ಗುಬ್ಬಿ: ಐತಿಹಾಸಿಕ ಪ್ರಸಿದ್ಧ ಶ್ರೀ ಸಿಡಿಲು ಬಸವೇಶ್ವರಸ್ವಾಮಿ ಪರೇವು ಜಾತ್ರಾ ಮಹೋತ್ಸವ ಕಾರ್ಯಕ್ರಮ ಶ್ರಾವಣ ಮಾಸದ ಕೊನೆ ಸೋಮವಾರ ಸಪ್ಟೆಂಬರ್ 2 ರಂದು ಅದ್ದೂರಿಯಾಗಿ ನಡೆಸಲಾಗುವುದು ಎಂದು ದೇವಾಲಯದ ಟ್ರಸ್ಟ್ ತಿಳಿಸಿದೆ.
ಸಿಡಿಲು ಬಡಿದು ಎರಡು ಭಾಗವಾದ ಬಸವಣ್ಣ ಪವಾಡಗಳ ಮೂಲಕ ಪೂಜೆಗೆ ಪಾತ್ರವಾಗಿದೆ. ಭಿನ್ನ ವಿಗ್ರಹವಾದರೂ ಇಡೀ ಪಟ್ಟಣದ ಇತಿಹಾಸದಲ್ಲೇ ವಿಶೇಷ ಸ್ಥಳ ಮಹಿಮೆ ಹೊಂದಿರುವ ಸಿಡಿಲು ಬಸವೇಶ್ವರರಲ್ಲಿ ಇಂದಿಗೂ ಸಾವಿರಾರು ಭಕ್ತರು ಹರಕೆ ಕಟ್ಟಿಕೊಳ್ಳುತ್ತಾರೆ. ಪ್ರತಿ ವರ್ಷ ಶ್ರಾವಣ ಮಾಸದ ಸೋಮವಾರ ಭಕ್ತರ ದಂಡು ಪೂಜೆ ಸಲ್ಲಿಸುತ್ತಾರೆ. ಕೊನೆಯ ಸೋಮವಾರ ಪರೇವು ದಾಸೋಹಕ್ಕೆ ಖ್ಯಾತಿ ಪಡೆದಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಚುನಾಯಿತ ಪ್ರತಿನಿಧಿಗಳು ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ.2 ರ ಸೋಮವಾರ ಬೆಳಿಗ್ಗೆ ರುದ್ರಾಭಿಷೇಕ ನಂತರ ವಿಶೇಷ ಪುಷ್ಪಾಲಂಕಾರ, ಮಹಾಮಂಗಳಾರತಿ ನಡೆಯಲಿದೆ. ಮದ್ಯಾಹ್ನ ವಿಶೇಷ ದಾಸೋಹ ವ್ಯವಸ್ಥೆ ನಿರಂತರ ನಡೆಯಲಿದೆ. ಈ ಜಾತ್ರೆಯಲ್ಲಿ ದಾಸೋಹ ಕಾರ್ಯಕ್ರಮ ವಿಶೇಷ ಎನಿಸಿದ ಹಿನ್ನಲೆ ಟ್ರಸ್ಟ್ ದಾಸೋಹ ನಿಲಯ ದೇವಾಲಯದ ಆವರಣದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಈ ಕಟ್ಟಡ ನಿರ್ಮಾಣಕ್ಕೆ ಭಕ್ತರ ದೇಣಿಗೆ ಸಹಕಾರ ಕೋರಿದ ಟ್ರಸ್ಟ್ ಶೇಕಡಾ 60 ರಷ್ಟು ಕೆಲಸ ಮುಗಿದಿದೆ ಎಂದು ತಿಳಿಸಿದೆ.