Saturday, 23rd November 2024

ಕವಿತಾ ಫಡ್‌ನೇ ದೋ ಹಮ್ಕೋ, ಆಮೇಲ್ ಬೇಕಿದ್ರೆ ಕೆಮ್ಕೋ !

ತಿಳಿರು ತೋರಣ

srivathsajoshi@yahoo.com

‘ಅಡಚಣೆಗಾಗಿ ಕ್ಷಮಿಸಿ’ ಎಂಬ ಪದಪುಂಜ ಆಗಾಗ ನಮ್ಮ ಕಿವಿಗಳಿಗೆ ಬೀಳುತ್ತಿರುತ್ತದೆ. ಅಥವಾ, ನಾವೇ ಅದನ್ನು ಬೇರೆಯವರಿಗೆ ಹೇಳುವ ಸಂದರ್ಭಗಳೂ
ಬರುತ್ತವೆ. ಅಡಚಣೆ ಅಂದರೆ ಇಂಥದ್ದೇ ಅಂತೇನಿಲ್ಲ. ಮನುಷ್ಯರಿಂದಾದದ್ದೂ ಇರಬಹುದು, ಯಂತ್ರಗಳಿಂದಾದದ್ದೂ ಇರಬಹುದು. ಆದರೂ ಹೆಚ್ಚಾಗಿ ದೂಷಿಸುವುದು ಯಂತ್ರಗಳನ್ನೇ.

ವೇದಿಕೆಯಲ್ಲಿ ಕಾರ್ಯಕ್ರಮ ಆರಂಭವಾಗುವುದು ತಡವಾಯಿ ತೆನ್ನಿ, ಅಥವಾ ಮರ್ಫಿಯ ನಿಯಮದಂತೆ ನಡುವೆ ಏನಾದರೂ ಅನಿರೀಕ್ಷಿತವಾದದ್ದು ಘಟಿಸಿ ಕಾರ್ಯಕ್ರಮದ ಓಘಕ್ಕೆ ಭಂಗ ವಾಯಿತೆನ್ನಿ- ‘ತಾಂತ್ರಿಕ ಅಡಚಣೆಗಾಗಿ ಕ್ಷಮಿಸಿ’ ಎಂದು ಎಮ್ಸಿಯಿಂದ ಉದ್ಘೋಷಣೆ ಮಾಡಿಸಿದರಾಯಿತು. ಸಭಿಕರು ಕೆಮ್ಮಂಗಿಲ್ಲ. ಹಾಗೆನ್ನುವಾಗ ನೆನಪಾಯ್ತು, ಕೆಮ್ಮು ಕೂಡ ಒಂಥರದ ಅಡಚಣೆಯೇ. ಟಿವಿಯಲ್ಲಿ, ರೇಡಿಯೊದಲ್ಲಿ ವಾರ್ತೆ ಓದುವವರನ್ನು ಕೇಳಿ ನೋಡಿ. ವಾರ್ತೆ ಓದುವಾಗ ನಡುವೆ ಕೆಮ್ಮು ಬಂದರೆ ಎಂಥ ಫಜೀತಿ, ಎಂಥ ಮುಜುಗರ!

ಸಾಹಿತ್ಯಗೋಷ್ಠಿಯಲ್ಲಿ ಕವಿತೆ ಓದುವವರಿಗೂ ಅಷ್ಟೇ. ಸ್ವತಃ ಅವರಿಗೆ ಕೆಮ್ಮು ಬಂದರೂ ಕಷ್ಟವೇ. ಸಭಿಕರಲ್ಲಿ ಯಾರಾದರೂ ಕೆಮ್ಮಿದರೂ ಕಷ್ಟವೇ.
ಒಂದೊಮ್ಮೆಗೆ ರಸಭಂಗ ಆದಂತೆಯೇ. ಬಹುಶಃ ಅದಕ್ಕೇ ಡುಂಡಿರಾಜರು ಬರೆದದ್ದು- ‘ಕವಿತಾ ಪಢ್‌ನೇ ದೋ ಹಮ್ಕೋ; ಆಮೇಲ್ ಬೇಕಿದ್ರೆ ಕೆಮ್ಕೋ!’ ಎಂದು. ಅದನ್ನವರು ನಿಜವಾಗಿಯೂ ಒಂದು ಕೆಮ್ಮಿನ ಸಂದರ್ಭದಲ್ಲಿ ಆಶುಕವಿತೆಯಾಗಿ ಹೆಣೆದಿದ್ದಂತೆ. ‘ಸೂರ್ತಿಗಾಗಿ ಕಾಯುತ್ತ ಕೂರದೆ ಎಲ್ಲೆಂದರಲ್ಲಿ ಯಾವುದೋ ವಸ್ತು ಅಥವಾ ಘಟನೆಯ ಬಗ್ಗೆ ದಿಢೀರ್ ಕವನ ರಚಿಸುವುದು ಆಶುಕವಿತೆ. ಹಿಂದಿನ ಕಾಲದಲ್ಲಿ ಆಸ್ಥಾನಕವಿಗಳು ಮಹಾರಾಜರ ದರ್ಬಾರಿನಲ್ಲಿ ಅವರು ಸೂಚಿಸಿದ ವಿಷಯದ ಬಗ್ಗೆ ಆ ಕ್ಷಣದಲ್ಲೇ ಕವನ ಕಟ್ಟಿ ರಾಜನಿಂದ ಪಾರಿತೋಷಕ ಪಡೆಯುತ್ತಿದ್ದರಂತೆ.

ಅವಧಾನ  ಕಾರ್ಯಕ್ರಮಗಳಲ್ಲಿ ಈಗಲೂ ಅವಧಾನಿಗಳು ಆಶುಕವನ ರಚಿಸುತ್ತಾರೆ. ಅವರೆಲ್ಲ ಪ್ರತ್ಯುತ್ಪನ್ನಮತಿ ಆಗಿರಬೇಕಾಗುತ್ತದೆ. ನಮ್ಮ ಜನಪದ ಕವಿಗಳಲ್ಲಿ  ಬಹಳಷ್ಟು ಜನರು ಆಶುಕವಿಗಳಾಗಿದ್ದರು. ಹನಿಗವನವು ಕೆಲವೇ ಸಾಲುಗಳಲ್ಲಿ ಮುಗಿಯುವುದರಿಂದ ಆಶುಕವನಕ್ಕೆ ಅದು ಸೂಕ್ತ ಎನ್ನಬ ಹುದು. ಕೆಲವು ವರ್ಷಗಳ ಹಿಂದೆ ಚಂದನ ಟಿವಿ ವಾಹಿನಿ ಯವರು ಏರ್ಪಡಿಸಿದ್ದ ಒಂದು ಹಾಸ್ಯ ಕವಿಗೋಷ್ಠಿಯಲ್ಲಿ ನಿರ್ವಾಹಕರು ಪದೇ ಪದೆ ಕೆಮ್ಮುತ್ತಿದ್ದರು. ಆಗ ನಾನು ಸ್ಥಳದಲ್ಲೇ ರಚಿಸಿ ಹೇಳಿದ ಆಶು ಚುಟುಕ ಇದು.

ಈ ಕವಿತೆ ಅನಿರೀಕ್ಷಿತ ಪ್ರಾಸದಿಂದಾಗಿ ಈಗಲೂ ಓದುಗರಿಗೆ/ಕೇಳುಗರಿಗೆ ಖುಷಿ ನೀಡುತ್ತದೆ…’ ಎಂದು ಡುಂಡಿರಾಜ್ ‘ಹನಿಗವನ ಏನು? ಏಕೆ? ಹೇಗೆ?’ ಪುಸ್ತಕದಲ್ಲಿ ಆಶುಕವಿತೆಗೆ ಉದಾಹರಣೆ ಕೊಡುತ್ತ ಹಮ್ಕೋ-ಕೆಮ್ಕೋ ಚುಟುಕದ ಹುಟ್ಟಿನ ಬಗ್ಗೆ ಬರೆದಿದ್ದಾರೆ. ಅರವಿಂದ ಕೇಜ್ರಿವಾಲ್ ಕೆಮ್ಮುವ ಮುಖ್ಯಮಂತ್ರಿ ಎಂದೇ ಪ್ರಖ್ಯಾತ. ಪಾಪ, ಅವರಿಗದೊಂದು ಆರೋಗ್ಯದಲ್ಲಿ ತೊಂದರೆ. ದೆಹಲಿಯಿಂದ ಬೆಂಗಳೂರಿಗೆ ಬಂದು ಚಿಕಿತ್ಸೆ ಪಡೆಯುವಷ್ಟು
ಜಟಿಲ ಸಮಸ್ಯೆ. ತಮ್ಮ ಭಾಷಣಗಳಲ್ಲಿ, ಸಂದರ್ಶನಗಳಲ್ಲಿ ಅವರಿಗೆ ಕೆಮ್ಮು ಅದೆಷ್ಟು ಅಡಚಣೆ ತಂದಿದೆಯೋ. ಐದು ವರ್ಷಗಳ ಹಿಂದೆ ದೆಹಲಿಯಲ್ಲಿ ‘ನಮಾಮಿ ಗಂಗೆ’ ಯೋಜನೆಯಡಿ ಯಮುನಾ ನದಿಯ ಪುನರುತ್ಥಾನಕ್ಕಾಗಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇಜ್ರಿವಾಲ್‌ಗೆ ಕೆಮ್ಮಿನಿಂದಲೇ ಅವಮಾನ ವನ್ನೂ ಮಾಡಲಾಗಿತ್ತು.

ಆ ಕಾರ್ಯಕ್ರಮದಲ್ಲಿ ಸಭಿಕರ ಮುಂದೆ ಮಾತನಾಡಲು ಕೇಜ್ರಿವಾಲ್ ಮುಂದಾದಾಗ, ಅಲ್ಲಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರು ಒಟ್ಟಿಗೆ ಕೆಮ್ಮುವ ಮೂಲಕ ಅವರಿಗೆ ಮುಜುಗರ ತಂದಿದ್ದರು. ಆರೋಗ್ಯದ ಸಮಸ್ಯೆಯನ್ನು ಬಳಸಿಕೊಂಡು ಅಣಕ ಮಾಡುವ ಮೂಲಕ ಸಾರ್ವಜನಿಕವಾಗಿ ಇರಿಸು ಮುರಿಸು ಆಗುವಂತೆ ಮಾಡಿದ್ದರು. ‘ದಯವಿಟ್ಟು ಸುಮ್ಮನಿರಿ’ ಎಂದು ಕೇಜ್ರಿವಾಲ್ ಮನವಿ ಮಾಡಿಕೊಂಡರೂ ಅಣಕ ಮುಂದುವರೆದಿತ್ತು. ಬಳಿಕ ನಿತಿನ್ ಗಡ್ಕರಿ ‘ಇದು ಸರಕಾರಿ ಕಾರ್ಯಕ್ರಮ, ಶಾಂತಿ ಕಾಪಾಡಿ’ ಎಂದು ತಿಳಿಹೇಳಿದ ಮೇಲಷ್ಟೇ ಕಾರ್ಯಕರ್ತರು ಸುಮ್ಮನಾದರಂತೆ.

ಹಿಂದೊಮ್ಮೆ ಮಾಜಿ ಕ್ರಿಕೆಟರ್, ರಾಜಕಾರಣಿ ನವಜೋತ್ ಸಿಂಗ್ ಸಿಧು ಕೂಡ ಕೇಜ್ರಿವಾಲ್‌ರ ಕೆಮ್ಮಿನ ಸಮಸ್ಯೆಯನ್ನು ಅಣಕ ಮಾಡಿದ್ದರು. ಅದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹಾಗಂತ ಇಲ್ಲಿ ನಾನು ಕೇಜ್ರಿವಾಲ್ ಬಗ್ಗೆ ಅನುಕಂಪ ಉಳ್ಳವನೆಂದೇನಲ್ಲ. ಆತನ ಕುತ್ಸಿತ ಮತಿ, ಭ್ರಷ್ಟಾಚಾರಗಳೆಲ್ಲ ನನಗೆ ಇಷ್ಟವಾಗುತ್ತದೆಂದೇ? ಖಂಡಿತ ಇಲ್ಲ. ಆದರೆ ಕೆಮ್ಮಿನ ಸಮಸ್ಯೆ ಅಣಕ ಮಾಡುವಂಥದ್ದಲ್ಲ ಎಂದಷ್ಟೇ ನನ್ನ
ಪಾಯಿಂಟು.

ಇರಲಿ. ಈ ಕೆಮ್ಮು ಎಂಬುದು ಚಲನಚಿತ್ರಗಳಲ್ಲಿ, ಮುಖ್ಯವಾಗಿ ಚಿತ್ರಗೀತೆಗಳಲ್ಲಿ ಕೃತಕವಾಗಿ ಆದರೆ ಅತಿಸಹಜವೆಂಬಂತೆ ಕಾಣಿಸಿಕೊಳ್ಳುವುದು- ಅಲ್ಲ, ಕೇಳಿಸಿಕೊಳ್ಳುವುದು- ಕೂಡ ನನಗೊಂದು ಆಸಕ್ತಿಯ ಸಂಗತಿಯೇ. ‘ಶಂಕರಾಭರಣಂ’ ಚಿತ್ರದ ಕ್ಲೆ ಮ್ಯಾಕ್ಸ್ ದೃಶ್ಯದ ‘ದೊರಕುನಾ ಇಟುವಂಟಿ ಸೇವಾ…’ ಹಾಡು ಇದೆಯಲ್ಲ? ಅದರಲ್ಲಿ ಶಂಕರಶಾಸಿಗಳು (ಸೋಮಯಾಜುಲು ಅಭಿನಯಿಸಿದ ಪಾತ್ರ) ಮೊದಲ ಚರಣದ ‘ರಾಗಾಲನಂತಾಲು ನೀ ವೇಯಿ ರೂಪಾಲು… ಭವರೋಗ ತಿಮಿರಾಲ ಪೋಕಾರ್ಚು ದೀಪಾಲು…’ ಸಾಲುಗಳನ್ನು ಎರಡೆರಡು ಸಲ ಹಾಡುತ್ತಾರೆ.

ಮುಂದೆ ‘ನಾದಾತ್ಮಕುಡವೈ ನಾಲೋನ ಚೆಲಿಗಿ…’ ಸಾಲನ್ನು ಹಾಡುವಾಗ ಅವರಿಗೆ ಕೆಮ್ಮು ಬರಲಾರಂಭಿಸುತ್ತದೆ. ಸಂಗೀತ ನಿರ್ದೇಶಕ ಕೆ.ವಿ.ಮಹಾ ದೇವನ್ ಅಲ್ಲೊಂದು ಸಿಗ್ನಲ್ ನೋಟ್ ‘ಟೆಡೇಂ…’ ಎಂದು ಕೇಳುವಂತೆ ಮಾಡುತ್ತಾರೆ. ಅದು ಹಿನ್ನೆಲೆ ಗಾಯಕ ಎಸ್.ಪಿ.ಬಾಲುಗೆ ಸೂಚನೆ. ಅಲ್ಲಿಂದ ಏಕ್‌ದಂ ಕೆಮ್ಮು. ‘ನಾ ಪ್ರಾಣದೀಪಮೈ ನಾಲೋನ ವೆಲಿಗೇ…’ ಸಾಲನ್ನು ಕೆಮ್ಮು ತ್ತಲೇ ಕಷ್ಟಪಟ್ಟು ಹಾಡುತ್ತಾರೆ. ತೆರೆಯ ಮೇಲೆ ಹಾಡನ್ನು ಶಂಕರ ಶಾಸಿಗಳ ಶಿಷ್ಯ ಮುಂದುವರೆಸುತ್ತಾನೆ (ತುಳಸಿ ಎಂಬ ಹೆಸರಿನ ಬಾಲನಟಿಯ ಅಭಿನಯ; ವಾಣಿ ಜಯರಾಂ ಹಿನ್ನೆಲೆಗಾಯನ).

ಹಾಡು ಮುಗಿದಾಗ ವೇದಿಕೆಯ ಮೇಲೆಯೇ ಶಾಸ್ತ್ರಿಗಳ ಬದುಕಿನ ಹಾಡೂ ಮುಗಿಯುತ್ತದೆ. ಕಾಲಲ್ಲಿದ್ದ ಕಡಗವನ್ನು ಶಿಷ್ಯನಿಗೆ ತೊಡಿಸಿ ಕೊನೆಯುಸಿರೆಳೆ ಯುತ್ತಾರೆ. ಶಾಸಿಗಳ ಆರಾಧಕಿ ತುಳಸಿ (ಮಂಜುಭಾರ್ಗವಿ) ವೇದಿಕೆಯನ್ನೇರಿ ಶಾಸಿಗಳ ಪದತಲದಲ್ಲಿ ಕುಸಿದು ಪ್ರಾಣತ್ಯಾಗ ಮಾಡುತ್ತಾಳೆ. ಪ್ರೇಕ್ಷಕರ ಕರುಳು ಹಿಂಡುವ, ದಾರುಣ ಅಂತ್ಯದ ಚಿತ್ರವದು. ಅಂದಹಾಗೆ ‘ದೊರಕುನಾ ಇಟುವಂಟಿ ಸೇವಾ…’ ತೆಲುಗಿನಲ್ಲಿ ಎಸ್.ಪಿ.ಬಾಲು ಹಾಡಿದ್ದು ಮತ್ತು ಜತೆಗಿನ ಕೆಮ್ಮು ಸಹ ಅವರೇ ಸೇರಿಸಿದ್ದು ಅದೆಷ್ಟು ಪರ್ಫೆಕ್ಟಾಗಿ ಬಂದಿತ್ತೆಂದರೆ, ಶಂಕರಾಭರಣಂ ಚಿತ್ರ ಮಲಯಾಳಮ್‌ಗೆ ಡಬ್ ಆದಾಗ ಅದೊಂದು ಹಾಡಿನದು ಮಾತ್ರ ತೆಲುಗು ಆವೃತ್ತಿಯನ್ನೇ ಉಳಿಸಿಕೊಂಡಿದ್ದರಂತೆ.

ಕನ್ನಡದಲ್ಲೂ ಕೆಲವು ಕೆಮ್ಮಿನ ಚಿತ್ರಗೀತೆಗಳಿರುವುದನ್ನು ಈಗ ನಿಮ್ಮ ಗಮನಕ್ಕೆ ತರುತ್ತೇನೆ. ‘ಶ್ರುತಿ ಸೇರಿದಾಗ’ ಚಿತ್ರದ ‘ಬೊಂಬೆಯಾಟವಯ್ಯಾ ನೀ ಸೂತ್ರಧಾರಿ ನಾ ಪಾತ್ರಧಾರಿ…’ ಅಂಥದ್ದೊಂದು ಹಾಡು. ತೆರೆಯ ಮೇಲೆ ನಟನೆ ಹಾಸ್ಯನಟ ಉಮೇಶ್ ಅವರದು. ಅವರಿಗೆ ಹಿನ್ನೆಲೆಗಾಯನ, ನಿಜವಾಗಿಯೂ ಅಲ್ಲಿ ವೇದಿಕೆಯಲ್ಲೇ ತೆರೆಮರೆಯಲ್ಲಿ ನಿಂತ ಡಾ.ರಾಜಕುಮಾರ್ ಅವರಿಂದ. ಹಾಡಿನ ಎರಡು ಚರಣಗಳು ಮುಗಿದು ಸ್ವರಜತಿ
ಹಾಡುವಾಗ ಅಸಲಿ ಹಾಡುಗಾರ ಅಣ್ಣಾವ್ರಿಗೆ ಕೆಮ್ಮು ಬರುತ್ತದೆ. ವೇದಿಕೆ ಮೇಲಿನ ನಕಲಿ ಹಾಡುಗಾರ ಉಮೇಶ್‌ಗೆ ಪೇಚಾಟ. ಸಭೆಯಲ್ಲಿದ್ದ ಬಾಲಣ್ಣ, ಸೇವಕನ ಮೂಲಕ ಉಮೇಶ್‌ಗೆ ಹಾಲು, ನೀರು, ಹಣ್ಣಿನರಸ ಎಲ್ಲ ತಂದು ಕುಡಿಯಲಿಕ್ಕೆ ಕೊಡಿಸಿ ಕೆಮ್ಮು ನಿವಾರಣೆಗೆ ನೆರವಾಗುತ್ತಾರೆ.

ಸಭೆಯಲ್ಲಿ ಮುಂದಿನ ಸಾಲಲ್ಲೇ ಕುಳಿತಿದ್ದ ನಾಯಕಿ ಮಾಧವಿಗೆ ಇದು ಗೊತ್ತಾಗಿ ಆಕೆ ಎದ್ದು ವೇದಿಕೆಯ ಹಿಂದೆ ಹೋಗಿ ಅಣ್ಣಾವ್ರ ಜೊತೆ ಹಾಡನ್ನು
ಮುಂದುವರೆಸುತ್ತಾರೆ. ಪ್ರೇಕ್ಷಕರು ಉಮೇಶ್ ಅವರೇ ಕೆಮ್ಮಿನ ಬಳಿಕ ಧ್ವನಿ ಕೀರಲಾಗಿ ಹೆಣ್ಣುಧ್ವನಿಯಲ್ಲಿ ಹಾಡ್ತಿದ್ದಾರೆ ಅಂದ್ಕೊಳ್ತಾರೆ! ತುಂಬ ಹಾಸ್ಯಮಯ ಸನ್ನಿವೇಶ ಅದು. ಹಾಗೆಯೇ, ಡಾ.ರಾಜ್-ಮಾಧವಿ ಅಭಿನಯದ ‘ಹಾಲು ಜೇನು’ ಚಿತ್ರದ ‘ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ…’ ಹಾಡಿನಲ್ಲೂ ಕೆಮ್ಮು ಬರುತ್ತದೆ. ಅದರಲ್ಲೊಂದು ಕಡೆ ಮಾಧವಿ ‘ಏನ್ರೀ ಇದು ಅವತಾರ? ಗಂಡ್ಸಾಗ್ ಹುಟ್ಟಿ ನೀವು ಅಡುಗೆ ಮಾಡೋದಾ?’ ಎಂದು ಕೇಳುತ್ತಾರೆ. ಅಣ್ಣಾವ್ರು ‘ಉಹ್ಹು ಉಹ್ಹು’ ಎಂದು ಹುಸಿಯಾಗಿ ಕೆಮ್ಮಿದಂತೆ ನಟಿಸಿ ‘ಭೀಮಸೇನ ನಳಮಹಾರಾಜರು ಗಂಡಸರಲ್ಲವೇ…’ ಎಂದು ಹಾಡು ಮುಂದುವರೆಸುತ್ತಾರೆ.

ಕ್ಯಾನ್ಸರ್‌ನಿಂದ ಬಳಲುವ ಮಾಧವಿ ಹಾಡಿನ ಕೊನೆಗೆ ನಿಜವಾಗಿಯೂ ಕೆಮ್ಮುತ್ತಾರೆ. ಅಣ್ಣಾವ್ರು ಆಕೆಯ ಆರೈಕೆ ಮಾಡುತ್ತಾರೆ. ‘ಸೀತಾ’ ಚಿತ್ರದ ಅತಿಜನ ಪ್ರಿಯ, ಮದುವೆ ಸಮಾರಂಭಗಳಲ್ಲಿ ಈಗಲೂ ಹಾಡಲ್ಪಡುವ ‘ಮದುವೆಯ ಈ ಬಂಧ ಅನುರಾಗದ ಅನುಬಂಧ…’ ಇದರ ರೇಡಿಯೊ ಆವೃತ್ತಿಯಲ್ಲಿ ಕೇಳಿಬರೋದು ಎರಡೇ ಚರಣಗಳು. ಆದರೆ ಸಿನಿಮಾ ಆವೃತ್ತಿಯಲ್ಲಿ ‘ಸಿರಿತನದ ಸಿಹಿಯೋ ಬಡತನದ ಕಹಿಯೋ…’ ಎಂದು ಆರಂಭ ವಾಗುವ ಮೂರನೆಯ ಚರಣವೂ ಇದೆ. ಅಲ್ಲಿ ಕೆಮ್ಮಿನಿಂದಾಗಿ ಹಾಡು ಒಮ್ಮೆ ಕ್ಷಣಕಾಲ ನಿಂತುಹೋಗುತ್ತದೆ.

ಗಾಯಕ (ತೆರೆಯ ಮೇಲೆ ರಮೇಶ್ ಎಂಬ ಹಳೇಕಾಲದ ನಟನ ಅಭಿನಯ; ಹಿನ್ನೆಲೆ ಗಾಯನ ಎಸ್.ಪಿ.ಬಾಲು) ಒಂದು ಲೋಟ ನೀರು ಕುಡಿದು ಸಾವರಿಸಿ
ಕೊಂಡ ಮೇಲೆ ಮುಂದುವರೆಯುತ್ತದೆ. ‘ಗಡಿಬಿಡಿ ಗಂಡ’ ಚಿತ್ರದಲ್ಲಿ ರವಿಚಂದ್ರನ್ ಜೊತೆ ಗಾಯನಸ್ಪರ್ಧೆಗೆ ಇಳಿಯುವ ತಾಯ್ ನಾಗೇಶ್ ‘ನೀನು ನೀನೇ ಇಲ್ಲಿ ನಾನು ನಾನೇ…’ ಹಾಡುವ ಮೊದಲು ಗಂಟಲು ಟೆಸ್ಟ್ ಮಾಡಿಕೊಳ್ಳುವ ಕೆಮ್ಮೊಂದಿದೆ. ಅಂತೆಯೇ ‘ಗಾನಯೋಗಿ ಪಂಚಾಕ್ಷರಿ ಗವಾಯಿ’ ಚಿತ್ರದ
‘ಉಮಂಡ್ ಘುಮಂಡ್ ಘನ ಗರಜೇ ಬದರಾ…’ ಹಾಡಿನಲ್ಲೂ (ತೆರೆಯ ಮೇಲೆ ಲೋಕೇಶ್; ಹಿನ್ನೆಲೆ ಗಾಯನ ಎಸ್.ಪಿ. ಬಾಲಸುಬ್ರಹ್ಮಣ್ಯಂ) ನಡುವೆ ಒಮ್ಮೆ ಗಾಯಕನನ್ನು ಕೆಮ್ಮು ತೀವ್ರವಾಗಿ ಬಾಧಿಸುತ್ತದೆ. ಬೆಂಗಳೂರಿನಲ್ಲಿ ವೈಎನ್‌ಕೆ-ಟಿಯೆಸ್ಸಾರ್ ಸಂಸ್ಮರಣಾರ್ಥ ನಡೆದ ಹಾಸ್ಯೋತ್ಸವವೊಂದರಲ್ಲಿ ‘ಭಾಗ್ಯದ ಲಕ್ಷಿ ಬಾರಮ್ಮ…’ ಹಾಡುವಾಗ ಸಂಗೀತಗುರು ಕಿರ್ಲೋಸ್ಕರ್ ಸತ್ಯ ಅವರಿಗೆ ಕೆಮ್ಮು ಬಂದು ಆಮೇಲೆ ಹಾಡನ್ನು ಗುರುಗಳ ಶಿಷ್ಯ ರಫೀಕ್ ಮುಂದುವರೆಸುವ, ‘ಭಾಗ್ಯಂದು ಲಕ್ಷಿ ಗೆ ಬಾರಮ್ಮಾ… ಹೆಜ್ಜೆಯಮೇಲೆ ಹೆಜ್ಜೆಯ ಇಟ್‌ಬಿಟ್ಟಿ… ಮಜ್ಜಿಗೆಯೊಳ್ಗಿಂದು ಮಕ್ಖನ್‌ನ್ಹಂಗೇ… ಶುಕ್ರವಾರಂದು ನಮಾಜ್ ಠೇಮಿಗೆ…’ ಎನ್ನುವ ಸೂಪರ್‌ಹಾಸ್ಯದ ಪ್ರಸಂಗವಂತೂ ಕಚಗುಳಿಯಿಡುವಂಥದ್ದು.

ಸಭೆಯಲ್ಲಿದ್ದ ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಬಿದ್ದುಬಿದ್ದು ನಗುವಂತೆ ಮಾಡಿದ್ದು. ಮತ್ತೆ, ‘ಬಂಧನ’ ಚಿತ್ರದ ‘ಪ್ರೇಮದ ಕಾದಂಬರಿ ಬರೆದನು ಕಣ್ಣೀರಲಿ…’ ತೆರೆಯ ಮೇಲೆ ವಿಷ್ಣುವರ್ಧನ್ ಕೆಮ್ಮುತ್ತ ಅಭಿನಯಿಸಿದ, ಹಿನ್ನೆಲೆಯಲ್ಲಿ ಎಸ್‌ಪಿಬಿ ಕೆಮ್ಮುತ್ತ ಹಾಡಿದ ಅದ್ಭುತವಾದ ಗೀತೆಯನ್ನು ಮರೆಯಲಿಕ್ಕುಂಟೇ! ನನಗನಿಸುವಂತೆ, ಕೆಮ್ಮು ಇರುವ ಚಿತ್ರಗೀತೆಗಳಲ್ಲಿ ಈ ಹಾಡಿಗೆ ಅಗ್ರಸ್ಥಾನ ಸಲ್ಲಬೇಕು. ಇದರಲ್ಲಿ ಎಸ್‌ಪಿಬಿ ಕೆಮ್ಮನ್ನು ಎಷ್ಟು ಲಯ
ಬದ್ಧವಾಗಿ ಉಪಯೋಗಿಸಿದ್ದಾರೆಂದರೆ ಹಾಡಿನ ಲಯಕ್ಕೆ ಸ್ವಲ್ಪವೂ ತೊಂದರೆ ಇಲ್ಲದಂತೆ, ನಿಜವಾಗಿ ಹಾಡಿನ ಮಧ್ಯದಲ್ಲಿ ಕೆಮ್ಮು ಬಂದಿರುವಂತೆ ಕೇಳಿಸುತ್ತದೆ.

ಎಸ್‌ಪಿಬಿ ಅವರೇ ಒಮ್ಮೆ ‘ಎದೆ ತುಂಬಿ ಹಾಡುವೆನು’ ಸಂಚಿಕೆಯಲ್ಲಿ ಹೇಳಿದ್ದಂತೆ ‘ಪ್ರೇಮದ ಕಾದಂಬರಿ ಬರೆದನು ಕಣ್ಣೀರಲಿ…’ ಹಾಡನ್ನು ಕೆಮ್ಮುತ್ತ ಹಾಡುವಾಗ ಅವರ ದೇಹದ ರಕ್ತವೆಲ್ಲ ಮಿದುಳಿಗೆ ಹರಿದಿತ್ತಂತೆ! ಹೀಗೆ ನೆನಪು ಮಾಡಿಕೊಳ್ಳುತ್ತ ಹುಡುಕುತ್ತ ಹೋದರೆ ಹಿಂದೀ ಚಿತ್ರ ಸಂಗೀತದಲ್ಲೂ ‘ಖಾಂಸಿವಾಲೇ ಗಾನೇ’ ನಮಗೆ ಸಿಗುತ್ತವೆ: ‘ಸತ್ಯಂ ಶಿವಂ ಸುಂದರಂ’ ಚಿತ್ರದ ‘ಯಶೋಮತಿ ಮಯ್ಯಾ ಸೇ ಬೋಲೇ ನಂದಲಾಲಾ… (ಮನ್ನಾಡೇಗೆ ಕೆಮ್ಮು ಬಂದು ಲತಾ ಮಂಗೇಶ್ಕರ್ ಮುಂದುವರೆಸುತ್ತಾರೆ), ‘ಪರಿಚಯ್’ ಚಿತ್ರದ ‘ಬೀತೀ ನಾ ಬಿತಾಯೀ ರೈನಾ… (ಭೂಪೇಂದ್ರಗೆ ಕೆಮ್ಮು ಬಂದು ಲತಾ
ಮಂಗೇಶ್ಕರ್ ಮುಂದುವರೆಸುತ್ತಾರೆ) ಇತ್ಯಾದಿ.

ಆದರೆ ಕೆಮ್ಮು ಯಾವತ್ತಿಗೂ ನಮಗೆ ಅಡಚಣೆ ತರುವಂಥದು, ಕಿರಿಕಿರಿ ಉಂಟುಮಾಡುವಂಥದು ಎಂದೇ ತಿಳಿಯಬೇಕಿಲ್ಲ. ಸಿನಿಮಾಗಳಲ್ಲಿದ್ದಂತೆ ನಿಜಜೀವನದಲ್ಲೂ ನಾವು ಕೆಲವೊಮ್ಮೆ ಕೆಮ್ಮನ್ನು ಉದ್ದೇಶಪೂರ್ವಕ ಬರಿಸಿ ಉಪಯೋಗ ಮಾಡಿಕೊಳ್ಳುವುದೂ ಇದೆ. ಪಬ್ಲಿಕ್ ಟಾಯ್ಲೆಟ್‌ಗಳಿಗೆ- ಅದೇ, ಸಾರ್ವಜನಿಕ ಶೌಚಾಲಯಗಳಿಗೆ- ಮೂಗು ಮುಚ್ಚಿಕೊಂಡಾದರೂ ಹೋಗಿ ಪ್ರವೇಶಿಸುವ ಸಾಹಸವನ್ನು ನೀವು ಮಾಡಿದಿರಾದರೆ, ಅಲ್ಲಿ ಯಥಾಪ್ರಕಾರ ಬಾಗಿಲಿನ ಚಿಲಕ ಮುರಿದುಹೋಗಿದ್ದರೆ, ಒಳಗೆ ಧ್ಯಾನಪೀಠದಲ್ಲಿ ಕುಳಿತಾಗ ನಡುನಡುವೆ ಕೆಮ್ಮುವುದು ಅನಿವಾರ್ಯವಾಗುತ್ತದೆ. ನಮ್ಮ ಇರುವನ್ನು ಇತರರಿಗೆ ತಿಳಿಸುವ ಏಕೈಕ ಉಪಾಯವಾಗುತ್ತದೆ.

ಹಾಗೆಯೇ, ಕೆಮ್ಮು ಕಾಲಿಂಗ್‌ಬೆಲ್ ನ ಕೆಲಸವನ್ನೂ ಮಾಡುತ್ತದೆ ಎಂದು ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಅಭಿಪ್ರಾಯ. ಅವರದು ಮಾತ್ರವಲ್ಲ,
ನಾವೆಲ್ಲರೂ ಕೆಮ್ಮನ್ನು ಕಾಲಿಂಗ್‌ಬೆಲ್‌ನಂತೆ ಬಳಸಿದವರೇ. ‘ಕೃಷ್ಣೇ ಗೌಡನ ಆನೆ’ ನೀಳ್ಗತೆಯ ಆರಂಭದಲ್ಲಿ ತೇಜಸ್ವಿಯವರು ಅದನ್ನು ಕಣ್ಣಿಗೆ ಕಟ್ಟುವಂತೆ- ಅಲ್ಲ, ಕಿವಿಗಳಿಗೆ ಕೆಮ್ಮು ಕೇಳುವಂತೆ- ಬಣ್ಣಿಸಿದ್ದಾರೆ: ‘ಆವತ್ತು ಜೀಪಿನ ಅಡಿ ಬಿದ್ದುಕೊಂಡು ಅದರ ಗೇರ್ ಬಾಕ್ಸ್ ರಿಪೇರಿಯಲ್ಲಿ ತೊಡಗಿರಬೇಕಾದರೆ ಎರಡು ಖಾಕಿ ಪ್ಯಾಂಟ್ ಧಾರಿ ಕಾಲುಗಳು ನನ್ನತ್ತ ಬರುತ್ತಿರುವುದು ನನಗೆ ಜೀಪಿನ ಅಡಿಯಿಂದ ಕಾಣಿಸಿತು. ನನಗೆ ಪೊಲೀಸ್ ಡಿಪಾರ್ಟ್‌ಮೆಂಟ್ ಥಟ್ಟನೆ ಜ್ಞಾಪಕಕ್ಕೆ ಬಂದು ಗಾಬರಿಯಾದರೂ, ಅವು ಬೂಡ್ಸಿಲ್ಲದ ಕಾಲುಗಳಾದ್ದರಿಂದ ಬೇರೆ ಯಾವ ಡಿಪಾರ್ಟ್‌ಮೆಂಟಿನವು ಎಂದು
ಬೋಲ್ಟುಗಳನ್ನು ಬಿಚ್ಚುತ್ತಾ ಹಾಗೇ ಯೋಚಿಸಿದೆ.

ಬಂದಾತ ನಾನು ಜೀಪಿನ ಅಡಿ ಇದ್ದುದರಿಂದ ಅವನು ಬಂದುದನ್ನು ಗಮನಿಸಿಲ್ಲ ವೆಂದು ಬಗೆದು ಒಂದೆರಡು ಬಾರಿ ಕೆಮ್ಮಿದ. ನಮ್ಮ ಕಡೆ ಕೆಮ್ಮು
ಕಾಲಿಂಗ್‌ಬೆಲ್ ಇದ್ದಹಾಗೆ. ಮನೆಯಬಳಿ ಯಾರೂ ಕಣ್ಣಿಗೆ ಬೀಳದಿದ್ದರೆ ಕೆಮ್ಮಿ ಕ್ಯಾಕರಿಸಿ ಗಲಾಟೆ ಮಾಡುತ್ತಾರೆ. ಬಹುಶಃ ಭಾಷೆ ಉಪಯೋಗಿಸಿ ಕರೆಯಬೇಕೆಂದಾದರೆ ಕೆಲವು ತೊಂದರೆ ಗಳಿವೆ ಎಂದು ತೋರುತ್ತದೆ. ಮನೆಯವರ ಹೆಸರು ಏನು? ಹೆಸರು ಹಿಡಿದು ಕರೆಯಬೇಕೋ? ಸ್ವಾಮೀ ಎನ್ನ ಬೇಕೋ? ಬಹುವಚನ ಉಪಯೋಗಿಸಬೇಕೋ? ಏಕವಚನವೋ? ಭಾಷೆ ಉಪಯೋಗಿಸಿ ಕರೆಯಬೇಕೆಂದರೆ ಏನೆಲ್ಲ ಬಿಕ್ಕಟ್ಟುಗಳನ್ನು ಎದುರಿಸಬೇಕು. ಅದರ ಬದಲು ಒಂದೆರಡು ಸಾರಿ ಕೆಮ್ಮಿದರೆ ಈ ಎಲ್ಲ ತೊಂದರೆಗಳೇ ಇರುವುದಿಲ್ಲ. ಆದ್ದರಿಂದ ಬಂದವ ಮತ್ತೂ ಒಂದೆರಡು ಸಾರಿ ಕೆಮ್ಮಿದ.

ಹಾಗೆ ಗಮನ ಸೆಳೆಯಲಿಕ್ಕಾಗಿ ಹುಸಿಕೆಮ್ಮು ಪ್ರಯೋಗವನ್ನು ಹುಲುಮಾನವರಷ್ಟೇ ಮಾಡುವುದೂ ಅಲ್ಲ. ಜಗದೊಡೆಯ ಜಗದೀಶ್ವರನೂ ಅದೇ ಟೆಕ್ನಿಕ್ ಬಳಸುತ್ತಾನಂತೆ. ಅದು ಕನ್ನಡದ ಕವಿ ಹರಿಹರನ ಕಲ್ಪನೆ. ಹರಿಹರ ಬರೆದ ‘ನಂಬಿಯಣ್ಣನ ರಗಳೆ’ಯಲ್ಲಿ ನಂಬಿಯಣ್ಣನಿಗೆ ಆಗಲಿದ್ದ ಮದುವೆಯನ್ನು ತಪ್ಪಿಸಿ, ಆತ ಇನ್ನೊಬ್ಬಳನ್ನು ಲಗ್ನವಾಗುವಂತೆ ಮಾಡಬೇಕೆಂಬ ಉದ್ದೇಶದಿಂದ ಪರಶಿವನೇ ವೃದ್ಧ ಮಾಹೇಶ್ವರನ ವೇಷ ಧರಿಸಿ ಬರುವ ಸನ್ನಿವೇಶ ವೊಂದಿದೆ. ‘ಕಯ್ಯ ಕೊಡೆಯಿಂ, ಮಯ್ಯತೆರೆಯಿಂ, ಜೋಲ್ವಪುರ್ವಿಂ, ನೇಲ್ವ ತೋಳತೊವಲಿಂ, ಇಟ್ಟ ವಿಭೂತಿಯಿಂ, ಊರಿದ ಯಷ್ಟಿಯ ಕೋಲಿಂ, ಪಿಡಿದ ಕಮಂಡಲದಿಂಯಿಳಿದ ಬೆಳುಗಡ್ಡದಿಂ, ನಡುಗುವ ನರೆದಲೆಯಿಂ, ನರೆತು ಸಡಿಲ್ವ ಸರ್ವಾಂಗದಿಂ, ಪುಣ್ಯಂ ಪಣ್ಣಾದಂತೆ ಒಮ್ಮೊಮ್ಮೆ
ಕೆಮ್ಮುತ್ತೊಮ್ಮೊಮ್ಮೆ ಗೊಹೆಗೊಹೆಗುಟ್ಟುತುಂ ಶಿಥಿಲಾಕ್ಷರಂಗಳಿಂ ನಮಃಶಿವಾಯ ನಮಃಶಿವಾಯ ಯೆನುತ್ತೆನಲಾರದಂತೆ ನಡುಗುತ್ತುಂ ಹೊರಗೆ ನೆರೆದ ನೆರವಿಗಳೆಲ್ಲಂ ನೋಡುತ್ತಿರಲು ಮೆಲ್ಲಮೆಲ್ಲನೆ ಚಪ್ಪರದ ಬಾಗಿಲ್ಗೆ’ ಬಂದನಂತೆ ವೃದ್ಧಮಾಹೇಶ್ವರ.

ಹೊಸಗನ್ನಡದಲ್ಲಿ ಹೇಳುವುದಾರೆ- ಕೈಯಲ್ಲಿ ಕೊಡೆ, ಮೈತುಂಬ ಸುಕ್ಕು, ಜೋತಾಡುವ ಹುಬ್ಬು, ನೇತಾಡುವ ತೋಳಿನ ಚರ್ಮ, ಇಟ್ಟಿರುವ ವಿಭೂತಿ, ನೆಲಕ್ಕೆ ಊರಿದ ಊರುಗೋಲು, ಹಿಡಿದ ಕಮಂಡಲ, ಇಳಿಬಿಟ್ಟ ಬಿಳಿಯಗಡ್ಡ, ನಡುಗುವ ನರೆತ ತಲೆ, ನರೆತು ಹೋಗಿ ಸಡಿಲವಾಗಿರುವ ಸರ್ವಾಂಗದಿಂದ ಶಿಥಿಲವಾಗಿದ್ದ ವೃದ್ಧನು ಪುಣ್ಯವೇ ಹಣ್ಣಾದಂತೆ ಒಮ್ಮೊಮ್ಮೆ ಕೆಮ್ಮುತ್ತ, ಒಮ್ಮೊಮ್ಮೆ ಗೊರ್ ಗೊರ್ ಎಂದು ಶಬ್ದಮಾಡುತ್ತಾ, ತೊದಲುವ ಮಾತುಗಳಿಂದ ನಮಃಶಿವಾಯ ನಮಃಶಿವಾಯ ಎನ್ನುತ್ತಾ, ಎನ್ನಲಾರದಂತೆ ನಡುಗುತ್ತಾ, ಹೊರಗೆ ನೆರೆದಿದ್ದ ಜನರೆಲ್ಲಾ ನೋಡುತ್ತಿರಲು ಮದುವೆಚಪ್ಪರದ ಬಾಗಿಲಿಗೆ ಬಂದನಂತೆ.

ವಿವಾಹ ಮಂಟಪದೊಳಗೆ ಹೋಗುತ್ತಿರುವ ತನ್ನನ್ನು ಯಾರೂ ನೋಡದೆ ಇರುವುದನ್ನು ಕಂಡು ಶಿವನು ಮೆಲ್ಲಮೆಲ್ಲನೆ ನೋಡುತ್ತಾ, ಮನದೊಳಗೆ ನಗುತ್ತಾ, ಕೋಲನೂರಿಕೊಂಡು ಕೆಮ್ಮುತ್ತಾ ವಿವಾಹ ಮಂಟಪದ ಬಳಿ ಸಾಲಾಗಿ ಜೋಡಿಸಲಾಗಿದ್ದ ತುಪ್ಪದ ಕೊಡಗಳ ಮೇಲೆ ನಾಲ್ಕೆರಡನ್ನು ಎಡವಿ ದನಂತೆ. ನಮಃ ಶಿವಾಯ ಎಂಬ ವೃದ್ಧಧ್ವನಿ ಅವನ ಬಾಯಿಂದ ಬರುತ್ತಿದ್ದಂತೆ ಕೊಡಗಳ ಮೇಲೆ ಬಿದ್ದು ಅಲ್ಲಿ ಕುಳಿತಿದ್ದವರ ಮುಖಕ್ಕೆ, ಕಣ್ಣುಗಳಿಗೆ, ಮೈಯ ಮೇಲೆಲ್ಲ ತುಪ್ಪ ಚೆಲ್ಲಿತಂತೆ. ಎಲ್ಲರೂ ಗಾಬರಿಯಿಂದ ಎದ್ದು ಗುಂಪುಗೂಡಿ ದಡ್ಡನೆ ಬಿದ್ದ ವೃದ್ಧಮಾಹೇಶ್ವರನ ಸುತ್ತ ಸೇರಿದರಂತೆ.

ಎಂಬಲ್ಲಿಗೆ ಕೆಮ್ಮುಪುರಾಣ ಮುಗಿದುದು. ನಾಲ್ಕು ವರ್ಷಗಳ ಹಿಂದೆ ಕೋವಿಡ್‌ನ ಕರಾಳ ದಿನಗಳಲ್ಲಿ ಕೆಮ್ಮು ಕೇಳಿದೊಡನೆ ಮಾರುದೂರ ಹೋಗುತ್ತಿದ್ದ ನೀವು ಈ ಕೆಮ್ಮಿನ ಮೋಡಿಗೆ ಮಾರುಹೋದಿರಿ ಎಂದುಕೊಂಡಿದ್ದೇನೆ.