Saturday, 23rd November 2024

ಪ್ರಾಸಿಕ್ಯೂಷನ್ ಅಸ್ತ್ರ ಗಾಳಿಯಿಲ್ಲದ ಬಲೂನ್ ?

ಸಿಎಂ ವಿರುದ್ಧ ತನಿಖೆಗೆ ಮಾತ್ರ ಸದ್ಯಕ್ಕೆ ಸಿಕ್ಕಿರುವ ಆದೇಶ

ನ್ಯಾಯಾಲಯದ ಮೊರೆ ಹೋಗಲು ಹಲವು ಅವಕಾಶ

ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದು ರಾಜ್ಯ, ರಾಷ್ಟ್ರ ರಾಜಕೀಯದಲ್ಲಿ ಭಾರಿ ವಿವಾದ, ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಆದರೆ ಕಾನೂನಾತ್ಮಕವಾಗಿ ಈ ಪ್ರಕರಣವನ್ನು ಗಮನಿಸಿದಾಗ, ಅಭಿಯೋಜನೆ ಎನ್ನುವುದು ‘ಗಾಳಿಯಿಲ್ಲದ ಬಲೂನಿನ ರೀತಿಯಾಗುವುದೇ?’ ಎನ್ನುವ ಅನುಮಾನಗಳು ಶುರುವಾಗಿದೆ.

ಹೌದು, ಆರಂಭದಲ್ಲಿ ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ‘ಉರುಳಾಗುವ’ ಸಾಧ್ಯತೆಯಿದೆ ಎನ್ನಲಾಗಿತ್ತು. ಆದರೆ ಇದೀಗ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಆದೇಶವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಯಾವುದೇ ‘ಪ್ರಬಲ’ ಕಾಯಿದೆ ಅಥವಾ ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ಅವಕಾಶ ನೀಡಿಲ್ಲ. ಬದಲಿಗೆ, ಖಾಸಗಿ ದೂರನ್ನೇ ಮುಂದಿಟ್ಟುಕೊಂಡು ಅಭಿಯೋಜನೆಗೆ ಅವಕಾಶ ನೀಡಿರುವುದು ನ್ಯಾಯಾಂಗ ದಲ್ಲಿ ಎಷ್ಟರ ಮಟ್ಟಿಗೆ ನಿಲ್ಲಲಿದೆ ಎನ್ನುವುದು ಕಾನೂನು ತಜ್ಞರ ಮುಂದಿರುವ ಬಹುದೊಡ್ಡ ಪ್ರಶ್ನೆಯಾಗಿದೆ.

ಅಭಿಯೋಜನೆಗೆ ರಾಜ್ಯಪಾಲರು ಅವಕಾಶ ನೀಡಿರುವುದು ತನಿಖೆ ನಡೆಸುವುದಕ್ಕೆ ಹೊರತು, ವಿಚಾರಣೆ ಅಥವಾ ಎಫ್ ಐಆರ್ ದಾಖಲಿಸುವುದಕ್ಕೆ
ಅಲ್ಲ. ಆದ್ದರಿಂದ ಇದೀಗ ಒಂದು ವೇಳೆ ತನಿಖೆ ನಡೆಸಿದರೂ ಯಾವ ಸಂಸ್ಥೆಯಿಂದ ನಡೆಸಬೇಕು? ಯಾವ ರೀತಿಯಲ್ಲಿ ನಡೆಸಬೇಕು ಎನ್ನುವ ಬಗ್ಗೆ
ನ್ಯಾಯಾಲಯವೇ ತೀರ್ಮಾನಿಸ ಬೇಕಿದೆ. ಆದ್ದರಿಂದ ನ್ಯಾಯಾಲಯದ ತೀರ್ಪುನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಎಲ್ಲ ಅವಕಾಶಗಳು ಇರುವುದರಿಂದ ವರ್ಷಗಳು ಹಿಡಿಯುವ ಸಾಧ್ಯತೆ ಇದೆ. ಇನ್ನು ಕಾನೂನು ತಜ್ಞರ ಹಾಗೂ ಇತರೆ ರಾಜ್ಯಗಳಲ್ಲಿ ರಾಜ್ಯಪಾಲರು ನಡೆದುಕೊಂಡಿರುವ ನಡಾವಳಿ ಯನ್ನು ಗಮನಿಸಿದರೆ, ತನಿಖೆಗೆ ಅನುಮತಿ ನೀಡುವುದರೊಂದಿಗೆ ಯಾವ ಸಂಸ್ಥೆಯಿಂದ ತನಿಖೆ ನಡೆಸಬೇಕು ಎನ್ನುವ ಬಗ್ಗೆಯೂ ಸ್ಪಷ್ಟ ಸೂಚನೆ ನೀಡಬೇಕು.

ಆದರೆ ಈ ಪ್ರಕರಣದಲ್ಲಿ ರಾಜ್ಯಪಾಲರು, ಸ್ಪಷ್ಟವಾಗಿ ಹೇಳಿಲ್ಲ. ಯಾವ ಕಾರಣಕ್ಕೆ ಅನುಮತಿ ನೀಡಲಾಗಿದೆ ಎನ್ನುವುದನ್ನೂ ಸ್ಪಷ್ಟಪಡಿಸಿಲ್ಲ. ಆದ್ದರಿಂದ ಸಿಎಂಗೆ ಬಹುದೊಡ್ಡ ಸಮಸ್ಯೆಯಾಗು ವುದಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ. ಸುದೀರ್ಘ ಪ್ರಕ್ರಿಯೆ: ಈ ಎಲ್ಲವನ್ನೂ ಮೀರಿ ಒಂದು ವೇಳೆ ತನಿಖೆಗೆ ನ್ಯಾಯಾಲಯ ಅನುಮತಿ ನೀಡಿದರೂ ಆ ತನಿಖೆ ಮುಗಿಯುವುದಕ್ಕೆ ವರ್ಷಗಟ್ಟಲೇ ಕಾಯ ಬೇಕು. ಕಾನೂನು ಪ್ರಕ್ರಿಯೆಗೆ ಒಂದೆರೆಡು ವರ್ಷ ಹೋದರೆ, ತನಿಖೆಗೆ ಒಂದೆರೆಡು ವರ್ಷ ಹೋಗುವ ಸಾಧ್ಯತೆಯಿದೆ. ಆದ್ದರಿಂದ ಬಿಜೆಪಿ-ಜೆಡಿಎಸ್ ನಾಯಕರು ಹೇಳುತ್ತಿರು ವಂತೆ ಶೀಘ್ರದಲ್ಲಿಯೇ ಸಿದ್ದರಾಮಯ್ಯ ಅವರಿಗೆ ಯಾವುದೇ ಆಪತ್ತಿಲ್ಲ ಎಂದು ಕಾನೂನು ತಜ್ಞರು ಹೇಳಿದ್ದಾರೆ.