Wednesday, 11th December 2024

ತಾರತಮ್ಯ ನಿವಾರಣೆ ಆಗಲಿ

ಕೇಂದ್ರ ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ಧ್ವನಿ ಎತ್ತುತ್ತಲೇ ಬಂದಿದೆ. ಇದೀಗ ೧೬ನೇ ಹಣಕಾಸು ಆಯೋಗ ಮುಂದಿನ ಅನುದಾನದ ಬಗ್ಗೆ ರಾಜ್ಯಗಳ ಜತೆ ಚರ್ಚೆ ಆರಂಭಿಸಿದೆ.

ಆಯೋಗದ ಅಧ್ಯಕ್ಷ ಡಾ.ಅರವಿಂದ ಪನಗಾರಿಯ ನೇತೃತ್ವದ ತಂಡದ ಜತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ದು ಬೆಂಗಳೂರಿನ ಅಭಿವೃದ್ಧಿ, ಕಲ್ಯಾಣ ಕರ್ನಾಟಕದ ಅಸಮತೋಲನ ನಿವಾರಣೆ, ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ. ಸೆಸ್ ಮತ್ತು ಸರ್ಚಾರ್ಜ್‌ನಲ್ಲೂ ಪಾಲು ನೀಡುವಂತೆ ಒತ್ತಾಯಿಸಿದ್ದಾರೆ. ದೇಶದ ಜಿಡಿಪಿಯಲ್ಲಿ ಕರ್ನಾಟಕದ ಪಾಲು ಶೇ.೮.೪ರಷ್ಟಿದೆ. ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರದ ಬಳಿಕ ೨ನೇ ಸ್ಥಾನದಲ್ಲಿದೆ. ವಾರ್ಷಿಕ ೪ ಲಕ್ಷ ಕೋಟಿ ರು.ಗಳ ಸಂಪನ್ಮೂಲ ರಾಜ್ಯದಿಂದ ಸಂದಾಯವಾಗುತ್ತಿದೆ. ಆದರೆ ಇದಕ್ಕೆ ಪ್ರತಿ ಯಾಗಿ ನಮಗೆ ಹಂಚಿಕೆಯಾಗುತ್ತಿರುವುದು ವಾರ್ಷಿಕ ೪೫ ಸಾವಿರ ಕೋಟಿ ಮಾತ್ರ.

ಇದರಲ್ಲಿ ೧೫ ಸಾವಿರ ಕೋಟಿ ರು. ಅನುದಾನದ ರೂಪದಲ್ಲಿದೆ. ಅಂದರೆ ಕರ್ನಾಟಕದ ತೆರಿಗೆದಾರರು ೧ ರು. ನಲ್ಲಿ ೧೫ ಪೈಸೆ ಮಾತ್ರ ವಾಪಸ್ ಪಡೆಯು
ತ್ತಿದ್ದಾರೆ. ಈ ಅಂಕಿಅಂಶಗಳನ್ನು ಮುಂದಿಟ್ಟು ಸಿದ್ದರಾಮಯ್ಯ ಮತ್ತೊಮ್ಮೆ ಆಯೋಗದ ಮುಂದೆ ಅಹವಾಲು ಮಂಡಿಸಿದ್ದಾರೆ. ರಾಜ್ಯಗಳ ನಡುವಣ ಅಸಮಾನತೆ ತೊಡೆದುಹಾಕಲು ಹಿಂದುಳಿದ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡುವುದು ಅವಶ್ಯಕ. ಈಶಾನ್ಯ ರಾಜ್ಯಗಳ ಅಭಿವೃದ್ಧಿಯಲ್ಲಿ ಇಡೀ ದೇಶ ಕೈ ಜೋಡಿಸಬೇಕಾಗಿದೆ. ಆದರೆ ಕೇಂದ್ರದಿಂದ ಈಗ ಹೆಚ್ಚು ಅನುದಾನ ಪಡೆಯುತ್ತಿರುವ ಉತ್ತರಪ್ರದೇಶ, ಬಿಹಾರ, ರಾಜಸ್ತಾನ, ಮಧ್ಯಪ್ರದೇಶದಂತಹ
ರಾಜ್ಯಗಳು ಹಿಂದುಳಿಯಲು ರಾಜ್ಯಸರಕಾರಗಳ ದುರಾಡಳಿತವೇ ಕಾರಣ.

ರಾಜಸ್ತಾನ ಹೊರತುಪಡಿಸಿ ಉಳಿದ ರಾಜ್ಯಗಳಿಗೆ ಸಮೃದ್ಧ ನೀರಾವರಿ ವ್ಯವಸ್ಥೆ ಇದೆ. ಪ್ರಾಕೃತಿಕ ಸಂಪತ್ತಿದೆ. ಆದರೆ ನಾಯಕರ ಒಡೆದು ಆಳುವ ನೀತಿ ಯಿಂದ ಈ ರಾಜ್ಯಗಳಲ್ಲಿ ಖಾಸಗಿ ಉದ್ಯಮಗಳು ಬೆಳೆಯಲು ಅವಕಾಶವೇ ಇಲ್ಲದಾಗಿದೆ. ಕೇಂದ್ರದಲ್ಲಿ ಯಾವುದೇ ಸರಕಾರ ಬಂದರೂ ಇಲ್ಲಿಗೆ ಅನುದಾನದಲ್ಲಿ ಸಿಂಹಪಾಲು ದೊರೆಯುತ್ತದೆ. ಆದರೂ ಪ್ರಗತಿಯ ರಥ ಮುಂದಕ್ಕೆ ಚಲಿಸುತ್ತಿಲ್ಲ. ಆದರೆ ಇದಕ್ಕಾಗಿ ಆರ್ಥಿಕ ಪ್ರಗತಿ ಸಾಧಿಸಿದ ರಾಜ್ಯಗಳ ಪಾಲನ್ನು ಕಿತ್ತು ಈ ರಾಜ್ಯಗಳಿಗೆ ಕೊಡಬಾರದು. ಜನ ಸಹಭಾಗಿತ್ವವನ್ನು ಪ್ರೋತ್ಸಾಹಿಸಿ ಈ ರಾಜ್ಯಗಳ ಆರ್ಥಿಕ ಪುನಶ್ಚೇತನಕ್ಕೆ ಉತ್ತೇಜನ ನೀಡಬೇಕು.