Saturday, 23rd November 2024

ನನ್ನ ರಾಜಕೀಯ ಜೀವನಕ್ಕೆ ತಿರುವು ನೀಡಿದ್ದೇ ಹೆಗಡೆ

ramakrishanhegde

ಸಿದ್ದರಾಮಯ್ಯ, ಮುಖ್ಯಮಂತ್ರಿ

ಗಾಂಧಿ- ನೆಹರು, ವಿನೋಬಾಜಿ ಹಾಗೂ ಅವರ ಅಕ್ಕ ಮಹಾದೇವಿಯವರ ಪ್ರೇರಣೆಯಿಂದ ಸದಾ ಅಭಿವೃದ್ಧಿ- ಜನಹಿತದ ಚಿಂತನೆ ಮಾಡಿದ ಹೆಗಡೆಯವರು ತಮ್ಮ ರಾಜಕೀಯ ಜೀವನದ ಏಳು-ಬೀಳುಗಳನ್ನು ಸಮಚಿತ್ತದಿಂದ ಸ್ವೀಕರಿಸಿದರು. ಮೌಲ್ಯಾಧಾರಿತ ರಾಜಕಾರಣಿ ಎಂದೇ ಜನಜನಿತರಾದರು. ಅವರ ಒಡನಾಡಿಯಾಗಿ, ಅವರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುವ ಅವಕಾಶ ನನಗೆ ದೊರಕಿದ್ದು, ಮುಂದೆ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲು ಬುನಾದಿಯಾಗಿತ್ತು. ಅವರ ಜನ್ಮದಿನವಾದ ಇಂದು ಅವರ ನಡೆ-ನುಡಿಗಳನ್ನು ನಾವು ಹೆಮ್ಮೆಯಿಂದ ಹಾಗೂ ಕೃತಜ್ಞತೆ ಯಿಂದ ಸ್ಮರಿಸುವುದೇ ಅವರಿಗೆ ನೀಡುವ ನಿಜವಾದ ಗೌರವ. ಕರ್ನಾಟಕದ ಇತಿಹಾಸದ ಪುಟಗಳಲ್ಲಿ ಅವರೂ ಒಂದು ಪ್ರಮುಖ ಅಧ್ಯಾಯವಾಗಿದ್ದಾರೆ ಎಂಬುದೇ ಹೆಮ್ಮೆ ಮೌಲ್ಯಾಧಾರಿತ ರಾಜಕಾರಣಿ ರಾಮಕೃಷ್ಣ ಹೆಗಡೆ ಜನ್ಮದಿನ ನಿಮಿತ್ತ ಸಿಎಂ ವಿಶೇಷ ಲೇಖನ.

ರಾಮಕೃಷ್ಣ ಹೆಗಡೆ ಈ ದೇಶ ಕಂಡ ಅತ್ಯಂತ ಪ್ರಗತಿಪರ, ಜನಾನುರಾಗಿ ರಾಜಕಾರಣಿಗಳಲ್ಲಿ ಒಬ್ಬರು. ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಹೊಸ ಆಯಾಮ ನೀಡಿದ ದಕ್ಷ ಆಡಳಿತಗಾರ. ನನ್ನ ರಾಜಕೀಯ ಬದುಕಿಗೆ ಹೊಸ ತಿರುವು ನೀಡಿದವರೂ ಇದೇ ಹೆಗಡೆಯವರು ಎಂಬುದನ್ನು ನಾನು ಕೃತಜ್ಞತೆಯಿಂದ ಸ್ಮರಿಸುತ್ತೇನೆ. ಪಾಂಡಿತ್ಯ, ಚಾಣಾಕ್ಷತೆ, ಪ್ರಾಮಾಣಿಕತೆ ಹಾಗೂ  ಜನಪರ ಕಾಳಜಿ ಮೇಳೈಸಿದ ದೂರದೃಷ್ಟಿಯುಳ್ಳ ವ್ಯಕ್ತಿತ್ವ ಅವರದಾಗಿತ್ತು. ಖ್ಯಾತ ಅಂಕಣಕಾರ ಎಚ್ಚೆಸ್ಕೆ ಅವರು ಹೇಳುವಂತೆ ರಾಮಕೃಷ್ಣ ಹೆಗಡೆ ಎಂದೊಡನೆ ನಮಗೆ ನೆನಪಾಗುವುದೆಂದರೆ ರಾಜ್ಯದ ಹಣಕಾಸು. ಅದಕ್ಕೆ ಸಂಬಂಧಿಸಿದಂತೆ ಅವರು ಸಾದರಪಡಿಸಿದ್ದು
ಕೌಶಲ, ಬುದ್ಧಿಯ ಚಮತ್ಕಾರ, ವಿವೇಕದ ಚಪ್ಪರ; ಜೊತೆ ಜೊತೆಗೆ ರಾಜ್ಯದ ಭವಿಷ್ಯದ ಬಗ್ಗೆ ಕಾತರ ಬೆರೆತ ಆಶಾವಾದ.

ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಹಿನ್ನೆಲೆಯಿಂದ ಬಂದ ಹೆಗಡೆಯವರು ವಿದ್ಯಾರ್ಥಿ ದೆಸೆ ಯಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ದವರು. ವಿನೋಬಾ ಭಾವೆಯವರ ಆಶ್ರಮವಾಸ, ಬನಾರಸ್
ಹಾಗೂ ಲಕ್ನೋದ ವಿದ್ಯಾರ್ಥಿ ಜೀವನ ಅವರ ದಾರ್ಶನಿಕತೆ, ತತ್ವಾದರ್ಶಗಳಿಗೆ ಸಾಣೆ ಹಿಡಿದವು. ಯುವ ವಕೀಲನಾಗಿದ್ದಾಗಲೇ ರಾಜಕಾರಣ ಪ್ರವೇಶಿಸಿ, ಎಸ್. ನಿಜಲಿಂಗಪ್ಪನವರ ಗರಡಿಯಲ್ಲಿ ಪಳಗಿದವರು. ಯೋಜನಾ ಖಾತೆಯ ಉಪ ಸಚಿವರಾದ ಅವರು ನಂತರ ಎಸ್. ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲರ ಸಚಿವ ಸಂಪುಟದಲ್ಲಿ ಯುವಜನ ಸೇವೆ ಮತ್ತು ಕ್ರೀಡೆ, ಸಹಕಾರ, ಕೈಗಾರಿಕೆ, ಯೋಜನೆ, ಗ್ರಾಮೀಣಾಭಿ ವೃದ್ಧಿ ಮತ್ತು ಪಂಚಾಯತ್ ರಾಜ, ವಾರ್ತಾ ಮತ್ತು ಪ್ರಚಾರ ಹಾಗೂ ಹಣಕಾಸು ಸಚಿವರಾಗಿ ಕಾರ್ಯನಿರ್ವಹಣೆ ಮಾಡಿ ದಕ್ಷ ಆಡಳಿತಗಾರರೆನಿಸಿಕೊಂಡವರು. ಮುಂದೆ ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ಕೇಂದ್ರ ಸಚಿವರಾಗಿ ಅವರ ಕಾರ್ಯನಿರ್ವಹಣೆ ಮೆಚ್ಚುಗೆ ಗಳಿಸಿತು.

೧೯೮೩ರಿಂದ ೮೮ರ ನಡುವೆ ಕರ್ನಾಟಕದ ಮೊದಲ ಕಾಂ ಗ್ರೆಸ್ಸೇತರ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಕನ್ನಡ ಕಾವಲು ಸಮಿತಿಯನ್ನು ರಚಿಸಿ, ಕರ್ನಾಟಕದಲ್ಲಿ ಕನ್ನಡಕ್ಕೇ ಮೊದಲ ಆದ್ಯತೆ ಎಂಬ ದಿಟ್ಟ ಸಂದೇಶ ನೀಡಿದರು. ಮೊದಲ ಬಾರಿಗೆ ವಿಧಾನ ಸಭೆ ಪ್ರವೇಶಿಸಿದ ನನಗೆ ಈ ಸಮಿತಿಯ ಅಧ್ಯಕ್ಷ ಸ್ಥಾನ ನೀಡಿದ್ದು ನನ್ನ ರಾಜಕಾರಣದ ಬದುಕಿಗೆ ಹೊಸ ತಿರುವು ನೀಡಿತು. ನಂತರ ಪಶು ಸಂಗೋಪನೆ, ರೇಷ್ಮೆ, ಸಾರಿಗೆ ಮೊದಲಾದ ಖಾತೆಗಳ ಹೊಣೆಗಾರಿಕೆಯನ್ನೂ ವಹಿಸಿದ್ದು, ಆಡಳಿತದಲ್ಲಿ ಹೆಚ್ಚಿನ ಅನುಭವ ನೀಡಿತು. ಅವರು ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳ ಕಾರ್ಯನಿರ್ವಹಣೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು.

ಅನವಶ್ಯಕ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಮಾರ್ಗದರ್ಶನ ಮಾಡುತ್ತಿದ್ದರು. ಅವರ ಈ ಕಾರ್ಯವೈಖರಿ ಸಚಿವರ ಉತ್ಸಾಹ ಹೆಚ್ಚಿಸಲು, ಆತ್ಮವಿಶ್ವಾಸ ಮೂಡಿಸಲು ಕಾರಣವಾಗಿತ್ತು. ಅತಿ ಹೆಚ್ಚು ಅಂದರೆ ೧೩ ಬಜೆಟ್ ಮಂಡಿಸಿದ ರಾಮಕೃಷ್ಣ ಹೆಗಡೆಯವರ ದಾಖಲೆಯನ್ನು ಮುರಿಯುವ ಸುಯೋಗ ನನ್ನದಾಗಿದ್ದು, ಹಣಕಾಸು ಇಲಾಖೆಯ ನಿರ್ವಹಣೆಯಲ್ಲಿ ನನಗೆ ಪ್ರೇರಣಾ ಶಕ್ತಿಯಾಗಿದ್ದು, ಹೆಗಡೆಯವರೇ ಎಂಬುದನ್ನು ಮರೆಯುವಂತಿಲ್ಲ. ಪಂಚಾಯತ್ ರಾಜ್ ವ್ಯವಸ್ಥೆ ಮೊದಲಿಗೆ ಜಾರಿಗೆ ಬಂದಿದ್ದು ನಮ್ಮ ರಾಜ್ಯದಲ್ಲಿ, ಅದೂ ಹೆಗಡೆಯವರ ಅವಧಿಯಲ್ಲಿ. ಮುಂದೆ ರಾಜೀವ್ ಗಾಂಧಿಯವರು ಸಂವಿಧಾನದ ೭೩ ನೇ ತಿದ್ದುಪಡಿಯ ಮೂಲಕ ಇದನ್ನು ರಾಷ್ಟ್ರವ್ಯಾಪಿ ಜಾರಿಗೊಳಿಸಿದರು. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಅತ್ಯಂತ ಸಶಕ್ತ ವ್ಯವಸ್ಥೆಯಾಗಿ ರೂಪಿಸಲು ಭದ್ರ ಬುನಾದಿಯನ್ನು ಅವರು ಹಾಕಿದರು. ೧೯೮೭ ರ ಜನವರಿ ೩೧ ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಮೊದಲನೆಯ ಜಿ ಪರಿಷತ್ ಮತ್ತು ಮಂಡಲ ಪಂಚಾಯಿತಿ ಸದಸ್ಯರ ಸಮಾವೇಶದಲ್ಲಿ ಅವರು ಆಡಿದ ನುಡಿಗಳು, ಆಡಳಿತ ವಿಕೇಂದ್ರೀಕರಣದ ಆಶಯವನ್ನೇ ಬಿಂಬಿಸುತ್ತಿತ್ತು. ಮುಖ್ಯಮಂತ್ರಿಗಳು ಮತ್ತು ಜಿ ಪರಿಷತ್ತು ಅಧ್ಯಕ್ಷರು ಒಂದೇ ಕೆಲಸ ಮಾಡತಕ್ಕಂತವರು.

ಮಂತ್ರಿಗಳು, ಶಾಸಕರು ಮತ್ತು ಇಷ್ಟು ಅಸಂಖ್ಯಾತ ಸಂಖ್ಯೆಯಲ್ಲಿ ಆರಿಸಿ ಬಂದಿರುವ ನೀವೆಲ್ಲ, ಒಂದೇ ಕೆಲಸ ಮಾಡತಕ್ಕಂತವರು ಎಂಬ ಅವರ ನುಡಿಗಳು ಪಂಚಾಯತ್ ರಾಜ್ ವ್ಯವಸ್ಥೆಗೆ ಘನತೆ ತರುವಂತಹ
ಮಾತುಗಳು. ಅಧಿಕಾರ ವಿಕೇಂದ್ರೀಕರಣದ ವಿರೋಧಿಗಳಿಗಳಿಗೆ ಅವರು ನೀಡುತ್ತಿದ್ದ ಉತ್ತರ, ‘ ದುಡ್ಡನ್ನು ಖರ್ಚು ಮಾಡುವ ಅಧಿಕಾರ ಮತ್ತು ಗುತ್ತಿಗೆ ನಗರದ ಜನರಿಗೆ ಮಾತ್ರವೇ ಇಲ್ಲ. ನೀವು ನಮ್ಮ ಮಾಲೀಕರು, ಪ್ರಭುಗಳು, ನೀವು ಆರಿಸಿ ಬಂದ ಮೇಲೆ ನಮ್ಮ ರಾಜಧಾನಿ ಹೇಗಿದೆ’ ಎಂದು ಬಂದು ನೋಡಬೇಕಾಗಿ ಬಂತು. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಶೇ. ೨೫ ರಷ್ಟನ್ನು ಕಾಯ್ದಿರಿಸಿದ್ದು, ಮಹಿಳೆಯರು ಹಾಗೂ ದುರ್ಬಲ ವರ್ಗದವರ ಸಬಲೀಕರಣದ ಅವರ ಆಶಯಕ್ಕೆ ನಿದರ್ಶನವಾಗಿದೆ.

ಆದರೆ ಅಭಿವೃದ್ಧಿಯಲ್ಲಿ ರಾಜಕೀಯ ಬೆರೆಸಬಾರದು ಎಂಬ ಅವರ ನಿಲುವಿನಿಂದಾಗಿ ಪಂಚಾಯತ್ ರಾಜ್ ವ್ಯವಸ್ಥೆ ಇಂದಿಗೂ ಪಕ್ಷಾತೀತವಾಗಿ ಉಳಿದಿದೆ. ಎಲ್ಲಿಯವರೆಗೆ ರಾಜಕೀಯವನ್ನು ಪ್ರತಿಯೊಂದು ಕ್ಷೇತ್ರದಲ್ಲಿ
ಬೆರೆಸುತ್ತೇವೋ, ಪಕ್ಷದ ವಾತಾವರಣವನ್ನು ಉಂಟು ಮಾಡುತ್ತೇವೋ, ಅಲ್ಲಿಯವರೆಗೂ ನಾವು ದೇಶದ ಪ್ರಗತಿಯನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಅವರು ಭಾವಿಸಿದ್ದರು. ಅವರ ಈ ಚಿಂತನೆ ಇಂದಿನ ತಲೆಮಾರಿನ
ರಾಜಕಾರಣಿಗಳು ಅತಿ ಜರೂರಾಗಿ ಅರ್ಥೈಸಿಕೊಳ್ಳುವ ಅಗತ್ಯವಿದೆ. ಜನಹಿತಕ್ಕಾಗಿ ಆಡಳಿತದಲ್ಲಿ ಪ್ರಯೋಗಶೀಲತೆಯನ್ನು ಅಳವಡಿಸಿಕೊಂಡ ಅಪರೂಪದ ರಾಜಕಾರಣಿ ರಾಮಕೃಷ್ಣ ಹೆಗಡೆ. ಉತ್ತರ ಕನ್ನಡದ
ವೈವಿಧ್ಯಮಯ ಪರಿಸರದಿಂದ ಬಂದ ಹೆಗಡೆಯವರ ಪರಿಸರ ಕಾಳಜಿಯ ಫಲವಾಗಿಯೇ ಹಸಿರು ಪಟ್ಟಿ ವಲಯ ಸೃಷ್ಟಿಯಾಯಿತು. ಬೆಂಗಳೂರು ನಗರದ ಉದ್ಯಾನ ನಗರಿ ಎಂಬ ಹೆಗ್ಗಳಿಕೆಗೆ ಕುಂದುಂಟಾಗುತ್ತಿರುವು ದನ್ನು ಗಮನಿಸಿ, ಸಾರ್ವಜನಿಕರಲ್ಲಿ ಮರಗಳನ್ನು ಬೆಳೆಸುವ ಕಾಳಜಿ ಮೂಡಿಸಲು ಶ್ರಮಿಸಿದರು. ಅರಣ್ಯ ಮತ್ತು ಪರಿಸರ ಸಂರಕ್ಷಣೆಗಾಗಿ ಇಲಾಖೆಯಲ್ಲಿ ಹೊಸ ಸಂಚಲನ ಮೂಡಿಸಿದರು.

ಕೈಗಾ ಅಣುವಿದ್ಯುತ್ ಯೋಜನೆಗೆ ತೀವ್ರ ವಿರೋಧ ಎದುರಾದಾಗ, ಹೋರಾಟದ ನಾಯಕತ್ವ ವಹಿಸಿದ್ದ ಹಿರಿಯ ಸಾಹಿತಿ ಶಿವರಾಮ ಕಾರಂತರು, ಡಾ. ರಾಜಾರಾಮಣ್ಣ ಮೊದಲಾದವರನ್ನು ಸೇರಿಸಿ ವಿಚಾರ ಸಂಕಿರಣ
ನಡೆಸಿದರು. ಈ ಚರ್ಚೆಯನ್ನು ಮುದ್ರಿಸಿ ಸಾರ್ವಜನಿಕರ ಅವಗಾಹನೆಗೆ ತಂದರು. ಕೈಗಾಪ್ರದೇಶದಲ್ಲಿ ವಿನಾಶದ ಅಂಚಿನಲ್ಲಿದ್ದ ನೂರಾರು ತಳಿಗಳನ್ನು ಕಾಪಾಡಿ ಬೆಳೆಸಲು ಚಾಲನೆ ನೀಡಿದರು. ವಿರೋಧಿಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು, ಕೆಲಸ ಮಾಡುವುದು ಇಂದಿನ ರಾಜಕಾರಣಿಗಳಿಗೆ ಮಾದರಿ. ಒಣಭೂಮಿ ಬೇಸಾಯಕ್ಕೆ ಅವರು ನೀಡಿದ ಆದ್ಯತೆ, ಮಹಿಳೆಯರ ಸಬಲೀಕರಣ, ರಾಜ್ಯದಲ್ಲಿ ತೀವ್ರ ಬರ ಉಂಟಾದಾಗ, ನೀರಿಗೆ
ಞರತೆಯಾಗದಂತೆ ರಾಜ್ಯಾದ್ಯಂತ ಕೊಳವೆ ಬಾವಿಗಳನ್ನು ಕೊರೆಯಿಸಿದರು. ಇದರಿಂದಾಗಿ ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಅಬ್ದುಲ್ ನಜೀರ್ ಸಾಬ್ ಅವರನ್ನು ಇಂದಿಗೂ ‘ನೀರ್ ಸಾಬ್’ ಎಂದೇ ಜನರು ನೆನಪಿಸಿಕೊಳ್ಳುತ್ತಾರೆ.

ಬೆಲೆ ಕುಸಿತದಿಂದ ತತ್ತರಿಸುವ ರೈತರಲ್ಲಿ ಭರವಸೆ ಮೂಡಿಸುವ ಕನಿಷ್ಠ ಬೆಂಬಲ ಬೆಲೆ ಯೋಜನೆಯ ರೂವಾರಿಯೂ ಹೆಗಡೆಯವರೇ ಎಂಬುದನ್ನು ನಾವು ಮರೆಯು ವಂತಿಲ್ಲ. ಹೆಗಡೆಯವರು ತಮ್ಮ ಓದು, ಬರಹ,
ಚಿಂತನೆಗಳೊಂದಿಗೆ, ಸಾಹಿತ್ಯ- ಸಂಸ್ಕೃತಿಯ ಪೋಷಕರಾಗಿದ್ದರು. ಅವರ ಭಾಷಣ- ಬರಹಗಳು ಈ ಕಾರಣಕ್ಕಾಗಿಯೇ ಜನರಿಗೆ ಹೆಚ್ಚು ಆಪ್ತವೆನಿಸುತ್ತಿತ್ತು. ಕರ್ನಾಟಕವನ್ನು ಅತ್ಯಂತ ಪ್ರಗತಿಪರ ರಾಜ್ಯವಾಗಿ ರೂಪಿಸು ವಲ್ಲಿ ಹೆಗಡೆಯವರ ಕೊಡುಗೆ ಅನನ್ಯವಾದುದು. ಅವರ ತತ್ವಾದರ್ಶಗಳು, ಕ್ರಿಯಾಶೀಲತೆ ರಾಜಕೀಯ ವಲಯದಲ್ಲಿ ನಿತ್ಯ ನೂತನವಾಗಿ ಉಳಿದಿದೆ.

ವಾರ್ಧಾ ನಂಟು
ವಾರ್ಧಾದ ಆಶ್ರಮಕ್ಕೆ ಆಗಾಗ ಭೇಟಿ ಕೊಡುತ್ತಿದ್ದ ಜವಾಹರಲಾಲ್ ನೆಹರು, ಕೆ.ಎಂ. ಮುನ್ಷಿ, ಜಯಪ್ರಕಾಶ ನಾರಾಯಣ, ಆಚಾರ್ಯ ನರೇಂದ್ರ ದೇವ, ಜೆ.ಬಿ.ಕೃಪಲಾನಿ, ರಾಜಾಜಿ, ವಲ್ಲಭಭಾಯಿ ಪಟೇಲ, ಗೋವಿಂದ
ವಲ್ಲಭ ಪಂತ್ ಮುಂತಾದ ದಿಗ್ಗಜರ ಪ್ರಭಾವ ಹೆಗಡೆ ಅವರನ್ನು ದಟ್ಟವಾಗಿ ಆವರಿಸಿತ್ತು. ಸಾಮಾಜಿಕ ಕಳಕಳಿ, ಸರಳತೆ ಮತ್ತು ಸೌಜನ್ಯ, ಪುಸ್ತಕ ಪ್ರೇಮದ ಜತೆಗೆ ಮನುಷ್ಯ ಸಂಬಂಧಗಳಿಗೆ ಅವರು ನೀಡುತ್ತಿದ್ದ ಮನ್ನಣೆ ಅವರ ವ್ಯಕ್ತಿತ್ವಕ್ಕೆ ವಿಶೇಷ ಮೆರುಗು ನೀಡಿತ್ತು. ಮುಖ್ಯಮಂತ್ರಿಯಾಗಿ ಅವರು ಕೈಗೊಂಡ ಕ್ರಮಗಳು ಇಡೀ ದೇಶಕ್ಕೇ ಮಾದರಿಯಾದವು.