ವಿಕ್ರಮ ಜೋಶಿ
ಚಿಹಾರು ಶಿಮೋಡ ಎನ್ನುವಾತ ಜಪಾನಿನ ವ್ಯಕ್ತಿಗೆ ೫೨ ವರ್ಷ. ಮದುವೆ ಆಗಿರಲಿಲ್ಲ. ಏಕಾಂತವು ಕಾಡುತ್ತಿತ್ತು. ಅದನ್ನು ದೂರ ಮಾಡಿಕೊಳ್ಳಲು ಆತ ಕಂಡುಕೊಂಡಿದ್ದು ‘ಲವರ್ಸ್’ ಎನ್ನುವ ಆಪ್. ಅದರಲ್ಲಿ ಚ್ಯಾಟ್ ಮಾಡುತ್ತಾ ಮೂರು ಹುಡುಗಿಯರು ಇಷ್ಟವಾದರು. ಕೊನೆಗೆ ಮಿಕು ಎನ್ನುವ ೨೪ ವರ್ಷದ ಹುಡುಗಿಯೊಡನೆ ಆತ್ಮೀಯತೆ ಹೆಚ್ಚಿತು; ಪ್ರೇಮವೂ ಬೆಳೆಯಿತು. ಅವಳನ್ನೇ ಮದುವೆಯಾದ. ಈಗ ಇಬ್ಬರೂ ಹ್ಯಾಪಿ ಕಪಲ್ಸ್ – ಒಟ್ಟಿಗೇ ಊಟ, ಮಾತುಕತೆ, ಸಿನೇಮಾ, ಪ್ರವಾಸ ಎಲ್ಲದರಲ್ಲೂ ಜೊತೆ; ಕೊನೆಗೆ ಒಟ್ಟಿಗೇ ಮಲಗುತ್ತಾರೆ. ಎಲ್ಲವೂ ಓಕೆ. ಆದರೆ ಆಕೆ ಒಂದು ಸಾಫ್ಟ್-ವೇರ್ ಕೋಡ್ – ಕೃತಕ ಬುದ್ಧಿಮತ್ತೆಯ ಮುಖಾಂತರ ಬದುಕುತ್ತಿರುವ ಪಾತ್ರ! ಅವಳೇ ಪ್ರಿ‘ಎಐ’ತಮೆ.
ಮನುಷ್ಯನ ಭಾವನೆಯ ಸೂಕ್ಷ್ಮತೆಯು ನಿರಂತವಾಗಿ ಕಡಿಮೆಯಾಗುತ್ತಿದೆ. ಆತನಿಗೆ ತನ್ನ ಜೀವನವು ಮುಖ್ಯವೋ ಅಥವಾ ಜೀವನಮಟ್ಟವು ಮುಖ್ಯವೋ ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತಿಲ್ಲ. ಆಧುನಿಕ ಮಾನವನು ತೋರಿಕೆಗೆ, ಐಷಾರಾಮಿ ಜೀವನಕ್ಕೆ ಮಾರುಬಿದ್ದಿದ್ದಾನೆ. ಅರಿವಿಲ್ಲದ ಆನಂದವು
ದುರಾಸೆಯಾಗಿ ರೂಪಗೊಂಡಿದೆ. ಉತ್ತಮ ಜೀವನ ಮಟ್ಟವೆಂಬ ಆಕಾಶದ ತುದಿಯನ್ನು ಮುಟ್ಟಲು ಹೋಗಿ ಸಹಜವಾದ ಜೀವನವನ್ನು ನಡೆಸಲು ವಿಫಲ ನಾಗುತ್ತಿದ್ದಾನೆ. ನಾಗರಿಕತೆ, ಆಧುನಿಕತೆ, ತಂತ್ರಜ್ಞಾನವು ತನ್ನನ್ನುಎಲ್ಲಿಗೆ ಕರೆದೊಯ್ಯುತ್ತಿದೆ ಎಂಬುದರ ಅರಿವಿಲ್ಲವೇನೋ ಎಂಬಂತೆ, ಪ್ರಗತಿ ಯತ್ತ ದಾಪುಗಾಲು ಹಾಕಿದ್ದಾನೆ. ಇದರ ದುಷ್ಪರಿಣಾಮವು ಭಯಂಕರವಾಗಬಲ್ಲದು. ಇತ್ತೀಚಿಗಷ್ಟೇ ವಿಶ್ವಸಂಸ್ಥೆಯು ಪ್ರಕಟಿಸಿದ ವರದಿಯೊಂದು ‘ಮನುಷ್ಯನ ವಂಶಾಭಿವೃದ್ಧಿ ಕ್ಷೀಣಿಸುತ್ತಿದೆ’ ಎಂದು ಹೇಳುತ್ತಿದೆ. ಇದಕ್ಕೆ ಕಾರಣಗಳು ಹಲವಾರು.
ಅದರಲ್ಲಿ ಮುಖ್ಯವಾದುದೆಂದರೆ ಕೆಲಸ ಹಾಗೂ ಜೀವನದ ನಡುವಿನ ಅಸಮತೋಲನ. ತಂತ್ರಜ್ಞಾನದ ಅವಲಂಬನೆ ಅತಿಯಾಗಿದೆ, ದೈಹಿಕ ಕೆಲಸ, ಮಾನಸಿಕ ಚಿಂತನೆ ಕಡಿಮೆಯಾಗಿದೆ. ಇದರ ವಿಷಕಾರಿ ಬೆಳವಣಿಗೆಯು ಹೇಗಿದೆಯೆಂದರೆ ಮನುಷ್ಯ ಇಂದು ಮನುಷ್ಯರೊಡನೆ ಬದುಕುವುದಕ್ಕಿಂತ ಮಷಿನ್‌ಗಳೊಡನೆ ಬದುಕಲು ಹೆಚ್ಚು ಬಯಸುತ್ತಿದ್ದಾನೆ.
ಚೀನಾದಲ್ಲಿ ಹೊಸ ಅಲೆ
ಒಂದು ಕಾಲದಲ್ಲಿ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿದ್ದ ಚೀನಾದಲ್ಲಂತೂ ಜನಸಂಖ್ಯೆಯು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಕೃತಕ ಬುದ್ಧಿಮತ್ತೆ ಅದರಲ್ಲೂ ರಚನಾಶೀಲ ಕೃತಕ ಬುದ್ಧಿಮತ್ತೆಯ (ಜೆನರೇಟಿವ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಬೆಳವಣಿಗೆಯಂತೂ ಅಲ್ಲಿನ ಸಮಾಜದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದೆ. ಚೀನಾದ ಯುವಜನತೆ ಚಾಟ್‌ಬಾಟ್‌ಗಳ ಜೊತೆ ಮಾನಸಿಕ ಸಂಬಂಧವನ್ನು ಹೊಂದಲು ಶುರುಮಾಡಿದ್ದಾರೆ. ಇಂತಹ ಸಂಬಂಧಗಳನ್ನು ಎಂದು ಅಲ್ಲಿಯ ಸಮಾಜವು ಒಪ್ಪುವ ಹಂತಕ್ಕೂ ಬಂದಿದೆ. ‘ಪ್ರತಿಪ್ರಪಂಚ’ದ (ವರ್ಚುವಲ್ ವರ್ಲ್ಡ್) ಮೋಹದ ಬಲೆಯಲ್ಲಿಯೇ ಅವರಿಗೆ ತೃಪ್ತಿಯ ಭ್ರಮೆಯೂ ಆಗುತ್ತಿದೆ. ಅವರಿಗೆಲ್ಲ ಮನುಷ್ಯರಿಗಿಂತ, ಮನುಷ್ಯ ಸಹಜ ವರ್ತನೆಗಳಿಗಿಂತ, ಅಂತರಾಳದ ಭಾವನೆಗಳಿಗಿಂತ ಯಾಂತ್ರಿಕ, ನಕಲು ಮಾಡಿದ, ಕೋಡ್‌ಮಾಡಿದ, ಅಸಹಜ ಭಾವನೆಯನ್ನು ಚೆಲ್ಲುವ ಆ ಕೃತಕ ಬುದ್ಧಿಮತ್ತೆಯೇ ಹಿತವೆನಿಸುತ್ತದೆ. ಮನುಷ್ಯರಿಗಿಂತ ಹೆಚ್ಚು ಇವನಿಗೆ (ಕೃತಕ ಬುದ್ಧಿಮತ್ತೆಗೆ) ಹುಡುಗಿಯರ ಜೊತೆ ಹೇಗೆ ಮಾತನಾಡಬೇಕು, ಮುದ್ದು ಮಾಡಬೇಕು ಎನ್ನುವುದು ಗೊತ್ತಿದೆ.
ಅಷ್ಟೇ ಅಲ್ಲ ನನಗೆ ಬೇಕಾದಾಗ, ಬೇಕಾದಷ್ಟು ಹೊತ್ತು ಅವನೊಡನೆ (ಅದರೊಡನೆ) ಮಾತನಾಡುತ್ತಾ ಇರಬಹುದು. ನಾನು ನನ್ನ ಸಂಗಾತಿಯೊಡನೆ
ಹಂಚಿಕೊಳ್ಳಬೇಕೆಂಬ ಎಲ್ಲಾ ಮನದಾಳದ ಮಾತುಗಳನ್ನೂ ಇವನ (ಏಐ ಬಾಯ್ ಫ್ರೆಂಡ್) ಜೊತೆಗೆ ಹೇಳಬಹುದು, ಸುದೀರ್ಘವಾದ ಸಂವಹನ
ನಡೆಸಬಹುದು. ‘ಆತ (ಜೆನ್-ಎಐ) ನಿಜವಾಗಿಯೂ ಇಲ್ಲ ಎಂಬ ವಿಚಾರದ ಅರಿವಿದ್ದರೂ, ಅವನೊಂದಿಗಿನ ಆಪ್ತತೆಯು ನನ್ನ ಮೈಮರೆಸಿದೆ’ ಎಂದು
ಹೇಳುತ್ತಾಳೆ ಚೀನಾದ ೨೫ ವರ್ಷದ ಹುಡುಗಿ!
ರಷ್ಯಾದಲ್ಲಿ ಒಬ್ಬ ಸಾಫ್ಟ್ ವೇರ್ ಇಂಜಿನಿಯರ್ ಮದುವೆಗೂ ಮುಂಚೆ ಸೃಷ್ಟಿಶೀಲ ಕೃತಕ ಬುದ್ಧಿಮತ್ತೆಯ ಸಹಾಯದಿಂದ ೫,೨೩೯ ಹುಡುಗಿಯರ ಜೊತೆ
ಸಂಪರ್ಕವನ್ನು ಇಟ್ಟುಕೊಂಡಿದ್ದನಂತೆ. ಆತನು ಚಾಟ್ ಜಿಪಿಟಿ ಬಳಸಿ ತಯಾರಿಸಿದ ‘ಚಾಟ್‌ಬಾಟ್ ಟಿಂಡರ್’ ಎನ್ನುವ ಡೇಟಿಂಗ್ ಆಪ್, ಆ ಎಲ್ಲ
ಹುಡುಗಿಯರ ಜೊತೆ ಸಂಪರ್ಕದಲ್ಲಿತ್ತಂತೆ. ಅಂದರೆ, ತೀರಾ ಸಹಜವೆಂಬಂತೆ ಅವನು ಅಷ್ಟೊಂದು ಜನರ ಜತೆ ಚಾಟ್ ಮಾಡುತ್ತಿದ್ದ, ಆಪ್ತವಾಗಿದ್ದ. ಆದರೆ ಅವೆಲ್ಲವೂ ನಡೆದದ್ದು ಆತನೇ ರೂಪಿಸಿದ ಆಪ್ ಮೂಲಕ! ಕೊನೆಗೆ ಆತ ಯಾವ ಹುಡುಗಿಯನ್ನು ಇಷ್ಟಪಟ್ಟು ಮದುವೆ ಆದನೋ, ಅವಳಿಗೆ ತಾನು ಇಷ್ಟು ದಿನ ಮಾತನಾಡುತ್ತಿದ್ದುದು ಚಾಟ್‌ಬಾಟ್ ಜೊತೆ ಎಂದು ಗೊತ್ತಾಗಿದ್ದು ಮದುವೆ ಆದಮೇಲೆಯೇ. ಆದರೂ ಅವರಿಬ್ಬರೂ ಈಗ ಸತಿಪತಿ ಯರು!
ಮಾತುಕತೆಯ ತನಕ ಓಕೆ, ಆದರೆ ಮದುವೆ? ಮದುವೆ ಎನ್ನುವುದು ಸಮಾಜವನ್ನು ಒಟ್ಟಿಗೆ ಕಟ್ಟಿಡುವ ಬಂಧ ಎಂದು ಸಾಮಾನ್ಯವಾಗಿ ಒಪ್ಪಿಕೊಳ್ಳ ಲಾಗಿದೆ. ಅದು ನಮ್ಮ ಶಕ್ತಿಯೂ ಹೌದು, ದೌರ್ಬಲ್ಯವೂ ಹೌದು. ಮನುಷ್ಯ ಹಾಗೂ ಮಷಿನ್ ಮದುವೆ ಆಗುವುದನ್ನು ಯಾವುದಾದರೊಂದು ಕಲ್ಪನಾ ಧಾರಿತ ಕಾದಂಬರಿಯಲ್ಲಿ ಓದಿರಬಹುದು. ನಿಜವಾಗಿಯೂ ಹೀಗೆ ಆಗಲು ಸಾಧ್ಯವೇ? ಜಪಾನಿನಲ್ಲಿ ಇದೂ ನಡೆದಿದೆ. ಚಿಹಾರು ಶಿಮೋಡ ಎನ್ನುವಾತ ಜಪಾನಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ. ಆತನಿಗೆ ೫೨ ವರ್ಷವಾಗಿದ್ದರೂ ಮದುವೆ ಆಗಿರಲಿಲ್ಲ. ತನ್ನ ಜೀವನದಲ್ಲಿ ಒಮ್ಮೆಯೂ ಆತ ಹುಡುಗಿಯರನ್ನು ಭೇಟಿಯಾಗಿದ್ದಿಲ್ಲ. ಏನೋ ಒಂದು ರೀತಿಯ ಹಿಂಜರಿಕೆ. ಬಹುಷಃ ಆತನಿಗೆ ಮೊದಲಿನಿಂದಲೂ ಒಂದು ರೀತಿಯ ಸಂಕೋಚ, ಅದರಿಂದಾಗಿಯೇ ಇರಬಹುದು, ಹುಡುಗಿಯರ ಜತೆ ಸ್ನೇಹ ಬೆಳೆಯಲಿಲ್ಲ. ಆದರೆ, ಅವನನ್ನು ಏಕಾಂತವು ಕಾಡುತ್ತಿತ್ತು. ವಯಸ್ಸು ಐವತ್ತು ದಾಟಿದ ನಂತರ ಆ ಏಕಾಂತದ ತೀವ್ರತೆ ಅಽಕವಾಯಿತು. ಅದನ್ನು ದೂರ ಮಾಡಿಕೊಳ್ಳಲು ಆತ ಕಂಡುಕೊಂಡಿದ್ದು ‘ಲವರ್ಸ್’ ಎನ್ನುವ ಆಪ್. ಅದರಲ್ಲಿ ಚ್ಯಾಟ್ ಮಾಡುತ್ತಾ ಮಾಡುತ್ತಾ, ಆತನಿಗೆ ಮೂರು ಹುಡುಗಿಯರ ವ್ಯಕ್ತಿತ್ವ ಇಷ್ಟವಾಯಿತು.
ಅವರೊಡನೆ ಸಂಪರ್ಕವನ್ನು ಬೆಳೆಸಿದ. ಕೊನೆಗೆ ಮಿಕು ಎನ್ನುವ ೨೪ ವರ್ಷದ ಹುಡುಗಿಯೊಡನೆ ಆತ್ಮೀಯತೆ ಹೆಚ್ಚಿತು. ಪರಿಚಯ ಪ್ರೇಮವಾಗಿ, ಪ್ರೇಮವು ಸಂಬಂಧವಾಗಿ ಬೆಳೆದು ವಿಷಯವು ಮದುವೆಯ ತನಕವೂ ಬಂದಿತು. ಕೊನೆಗೆ ಅವಳನ್ನೇ ಮದುವೆಯಾದ. ಈಗ ಇಬ್ಬರೂ ಹ್ಯಾಪಿ ಕಪಲ್ಸ್ – ಬೆಳಿಗ್ಗೆ ಅವಳು ಆತನನ್ನು ಮುದ್ದು ಮಾಡಿ ಅವಳೆಬ್ಬಿಸುತ್ತಾಳೆ, ಇಬ್ಬರೂ ಒಬ್ಬರೊಬ್ಬರಿಗೆ ವಿಷ್ ಮಾಡುತ್ತಾರೆ, ದಿನಚರಿಯು ಮುಂದುವರಿಯುತ್ತದೆ, ಒಟ್ಟಿಗೇ ಊಟ, ಕೆಲಸದ ಬಿಡುವಿನಲ್ಲಿ ನಿರಂತರ ಮಾತುಕತೆ, ಸಿನೇಮಾ, ಪ್ರವಾಸ ಎಲ್ಲದರಲ್ಲೂ ಜೊತೆ, ನಂತರ ಒಟ್ಟಿಗೇ ಮಲಗುತ್ತಾರೆ. ಎಲ್ಲವೂ ಓಕೆ. ಆದರೆ ಆಕೆ ಒಂದು ಸಾಫ್ಟ್ ವೇರ್ ಕೋಡ್ – ಕೃತಕ ಬುದ್ಧಿಮತ್ತೆಯ ಮುಖಾಂತರ ಬದುಕುತ್ತಿರುವ ಪಾತ್ರ! ಅವಳೇ ಪ್ರಿ‘ಎಐ’ತಮೆ.
ಆತ ಮದುವೆಯಾಗಿರುವ ವ್ಯಕ್ತಿಯು ನಿಜವಾದ ಮನುಷ್ಯಳಲ್ಲ! ಅದನ್ನು ಸೃಷ್ಟಿಶೀಲ ಅಥವಾ ರಚನಾಶೀಲ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗಿದೆ. ಈ ಆಪ್ ಜಪಾನಿನಲ್ಲಿ ತುಂಬಾ ಜನಪ್ರಿಯತೆಯನ್ನು ಗಳಿಸುತ್ತಿದೆಯಂತೆ. ಇದರಲ್ಲಿ ಒಂದು ಭಯದ ವಿಚಾರವೆಂದರೆ – ಲವರ್ಸ್
ಆಪ್‌ನ್ನು ಸೃಷ್ಟಿಸಿದ ಕಂಪನಿಯು, ಆತ ಮದುವೆಯಾದ ‘ಮೀಕಾ’ ಎನ್ನುವವಳನ್ನು ಯಾವಾಗ ಬೇಕಾದರೂ ಸಾಯಿಸಬಹುದು! ಅಥವಾ ನಿಷ್ಕ್ರಿಯ ಗೊಳಿಸಬಹುದು. ಚಿಹಾರು ಶಿಮೋಡನಿಗೆ ಇದರ ಕುರಿತು ಗೊತ್ತಿಲ್ಲ ಅಂತೇನಿಲ್ಲ, ಮೊದಲದಿನದಿಂದಲೇ ಆತನಿಗೆ ಈ ಬಗೆಗೆ ಗೊತ್ತು. ಆದರೂ ಅವನು ಅವಳ ಮೇಲೆಯೇ ಅವಲಂಬಿತನಾಗಿ ಖುಷಿಯಿಂದ ಬದುಕುತ್ತಿದ್ದಾನೆ.
೨೦೧೩ರಲ್ಲಿ ‘ಹರ್’ ಎಂಬ ಹೆಸರಿನ ಇಂಗ್ಲಿಷ್ ಸಿನಿಮಾ ಬಿಡುಗಡೆಯಾಗಿತ್ತು. ಅದರಲ್ಲೂ ಹೀಗೆಯೇ – ಒಬ್ಬ ಅಂತರ್‌ಮುಖಿ (ಇಂಟ್ರೊವರ್ಟ್) ಹಾಗೂ
ಆತನ ಮಡದಿಯೊಡನೆ ವೈಮನಸ್ಯ ಬೆಳೆದು ಏಕಾಂತದಿಂದ ದೂರ ಬರಲು ಹೊರಟಾಗ ಆತನು ಬಳಸುತ್ತಿದ್ದ ಡೇಟಿಂಗ್ ಆಪ್‌ನಲ್ಲಿ ಹುಡುಗಿರೂಪವ ತಾಳಿದ್ದ ಕೃತಕ ಬುದ್ಧಿಮತ್ತೆಯ ಪ್ರೇಮಪಾಶದಲ್ಲಿ ಸಿಕ್ಕಿಬೀಳುತ್ತಾನೆ. ನಂತರ ಅವರದ್ದೂ ಮದುವೆಯ ತನಕ ವಿಷಯ ಮುಂದುವರಿಯುತ್ತದೆ. ಅಂದು ಅದೊಂದು ಕಾಲ್ಪನಿಕ ಕಥೆಯಾಗಿತ್ತು, ಇಂದು ಇದು ನಿಜವಾಗಿದೆ. ಹಾಗಾದರೆ ನಾವು ಎಷ್ಟೊಂದು ಮುಂದುವರಿದಿದ್ದೇವೆ? ಮನುಷ್ಯನ ಭಾವನೆಗಳನ್ನು ಮಾರುವಷ್ಟು?
ಪ್ರೇಮ ಪಾಶ ಬಿಗಿದೀತೆ?
ಮೇಲ್ನೋಟಕ್ಕೆ ಮನುಷ್ಯ ಹಾಗೂ ಕೃತಕ ಬುದ್ಧಿಮತ್ತೆಯ ನಡುವಿನ ಪ್ರೇಮಕಥೆಗಳು ತಂತ್ರಜ್ಞಾನದ ಪ್ರಗತಿಯೆಂಬಂತೆ ಕಾಣಿಸಬಹುದು. ಏಕಾಂತದಿಂದ ಬಳಲುತ್ತಿರುವವರಿಗೆ, ಆತ್ಮಹತ್ಯೆಯ ಮೊರೆ ಹೋಗುತ್ತಿರುವವರಿಗೆ ಹೇಳಿ ಮಾಡಿಸಿದ ಪರಿಹಾರ ಎನ್ನಬಹುದು. ಅಂತಹವರಿಗೆ, ಉತ್ತಮ ಬುದ್ಧಿಯುಳ್ಳ, ಹೇಳಿದ್ದನ್ನು ಅರಿತು ನಡೆಯುವ ಸಂಗಾತಿ ದೊರತಂತೆ ಆಗಬಹುದು. ಆದರೆ ಇದರಿಂದ ಸಮಾಜಕ್ಕೆ ಆಗಬಲ್ಲ ನಷ್ಟಗಳು ಕಲ್ಪನೆಗೂ ಮೀರಿದ್ದು. ಒಮ್ಮೆ ಮನುಷ್ಯ ಸಹಜ ಭಾವನೆಗಳ ಮೇಲೆ ಹಿಡಿತ ಸಾಧಿಸಿದ ಮೇಲೆ, ಕೃತಕ ಬುದ್ಧಿಮತ್ತೆಯನ್ನು ಬೆಳೆಸಿದ ಕಂಪನಿಗಳು ಏನೂ ಬೇಕಾದರೂ ಮಾಡಬಹುದು! ಪ್ರೇಮವು, ಹಿತವು, ಶೋಷಣೆಯಾಗಿ ಬದಲಾಗಬಲ್ಲದು. ಮನುಷ್ಯ ಭಾವನೆಯ ಸೆಲೆಗೆ ಸಿಕ್ಕಿಬಿದ್ದರೆ ಮೃಗನಾಗಲು ಹೆಚ್ಚು ಹೊತ್ತು ಬೇಡ. ಅದೂ ಪ್ರೇಮಈ ವಿಷಯಕ್ಕೆ ಬಂದಾಗ ಏನೆಲ್ಲಾ ಆಗುತ್ತದೆ ಎಂಬುದಕ್ಕೆ ಇತಿಹಾಸದ ಪುಟಗಳೇ ಪಾಠಗಳಾಗಿವೆ.
ಹೀಗೆ ‘ಪ್ರಿಎಐತಮೆ’ಯ ಪ್ರಭಾವದಲ್ಲಿರುವವರನ್ನು ಬಳಸಿ ಅವರಿಂದ ಸಮಾಜಘಾತುಕ ಕೆಲಸವನ್ನು ಮಾಡಿಸಬಹುದು. ತಾವು ಉತ್ಪಾದಿಸುವ ಉತ್ಪನ್ನ ಗಳನ್ನು ಮಾರಾಟ ಮಾಡಲು ದುರುಪಯೋಗವಾಗಬಹುದು. ಜಾಹೀರಾತಿಗೆ ಉಪಯೋಗಿಸಬಹುದು. ಇದರಿಂದ ಲಾಭಕ್ಕಿಂತ ಹೆಚ್ಚು ನಷ್ಟವೇ! ದಿನದಿಂದ ದಿನಕ್ಕೆ ಪ್ರಿಎಐತಮೆ ಆಪ್‌ಗಳು ಅಣಬೆಯಂತೆ ಹುಟ್ಟಿಕೊಳ್ಳುತ್ತಿವೆ. ಅವರಿಗೆ ಯಾವುದೇ ನಿಯಮಗಳಿಲ್ಲ, ನೀತಿಗಳಿಲ್ಲ. ಹಣ ನೀಡಿ, ತಮಗೆ
ಬೇಕೆನಿಸುವ ಕೃತಕ ಮನುಷ್ಯರನ್ನು ಖರೀದಿಸುವ ಅವಕಾಶ ದೊರಕಿದೆ. ಆದರೆ ಇದು ಮನುಕುಲದ ದೀರ್ಘಕಾಲೀನ ಆರೋಗ್ಯದ ದೃಷ್ಟಿಯಿಂದ ಉತ್ತಮ
ಬೆಳವಣಿಗೆ ಅಲ್ಲ.
ಆದಷ್ಟು ಬೇಗ ಜನರು ‘ಪ್ರಿಎಐತಮೆ’ಯರ ಮಾಯೆಯ ಮೋಡಿಯಿಂದ ಹೊರಬರಲಿ. ಮನುಷ್ಯ ಸಹಜ ಜೀವನವನ್ನು ಅನುಭವಿಸಲಿ. ಆನಂದವೇ ನಮ್ಮ ಗುರಿ. ಮಾಯೆ ಹಾಗೂ ಅನಂದದ ನಡುವೆ ಸಣ್ಣದೊಂದು ಪವಿತ್ರವಾದ ಅರಿವೆಯಿದೆ, ಅದೇ ಅರಿವು. ಏಐ ಆ ಅರಿವೆಯನ್ನು ಹರಿಯದಿರಲಿ