್ಷ ರನ್ನು ಕೇಂದ್ರ ಸರಕಾರದ ಜಲ ಆಯೋಗ ನೇಮಕ ಮಾಡುತ್ತದೆ. ಸದ್ಯ ಕೇಂದ್ರದಲ್ಲಿ ಯಾವ ಪಕ್ಷದ ಸರಕಾರ ಅಧಿಕಾರದಲ್ಲಿ ಇದೆ ಎಂಬುದನ್ನು ಬಿಜೆಪಿಗರು ಮೊದಲು ಹೇಳಲಿ ಎಂದು ತಿರುಗೇಟು ನೀಡಿದರು.
ಯಾರ ತಪ್ಪಿನಿಂದ ಕ್ರಸ್ಟ್ ಗೇಟ್ ಹಾನಿಯಾಗಿದೆ. ಯಾರು ತಪ್ಪು ಮಾಡಿದ್ದಾರೆ ಎಂಬುದನ್ನು ಈ ಹಂತದಲ್ಲಿ ಹೇಳಲು ಆಗುವುದಿಲ್ಲ. ಈಗ ಜಲಾಶಯ ದಲ್ಲಿನ ನೀರು ಖಾಲಿ ಮಾಡಿ, ಗೇಟ್ ಅಳವಡಿಸುವ ಕಾರ್ಯವನ್ನು ಸರಕಾರ ಮಾಡುತ್ತಿದೆ. ರೈತರ ಹಿತದೃಷ್ಟಿಯಿಂದ ಗೇಟ್ ದುರಸ್ತಿ ಮುಖ್ಯ. ಹವಾಮಾನ ಇಲಾಖೆ ಮಾಹಿತಿಯಂತೆ ಮುಂದೆ ಇನ್ನೂ ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು, ಮತ್ತೇ ಜಲಾಶಯ ತುಂಬುತ್ತದೆ ಎಂಬ ಆಶಾಭಾವ ಇಟ್ಟು ಕೊಳ್ಳೊಣ. ಮೊದಲ ಬೆಳೆಗೆ ರೈತರಿಗೆ ಯಾವುದೇ ರೀತಿ ತೊಂದರೆ ಆಗುವುದಿಲ್ಲ ಎಂದರು.