Saturday, 14th December 2024

ದಲಿತರ ಅನುದಾನ ಬೇರೆ ಯೋಜನೆಗಳಿಗೆ ಬಳಕೆ: ಖಂಡನೆ 

ತುಮಕೂರು: ದಲಿತರಾಮಯ್ಯ ಎಂದು ಹೇಳಿಕೊಂಡು ದಲಿತರಿಗೆ ಮೀಸಲಿಟ್ಟ ಅನುದಾನವನ್ನು ಸಿದ್ದರಾಮಯ್ಯ ಅವರು ಬೇರೆ ಯೋಜನೆಗಳಿಗೆ ಉಪಯೋಗಿಸುತ್ತಿದ್ದಾರೆ ಎಂದು ಅಹಿಂದ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಭಾಸ್ಕರ್  ಪ್ರಸಾದ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಡಾದಲ್ಲಿ ಸಿದ್ದರಾಮಯ್ಯ ಕುಟುಂಬದ ವೈಯಕ್ತಿಕ ಹಗರಣ, ಆದರೆ ಅದಕ್ಕಿಂತಲೂ ಹೆಚ್ಚಿನ ಹಗರಣಗಳು ದಲಿತರ ಹೆಸರಿನಲ್ಲಿ ನಡೆದಿವೆ. ಹಾಗಾಗಿ ಅಹಿಂದ ಸಂಘಟನೆಗಳ ಒಕ್ಕೂಟದಿಂದ ಆ. 28 ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಹಠಾವೋ ದಲಿತ ಬಚಾವೋ ಎಂಬ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಅಹಿಂದ ಸಂಘಟನೆಗಳ ಒಕ್ಕೂಟದ ಸಂಚಾಲಕ ಪ್ರೊ. ಹರಿರಾಮ್ ಮಾತನಾಡಿ ಸಿದ್ದರಾಮಯ್ಯ ದಲಿತರ ಪಾಲಿಗೆ ಅನ್ನರಾಮಯ್ಯ ಅಲ್ಲ, ಕನ್ನರಾಮಯ್ಯ. ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಸಿಯುತ್ತಿದ್ದಾರೆ. ಸೂಕ್ತವಾದ ನಾಯಕತ್ವ ಬೇಕು ಎಂದು ಒಂದು ವರ್ಷದ ಕಾಲ ದಲಿತ ಹಿಂದುಳಿದ ಸಂಘಟನೆಗಳು ಕಾಂಗ್ರೆಸ್ ಅಧಿಕಾರಕ್ಕೆ ಬರಲು ಶ್ರಮಿಸಿದೆ. ದಲಿತ ವಿದ್ಯಾರ್ಥಿಗಳಿಗೆ ಕೊಡುತ್ತಿದ್ದ ವಿದ್ಯಾರ್ಥಿ ವೇತನ ನಿಲ್ಲಿಸಿದರು. ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ವಿರುದ್ಧ ಬಿಜೆಪಿ ಪಕ್ಷ ತಂದಿದ್ದ ಹಲವು ಕಾಯ್ದೆಗಳನ್ನು ವಾಪಸ್ ಪಡೆಯುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಸರ್ಕಾರ ಅತ್ತ ತಿರುಗಿಯೂ ನೋಡಿಲ್ಲ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಅಹಿಂದ ಸಂಘಟನೆಗಳ ಒಕ್ಕೂಟದ ಶಂಕರ್ ಲಿಂಗಯ್ಯ, ಶ್ರೀನಿವಾಸಮೂರ್ತಿ, ಸಿದ್ದಾಪುರ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.