ಚಿಕ್ಕನಾಯಕನಹಳ್ಳಿ : ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯಿತಿ, ಪುರಸಭೆ, ಪಟ್ಟಣ ಪಂಚಾಯಿತಿ ಗಳಲ್ಲಿ ಶೀಘ್ರವೇ ಕುಂದು ಕೊರತೆ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶಬಾಬು ತಿಳಿಸಿದರು.
ಬೆಳಗುಲಿ ಗ್ರಾಮದಲ್ಲಿ ಭಾರತ ನಿರ್ಮಾಣ ಸೇವಾಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಪ್ರತಿ ಸೋಮವಾರ ಜನಸಂಪರ್ಕ ಸಭೆಗಳು ನಡೆಯುತ್ತಿವೆ. ಪಿಂಚಣಿ, ಸಾರ್ವಜನಿಕ ಅಹವಾಲು, ಕುಂದು-ಕೊರತೆ ಮುಂತಾದ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಅಂತೆಯೇ ಗ್ರಾಮ ಮಟ್ಟದ ವಾಸ್ತವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಮತ್ತು ಅವುಗಳಿಗೆ ಸೂಕ್ತ ಪರಿಹಾರ ಒದಗಿಸುವ ಸಲುವಾಗಿ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ತೆರಳಿ ಸಭೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಗ್ರಾಮ ಪಂಚಾಯಿತಿಗಳು ಮೂಲಕ ಜನರಿಗೆ ಹೆಚ್ಚಿನ ಸೇವೆ ನೀಡಲು ಸರಕಾರ ಹಲವು ನಾಗರಿಕ ಸೇವೆಗಳನ್ನು ಗ್ರಾಮ ಪಂಚಾಯಿತಿಗೆ ನೀಡಿದೆ. ನಾಗರಿಕ ಸೇವೆಗಳನ್ನು ಹೆಚ್ಚೆಚ್ಚು ನೀಡುತ್ತಾ ಹೋದಾಗ ಕೆಲಸ ಮಾಡುವ ಸ್ಥಳದಲ್ಲಿ ಉತ್ತಮ ವಾತಾವರಣ ಸೃಷ್ಟಿಯಾಗಬೇಕು. ಸರಕಾರದ ಯೋಜನೆಗಳು, ಜಾರಿಗೆ ತರುವಲ್ಲಿ ಇಲಾಖೆ ನೌಕರರು ಮುಖ್ಯ ಪಾತ್ರ ವಹಿಸುತ್ತಾರೆ ಎಂದು ಶ್ಲಾಘಿಸಿದರು.
ಪ್ರತಿ ಗ್ರಾಮ ಪಂಚಾಯಿತಿಗಳ ವಸತಿ, ನಿವೇಶನ ರಹಿತರನ್ನು ಗುರುತಿಸಿ ಪಟ್ಟಿ ಸಿದ್ದಪಡಿಸಿ ನನಗೆ ನೀಡಿ ಹಳೇ ವಿಶ್ವಾಸವಿರುವುದರಿಂದ ಅದನ್ನು ವಸತಿ ಸಚಿವರಿಗೆ ನೀಡಿ ಪಟ್ಟಿಯನ್ನು ಮಂಜೂರು ಮಾಡಿಸುತ್ತೇನೆ. ಪ್ರತಿ ಪಂಚಾಯಿತಿಗೆ ೮೦ ಜನರಲ್ ಮನೆಗಳು ಮಂಜೂರಿಯಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳೆದ ಬಾರಿ ೭೦೦ ಮನೆಗಳು ವಾಪಸ್ ಹೋಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಗ್ರಾ.ಪಂ. ಅಧ್ಯಕ್ಷ ಬಿ.ಎನ್. ರಾಮಯ್ಯ ಮಾತನಾಡಿ ಸದಸ್ಯರು, ಪಿಡಿಓ ಮತ್ತು ಸಿಬ್ಬಂದಿಗಳ ಸಹಕಾರ ಒಗ್ಗಟ್ಟಿನಿಂದ ಈ ಕಟ್ಟಡ ಕಾಮಾಗಾರಿ ಪೂರ್ಣಗೊಂಡಿದ್ದು ಉದ್ಯೋಗ ಖಾತ್ರಿ ಯೋಜನೆಯನ್ನು ಬಳಕೆ ಮಾಡಿ ಕೊಂಡು ನಿರ್ಮಿಸಲಾಗಿದೆ. ನರೇಗ ಯೋಜನೆಯನ್ನು ಹೆಚ್ಚು ಬಳಕೆ ಮಾಡಿಕೊಂಡರೆ ಜನತೆಗೆ ಕೂಲಿ ಕೆಲಸಗಳು ಸಿಗುತ್ತವೆ ಎಂದು ನುಡಿದರು. ಉಪಾಧ್ಯಕ್ಷೆ ಕೆಂಪಮ್ಮ, ಸದಸ್ಯರಾದ ಮಧುಸೂಧನ್, ಲಕ್ಕಮ್ಮ, ರಂಜಿತಾ, ದೇವಿರಮ್ಮ, ಸುನಂದ, ಶಾರದಮ್ಮ, ಬಸವರಾಜ್, ಜಯಲಕ್ಷ್ಮಮ್ಮ, ಆಂಜನಪ್ಪ, ಪುಟ್ಟನಾಯ್ಕ, ಬರಗೂರು ಅಧ್ಯಕ್ಷ ಗಣೇಶ್, ಬರಕನಾಳ್ ಅಧ್ಯಕ್ಷ ಕುಮಾರಣ್ಣ, ಹಂದನಕೆರೆ ಅಧ್ಯಕ್ಷೆ ಶಿವಮ್ಮ, ಹಾಜರಿದ್ದರು. ಪಿಡಿಒ ರಮೇಶ್ ಸ್ವಾಗತಿಸಿದರು’
ಪಬ್ಲಿಕ್ ಶಾಲೆ ಪ್ರಾರಂಭಿಸಿ
ಸರಕಾರಿ ಶಾಲೆ ಮಕ್ಕಳಿಗೂ ಆಂಗ್ಲ ಮಾಧ್ಯಮ ಶಿಕ್ಷಣ ನೀಡುವ ಉದ್ದೇಶದಿಂದ ಬೆಳಗುಲಿಯಲ್ಲಿ ಪಬ್ಲಿಕ್ ಶಾಲೆ ಪ್ರಾರಂಭಿಸಬೇಕು. ಅನೇಕರು ಹೊಲ, ತೋಟಗಳಲ್ಲಿ ಹಾಗು ಊರ ಹೊರಗೆ ಮನೆ ಕಟ್ಟಿಸಿಕೊಳ್ಳುತ್ತಿದ್ದು ಮೂಲಭೂತ ಸೌಕರ್ಯ ಒದಗಿಸಲು ಪಂಚಾಯಿತಿ ಸಾಕಷ್ಟು ಹಣ ವ್ಯಯಿಸುತ್ತಿದೆ. ಅದನ್ನು ತಪ್ಪಿಸಲು ಊರಿನ ಸಮೀಪದಲ್ಲಿ ವಸತಿ ಸಮುಚ್ಚಯ ನಿರ್ಮಾಣಕ್ಕೆ ಆದ್ಯತೆ ನೀಡಬೇಕೆಂದರು. ಜನವಸತಿ ಪ್ರದೇಶಗಳನ್ನು ಹೊಸ ಗ್ರಾಮಗಳನ್ನಾಗಿ ರಚಿಸಲು ಪಂಚಾಯಿತಿಗಳಿಗೆ ಗ್ರಾಮ ನಕಾಶೆ ನೀಡುವ ಅಧಿಕಾರ ನೀಡಬೇಕು. ಕುಡಿಯುವ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಗ್ರಾ.ಪಂ ಸದಸ್ಯ ಶಾಂತರಾಜ್ ಮನವಿ ಮಾಡಿದರು.