Saturday, 23rd November 2024

ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಕೊಪ್ಪಳ: ನಗರದ ಅಶೋಕ ವೃತ್ತದಲ್ಲಿ, ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅವಕಾಶ ನೀಡಿದ ರಾಜ್ಯಪಾಲರ ನಡೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪ್ರತಿಭಟಿಸಿದರು.

ಅಶೋಕ ವೃತ್ತದಲ್ಲಿ ಸುಮಾರು 11.30ಕ್ಕೆ ಜಾಮಾಯಿಸಿದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಿದ್ದರಾಮಯ್ಯ ಅಭಿಮಾನಿಗಳು ಕರ್ನಾಟಕ ರಾಜ್ಯಪಾಲ, ಕೇಂದ್ರ ಸಚಿವರಾದ ಕುಮಾರಸ್ವಾಮಿ, ಅಮಿತ ಶಾ ವಿರುದ್ಧ ಘೋಷಣೆ ಕೂಗಿದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಮತ್ತು ಕಾಂಗ್ರೆಸ್ ಪಕ್ಷದ ಪರ ಘೋಷಣೆ ಕೂಗಿದರು. ರಾಜ್ಯಪಾಲರು ಸೇರಿ ಭ್ರಷ್ಟಾಚಾರ ಆರೋಪ ‌ಇರುವ ಬಿಜೆಪಿ ಸಚಿವರ ಫೋಟೊ‌ ಹೊಂದಿರುವ ಭಿತ್ತಿ ಪತ್ರಕ್ಕೆ ಚಪ್ಪಲಿಯಿಂದ ಹೊಡೆದು, ಆಕ್ರೋಶ ಹೊರ ಹಾಕಿದರು. ಅಶೋಕ ವೃತ್ತದಲ್ಲಿ ಸಾವಿರಾರು ಜನ ಜಮಾಯಿಸಿ, ಸುಮಾರು 1 ಗಂಟೆಗೂ ಹೆಚ್ಚು ಕಾಲ ಪ್ರತಿಭಟಿಸಿದರು. ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸುಗಮ ಸಂಚಾರಕ್ಕೆ ಸಮಸ್ಯೆ ಉಂಟಾಯಿತು. ಟ್ರಾಫಿಕ್ ಜಾಮ್ ಆಗಿ, ವಾಹನ ಚಾಲಕರು ಪರದಾಡಿದರು.

ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆಗೆ ಕರೆ ನೀಡಿದ್ದ ಹಿನ್ನೆಲೆ ಪೊಲೀಸ್ ಇಲಾಖೆ ಭಾರಿ ಪ್ರಮಾಣದಲ್ಲಿ ಬಂದೋಬಸ್ತ್ ಒದಗಿಸಿತ್ತು. ಎಎಸ್ಪಿ ಹೇಮಂತ ಕುಮಾರ, ಡಿವೈಎಸ್ಪಿ ಮುತ್ತಣ್ಣ ಸವರಗೋಳ ಸ್ಥಳದಲ್ಲೇ ಇದ್ದು ಬಂದೋಬಸ್ತ ಒದಗಿಸಿದರು. ಒಂದು ಕೆಎಸ್ಆರ್ ಪಿ, ಒಂದು ಡಿಆರ್ ತುಕಡಿಯನ್ನು ಬಂದೋ ಬಸ್ತ್ ಗೆ ನಿಯೋಜನೆ ಮಾಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇ ಗೌಡ ಭಯ್ಯಾಪೂರ,‌ ಶಾಸಕ ರಾಘವೇಂದ್ರ ಹಿಟ್ನಾಳ ಭಾಗವಹಿಸಿದ್ದರು.